FACT CHECK | ಯುದ್ದದ ಭಯದಿಂದ ಪಾಕ್‌ ಪ್ರಜೆಗಳು ಹಣವನ್ನು ಹಿಂಪಡೆಯಲು ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ ಎಂಬ ವಿಡಿಯೋದ ಅಸಲೀಯತ್ತೇನು?

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ, “ಭಯದಿಂದ ಪಾಕಿಸ್ತಾನಿಗಳು ಹಣವನ್ನು ಹಿಂಪಡೆಯಲು ಬ್ಯಾಂಕುಗಳ ಮುಂದೆ ಸಾಲಾಗಿ ನಿಂತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ವೈರಲ್ ಆಗುತ್ತಿದೆ, ಬ್ಯಾಂಕಿನ ಮುಂದೆ ಜನರು ಸಾಲಾಗಿ ನಿಂತಿರುವ ವಿಡಿಯೋವನ್ನು ಕಾಣಬಹುದು.

ಮೇ 6 2025ರಂದು, ಕುಮಾರ್ ದಾಸನ್ ಎಂಬ ಫೇಸ್‌ಬುಕ್ ಬಳಕೆದಾರರು, ವಿಡಿಯೋ ಪೋಸ್ಟ್‌ಅನ್ನು, ಭಾರತ ಜೊತೆಗಿನ ಯುದ್ಧದ ಸಮಯದಲ್ಲಿ ತಮ್ಮ ಬ್ಯಾಂಕುಗಳು ಕುಸಿದು ಬೀಳುವ ಮೊದಲು ಭಯಭೀತರಾದ ಪಾಕಿಸ್ತಾನಿಗಳು ತಮ್ಮ ಹಣವನ್ನು ಹಿಂಪಡೆಯಲು ಬ್ಯಾಂಕುಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಇದೇ ರೀತಿ ವಾಟ್ಸಾಪ್‌ಗಳಲ್ಲಿಯೂ ಹಲವು ಗುಂಪುಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಭಾರತ್ ಜೊತೆಗಿನ ಯುದ್ಧದ ಸಮಯದಲ್ಲಿ ತಮ್ಮ ಬ್ಯಾಂಕುಗಳು ಕುಸಿದು ಬೀಳುವ ಮೊದಲು ಭಯಭೀತರಾದ ಪಾಕಿಸ್ತಾನಿಗಳು ತಮ್ಮ ಹಣವನ್ನು ಹಿಂಪಡೆಯಲು ಬ್ಯಾಂಕುಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂದು ಬರೆಯಲಾಗಿದೆ.

ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು , ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿಸರ್ಚ್ ಮಾಡಿದಾಗ, ಆಗಸ್ಟ್ 30, 2021 ರಂದು, ಅಫ್ಘಾನ್ ಮಾಧ್ಯಮ ಸಂಸ್ಥೆ ಅರಿಯಾನಾ ನ್ಯೂಸ್ ಅದೇ ವೈರಲ್ ವೀಡಿಯೊವನ್ನು ತನ್ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿರುವುದು ಲಭ್ಯವಾಗಿದೆ. “ಕಾಬೂಲ್‌ನಲ್ಲಿ ಬ್ಯಾಂಕುಗಳು ಮತ್ತೆ ತೆರೆದಿದ್ದರೂ, ಜನರು ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲು ಬ್ಯಾಂಕುಗಳ ಮುಂದೆ ದೀರ್ಘ ಸರತಿ ಸಾಲಿನಲ್ಲಿ ನಿಂತಿದ್ದಾರೆ” ಎಂದು ಇದರಲ್ಲಿ ಹೇಳಲಾಗಿದೆ.

ಇದಲ್ಲದೆ, ಅದೇ ಅರಿಯಾನಾ ನ್ಯೂಸ್ ತನ್ನ ವೆಬ್‌ಸೈಟ್‌ನಲ್ಲಿ ಈ ಕುರಿತು ಸುದ್ದಿ ವರದಿಯನ್ನು ಪ್ರಕಟಿಸಿದೆ. ಅದರಂತೆ, ‘‘ತಾಲಿಬಾನ್ ಬ್ಯಾಂಕುಗಳನ್ನು ಮತ್ತೆ ತೆರೆಯಲು ಆದೇಶಿಸಿಲಾಗಿದೆ. ಅವರು ವಾರಕ್ಕೆ 20,000 ಅಫ್ಘಾನಿಗಳ ವಿತ್‌ಡ್ರಾ ಮಿತಿಯನ್ನು ವಿಧಿಸಿದರು. ಇದರ ನಂತರ, ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಬ್ಯಾಂಕುಗಳ ಹೊರಗೆ ಹಣವನ್ನು ಹಿಂಪಡೆಯಲು ಸರದಿಯಲ್ಲಿ ಕಾಯುತ್ತಿದ್ದಾರೆ’’ ಎಂದು ವರದಿಯಾಗಿದೆ.

ಟಿಆರ್‌ಟಿ ವರ್ಲ್ಡ್ ಮತ್ತು ಡೈಲಿ ಮೇಲ್ ಸೇರಿದಂತೆ ಮಾಧ್ಯಮಗಳು ಸಹ ಅದೇ ವೈರಲ್ ವೀಡಿಯೊವನ್ನು ಅದೇ ಮಾಹಿತಿಯೊಂದಿಗೆ ವರದಿ ಮಾಡಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತ ಪ್ರಾರಂಭಿಸಲಿರುವ ಯುದ್ದದಿಂದ ಭಯಭೀತರಾದ ಪಾಕಿಸ್ತಾನಿಗಳು ಹಣವನ್ನು ಹಿಂಪಡೆಯಲು ಬ್ಯಾಂಕಿನ ಮುಂದೆ ಜಮಾಯಿಸಿದ್ದಾರೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು. ಈ ದೃಶ್ಯಾವಳಿಗಳು 2021 ರಲ್ಲಿ ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಬ್ಯಾಂಕುಗಳ ಹೊರಗೆ ಹಣವನ್ನು ಹಿಂಪಡೆಯಲು ಸರದಿಯಲ್ಲಿ ಕಾಯುತ್ತಿರುವ ಜನರದ್ದು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಯೋತ್ಪಾದಕನಿಗೆ RSS ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights