FACT CHECK | ರೋಹಿತ್ ಶರ್ಮಾ ಅವರಿಗೆ ಅಂಬಾನಿ ಪತ್ನಿ ಬುಗಾಟಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆಯೇ?
ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಉದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025 ಗೆದ್ದ ಖುಷಿಗಾಗಿ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಬುಗಾಟಿಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ನೀತಾ ಅಂಬಾನಿ ಮತ್ತು ರೋಹಿತ್ ಶರ್ಮಾ ಒಟ್ಟಿಗೆ ಇರುವ ಎರಡು ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ನೀತಾ ಅಂಬಾನಿ ಅವರು ಕಾರಿನ ಕೀಲಿಯನ್ನು ರೋಹಿತ್ ಶರ್ಮಾಗೆ ನೀಡುತ್ತಿರುವುದು ಕಂಡುಬರುತ್ತದೆ. ಈ ಚಿತ್ರವನ್ನು ಹಂಚಿಕೊಂಡ ಬಳಕೆದಾರರು, ‘‘ಚಾಂಪಿಯನ್ಸ್ ಟ್ರೋಫಿ 2025 ಗೆದ್ದ ಖುಷಿಗಾಗಿ ತಂಡದ ನಾಯಕ ರೋಹಿತ್ ಶರ್ಮಾ ರಿಗೆ Mumbai Indians ತಂಡದ Franchise ನೀತಾ ಅಂಬಾನಿ ಯಾವ ಕಾರನ್ನು ಉಡುಗೊರೆಯಾಗಿ ನೀಡಿದರು?’’ ಎಂದು ಬರೆದುಕೊಂಡಿದ್ದಾರೆ. ಹಾಗೆಯೆ ಇನ್ನೂ ಕೆಲವರು, ‘‘2025 ರ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ನೀತಾ ಅಂಬಾನಿ ರೋಹಿತ್ ಶರ್ಮಾ ಬುಗಾಟಿಯನ್ನು ನೀಡುತ್ತಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ, ನೀತಾ ಅಂಬಾನಿ ದುಬಾರಿ ಮೊತ್ತದ ಕಾರು ಗಿಫ್ಟ್ ನೀಡಿದ್ದಾರೆಯೇ ಎಂದ ಪರಿಶೀಲಿಸಲು ಕೀವರ್ಡ್‌ಗಳ ಮೂಲಕ ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಈ ಚಿತ್ರಕ್ಕೆ ಸಂಬಂಧಿಸಿದ ಯಾವುದೇ ವರದಿ ಗೂಗಲ್‌ನಲ್ಲಿ ಲಭ್ಯವಾಗಿಲ್ಲ. ನೀತಾ ಅಂಬಾನಿ ದುಬಾರಿ ಮೊತ್ತದ ಕಾರು ಗಿಫ್ಟ್ ನೀಡಿದ್ದೇ ಆಗಿದ್ದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುತ್ತಿತ್ತು. ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಮಾಧ್ಯಮ ಸುದ್ದಿ ಪ್ರಕಟಿಸಿಲ್ಲ.

ಆ ಬಳಿಕ, ನಾವು ವೈರಲ್ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ರೋಹಿತ್ ಶರ್ಮಾ ಮತ್ತು ನೀತಾ ಅಂಬಾನಿ ಅವರ ಕೈಗಳು ಚಿತ್ರದಲ್ಲಿ ಅಸಹಜವಾಗಿ ಕಾಣುತ್ತಿದ್ದು, ಇದರ ಜೊತೆಗೆ, ಎರಡೂ ಚಿತ್ರಗಳಲ್ಲಿ ರೋಹಿತ್ ಶರ್ಮಾ ಅವರ ಜೆರ್ಸಿ ವಿಭಿನ್ನವಾಗಿ ಕಾಣುತ್ತದೆ. ಫೋಟೋ ಒಂದೇ ಸಮಯದ್ದಾಗಿದ್ದರೆ ಎರಡೂ ಜೆರ್ಸಿಗಳು ಒಂದೇ ಆಗಿರಬೇಕು. ಹೀಗಾಗಿ ಈ ಫೋಟೋ ಕೃತಕ ಬುದ್ದಿಮತ್ತೆಯಿಂದ (AI) ರಚಿಸಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತದೆ.
ಹಾಗಾಗಿ ವೈರಲ್ ಫೋಟೋವನ್ನು ಪರಿಶೀಲಿಇಸಲು AI ಪತ್ತೆ ಮಾಡುವ ಟೂಲ್‌ಗಳನ್ನು ಬಳಸಿಕೊಂಡು ಸರ್ಚ್ ಮಾಡಿದಾಗ, ಸೈಟ್‌ಎಂಜಿನ್‌ನ ಫಲಿತಾಂಶಗಳ ಪ್ರಕಾರ, ವೈರಲ್ ಫೋಟೋವು ಶೇಕಡಾ 97 ರಷ್ಟು AI ನಿಂದ ರಚಿಸಲಾಗಿದೆ ಎಂದು ತಿಳಿದುಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2025 ರಲ್ಲಿ ಭಾರತೀಯ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ರೋಹಿತ್ ಶರ್ಮಾ ಅವರಿಗೆ ನೀತಾ ಅಂಬಾನಿ ಬುಗಾಟಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಕೃತಕ ಬುದ್ಧಿಮತ್ತೆಯಿಂದ ರಚಿಸಲ್ಪಟ್ಟಿದೆ ಫೋಟೊಗಳನ್ನು ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಚಿರತೆಯೊಂದು ಬನ್ನೇರುಘಟ್ಟದಲ್ಲಿ ಕಾಣಿಸಿಕೊಂಡಿದೆ ಎಂದು ಹಳೆಯ ವಿಡಿಯೋ ಹಂಚಿಕೆ

