FACT CHECK | ಆತ್ಮರಕ್ಷಣೆ ತರಬೇತಿ ಯೋಜನೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರ ಎಂಬುದು ಸುಳ್ಳು
ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 16ನೇ ಬಾರಿ ಬಜೆಟ್ ಮಂಡಿಸಿದ ನಂತರ ಹಲವು ವಿವಾದಗಳು ಹುಟ್ಟಿಕೊಂಡಿವೆ. ಅದರಲ್ಲೂ ಪ್ರಮುಖವಾಗಿ ಮುಸಲ್ಮಾನ ಹೆಣ್ಣು ಮಕ್ಕಳಿಗೆ ಮಾತ್ರ ಆತ್ಮರಕ್ಷಣೆಯ ವಿದ್ಯಯನ್ನು ಕಲಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ ಈ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಕಡೆಗಣನೆ ಮಾಡುತ್ತಿದೆ ಎಂದು ಕೋಮು ಹಿನ್ನಲೆಯಲ್ಲಿ ಪ್ರತಿಪಾದಿಸಿ ಪೋಸ್ಟ್ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿಹಂಚಿಕೊಳ್ಳಲಾಗಿದೆ.

ಇನ್ನೂ ಕೆಲವರು ಸಂಬಂಧವೇ ಇಲ್ಲದೆ “ಕರ್ನಾಟಕದಲ್ಲಿ ಹಿಂದೂ ಹುಡುಗಿ ಸ್ವಾತಿಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಒಬ್ಬ ಅಪರಾಧಿ ನಯಾಜ್ನನ್ನು ಪೊಲೀಸರು ಬಂಧಿಸಿದ್ದಾರೆ.. ವಿಪರ್ಯಾಸವೆಂದರೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ನಲ್ಲಿ ಮುಸ್ಲಿಂ ಸಮುದಾಯದ ಹುಡುಗಿಯರಿಗೆ ಮಾತ್ರ ಆತ್ಮರಕ್ಷಣಾ ತರಬೇತಿ ನೀಡುವುದಾಗಿ ಘೋಷಿಸಿದ್ದಾರೆ!!” ಎಂದು ಸ್ವಾತಿ ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಬರೆದುಕೊಳ್ಳುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಪೋಸ್ಟ್ಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್ಗಳನ್ನು ಬಳಸಿಕೊಂಡು ಸರ್ಚ್ ಮಾಡಿದಾಗ, “ಕರ್ನಾಟಕದ 169 ಶಿಕ್ಷಣ ಸಂಸ್ಥೆಗಳಲ್ಲಿ 25 ಸಾವಿರ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಕಲಿಕೆಗೆ ಅವಕಾಶ’ ಎಂಬ ಶೀರ್ಷಿಕೆಯೊಂದಿಗೆ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ 8 ಮಾರ್ಚ್ 2025 ರಂದು ವರದಿ ಪ್ರಕಟಿಸಿರುವುದು ಕಂಡು ಬಂದಿದೆ. ಈ ಆತ್ಮರಕ್ಷಣೆ ತರಬೇತಿ ಕಾರ್ಯಕ್ರಮವನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯವು ನೋಡಿಕೊಳ್ಳುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

“ಅಲ್ಪಸಂಖ್ಯಾತರ ನಿರ್ದೇಶನಾಲಯವು ನಡೆಸುವ 169 ವಸತಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಓದುತ್ತಿರುವ 25,000 ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ಕೌಶಲ್ಯ ತರಬೇತಿಯನ್ನು ನೀಡಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ್ದಾರೆ ಎಂದು 7 ಮಾರ್ಚ್ 2025 ರ ಎಕನಾಮಿಕ್ ಟೈಮ್ಸ್ ವರದಿಯಲ್ಲೂ ಉಲ್ಲೇಖಿಸಲಾಗಿದೆ.

2025-2026 ರ ಕರ್ನಾಟಕ ರಾಜ್ಯ ಬಜೆಟ್ ಕುರಿತಾದ ದಾಖಲೆಯಲ್ಲಿಯೂ ಇದೇ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ವಿಭಾಗದ ಅಡಿಯಲ್ಲಿ ಪಾಯಿಂಟ್ 221 ರಲ್ಲಿ, “ಅಲ್ಪಸಂಖ್ಯಾತರ ನಿರ್ದೇಶನಾಲಯವು ನಡೆಸುವ 169 ವಸತಿ ಶಾಲೆಗಳು/ಕಾಲೇಜುಗಳಲ್ಲಿ ಓದುತ್ತಿರುವ 25,000 ಬಾಲಕಿಯರಿಗೆ ಸ್ವರಕ್ಷಣೆ ಕೌಶಲ್ಯ ತರಬೇತಿಯನ್ನು ನೀಡಲಾಗುವುದು” ಎಂಬ ಅಂಶವನ್ನು ಒಳಗೊಂಡಿರುವುದು ಕಂಡು ಬಂದಿದೆ.

ಅಲ್ಪಸಂಖ್ಯಾತರ ನಿರ್ದೇಶನಾಲಯದ ವೆಬ್ಸೈಟ್ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು, ಬೌದ್ಧರು, ಸಿಖ್ಯರು ಮತ್ತು ಪಾರ್ಸಿ ಅಲ್ಪಸಂಖ್ಯಾತರ ವ್ಯಾಪ್ತಿಗೆ ಬರುತ್ತವೆ. ಹಾಗೆಯೇ ಮುಸಲ್ಮಾನರು ಮಾತ್ರ ಅಲ್ಪ ಸಂಖ್ಯಾತರಲ್ಲ ಎಂಬುದು ಕೂಡ ಇದರಿಂದ ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಲ್ಪಸಂಖ್ಯಾತರ ನಿರ್ದೇಶನಾಲಯವು ನಡೆಸುವ 169 ವಸತಿ ಶಾಲೆಗಳು/ಕಾಲೇಜುಗಳಲ್ಲಿ ಓದುತ್ತಿರುವ 25,000 ಬಾಲಕಿಯರಿಗೆ ಸ್ವರಕ್ಷಣೆ ಕೌಶಲ್ಯ ತರಬೇತಿಯನ್ನು ನೀಡಲಾಗುವ ಯೋಜನೆಯನ್ನು, ಸಿಎಂ ಸಿದ್ದರಾಮಯ್ಯನವರು ಕೇವಲ ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾತ್ರ ಆತ್ಮರಕ್ಷಣೆಯ ತರಬೇತಿ ಕಾರ್ಯಕ್ರಮವನ್ನು ಘೋಷಿಸಿದ್ದಾರೆ ಎಂದು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರಂಜಾನ್ ಮಾಸದಲ್ಲಿ ಹಿಜಾಬ್ ಧರಿಸಿರುವ ಬಾಲಿವುಡ್ ನಟಿಯರ ಫೋಟೊ ವೈರಲ್! ವಾಸ್ತವವೇನು

