FACT CHECK | ಪಾಕಿಸ್ತಾನದ ಮೇಲೆ ಯುದ್ದ ಮಾಡಲು ತರಳುತ್ತಿರುವ ಯೋದರಿಗೆ ಸಿಹಿ ತಿನಿಸಿ ಶುಭ ಹಾರೈಸಿದ್ರಾ ಪ್ರಧಾನಿ ಮೋದಿ
“ಪ್ರಧಾನಿ ಮೋದಿ ಸೈನಿಕರಿಗೆ ಸಿಹಿತಿಂಡಿಗಳನ್ನು ತಿನ್ನಿಸಿ ಪಾಕಿಸ್ತಾನದ ಮೇಲೆ ದಾಳಿ ಮಾಡಲು ತಿಳಿಸಿದ್ದಾರೆ” ಎಂಬ ಹೇಳಿಕೆಯೊಂದಿಗೆ ವೈರಲ್ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡ ನಂತರ ದೇಶಾದ್ಯಂತ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ಮಾತು ಕೇಳಿ ಬರುತ್ತಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೈನಿಕರೊಂದಿಗೆ ಇರುವುದು ಕಾಣಬಹುದು.

ಇದೇ ರೀತಿಯ ಪ್ರತಿಪಾದನೆಯನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದು, ಇದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್ ವಿಡಿಯೋದ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಅಕ್ಟೋಬರ್ 31, 2024 ರಂದು ಯೇಹಿ ಹೈ ಖಬರ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋ ಲಭ್ಯವಾಗಿದೆ. ಇದರ ಪ್ರಕಾರ, ಪ್ರಧಾನಿ ಮೋದಿ ಗುಜರಾತ್ನ ಕಚ್ನಲ್ಲಿ ಸೈನಿಕರಿಗೆ ಸಿಹಿತಿಂಡಿಗಳನ್ನು ನೀಡಿದರು ಎಂದು ಉಲ್ಲೇಖಿಸಲಾಗಿದೆ.
ಈ ವೈರಲ್ ವಿಡಿಯೋವನ್ನು ಇಂಡಿಯಾ ಟುಡೇ ವೆಬ್ಸೈಟ್ನಲ್ಲಿ ಅಕ್ಟೋಬರ್ 31, 2024 ರಂದು ಪ್ರಕಟವಾದ ವಿಡಿಯೋ ಸುದ್ದಿಯಲ್ಲೂ ಕಾಣಬಹುದು. ಇದರ ಪ್ರಕಾರ, ಪ್ರಧಾನಿ ಮೋದಿ ಕಚ್ನಲ್ಲಿ ಭಾರತೀಯ ಸೇನಾ ಸೈನಿಕರಿಗೆ ಸಿಹಿ ತಿನ್ನಿಸುವ ಮೂಲಕ ದೀಪಾವಳಿಯನ್ನು ಆಚರಿಸಿದರು ಎಂದು ಉಲ್ಲೇಖಿಸಲಾಗಿದೆ. ವೈರಲ್ ವೀಡಿಯೊಗೆ ಸಂಬಂಧಿಸಿದ ಸುದ್ದಿಗಳನ್ನು ಅಕ್ಟೋಬರ್ 31, 2024 ರಂದು ಡಿಡಿ ನ್ಯೂಸ್ನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೊ ಸುದ್ದಿಯಲ್ಲಿಯೂ ಕಂಡು ಬಂದಿದ್ದು, ಇದರಲ್ಲೂ ಕೂಡ ಪ್ರಧಾನಿ ಮೋದಿ ಸೈನಿಕರೊಂದಿ ದೀಪಾವಳಿಯನ್ನು ಆಚರಿಸಿದರು ಎಂದು ವರದಿ ಮಾಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿ ಅವರು ಪಹಲ್ಗಾಮ್ ದಾಳಿಯ ನಂತರ ಗುಜರಾತ್ನ ಕಚ್ನಲ್ಲಿ ಸೈನಿಕರನ್ನು ಭೇಟಿ ಮಾಡಿ ಅವರಿಗೆ ಸಿಹಿ ತಿನ್ನಿಸಿ ದಾಳಿ ಮಾಡಲು ಶುಭ ಹಾರೈಸಿದ್ದಾರೆ ಎಂಬುದು ಸುಳ್ಳು. ವೈರಲ್ ವಿಡಿಯೋ ಕಳೆದ ವರ್ಷ ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದ್ದಾಗಿದೆ. ಹಳೆಯ ವಿಡಿಯೋವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕೇರಳದಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ ಮಹಿಳೆಗೆ ಕಾರಿನಲ್ಲಿ ಡಿಕ್ಕಿ ಹೊಡೆದಿರುವುದು ನಿಜವೇ?

