FACT CHECK | ಕೇರಳದಲ್ಲಿ ಪಾಕ್‌ ಪರ ರ್‍ಯಾಲಿ ನಡೆಸಲಾಗಿದೆಯೇ?

ಪಾಕಿಸ್ತಾನದ ಧ್ವಜ ಹಿಡಿದು, ಕೇರಳದ ಮುಸ್ಲಿಮರು ಪಾಕಿಸ್ತಾನ ಪರ ಮೆರವಣಿಗೆ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಹಸಿರು ಬಣ್ಣದ ಟಿ ಶರ್ಟ್ ಧರಿಸಿ, ಹಸಿರು ಧ್ವಜಗಳನ್ನು ಹಿಡಿದುಕೊಂಡು ರ್‍ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನಲೆಯಲ್ಲಿ ಈ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಏಪ್ರಿಲ್ 25, 2025 ರಂದು ಫೇಸ್​ಬುಕ್ ಬಳಕೆದಾರರೊಬ್ಬರು  ಈ ವೀಡಿಯೊ ಹಂಚಿಕೊಂಡು, ‘‘ಇವರು ಪಾಕಿಸ್ತಾನದ ಜನಗಳೆಲ್ಲ, ನಮ್ಮ ಪಕ್ಕದ ಕೇರಳ ರಾಜ್ಯದ ಜನರು. ಯಾರ ಪರವಾಗಿ ಪ್ರತಿಭಟನೆ ಮಾಡ್ತಾ ಇದ್ದಾರೆ ನೀವೇ ನೋಡಿ, ನಾವು ರಾಜ್ಯ, ಭಾಷೆ ಹೆಸರಿನಲ್ಲಿ ಕಿತ್ತಾಡುತ್ತಾಡುತ್ತಿದ್ದೇವೆ, ಇಂಥವರಿಗೆ ಯಾವ ಭಾಷೆ ರಾಜ್ಯದ ಅವಶ್ಯಕತೆ ಇಲ್ಲ, ನಾವುಗಳು ಈಗಲಾದರೂ, ಭಾಷೆ ರಾಜ್ಯದ ಹೆಸರೇಳಿಕೊಂಡು ಜಗಳವಾಡುವುದನ್ನು ಬಿಟ್ಟು ದೇಶ ಮತ್ತು ಧರ್ಮದ ಪರವಾಗಿ ನಾವೆಲ್ಲರೂ ಒಂದಾಗಬೇಕಿದೆ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಪರಿಶೀಲಿಸಲು ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡು ಗೂಗಲ್ ಸರ್ಚ್ ಮಾಡಿದಾಗ, ‘arangadi_official_page‘ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಪ್‌ಲೋಡ್ ಮಾಡಲಾದ ಅದೇ ವೈರಲ್ ವಿಡಿಯೋ ಲಭ್ಯವಾಗಿದೆ. ಈ ವಿಡಿಯೋವನ್ನು ಏಪ್ರಿಲ್ 16 ರಂದು ‘ಕೋಝಿಕೋಡ್’ ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾಗಿದೆ. ಏಪ್ರಿಲ್ 16 ರಂದು ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಕಾರ್ಯಕರ್ತರು ಪಕ್ಷದ ಧ್ವಜವನ್ನು ಹಿಡಿದಿರುವುದನ್ನು ಇದು ತೋರಿಸುತ್ತದೆ.

ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೇರಳದಲ್ಲಿ ಪಾಕಿಸ್ತಾನ ಪರ ರ್‍ಯಾಲಿಗಳು ನಡೆದಿರುವ ಬಗ್ಗೆ ಯಾವುದೇ ಸುದ್ದಿ ವರದಿಗಳು ಲಭ್ಯವಾಗಿಲ್ಲ. ರ್‍ಯಾಲಿಯಲ್ಲಿ ಬಳಸಲಾದ ಧ್ವಜಗಳು ಮತ್ತು ಟೀ ಶರ್ಟ್ ಮೇಲಿನ ಅರ್ಧಚಂದ್ರ ಚಿಹ್ನೆಯು ಪಾಕಿಸ್ತಾನದ ರಾಷ್ಟ್ರೀಯ ಧ್ವಜಕ್ಕಿಂತ ಭಿನ್ನವಾಗಿ ಕಾಣುತ್ತದೆ. ಅಲ್ಲದೆ, ವೈರಲ್ ವೀಡಿಯೊದಲ್ಲಿರುವ ಧ್ವಜವು ಪಾಕಿಸ್ತಾನ ರಾಷ್ಟ್ರೀಯ ಧ್ವಜದಲ್ಲಿ ಕಾಣುವ ಬಿಳಿ ಲಂಬವಾದ ಪಟ್ಟಿಯನ್ನು ಹೊಂದಿಲ್ಲ.

ವೈರಲ್ ವೀಡಿಯೊದಲ್ಲಿರುವ ಜೆರ್ಸಿಗಳು ಮತ್ತು ಧ್ವಜಗಳು ಪಾಕಿಸ್ತಾನ ದೇಶದ ಧ್ವಜವಲ್ಲ ಎಂಬುದು ಸ್ಪಷ್ಟವಾಗಿದೆ. ವಿಡಿಯೋದಲ್ಲಿ, ಪುರುಷರು ಐಯುಎಂಎಲ್‌ನ ಕೇರಳ ರಾಜ್ಯ ಅಧ್ಯಕ್ಷ ಸೈಯದ್ ಸಾದಿಕಾಲಿ ಶಿಹಾಬ್ ತಂಗಲ್ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಿರುವುದು ಕೇಳಿಸುತ್ತದೆ. ವೀಡಿಯೊದಲ್ಲಿ ಎಲ್ಲಿಯೂ “ಪಾಕಿಸ್ತಾನ” ಅಥವಾ “ಪಹಲ್ಗಮ್” ನಂತಹ ಪದಗಳು ನಮಗೆ ಕೇಳಿಸುವುದಿಲ್ಲ.

ಅದೇ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಏಪ್ರಿಲ್ 15 ರಂದು ಸೈಯದ್ ಸಾದಿಕಾಲಿ ಶಿಹಾಬ್ ತಂಙಲ್ ಅವರ ಚಿತ್ರವಿರುವ ಬ್ಯಾನರ್ ಅನ್ನು ಹಂಚಿಕೊಳ್ಳಲಾಗಿದೆ. ಏಪ್ರಿಲ್ 16 ರಂದು ಮಧ್ಯಾಹ್ನ 3 ಗಂಟೆಗೆ ಕೋಝಿಕ್ಕೋಡ್‌ನಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಯನ್ನು ಆಯೋಜಿಸಲಾಗುತ್ತಿದೆ ಎಂದು ಬ್ಯಾನರ್‌ನಲ್ಲಿ ಹೇಳಲಾಗಿದೆ.

ಏಪ್ರಿಲ್ 4 ರಂದು ಟೈಮ್ಸ್ ಆಫ್ ಇಂಡಿಯಾ ‘ಐಯುಎಂಎಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಾಮೂಹಿಕ ಪ್ರತಿಭಟನೆ ನಡೆಸಲಿದೆ’ ಎಂಬ ಶೀರ್ಷಿಕೆಯ ವರದಿಯನ್ನು ಪ್ರಕಟಿಸಿತು. “ಏಪ್ರಿಲ್ 16 ರಂದು ಕೋಝಿಕ್ಕೋಡ್‌ನಲ್ಲಿ ನಡೆಯಲಿರುವ ಮೆಗಾ ವಕ್ಫ್ ರಕ್ಷಣಾ ರ್ಯಾಲಿಯೊಂದಿಗೆ ದೇಶಾದ್ಯಂತ ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಲು ಐಯುಎಂಎಲ್ ನಿರ್ಧರಿಸಿದೆ” ಎಂದು ವರದಿ ಹೇಳಿದೆ.

ಕೇರಳದಲ್ಲಿ ಏಪ್ರಿಲ್ 16 ರಂದು ನಡೆದ ವಕ್ಫ್ ತಿದ್ದುಪಡಿ ಕಾಯ್ದೆ ಪ್ರತಿಭಟನೆಯ ಸಂದರ್ಭದಲ್ಲಿ ಈ ವೈರಲ್ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಕೇರಳದಲ್ಲಿ ಮುಸ್ಲಿಮರು ಪಾಕಿಸ್ತಾನ ಪರ ಮೆರವಣಿಗೆ ನಡೆಸಿದ್ದಾರೆ ಎಂಬುದು ಸುಳ್ಳು.

ಒಟ್ಟಾರೆಯಾಗಿ ಹೇಳುವುದಾದರೆ, ಕೇರಳದಲ್ಲಿ ಪಾಕಿಸ್ತಾನದ ಪರ  ರ್‍ಯಾಲಿಯನ್ನು ಸಂಘಟಿಸಿ, ಪಾಕಿಸ್ತಾನದ ರಾಷ್ಟ್ರೀಯ ಧ್ವಜಗಳು ಮತ್ತು ಟೀ ಶರ್ಟ್ಗಳನ್ನು ಬಳಸಲಾಗಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವಾಸ್ತವವಾಗಿ ಈ ರ್‍ಯಾಲಿಯನ್ನು ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ದ ಸಂಘಟಿಸಲಾಗಿತ್ತು. ಈ ವೆರವಣಿಗೆಯಲ್ಲಿ ಪ್ರದರ್ಶಿಸಲಾದ ಧ್ವಜಗಳು ಧಾರ್ಮಿಕ ಬಾವುಟಗಳಾಗಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಡಾ. ಬಿ.ಆರ್. ಅಂಬೇಡ್ಕರ್ ಮತ್ತು RSS ಸಂಸ್ಥಾಪಕ ಹೆಡ್ಗೆವಾರ್ ಬೈಕ್‌ನಲ್ಲಿ ಸುತ್ತಾಡುತ್ತಿರುವ ಫೋಟೊ ನಕಲಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights