FACT CHECK | ಬಲೂಚಿಸ್ತಾನದಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಎಂದು ಹಳೆಯ ವಿಡಿಯೋ ಹಂಚಿಕೆ

ಬಲೂಚಿಸ್ತಾನ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನದ ಪ್ರಯಾಣಿಕ ರೈಲು ಹೈಜಾಕ್ ಮಾಡಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ (ಬಿಎಲ್‌ಎ) ಇದೀಗ ನೇರವಾಗಿ ಚೀನಾ ಮತ್ತು ಪಾಕಿಸ್ತಾನ ಸೇನೆಗೆ ಖಡಕ್ ಎಚ್ಚರಿಕೆ ನೀಡಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

1.52 ನಿಮಿಷಗಳ ವೈರಲ್ ವೀಡಿಯೊದಲ್ಲಿ ಮುಖ ಮುಚ್ಚಿಕೊಂಡ ಉಗ್ರಗಾಮಿಯೊಬ್ಬರು “ನಮ್ಮ ದಾಳಿಯ ಉದ್ದೇಶ ಬಹಳ ಸ್ಪಷ್ಟವಾಗಿತ್ತು. ಇದು ಬಲೂಚಿಸ್ತಾನದಿಂದ ತಕ್ಷಣವೇ ಹಿಂದೆ ಸರಿಯುವಂತೆ ಚೀನಾ ಮತ್ತು ಪಾಕಿಸ್ತಾನಕ್ಕೆ ಸರಳ ಮತ್ತು ಸ್ಪಷ್ಟ ಸಂದೇಶವಾಗಿದೆ” ಎಂದು ಹೇಳುತ್ತಿರುವುದು ಕಂಡುಬರುತ್ತದೆ. ತಮ್ಮ ನಾಯಕ ಜನರಲ್ ಅಸ್ಲಾಂ ಬಲೂಚ್ ಕಳುಹಿಸಿದ ಸಂದೇಶಕ್ಕೆ ಚೀನಾ ಪ್ರಾಮುಖ್ಯತೆ ನೀಡಲಿಲ್ಲ, ಇದು ದಾಳಿಗೆ ಕಾರಣವಾಯಿತು ಎಂದು ಆ ವ್ಯಕ್ತಿ ಹೇಳಿದ್ದಾರೆ.

ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಮಾರ್ಚ್ 12, 2025 ರಂದು ಹಂಚಿಕೊಂಡು, ‘‘ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ನಿನ್ನೆ 100 ಪಾಕಿಸ್ತಾನ ಸೈನಿಕರ ಸಹಿತ 400 ಜನರಿದ್ದ ರೈಲನ್ನು ಅಪಹರಿಸಿತ್ತು.. ಆರು ಜನ ಸೈನಿಕರನ್ನು ಹತ್ಯೆ ಮಾಡಿತ್ತು. ನಂತರ ಪಾಕಿಸ್ತಾನ ಸೇನೆ ಎಲ್ಲಾ 27 ಬಂಡುಕೋರರನ್ನು ಹತ್ಯೆ ಮಾಡಿ ಪ್ರಯಾಣಿಕರನ್ನು ಬಿಡುಗಡೆ ಮಾಡಿತ್ತೆಂದು ಸುದ್ದಿಯಾಗಿತ್ತು. ಇದೀಗ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ ಆತ್ಮಾಹುತಿ ತಂಡವಾದ ಮಜೀದ್ ಬ್ರಿಗೇಡ್ ಬಲೂಚಿಸ್ತಾನದ ತಂಟೆಗೆ ಬರದಂತೆ ಪಾಕಿಸ್ತಾನ ಮತ್ತು ಚೀನಾಗೆ ಎಚ್ಚರಿಕೆ ಕೊಟ್ಟಿದೆಯಂತೆ… ಪರಿಸ್ಥಿತಿ ಬಿಗಡಾಯಿಸುವ ಲಕ್ಷಣ ಕಂಡುಬರುತ್ತಿದೆ…’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗೆಗೆ ಕನ್ನಡ ಪ್ರಸಿದ್ಧ ಡಿಜಿಟಲ್ ಮಾಧ್ಯಮ ಕನ್ನಡ ಪ್ರಭ ಕೂಡ ಮಾರ್ಚ್ 12, 2025 ರಂದು ಇದೇ ವೀಡಿಯೊವನ್ನು ಹಂಚಿಕೊಂಡು ‘‘ಬದುಕುವ ಆಸೆ ಇದ್ದರೆ ಬಲೂಚಿಸ್ತಾನದಿಂದ ಹಿಂದೆ ಸರಿಯಿರಿ: ಚೀನಾ ಮತ್ತು ಪಾಕಿಸ್ತಾನಕ್ಕೆ BLA ಖಡಕ್ ಎಚ್ಚರಿಕೆ’’ ಎಂದು ಸುದ್ದಿ ಪ್ರಕಟಿಸಿದೆ. (Archive) ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಪಾಕಿಸ್ತಾನದ ಮಾಧ್ಯಮ CSCR.pk ಜುಲೈ 9, 2019 ರಂದು ಇದೇ ವೈರಲ್ ವಿಡಿಯೋದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದು ಲಭ್ಯವಾಗಿದೆ. ಜುಲೈ 2 ರಂದು, ಯುನೈಟೆಡ್ ಸ್ಟೇಟ್ಸ್ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಅನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಬ್ರಾಂಡ್ ಮಾಡಿತು ಎಂಬ ಮಾಹಿತಿ ಇದರಲ್ಲಿದೆ. ಈ ಮೂಲಕ ಇದು 2025ರ ಜಾಫರ್ ಎಕ್ಸ್‌ಪ್ರೆಸ್ ಅಪಹರಣಕ್ಕೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಯಿತು.

 

ಮತ್ತಷ್ಟು ಮಾಹಿತಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸರ್ಚ್ ಮಾಡಿದಾಗ, ಮೇ 20, 2019 ರಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಲಾದ ವೈರಲ್ ವಿಡಿಯೋದ ವಿಸ್ತೃತ ಆವೃತ್ತಿ ಲಭ್ಯವಾಗಿದೆ. 2 ನಿಮಿಷ 20 ಸೆಕೆಂಡುಗಳ ಈ ವೀಡಿಯೊಗೆ, ‘‘ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಿಮಗೆ ಬಲೂಚಿಸ್ತಾನ ತೊರೆಯಲು ಇನ್ನೂ ಸಮಯವಿದೆ, ಇಲ್ಲದಿದ್ದರೆ ಬಲೂಚ್ ಪುತ್ರರು ಮತ್ತು ಪುತ್ರಿಯರಿಂದ ನೀವು ಎಂದಿಗೂ ಮರೆಯಲಾಗದ ಪ್ರತೀಕಾರವನ್ನು ನೋಡುತ್ತೀರಿ. ಬಿಎಲ್‌ಎ ಮಜೀದ್ ಬ್ರಿಗೇಡ್ ಕಮಾಂಡರ್ ಹೊಸದಾಗಿ ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ ಬೆದರಿಕೆ ಹಾಕಿದ್ದಾರೆ’’ ಎಂದು ಶೀರ್ಷಿಕೆ ನೀಡಲಾಗಿದೆ.

ಈ ಎಕ್ಸ್ ಕ್ಲಿಪ್ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಕ್ಲಿಪ್‌ನ ದೀರ್ಘ ಆವೃತ್ತಿಯ ಆರಂಭಿಕ ಕೆಲವು ಫ್ರೇಮ್‌ಗಳಲ್ಲಿ, ಬಿಎಲ್‌ಎ ನಾಯಕ, “ನಮ್ಮ ಆತ್ಮತ್ಯಾಗ ತಂಡ ಮಜೀದ್ ಬ್ರಿಗೇಡ್ ಗ್ವಾದರ್‌ನಲ್ಲಿರುವ ಪರ್ಲ್ ಕಾಂಟಿನೆಂಟಲ್ ಹೋಟೆಲ್ ಮೇಲೆ ದಾಳಿ ಮಾಡಿ ಪಾಕಿಸ್ತಾನ ಮತ್ತು ಚೀನಾ ಎರಡಕ್ಕೂ ಭಾರೀ ನಷ್ಟವನ್ನುಂಟುಮಾಡಿತು…” ಎಂದು ಹೇಳುತ್ತಾರೆ. ವೀಡಿಯೊದ ಆರಂಭದಲ್ಲಿ ಮತ್ತು 0:46 ಸೆಕೆಂಡ್​ ವೇಳೆ ಹೋಟೆಲ್ ಮೇಲೆ ನಡೆಸಿದ ದಾಳಿಯ ಬಗ್ಗೆ ಎರಡು ಬಾರಿ ಉಲ್ಲೇಖಿಸುವುದನ್ನು ಕೇಳಬಹುದು.

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ಹೋಟೆಲ್ ಮೇಲೆ ಬಿಎಲ್‌ಎ ನಡೆಸಿದ ದಾಳಿಯ ಕುರಿತು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿ ಇಮೇಜ್ ಸೆಕ್ಷನ್​ನಲ್ಲಿ ಹುಡುಕಿದ್ದೇವೆ. ಆಗ ಮೇ 19, 2019 ರಂದು ದಿ ಬಲೂಚಿಸ್ತಾನ್ ಪೋಸ್ಟ್ ವೈರಲ್ ವೀಡಿಯೊದ ದೃಶ್ಯಗಳಿಗೆ ಹೋಲುವ ಸ್ಕ್ರೀನ್‌ಶಾಟ್​ನೊಂದಿಗೆ ಪ್ರಕಟಿಸಿದ ಸುದ್ದಿ ನಮಗೆ ಸಿಕ್ಕಿತು.

ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಬಲೂಚ್ ಲಿಬರೇಶನ್ ಆರ್ಮಿಯ ಮಜೀದ್ ಬ್ರಿಗೇಡ್‌ನ ನಾಲ್ವರು ಸದಸ್ಯರು ಗ್ವಾದರ್‌ನಲ್ಲಿರುವ ಪಂಚತಾರಾ ಹೋಟೆಲ್‌ಗೆ ನುಗ್ಗಿ 26 ಗಂಟೆಗಳ ಕಾಲ ಪಾಕಿಸ್ತಾನಿ ಕಮಾಂಡೋಗಳೊಂದಿಗೆ ನಡೆದ ಮುಖಾಮುಖಿಯ ಕೆಲವೇ ದಿನಗಳಲ್ಲಿ ಈ ವೀಡಿಯೊ ಬಿಡುಗಡೆಯಾಗಿದೆ. ಮೇ 11 ರಂದು ಗ್ವಾದರ್‌ನಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಮಾರಕ ದಾಳಿಯು ಬೀಜಿಂಗ್‌ನ ಆಯಕಟ್ಟಿನ ಆಳ ಸಮುದ್ರ ಬಂದರು ಸೇರಿದಂತೆ ಪಾಕಿಸ್ತಾನದಲ್ಲಿ ಪ್ರಮುಖ ಅಭಿವೃದ್ಧಿ ಅಭಿಯಾನದ ಸುತ್ತಲಿನ ಭದ್ರತಾ ಕಳವಳಗಳನ್ನು ತೀವ್ರಗೊಳಿಸಿದೆ’’ ಎಂಬ ಮಾಹಿತಿ ಇದರಲ್ಲಿದೆ.

ANI ಕೂಡ ಮೇ 19, 2019 ರಂದು ‘‘ಅಧ್ಯಕ್ಷ ಜಿನ್‌ಪಿಂಗ್ ನಿಮಗೆ ಬಲೂಚಿಸ್ತಾನ ತೊರೆಯಲು ಇನ್ನೂ ಸಮಯವಿದೆ ಎಂದು ಬಿಎಲ್‌ಎಯ ಮಜೀದ್ ಬ್ರಿಗೇಡ್ ಚೀನಾ, ಪಾಕ್‌ಗೆ ಬೆದರಿಕೆ ಹಾಕಿದೆ’’ ಎಂಬ ಶೀರ್ಷಿಕೆಯೊಂದಿಗೆ ಈ ಕುರಿತು ಸುದ್ದಿ ಪ್ರಕಟಿಸಿದೆ. ಇದರಲ್ಲಿ ಕೂಡ ‘‘ಲೂಚ್ ಲಿಬರೇಶನ್ ಆರ್ಮಿಯ ಮಜೀದ್ ಬ್ರಿಗೇಡ್‌ನ ನಾಲ್ವರು ಸದಸ್ಯರು ಗ್ವಾದರ್‌ನಲ್ಲಿರುವ ಪಂಚತಾರಾ ಹೋಟೆಲ್‌ಗೆ ನುಗ್ಗಿ 26 ಗಂಟೆಗಳ ಕಾಲ ಪಾಕಿಸ್ತಾನ ಮತ್ತು ಕಮಾಂಡೋಗಳೊಂದಿಗೆ ಯುದ್ಧ ಮಾಡಿದ ಎಂಟು ದಿನಗಳ ನಂತರ ಈ ವೀಡಿಯೊ ಬಿಡುಗಡೆಯಾಗಿದೆ’’ ಎಂದು ಬರೆಯಲಾಗಿದೆ.

ಮೇ 2019 ರಲ್ಲಿ ಗ್ವಾದರ್‌ನಲ್ಲಿರುವ ಪರ್ಲ್ ಕಾಂಟಿನೆಂಟಲ್ ಹೋಟೆಲ್‌ ಮೇಲಿನ ದಾಳಿಯ ಕೆಲವು ದಿನಗಳ ನಂತರ ಈ ವೀಡಿಯೊ ಬಿಡುಗಡೆ ಆಗಿದೆ ಎಂದು ಅದೇ ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿರುವ ವರದಿಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ಓದಬಹುದು.

ಹಾಗೆಯೆ ಮೇ 2019 ರಲ್ಲಿ ಗ್ವಾದರ್‌ನಲ್ಲಿರುವ ಪರ್ಲ್ ಕಾಂಟಿನೆಂಟಲ್ ಹೋಟೆಲ್‌ನಲ್ಲಿ ನಡೆದ ದಾಳಿಯ ಕುರಿತ ವರದಿಯನ್ನು  ಇಲ್ಲಿ,  ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಗ್ವಾದರ್ ಹೋಟೆಲ್ ದಾಳಿಯ ನಂತರ ಬಿಎಲ್‌ಎ ನಾಯಕರೊಬ್ಬರು ಚೀನಾ ಮತ್ತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ 2019 ರ ವೀಡಿಯೊವನ್ನು 2025 ರ ಜಾಫರ್ ಎಕ್ಸ್‌ಪ್ರೆಸ್ ಅಪಹರಣಕ್ಕೆ ಸಂಬಂಧಿಸಿದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ನ್ಯೂಸ್ ಮೀಟರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಜಿಯೋ ಕಂಪನಿಯಿಂದ ಹೋಳಿ ಹಬ್ಬದ ಪ್ರಯುಕ್ತ 700 ರೂ ಕೊಡುಗೆ ! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights