ಫ್ಯಾಕ್ಟ್‌ಚೆಕ್ : ಸಾಧುವೊಬ್ಬರ ಮೇಲೆ ಹಲ್ಲೆ ನಡೆಸಿ ಕೂದಲು ಬೋಳಿಸಿದ ವ್ಯಕ್ತಿ ಮುಸ್ಲಿಂ ಅಲ್ಲ

ಸಾಧು ಒಬ್ಬರ ಮೇಲೆ ಹಲ್ಲೆ ನಡೆಸಿ ಅವರ ಕೂದಲನ್ನು ಬಲವಂತವಾಗಿ ಕತ್ತರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಕೋಮು ವೈಷಮ್ಯದ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಮಧ್ಯಪ್ರದೇಶದ ಖಾಂಡ್ವಾದಲ್ಲಿ ಮುಸ್ಲಿಂ ಯುವಕನೊಬ್ಬ ಸಾರ್ವಜನಿಕವಾಗಿ ಅಘೋರಿ ಸಾಧುವಿನ ಕೂದಲು ಮತ್ತು ಗಡ್ಡವನ್ನು ಬೋಳಿಸಿದ್ದಾನೆ ಎಂಬ ಕೋಮು ವೈಷಮ್ಯದ ಹೇಳಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.

https://twitter.com/Sudhir_mish/status/1692492548345110900

ಇದೇ ವಿಡಿಯೋ 2022 ಮೇ ತಿಂಗಳಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.  ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವಿಡಿಯೊದ ಸ್ಕ್ರೀನ್‌ಶಾಟ್ ತೆಗೆದು ಗೂಗಲ್  InVid ನ ಕೀಫ್ರೇಮ್ ಅನಾಲಿಸಿಸ್ ಟೂಲ್  ಬಳಸಿ ಸರ್ಚ್ ಮಾಡಿದಾಗ, 2022 ಮೇ 24 ರಂದು ಪ್ರಕಟಿಸಲಾದ ABP ಲೈವ್‌ನ  ವೀಡಿಯೊ ಲಭ್ಯವಾಗಿದೆ. ಕೀಫ್ರೇಮ್‌ಗಳ ಆಧಾರದಲ್ಲಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಎಬಿಪಿ ಲೈವ್ ವರದಿಯಲ್ಲಿ ವೈರಲ್ ವೀಡಿಯೊದ ಬಗೆಗಿನ ವಿವರಗಳಿದ್ದು, ಘಟನೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ವರದಿಯ ಪ್ರಕಾರ, ಆರೋಪಿಯು ಖಾಂಡ್ವಾದಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ರಾಮದಾಸ್ ಗೌರ್ ಅವರ ಪುತ್ರ ಪ್ರವೀಣ್ ಗೌರ್ ಎಂದು ತಿಳಿದು ಬಂದಿದೆ. ಗೌರ್ ಅವರು ಸಾಧುವನ್ನು ಅವಾಚ್ಯವಾಗಿ ನಿಂದಿಸಿದಲ್ಲದೆ ಅವರನ್ನು ಹತ್ತಿರದ ಕ್ಷೌರದ ಅಂಗಡಿಗೆ ಎಳೆದೊಯ್ದು, ಸನ್ಯಾಸಿಯ ಕೂದಲನ್ನು ಬಲವಂತವಾಗಿ ಕತ್ತರಿಸಿದರು ಎಂದು ವರದಿ ಮಾಡಿದೆ.

Alt news ನ ಫ್ಯಾಕ್ಟ್‌ಚೆಕ್ ವರದಿಗಾರರಾದ Mohammed Zubair ಘಟನೆಯ ವಿಡಿಯೋವನ್ನು ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು ಸಾಧುವಿನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯು ಹಿಂದೂ ಸಮುದಾಯದ ವ್ಯಕ್ತಿ ಎಂದು ಹೇಳಿದ್ದು, ಈ ಘಟನೆಯು ಮಧ್ಯಪ್ರದೇಶದ ಖಾಂಡ್ವಾ ಪ್ರದೇಶದಲ್ಲಿ ನಡೆದಿದೆ ಎಂದು ಬರೆದಿದ್ದಾರೆ.  ಪ್ರವೀಣ್ ಗೌರ್ ಎಂಬಾತ ಸಾರ್ವಜನಿಕರ ಸಮ್ಮುಖದಲ್ಲಿ ಅಘೋರಿ ಸಾಧುವಿನ ಮೇಲೆ ಹಲ್ಲೆ, ನಿಂದನೆ ಮಾಡಿ, ಆತನ ಕೂದಲನ್ನು ಕತ್ತರಿಸಿದ್ದಾನೆ. ಇದು ಸುದ್ದಿ ವಾಹಿನಿಗಳ ಹೆಡ್‌ಲೈನ್‌ನಲ್ಲಿ ಬರುವುದಿಲ್ಲ ಏಕೆಂದರೆ ಇದು ರಾಜಸ್ಥಾನ/ಮುಂಬೈನಲ್ಲಿ ಸಂಭವಿಸಿಲ್ಲ ಮತ್ತು ಆರೋಪಿಯು (BJP) ಪಕ್ಷಕ್ಕೆ ಸಂಬಂಧಿಸಿದ್ದಾನೆ ಎಂದು ಸೂಚ್ಯವಾಗಿ ಬರೆದಿದ್ದಾರೆ.

ಎಬಿಪಿ ಲೈವ್ ಸರ್ಚ್ ನಂತರ ನಾವು  ಸಂಬಂಧಿತ ಮಾಹಿತಿಯೊಂದಿಗೆ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ ಮೇ 28 ರಂದು ಎನ್‌ಡಿಟಿವಿ ಪ್ರಕಟಿಸಿದ ವರದಿಯು ಲಭ್ಯವಾಗಿದೆ. ವರದಿಯ ಪ್ರಕಾರ,  ಮಧ್ಯಪ್ರದೇಶದ ಖಾಂಡ್ವಾದಲ್ಲಿರುವ ಪತಾಜನ್ ಗ್ರಾಮದ ಬುಡಕಟ್ಟು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯು ಖಾಂಡ್ವಾದ ಹಾತ್ ಬಜಾರ್‌ನಲ್ಲಿ ಮೇ 22 ರಂದು ಮಧ್ಯಾಹ್ನ ನಡೆದಿದೆ ಎಂದು ವರದಿಯಾಗಿದೆ. ಸಾಧು ಒಬ್ಬರು ಮಾರುಕಟ್ಟೆಯ ಬೀದಿಯೊಂದರಲ್ಲಿ ಭಿಕ್ಷೆ ಬೇಡುತ್ತಿದ್ದಾಗ ಆರೋಪಿಯು ಜಗಳಕ್ಕಿಳಿದ್ದಿದಾನೆ. ಇದಾದ ಬಳಿಕ ಪ್ರವೀಣ್ ಗೌರ್ ಸಾಧುವಿನ ಮೇಲೆ ಸಾರ್ವಜನಿಕರ ಎದುರಿಗೆ ಮಾರುಕಟ್ಟೆಯಲ್ಲಿ ಹಲ್ಲೆ ನಡೆಸಿದ್ದಾರೆ. ಆರೋಪಿ ಮದ್ಯ ಸೇವಿಸಿದ್ದ ಸ್ಥಿತಿಯಲ್ಲಿದ್ದ ಎನ್ನಲಾಗಿದೆ. ಘಟನೆಯ ನಂತರ, ನೆರೆದಿದ್ದ ಜನರು ಆರೋಪಿಯಿಂದ  ಸಾಧುವನ್ನು ರಕ್ಷಿಸಿದರು ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ಘಟನೆಯ ನಂತರ ಸಾಧು ನಾಪತ್ತೆಯಾಗಿದ್ದು, ಖಾಂಡ್ವಾ ಪೊಲೀಸರು ಔಪಚಾರಿಕ ದೂರನ್ನು ದಾಖಲಿಸುವ ಸಲುವಾಗಿ ಸಾಧುವನ್ನು ಹುಡುಕುತ್ತಿದ್ದಾರೆ ಎಂದು ಠಾಣಾಧಿಕಾರಿ ಪರಶ್ರಾಮ್ ದಬರ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ಈ ವಿಷಯದ ಕುರಿತು ವೀಡಿಯೊ ವರದಿಯನ್ನು ಸಹ ಪ್ರಕಟಿಸಿದೆ, ಅದನ್ನು ಮೇ 25 ರಂದು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ. ವೀಡಿಯೊ ವರದಿಯಲ್ಲಿ 1.29 ಮಾರ್ಕ್‌ನಲ್ಲಿ, ಖಾಂಡ್ವಾದಲ್ಲಿ ಪೊಲೀಸ್ ಅಧೀಕ್ಷಕ ವಿವೇಕ್ ಸಿಂಗ್ ಅವರ ಹೇಳಿಕೆಯನ್ನು ಕೇಳಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಗೌರ್ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

 

ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ತಂಡವು ವೈರಲ್ ವಿಡಿಯೋವನ್ನು ಪರಿಶೀಲಿಸಿದೆ ಮತ್ತು ಅದು ಸುಳ್ಳು ಎಂದು ಕಂಡುಹಿಡಿದಿದೆ. ಆರೋಪಿಯು ಹಿಂದೂ ಸಮುದಾಯಕ್ಕೆ ಸೇರಿದವನಾಗಿದ್ದು, ಇದರಲ್ಲಿ ಯಾವುದೇ ಕೋಮು ಹಿನ್ನಲೆಯಿಲ್ಲ ಎಂದು ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ 2022 ಮೇ 22 ರಂದು ಸಾಧುವಿನ ಮೇಲೆ ಹಲ್ಲೆ ನಡೆಸಿ ಕೂದಲು ಬೋಳಿಸಿದ ಹಳೆಯ ಘಟನೆಯನ್ನು ಕೋಮು ವೈಷಮ್ಯದೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿರುವಂತೆ ಹಲ್ಲೆ ನಡೆಸಿದ ವ್ಯಕ್ತಿಯು ಮುಸ್ಲಿಂ ಸಮುದಾಯದವನಲ್ಲ ಎಂದು ಪೊಲೀಸರು ಸ್ಪಷ್ಟ ಪಡೆಸಿದ್ದಾರೆ.

ಕೃಪೆ : ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಚಿರತೆಗೆ ಹೆಂಡ ಕುಡಿಸಿ ಸೆಲ್ಫಿ ತೆಗೆದುಕೊಳ್ಳಲಾಗಿದೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights