FACT CHECK | ಹುಡುಗಿಯನ್ನು ಚುಡಾಯಿಸಿದಕ್ಕೆ ಉತ್ತರ ಪ್ರದೇಶದ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಹುಡುಗಿಯನ್ನು ಸಾರ್ವಜನಿಕ ಸ್ಥಳದಲ್ಲಿ ಚುಡಾಯಿಸಿದ ಪುಂಡನೊಬ್ಬನಿಗೆ ಉತ್ತರ ಪ್ರದೇಶದ ಪೊಲೀಸರು ಲಾಠಿ ಏಟು ನೀಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದೆ.

ಮಾರ್ಚ್ 10, 2025 ರಂದು ಹಿಂದೂ ಎಂಬ ಫೇಸ್​ಬುಕ್ ಪೇಜ್‌ನಲ್ಲಿ  ಈ ವೀಡಿಯೊವನ್ನು ಹಂಚಿಕೊಂಡು, ‘‘ಉತ್ತರ ಪ್ರದೇಶದಲ್ಲಿ ಪ್ರಯಾಣಿಸುವ ಹುಡುಗಿಯರನ್ನು ಕೀಟಲೆ ಮಾಡುವುದು ಎಷ್ಟು ದುಬಾರಿಯಾಗಿದೆ?’’ ಎಂದು ಬರೆದುಕೊಂಡಿದ್ದಾರೆ.  ಆರ್ಕೈವ್ ಮಾಡಿದ ಲಿಂಕ್‌ಅನ್ನು ಇಲ್ಲಿ ನೋಡಬಹುದು.ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ABP ನ್ಯೂಸ್ ಯೂಟ್ಯೂಬ್ ಚಾನೆಲ್‌ ಮೇ 29, 2015 ರಂದು ಇದೇ ವೈರಲ್ ವೀಡಿಯೊದ ತುಣುಕಿನೊಂದಿಗೆ ಸುದ್ದಿ ವರದಿ ಮಾಡಿರುವುದು ನಮಗೆ ಸಿಕ್ಕಿದೆ. 4:22 ಟೈಮ್‌ಸ್ಟ್ಯಾಂಪ್‌ನಲ್ಲಿ, ವೈರಲ್ ದೃಶ್ಯಗಳು ಪ್ರಾರಂಭವಾಗುತ್ತವೆ, ಹಸಿರು ಶರ್ಟ್ ಧರಿಸಿದ ವ್ಯಕ್ತಿಯನ್ನು ಪೊಲೀಸರು ಥಳಿಸುತ್ತಿರುವುದನ್ನು ಇಲ್ಲಿ ಕಾಣಬಹುದು.

ವರದಿಯ ಪ್ರಕಾರ, ಈ ವಿಡಿಯೋ ಮೇ 2015 ರಲ್ಲಿ ಇಂದೋರ್ ಪೊಲೀಸರು ನಡೆಸಿದ ಅಪರಾಧ ವಿರೋಧಿ ಕಾರ್ಯಾಚರಣೆಯದ್ದಾಗಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ, ಹಲವಾರು ವ್ಯಕ್ತಿಗಳನ್ನು ಬಂಧಿಸಲಾಯಿತು, ಸಾರ್ವಜನಿಕವಾಗಿ ಮೆರವಣಿಗೆ ಮಾಡಲಾಯಿತು ಮತ್ತು ಲಾಠಿಗಳಿಂದ ಹೊಡೆಯಲಾಯಿತು. 15 ಪೊಲೀಸ್ ಠಾಣೆಗಳಲ್ಲಿ ಈ ಕ್ರಮ ಕೈಗೊಳ್ಳಲಾಯಿತು, ಅಪರಾಧಿಗಳನ್ನು ತಡೆಯಲು ಮತ್ತು ಸಾರ್ವಜನಿಕರಿಗೆ ಧೈರ್ಯ ತುಂಬಲು 50 ಕ್ಕೂ ಹೆಚ್ಚು ಇಂತಹ ಮೆರವಣಿಗೆಗಳನ್ನು ಆಯೋಜಿಸಲಾಗಿತ್ತು. ಈ ಉಪಕ್ರಮದ ಭಾಗವಾಗಿ, ಶಂಕಿತರನ್ನು ಅವರ ಮನೆಗಳಿಂದ ಕರೆದೊಯ್ದು, ಅವರ ಪ್ರದೇಶಗಳಲ್ಲಿ ಮೆರವಣಿಗೆ ಮಾಡಲಾಯಿತು ಮತ್ತು ನಂತರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಮತ್ತಷ್ಟು ಮಾಹಿತಿಗಾಗಿ ಕೀವರ್ಡ್ ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಮೇ 29, 2015 ರಂದು ಇಂಡಿಯಾ ಟಿವಿ ಪ್ರಕಟಿಸಿರುವ ವೀಡಿಯೊ ವರದಿ ಲಭ್ಯವಾಗಿದೆ. ಅದರ ಶೀರ್ಷಿಕೆ ಹೀಗಿದೆ: ‘‘ಇಂದೋರ್: ಸ್ಥಳೀಯ ಅಪರಾಧಿಗಳನ್ನು ಪೊಲೀಸರು ಥಳಿಸಿ ಮೆರವಣಿಗೆ ಮಾಡಿದರು – ಇಂಡಿಯಾ ಟಿವಿ’’.

ಮತ್ತಷ್ಟು ಸೋಶಿಯಲ್ ಮೀಡಿಯಾಗಳಲ್ಲಿ ಸರ್ಚ್ ಮಾಡಿದಾಗ, , UPPOLICE FACT CHECK ನ ಎಕ್ಸ್ ಹ್ಯಾಂಡಲ್‌ನಲ್ಲಿ ವೈರಲ್ ವೀಡಿಯೊಗೆ ಸಂಬಂಧಿಸಿದ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಜನವರಿ 17, 2020 ರ ಪೋಸ್ಟ್‌ನಲ್ಲಿ, ‘‘ವೀಡಿಯೊದಲ್ಲಿ ತೋರಿಸಿರುವ ಘಟನೆ @UPPolice ಗೆ ಸಂಬಂಧಿಸಿಲ್ಲ. ದಯವಿಟ್ಟು ದಾರಿತಪ್ಪಿಸುವ ಪ್ರಚಾರವನ್ನು ಮಾಡಬೇಡಿ’’ ಎಂದು ಬರೆಯಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇಂದೋರ್ ಪೊಲೀಸರು ನಡೆಸಿದ ಅಪರಾಧ ವಿರೋಧಿ ಅಭಿಯಾನದ 2015 ರ ವೀಡಿಯೊವನ್ನು ಉತ್ತರ ಪ್ರದೇಶದ ಘಟನೆ ಎಂದು ತಪ್ಪಾಗಿ ಪ್ರಸಾರ ಮಾಡಲಾಗುತ್ತಿದೆ. ಈ ವೀಡಿಯೊಗು ಉತ್ತರ ಪ್ರದೇಶಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ. ವೈರಲ್‌ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಾಕ್ ರೈಲಿನ ಮೇಲೆ ಉಗ್ರರಿಂದ ದಾಳಿ ಎಂದು ಎರಡು ವರ್ಷದ ಹಳೆಯ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights