FACT CHECK | ಇಫ್ತಾರ್ ಕೂಟಕ್ಕೆ ಬಂದ ಹಿಂದೂ ವ್ಯಕ್ತಿಯನ್ನು ಮಸೀದಿಯಿಂದ ಓಡಿಸಿದ್ರಾ ಮುಸ್ಲಿಮರು? ಈ ಸ್ಟೋರಿ ಓದಿ
ಇಸ್ಲಾಂ ಧರ್ಮದ ಪವಿತ್ರ ಮಾಸವಾದ ರಂಜಾನ್ ಆರಂಭವಾಗಿದೆ. ಈ ಇಡೀ ತಿಂಗಳು ಮುಸ್ಲಿಂ ಸಮುದಾಯದ ಜನರು ಬೆಳಗ್ಗೆಯಿಂದ ಸಂಜೆಯವರೆಗೆ ಉಪವಾಸವಿದ್ದು ಅಲ್ಲಾಹನನ್ನು ಪ್ರಾರ್ಥಿಸುತ್ತಾರೆ. ಇಫ್ತಾರ್ ಎಂಬುದು ರಂಜಾನ್ ಸಮಯದಲ್ಲಿ ದಿನದ ಕೊನೆಯಲ್ಲಿ ಬಡಿಸುವ ಊಟವಾಗಿದೆ. ದಿನದ ಉಪವಾಸ ವನ್ನು ಕೊನೆಗೊಳಿಸುವಾಗ ಇಫ್ತಾರ್ ಕೂಟವನ್ನು ಆಯೋಜಿಸುತ್ತಾರೆ.
ಆದರೆ ಇದೇ ಇಫ್ತಾರ್ ಔತಣ ಕೂಟಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಇಫ್ತಾರ್ ಔತಣ ಕೂಟದಲ್ಲಿ ಭಾಗವಹಿಸಲು ಕೇಸರಿ ಭಟ್ಟೆ ಧರಿಸಿ ಬಂದಿದ್ದ ಹಿಂದೂ ವ್ಯಕ್ತಿಯನ್ನು, ಮುಸ್ಲಿಂ ವ್ಯಕ್ತಿಯೊಬ್ಬ ಇಫ್ತಾರ್ ಕೂಟದಿಂದ ಎಬ್ಬಿಸಿ ಕಳುಹಿಸಲು ಮುಂದಾಗುತ್ತಾನೆ ಆದರೆ ಇತರ ಮುಸ್ಲಿಂ ಜನರು ಮುಂದೆ ಬಂದು ಕೇಸರಿ ಬಟ್ಟೆ ತೊಟ್ಟ ಯುವಕರನ್ನು ಒಳಗೆ ಕರೆದು ಊಟ ಮಾಡಿಸುವುದನ್ನು ತೋರಿಸಲಾಗಿದೆ.
ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಫೆಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು ಪರ ವಿರೋದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
![]()
2 ನಿಮಿಷದಲ್ಲಿ ಅವರ ಜಾತ್ಯತೀತತೆ ಮುಖವಾಡ ಕಳಚಿ ಬಿದಿತ್ತು. ಮುಸ್ಲಿಂ ವ್ಯಕ್ತಿಯೊಬ್ಬ ಇಫ್ತಾರ್ ಕೂಟಕ್ಕೆ ಬಂದಿದ್ದ ಹಿಂದೂ ಯುವಕನನ್ನು ಹೊರಗೆ ಹಾಕಿದ್ದಾನೆ. ಇನ್ನು ಎರಡು ಎಲುಬುಗಳನ್ನು ಮುರಿದಿದ್ದರೆ ಇನ್ನಷ್ಟು ಖುಷಿಯಾಗುತ್ತಿತ್ತು ಎಂಬ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ರಾಜು ಶಾ ಮತ್ತು ಶ್ರೀ ತ್ಯಾಗಿ ಎಂಬ ಹೆಸರಿನ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು ‘ ಹೋಗಿ ಉಚಿತ ಇಫ್ತಾರ್ ತಿನ್ನಿರಿ’ ಎಂದು ಬರೆದಿದ್ದಾರೆ. ಅಡ್ವೊಕೇಟ್ ನಜ್ನೀನ್ ಅಖ್ತರ್ ಅವರು ವಿಡಿಯೋದ ಜೊತೆಗೆ ‘ಮಾಶಾ ಅಲ್ಲಾ, ಇದು ಇಸ್ಲಾಂ ಧರ್ಮದ ಸೌಂದರ್ಯ’ ಎಂದು ಬರೆದಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯಂತೆ ಹಿಂದೂ ವ್ಯಕ್ತಿಯನ್ನು ಊಟದಿಂದ ಎಬ್ಬಿಸಿ ಮಸೀದಿಯಿಂದ ಹೊರಗೆ ಕಳುಹಿಸಿರುವುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವಿಡಿಯೋದ ಕೀ ಫ್ರೇಮ್ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, Prank Buzz ಹೆಸರಿನ YouTube ಚಾನಲ್ನಲ್ಲಿ ಇದೇ ವಿಡಿಯೋವನ್ನು ಏಪ್ರಿಲ್ 6, 2024 ರಂದು ಅಪ್ಲೋಡ್ ಮಾಡಿರುವುದು ಲಭ್ಯವಾಗಿದೆ.
https://www.youtube.com/watch?v=co56JgfzRYY&t=420s
ವೈರಲ್ ವಿಡಿಯೋದ ಮೂಲ ವಿಡಿಯೋದ ಆರಂಭದಲ್ಲಿ, ಕೇಸರಿ ವಸ್ತ್ರಧಾರಿ ಯುವಕ ಮತ್ತು ಆತನನ್ನು ಓಡಿಸಿದ ಮುಸ್ಲಿಂ ವ್ಯಕ್ತಿ ಇಬ್ಬರೂ ಇಂದು ಮಸೀದಿಗೆ ಹೋಗುತ್ತೇವೆ ಮತ್ತು ಮುಸ್ಲಿಮರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನೋಡಿ ಎಂದು ಹೇಳುವುದನ್ನು ಕೇಳಬಹುದು. 7 ನಿಮಿಷ 6 ಸೆಕೆಂಡುಗಳ ಈ ವೀಡಿಯೊದಲ್ಲಿ, ತಮಾಷೆಗಾಗಿ ಎಂದು ಬರೆದಿರುವುದನ್ನು ನೋಡಬಹುದು.
ಈ ಚಾನಲ್ ಪ್ರೇಕ್ಷಕರ ಮನರಂಜನೆಗಾಗಿ ಇಂತಹ ವೀಡಿಯೊಗಳನ್ನು ಮಾಡುತ್ತದೆ ಎಂದು ಯೂಟ್ಯೂಬ್ ಚಾನೆಲ್ನ ಬಯೋದಲ್ಲಿ ಬರೆಯಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋಕ್ಕೂ ವಾಸ್ತವಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಇಫ್ತಾರ್ ಕೂಟಕ್ಕೆ ಬಂದಿದ್ದ ಹಿಂದೂ ಯುವಕನನ್ನು ಮುಸ್ಲಿಂ ವ್ಯಕ್ತಿಯೊಬ್ಬರು ಓಡಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ, ಈ ವಿಡಿಯೋದಲ್ಲಿರುವುದು ನೈಜ ಘಟನೆಯಲ್ಲ. ಬದಲಿಗೆ ಇದೊಂದು ತಮಾಷೆ ಅಥವಾ ಮನರಂಜನೆಗಾಗಿ ರಚಿಸಿದ ಸ್ಕ್ರಿಪ್ಟ್ ಮಾಡಿದ ವಿಡಿಯೋ ಎಂಬುದನ್ನು ಮೂಲ ವಿಡಿಯೋದ ಡಿಸ್ಕ್ರಿಪ್ಶನಲ್ಲಿ ತಿಳಿಸಲಾಗಿದೆ. ಹಾಗಾಗಿ ಈ ವೈರಲ್ ಪೋಸ್ಟ್ಗಳು ದಾರಿತಪ್ಪಿಸುವಂತಿದೆ.
ವಾಸ್ತವವಾಗಿ ರಂಜಾನ್ ಮಾಸದಲ್ಲಿ ಇಫ್ತಾರ್ ಎಂಬುದೇ ವಿಶೇಷ :
ಇಫ್ತಾರ್ ಎಂಬುದು ಕುಟುಂಬ ಮತ್ತು ಸಮುದಾಯದ ಸದಸ್ಯರನ್ನು ಒಳಗೊಂಡ ಸಾಮಾಜಿಕ ಕಾರ್ಯಕ್ರಮವಾಗಿದೆ. ಜನರು ಇತರರಿಗೆ ಭೋಜನಕ್ಕೆ ಆತಿಥ್ಯ ನೀಡುವುದನ್ನು ಒಳಗೊಂಡಿರುತ್ತದೆ. ದತ್ತಿ ನೀಡುವ ಆಧ್ಯಾತ್ಮಿಕ ಪ್ರತಿಫಲವು ರಂಜಾನ್ ಸಮಯದಲ್ಲಿ ವಿಶೇಷವಾಗಿ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಆಹಾರವನ್ನು ಹಂಚಿಕೊಳ್ಳುವ ಪರಿಪಾಠವಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬೆಂಗಳೂರಿನ ಬೊಮ್ಮನಹಳ್ಳಿ ಕ್ರಾಸ್ಬಳಿ ಮೆಟ್ರೋ ರೈಲು ಅಪಘಾತವಾಗಿದೆ ಎಂದು ಸುಳ್ಳು ಪೋಸ್ಟ್ ಹಂಚಿಕೆ

