FACT CHECK | ಶೌರ್ಯ ಚಕ್ರ ವಿಜೇತ ಮುದಾಸಿರ್ ಅವರ ತಾಯಿಯನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗಿದೆಯೇ?
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಪಾಕ್ನ ಪ್ರಜೆಗಳ ವೀಸಾ ರದ್ದು ಮಾಡಿ ಎಲ್ಲರೂ ಭಾರತವನ್ನು ತೊರೆದು ಪಾಕಿಸ್ತಾನಕ್ಕೆ ಮರಳಬೇಕು ಎಂದು ಕೇಂದ್ರ ಸರ್ಕಾರ ತಾಕೀತು ಮಾಡಿತ್ತು. ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ವೊಂದು ವೈರಲ್ ಆಗಿತ್ತು. ಶೌರ್ಯ ಚಕ್ರ ವಿಜೇತ ಮುದಾಸೀರ್ ಅಹ್ಮದ್ ಶೇಖ್ ಅಲಿಯಾಸ್ ಬಿಂದಾಸ್ ಅವರ ತಾಯಿ ಶಮೀಮಾ ಅಖ್ತರ್ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.
ಏಪ್ರಿಲ್ 30, 2025 ರಂದು N.R Truth view ಎಂಬ ಫೇಸ್ಬುಕ್ ಪೇಜ್ನಲ್ಲಿ ಪೋಟೊವೊಂದನ್ನು ಹಂಚಿಕೊಂಡಿದ್ದು, “ಶೌರ್ಯ ಚಕ್ರ ವಿಜೇತ ಹುತಾತ್ಮ ಮುದಾಸಿರ್ ಅವರ ತಾಯಿಯನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಯಿತು. ಅವರು 45 ವರ್ಷಗಳ ಕಾಲ ಕಾಶ್ಮೀರದಲ್ಲಿದ್ದರು, ಮುದಾಸಿರ್ ಅವರ ತಾಯಿ ಶಮಿಮಾ ಅವರಿಗೆ 2023 ರಲ್ಲಿ ಶೌರ್ಯ ಚಕ್ರವನ್ನು ನೀಡಲಾಯಿತು” ಎಂದು ಹೇಳಿಕೊಂಡಿದೆ.

ಕನ್ನಡ ಮಾಧ್ಯಮ ಏಷಿಯಾನೆಟ್ ಸುವರ್ಣ ನ್ಯೂಸ್ ಕೂಡ ಇದೇ ರೀತಿಯ ವರದಿಯೊಂದನ್ನು ಪ್ರಕಟಿಸಿದ್ದು, ‘ಶೌರ್ಯ ಚಕ್ರ ಪುರಸ್ಕೃತ ಹುತಾತ್ಮ ಮುದಾಸಿರ್ ತಾಯಿಯೂ ಪಾಕಿಸ್ತಾನಕ್ಕೆ ಗಡೀಪಾರು!’ ಎಂಬ ಟೈಟಲ್ ನೀಡಿದೆ. ಅದನ್ನು ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ಗಳಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಇದಕ್ಕೆ ಸಂಬಂಧಿಸಿದ ವೆಬ್ಸೈಟ್ಗಳಲ್ಲಿ ಪ್ರಕಟಗೊಂಡ ವರದಿ ಲಭ್ಯವಾಗಿದೆ.

LiveHindustan.com ನಲ್ಲಿನ ವರದಿಯ ಪ್ರಕಾರ, “ಮರಣೋತ್ತರ ಶೌರ್ಯ ಚಕ್ರ ವಿಜೇತ ಹುತಾತ್ಮ ಯೋಧ ಮುದಾಸೀರ್ ಅಹ್ಮದ್ ಶೇಖ್ ಅವರ ತಾಯಿ ಶಮೀಮಾ ಅಖ್ತರ್ ಅವರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಿರಾಕರಿಸಿದ್ದಾರೆ. ಪೊಲೀಸರು ಇದನ್ನು “ಸುಳ್ಳು ಮತ್ತು ಆಧಾರರಹಿತ” ಸುದ್ದಿ ಎಂದು ಬಣ್ಣಿಸಿದ್ದು, ಶಮೀಮಾ ಅಖ್ತರ್ ಭಾರತದಲ್ಲಿಯೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ, ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುತ್ತಿರುವ ಇತರ 59 ಪಾಕಿಸ್ತಾನಿ ನಾಗರಿಕರನ್ನು ವಾಘಾ ಗಡಿಯ ಮೂಲಕ ತಮ್ಮ ದೇಶಕ್ಕೆ ಕಳುಹಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಇವರಲ್ಲಿ ಹಲವರು 2010 ರ ಪುನರ್ವಸತಿ ನೀತಿಯಡಿಯಲ್ಲಿ ಭಾರತಕ್ಕೆ ಮರಳಿದ ಮಾಜಿ ಭಯೋತ್ಪಾದಕರ ಪತ್ನಿಯರು ಮತ್ತು ಮಕ್ಕಳು ಸೇರಿದ್ದಾರೆ.”
Police Media Cell Baramulla
Press release @JmuKmrPolice@KashmirPolice @DIGBaramulla pic.twitter.com/479u5l1AWX— Baramulla Police (بارہمولہ پولیس) (@BaramullaPolice) April 29, 2025
ಏಪ್ರಿಲ್ 30 ರ ಸುದ್ದಿ ವರದಿ ಲಭ್ಯವಾಗಿದ್ದು, ಶೌರ್ಯ ಚಕ್ರ ವಿಜೇತ ಮುದಾಸೀರ್ ಅಹ್ಮದ್ ಶೇಖ್ ಅವರ ತಾಯಿ ಶಮೀಮಾ ಅಖ್ತರ್ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುವ ಸುದ್ದಿ ಕೇವಲ ವದಂತಿ ಎಂದು ಹೇಳಲಾಗಿತ್ತು. ಶಮೀಮಾಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ ಎಂಬ ಸುದ್ದಿ ಕೇವಲ ವದಂತಿ ಎಂದು ಬರಾಮುಲ್ಲಾ ಪೊಲೀಸರು ತಿಳಿಸಿದ್ದಾರೆ.
2023 ರಲ್ಲಿ ಮುದಾಸಿರ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ:
ಜಮ್ಮು ಮತ್ತು ಕಾಶ್ಮೀರ ಪೊಲೀಸ್ನ ಕಾನ್ಸ್ಟೆಬಲ್ ಮುದಾಸಿರ್ ಅಹ್ಮದ್ ಶೇಖ್ ಅವರು ಪೊಲೀಸ್ನ ರಹಸ್ಯ ಕಾರ್ಯಾಚರಣೆಯ ತಂಡದ ಭಾಗವಾಗಿದ್ದರು. ಅವರು 2022 ಮೇ 25 ರಂದು ಬಾರಾಮುಲ್ಲಾದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಹುತಾತ್ಮರಾದರು. ಮುದಾಸಿರ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರವನ್ನು ನೀಡಲಾಯಿತು. ಶಮೀಮಾ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇ 2023 ರಲ್ಲಿ ದೆಹಲಿಯಲ್ಲಿ ಗೌರವಿಸಿದರು.
ಮೊಹಮ್ಮದ್ ಯೂನಸ್ ಅವರ ಪ್ರಕಾರ, ಬಾರಾಮುಲ್ಲಾ ನಗರದ ಮುಖ್ಯ ಚೌಕಕ್ಕೆ ಮುದಾಸಿರ್ ಅವರ ಸ್ಮರಣಾರ್ಥ ಶಹೀದ್ ಮುದಾಸಿರ್ ಚೌಕ್ ಎಂದು ಹೆಸರಿಸಲಾಗಿದೆ.
View this post on Instagram
ತನಿಖೆಯ ಸಮಯದಲ್ಲಿ, ANN ನ್ಯೂಸ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಶಮೀಮಾ ಅಖ್ತರ್ ಅವರ ಸಂದರ್ಶನ ಲಭ್ಯವಾಗಿದೆ. ಇದರಲ್ಲಿ ಅವರು ಪಾಕಿಸ್ತಾನಕ್ಕೆ ಕಳುಹಿಸಲ್ಪಟ್ಟಿದ್ದಾರೆ ಎಂಬ ವಿಷಯ ಸುಳ್ಳು ಎಂದು ಅವರೇ ಹೇಳಿದ್ದಾರೆ. ಇದೆಲ್ಲವೂ ನಕಲಿ ಸುದ್ದಿ
ಶಹೀದ್ ಕಾನ್ಸ್ಟೇಬಲ್ ಮುದಾಸಿರ್ ಅಹ್ಮದ್ ಅವರ ತಾಯಿ ANN ನ್ಯೂಸ್ ಜೊತೆ ಮಾತನಾಡುತ್ತಾ, ಅವರ ವಿರುದ್ಧ ಹರಡಿರುವ ನಕಲಿ ಸುದ್ದಿಗಳನ್ನು ತಿರಸ್ಕರಿಸಿದ್ದಾರೆ. ಹಂಚಿಕೊಳ್ಳುವ ಮೊದಲು ಸತ್ಯಗಳನ್ನು ಪರಿಶೀಲಿಸುವಂತೆ ಮಾಧ್ಯಮ ಸಂಸ್ಥೆಗಳನ್ನು ಒತ್ತಾಯಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಶೌರ್ಯ ಚಕ್ರ ವಿಜೇತ ಮುದಾಸೀರ್ ಅಹ್ಮದ್ ಶೇಖ್ ಅಲಿಯಾಸ್ ಬಿಂದಾಸ್ ಅವರ ತಾಯಿ ಶಮೀಮಾ ಅಖ್ತರ್ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ ಎಂಬುದು ಸುಳ್ಳು. ಇದನ್ನು ಬಾರಾಮುಲ್ಲಾ ಪೊಲೀಸರೇ ನಿರಾಕರಿಸಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕೇರಳದಲ್ಲಿ ಪಾಕ್ ಪರ ರ್ಯಾಲಿ ನಡೆಸಲಾಗಿದೆಯೇ?

