FACT CHECK | ರಾಮಸೇತುವೆ ಅವಶೇಷಗಳು ಪತ್ತೆಯಾಗಿದೆ ಎಂದು AI ವಿಡಿಯೋ ಹಂಚಿಕೆ
ದೇಶದೆಲ್ಲೆಡೆ ಶ್ರೀರಾಮನವಮಿಯನ್ನು ಭಕ್ತಿಯಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಸಮುದ್ರದ ಆಳದಲ್ಲಿ ಸ್ಕೂಬಾ ಡೈವರ್ಗಳ ತಂಡವೊಂದು ಕೆಲವು ಅವಶೇಷಗಳನ್ನು ಪರಿಶೀಲಿಸುವಾಗ, ಬಂಡೆಗಳು, ಪ್ರಾಚೀನ ಕಾಲದ ವಸ್ತುಗಳು, ಪ್ರಜ್ವಲಿಸುವ ವಿಗ್ರಹವನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನು ಹಂಚಿಕೊಳ್ಳುವಾಗ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ಡೈವರ್ಗಳು ಸಮುದ್ರದೊಳಗಿನ ರಾಮ ಸೇತುವಿನ ಅವಶೇಷಗಳನ್ನು ತೋರಿಸುತ್ತಿದ್ದಾರೆ ಎಂದು ಪ್ರತಿಪಾದಿಸುತ್ತಿದ್ದಾರೆ.

ಏಪ್ರಿಲ್ 5, 2025 ರಂದು ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಸಮುದ್ರ ಒಳಗಿನ ದೃಶ್ಯ ರಾಮ್ ಸೇತು.. ಜೈ ಶ್ರೀ ರಾಮ್’’ ಎಂದು ಬರೆದುಕೊಂಡಿದ್ದಾರೆ. (Archive) ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಇದೇ ವೀಡಿಯೊವನ್ನು ಹಲವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವುದು ಕಂಡುಬಂದಿದೆ. ಆದರೆ, ರಾಮ ಸೇತುವಿನ ಅವಶೇಷಗಳನ್ನು ತೋರಿಸುವುದಾಗಿ ಹೇಳಿಕೊಳ್ಳುವ ವೀಡಿಯೊವನ್ನು ಒಳಗೊಂಡ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
View this post on Instagram
ಹೀಗೆ ಹುಡುಕಾಟದ ಸಮಯದಲ್ಲಿ ಇದೇ ವೈರಲ್ ವೀಡಿಯೊ ಅತಿ ಹೆಚ್ಚು ವೀಕ್ಷಣೆ ಪಡೆದ ಇನ್ಸ್ಟಾಗ್ರಾಮ್ ಖಾತೆಯೊಂದರಲ್ಲಿ ಕಂಡಿದ್ದೇವೆ. ಈ ವೀಡಿಯೊವನ್ನು ಮಾರ್ಚ್ 27 ರಂದು bharathfx ಎಂಬ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊವನ್ನು ಪೋಸ್ಟ್ ಮಾಡುವಾಗ, ಬಳಕೆದಾರರು ಇದನ್ನು AI ಬಳಸಿ ರಚಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಖಾತೆಯಲ್ಲಿ ಎಐ ಯಿಂದ ರಚಿತವಾದ ಅನೇಕ ವೀಡಿಯೊಗಳಿವೆ.

ಈ ಮಾಹಿತಿಯ ಆಧಾರದ ಮೇಲೆ ನಾವು AI ಪತ್ತೆ ಸಾಧನ ಹೈವ್ ಮಾಡರೇಶನ್ನಲ್ಲಿ ವೀಡಿಯೊದ ಒಂದು ವಿಭಾಗವನ್ನು ಪರಿಶೀಲಿಸಿದ್ದೇವೆ. ಆಗ ಇದು ಶೇ. 99.9 ರಷ್ಟು ಎಐಯಿಂದ ರಚಿತವಾಗಿದೆ ಎಂದು ಹೇಳಿದೆ. ಹಾಗೆಯೆ ಮತ್ತೊಂದು AI ಪತ್ತೆ ವೆಬ್ಸೈಟ್ WasItAI ನಲ್ಲಿ ವೈರಲ್ ಕ್ಲಿಪ್ನಿಂದ ಕೆಲ ಸ್ಕ್ರೀನ್ ಶಾಟ್ ತೆಗೆದು ಪರಿಶೀಲಿಸಿದ್ದೇವೆ. ಇದು ಕೂಡ ಈ ಎಲ್ಲ ಫೋಟೋ ಎಐಯಿಂದ ರಚಿತವಾದವು ಎಂಬುದನ್ನು News Meter ಹೇಳಿದೆ.
ಒಟ್ಟಾರೆಯಾ ಹೇಳುವುದಾದರೆ, ಸ್ಕೂಬಾ ಡೈವರ್ಗಳು ಸಮುದ್ರ ಆಳದಲ್ಲಿ ಪ್ರಾಚೀನ ರಚನೆಗಳ ಅವಶೇಷಗಳನ್ನು ಪರಿಶೀಲಿಸುತ್ತಿರುವಾಗ ಕಂಡುಬರುವ ರಚನೆಗಳು ರಾಮ ಸೇತುವಿನ ಅವಶೇಷಗಳು ಎಂಬುದು ಸುಳ್ಳು. ವಾಸ್ತವವಾಗಿ ಈ ವಿಡಿಯೋಗಳನ್ನು AI ಮೂಲಕ ರಚಿಸಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | HCU ನಲ್ಲಿ ನಿಜವಾಗಿಯೂ ಜಿಂಕೆ ಸತ್ತಿದೆಯೇ? ವೈರಲ್ ಫೋಟೋದ ಅಸಲೀಯತ್ತೇನು?

