FACT CHECK | ಕಾಂಗ್ರೆಸ್‌ ಕಾರ್ಯಕರ್ತರಿಂದಲೇ ಕನ್ಹಯ್ಯ ಕುಮಾರ್ ಮೇಲೆ ಹಲ್ಲೆ ನಡೀತಾ?

ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಅವರ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ನವೀನ್ ಕುಮಾರ್ ಜಿಂದಾಲ್ ಎಂಬ ಎಕ್ಸ್‌ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಕಾಂಗ್ರೆಸ್ಸಿಗರು ರಾಹುಲ್ ಗಾಂಧಿಯವರ ನೆಚ್ಚಿನ ನಾಯಕ ಕನ್ಹಯ್ಯ ಕುಮಾರ್ ಅವರನ್ನು ಹೊಡೆದು ಸಭೆಯಿಂದ ಹೊರಗೆ ಹಾಕಿದರು. ಸುಪ್ರಿಯಾ ಶ್ರೀನೆಟ್ ಅವರು ಅವರು ಇದಕ್ಕೆ ಯಾರನ್ನು ಹೊಣೆ ಮಾಡುತ್ತಾರೆ?” ಎಂಬ ಬರಹದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

@VaDharma ಎಂಬ ” ಹೆಸರಿನ ಮತ್ತೋರ್ವ ಎಕ್ಸ್‌ ಬಳಕೆದಾರರೂ ಇದೇ ವಿಡಿಯೋವನ್ನು ಹಂಚಿಕೊಂಡಿದ್ದು, ಅವರೂ ಇದೇ ಪ್ರಶ್ನೆಯನ್ನು ಕೇಳಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಮೇಲೆ ಕಾಂಗ್ರೆಸ್‌ ರ್ಕಾರ್ಯರ್ಕರು ಹಲ್ಲೆ ನಡೆಸಿದ್ದಾಯೇ ಎಂದು ಪರಿಶೀಲಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು, ಕೀವರ್ಡ್‌ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಕೆಲವು ಸುದ್ದಿಯ ಲಿಂಕ್‌ಗಳು ಲಭ್ಯವಾದವು. ಆ ಸುದ್ದಿಗಳನ್ನು ಪರಿಶೀಲಿಸಿದಾಗ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಸುಳ್ಳು; ಕನ್ಹಯ್ಯ ಕುಮಾರ್ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಹೊಡೆದಿಲ್ಲ ಎಂದು ತಿಳಿದು ಬಂತು.

ಈ ಸಂಬಂಧ ಮಾರ್ಚ್ 31, 2025ರಂದು ‘ದಿ ಹಿಂದೂ’ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ. ಈ ವರದಿಯ ಪ್ರಕಾರ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ‘ಪಲಾಯನ ರೋಕೋ, ನೌಕರಿ ದೋ ಯಾತ್ರೆ’ಯಲ್ಲಿ ಗೊಂದಲ ಉಂಟಾಗಿತ್ತು. ಪಕ್ಷದ ಕೆಲವು ಕಾರ್ಯಕರ್ತರು ಕನ್ಹಯ್ಯ ಕುಮಾರ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಅವರ ಭದ್ರತಾ ಸಿಬ್ಬಂದಿ ಕಾರ್ಯಕರ್ತರನ್ನು ತಳ್ಳಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದರು. ಇವರ ನಡುವೆ ಹಾಗೂ ಕನ್ಹಯ್ಯ ಕುಮಾರ್ ಅವರ ಭದ್ರತಾ ಸಿಬ್ಬಂದಿ ನಡುವೆ ಗಲಾಟೆ ನಡೆದಿತ್ತು.

ಈ ಘಟನೆಯಿಂದ ಬೇಸರಗೊಂಡಿದ್ದ ಕನ್ಹಯ್ಯ ಕುಮಾರ್ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ದಿಲ್ಲಿಗೆ ತೆರಳಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಂಡಿಯಾ ಟಿವಿ ಹಿಂದಿ, ಪ್ರಭಾ ಸಾಕ್ಷಿ, ಎಬಿಪಿ ನ್ಯೂಸ್ ಮತ್ತು ದೈನಿಕ್ ಜಾಗರಣ್ ಕೂಡ ಇದೇ ಮಾಹಿತಿಯನ್ನು ವರದಿ ಮಾಡಿವೆ. ಆದರೆ, ಕನ್ಹಯ್ಯ ಕುಮಾರ್ ಅವರಿಗೆ ಹೊಡೆದಿದ್ದಾರೆ ಎಂಬುದನ್ನು ಖಚಿತಪಡಿಸುವ ಯಾವುದೇ ಮಾಹಿತಿ ಅಥವಾ ಸುದ್ದಿ ಲಭ್ಯವಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್ ಕಾರ್ಯಕರ್ತರು ಕನ್ಹಯ್ಯ ಕುಮಾರ್ ಅವರನ್ನು ಹೊಡೆದು ಸಭೆಯಿಂದ ಹೊರಗೆ ಹಾಕಿದ್ದಾರೆ ಎಂಬ ಸುದ್ದಿ ಸುಳ್ಳು. ಯಾತ್ರೆಯ ಸಂದರ್ಭದಲ್ಲಿ ಸೆಲ್ಫಿ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕನ್ಹಯ್ಯ ಕುಮಾರ್ ಅವರ ಭದ್ರತಾ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 2022ರಲ್ಲಿ ಪ್ರಿಯಾಂಕಾ ಗಾಂಧಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವ ಹಳೆಯ ವಿಡಿಯೋವನ್ನು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights