FACT CHECK | ಉತ್ತರ ಪ್ರದೇಶದ ಆಕರ್ಷಕ ವಿಮಾನ ನಿಲ್ದಾಣ ಎಂದು ಟರ್ಕಿಯ ವಿಡಿಯೋ ಹಂಚಿಕೆ

ಆಕರ್ಷಕ ವಿಮಾನ ನಿಲ್ದಾಣದ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಇದು ಉತ್ತರ ಪ್ರದೇಶದ ವಿಮಾನ ನಿಲ್ದಾಣವಾಗಿದ್ದು, 21 ವಿಮಾನ ನಿಲ್ದಾಣಗಳನ್ನು ಹೊಂದಿರುವ ಭಾರತದ ಮೊದಲ ರಾಜ್ಯವಾಗಿದೆ ಎಂದೂ ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಂಚಿಕೊಳ್ಳಲಾಗುತ್ತಿದೆ.

ಕುಂಗ್‌ಫೂ ಪಾಂಡೆ ಎಂಬ ಹೆಸರಿನ X ಬಳಕೆದಾರರು ಈ ಚಿತ್ರವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ, ‘ಉತ್ತರ ಪ್ರದೇಶ ಇತಿಹಾಸ ಸೃಷ್ಟಿಸಿದೆ, 21 ವಿಮಾನ ನಿಲ್ದಾಣಗಳನ್ನು ಹೊಂದಿರುವ ಭಾರತದ ಮೊದಲ ರಾಜ್ಯವಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಇದೇ ಚಿತ್ರವನ್ನು ಅನುರಾಗ್ ರಾಯ್, ಪುಷ್ಪೇಂದ್ರ ಸಿಂಗ್, ಮನೋಜ್ ಉಪಾಧ್ಯಾಯ, ಪಾರಸ್ ಘೆಲಾನಿ, ಡಿ.ಕೆ. ಜೈನ್, ಇನ್‌ಸೈಟ್ ಭಾರತ್, ಸತ್ಯಾಗ್ರಹ ಮತ್ತು ಜಿತೇಂದ್ರ ಪ್ರತಾಪ್ ಸಿಂಗ್ ಮುಂತಾದ ಹಲವು ಎಕ್ಸ್‌ ಬಳಕೆದಾರರು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ಉತ್ತರ ಪ್ರದೇಶದಲ್ಲಿ ಇಷ್ಟು ಆಕರ್ಷಕ ವಿಮಾನ ನಿಲ್ದಾಣ ಇರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಕೀ ಪ್ರೇಮ್‌ಗಳನ್ನು ಬಳಸಿ ‘ಗೂಗಲ್‌ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್‌ ಮಾಡಿದಾಗ ಕಾಂಡೆ ನಾಸ್ಟ್ ಟ್ರಾವೆಲರ್ ಎಂಬ ಲೈಫ್‌ಸ್ಟೈಲ್‌ ಪ್ರವಾಸ ಪತ್ರಿಕೆಯ ಲಿಂಕ್ ಲಭ್ಯವಾಗಿದೆ. ಈ ಲಿಂಕ್‌ನಲ್ಲಿ ಉತ್ತರ ಪ್ರದೇಶದ ವಿಮಾನ ನಿಲ್ದಾಣ ಎಂದು ಹೇಳಲಾದ ಅದೇ ಚಿತ್ರ ಹೋಲಿಕೆಯಿರುವ ಚಿತ್ರ ಲಭ್ಯವಾಗಿದೆ. ಆದರೆ ಲೇಖನದಲ್ಲಿ ಈ ಚಿತ್ರವು ಟರ್ಕಿಯ ಇಸ್ತಾಂಬುಲ್ ಗ್ರ್ಯಾಂಡ್ ಏರ್‌ಪೋರ್ಟ್ (ಐಜಿಎ)ನದ್ದು ಎಂದು ಹೇಳಲಾಗಿದೆ. ಈ ವಿಮಾನ ನಿಲ್ದಾಣವನ್ನು 2024ರ ಅತ್ಯುತ್ತಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಆಯ್ಕೆ ಮಾಡಿತ್ತು ಎಂದು ಉಲ್ಲೇಖಿಸಿದೆ.

Istambul Airport

818 ಮಿಲಿಯನ್ ಚದರ ಅಡಿಯಲ್ಲಿ ಹರಡಿರುವ ಈ ವಿಮಾನ ನಿಲ್ದಾಣವು 317 ಸ್ಥಳಗಳಿಗೆ ನೇರ ಸಂಪರ್ಕವನ್ನು ಹೊಂದಿದೆ. ಇದು ವಿಶ್ವದ ಯಾವುದೇ ಇತರ ವಿಮಾನ ನಿಲ್ದಾಣಗಳಿಗಿಂತ ದೊಡ್ಡದಾಗಿದೆ.

ಇನ್ನು ಈ ಚಿತ್ರದ ಜೊತೆ ಉತ್ತರ ಪ್ರದೇಶ 21 ವಿಮಾನ ನಿಲ್ದಾಣಗಳನ್ನು ಹೊಂದಿದ್ದು, ಇಷ್ಟು ಸಂಖ್ಯೆಯ ವಿಮಾನ ನಿಲ್ದಾಣಗಳನ್ನು ಹೊಂದಿದ ಭಾರತದ ಮೊದಲ ರಾಜ್ಯ ಎಂದೂ ಹೇಳಲಾಗಿದೆ. ಪರಿಶೀಲಿಸಿದಾಗ ಇದು ಅರ್ಧ ಸತ್ಯ ಎಂದು ತಿಳಿದು ಬಂದಿದೆ. 2023ರಲ್ಲಿ ರಾಜ್ಯಸಭೆಗೆ ಉತ್ತರ ನೀಡಿದ್ದ ಕೇಂದ್ರ ವಿಮಾನಯಾನ ಸಚಿವಾಲಯ, ಕಾರ್ಯಾಚರಣೆ ನಡೆಸುತ್ತಿರುವ ಹಾಗೂ ನಿಲ್ಲಿಸಿರುವ ವಿಮಾನ ನಿಲ್ದಾಣಗಳು ಸೇರಿ, ಉತ್ತರ ಪ್ರದೇಶದಲ್ಲಿ 19 ವಿಮಾನ ನಿಲ್ದಾಣಗಳಿವೆ ಎಂದು ಹೇಳಿತ್ತು. ಇದೀಗ ಮತ್ತೆರಡು ವಿಮಾನ ನಿಲ್ದಾಣಗಳು ಪಟ್ಟಿಗೆ ಸೇರಿಕೊಂಡಿದ್ದು, ನಿರ್ಮಾಣ ಕಾರ್ಯ ನಡೆಯುತ್ತಿವೆ. ಇದು ಪೂರ್ಣಗೊಂಡಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಒಟ್ಟು ಏರ್‌ಪೋರ್ಟ್‌ಗಳ ಸಂಖ್ಯೆ ಉತ್ತರ ಪ್ರದೇಶದಲ್ಲಿ 21ಕ್ಕೆ ತಲುಪಲಿದೆ ಎಂದು ವರದಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದ ವಿಮಾನ ನಿಲ್ದಾಣ ಎಂದು ಸಾಮಾಜಿಕ ಮಾಧ್ಯಮಗಳ ಬಳಕೆದಾರರು  ಹಂಚಿಕೊಂಡಿರುವ ವಿಮಾನ ನಿಲ್ದಾಣ ಉತ್ತರ ಪ್ರದೇಶದ್ದಲ್ಲ ಎಂದು ತಿಳಿದು ಬಂದಿದೆ. ಇದು ಟರ್ಕಿಯ ಇಸ್ತಾಂಬುಲ್ ಗ್ರ್ಯಾಂಡ್ ಏರ್‌ಪೋರ್ಟ್‌ನ ಚಿತ್ರವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪ್ರಾಯೋಗಿಕ ಪರೀಕ್ಷೆಯಲ್ಲಿ ರೋಲ್ಸ್ ರಾಯ್ಸ್ ಕಾರಿನ ಮೇಲೆ ಬಂಡೆ ಕಲ್ಲನ್ನು ಬೀಳಿಸಲಾಗುತ್ತಿರುವ ವಿಡಿಯೋದ ಅಸಲೀಯತ್ತೇನು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights