FACT CHECK | ಜಮ್ಮು-ಕಾಶ್ಮೀರದ ಜನ ಪಾಕಿಸ್ತಾನದ ರೈಲಿಗೆ ಬೆಂಕಿ ಹಚ್ಚಿದ್ರಾ?

ಭಾರತ-ಪಾಕ್‌ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಆದರೂ ಗಡಿ ಭಾಗದಲ್ಲಿ ಕೆಲವು ಅಹಿತಕರ ಘಟನೆಗಳು ನಡೆಯುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಇದರ ನಡುವೆ “ಜಮ್ಮುವಿನ ಜನರು ಪಾಕಿಸ್ತಾನಿ ರೈಲನ್ನು ಸುಟ್ಟುಹಾಕಿದ್ದಾರೆ” ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ  ಹೊತ್ತಿ ಉರಿಯುತ್ತಿರುವ ರೈಲಿನ ದೃಶ್ಯಗಳನ್ನು ಕಾಣಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಜಮ್ಮುವಿನ ಜನರು ಪಾಕಿಸ್ತಾನಿ ರೈಲನ್ನು ಸುಟ್ಟುಹಾಕಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಇದರ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಘಲ್ ಸರ್ಚ್ ಮಾಡಿದಾಗ, ವಿಡಿಯೋದ ಸ್ಕ್ರೀನ್ ಶಾಟ್​ನೊಂದಿಗೆ ಕೆಲ ಮಾಧ್ಯಮಗಳು ಅಕ್ಟೋಬರ್ 31, 2019 ರಂದು ಸುದ್ದಿ ಪ್ರಕಟಿಸಿರುವುದು ಲಭ್ಯವಾಗಿದೆ. ವರದಿಗಳ ಪ್ರಕಾರ, ವೈರಲ್ ಆಗಿರುವ ವಿಡಿಯೋ ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ ಬೆಂಕಿ ಹೊತ್ತಿಕೊಂಡ ರೈಲಿನದ್ದಾಗಿದೆ. ಇದರಲ್ಲಿ ಗ್ಯಾಸ್ ಸ್ಟೌವ್ ಸ್ಫೋಟಗೊಂಡು ಭಾರಿ ಬೆಂಕಿ ಕಾಣಿಸಿಕೊಂಡು ಸುಮಾರು 65 ಪ್ರಯಾಣಿಕರು ಸಾವನ್ನಪ್ಪಿದರು ಎಂದು ಉಲ್ಲೇಖಿಸಿದೆ.

ವಾಯ್ಸ್ ಆಫ್  ಅಮೆರಿಕಾ ಎಂಬ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಲಭ್ಯವಾಗಿದ್ದು, ಈ ವಿಡಿಯೋವನ್ನು ಅಕ್ಟೋಬರ್ 31, 2019 ರಂದು ಅಪ್‌ಲೋಡ್ ಮಾಡಲಾಗಿದೆ. “ಪೂರ್ವ ಪಂಜಾಬ್ ಪ್ರಾಂತ್ಯದ ಪಾಕಿಸ್ತಾನದ ರಹಿಮ್ಯಾರ್ ಖಾನ್ ನಗರದ ಬಳಿ ಪ್ರಯಾಣಿಕ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 74 ಜನರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು. ಈ ಅಪಘಾತ ಸಂಭವಿಸಿದಾಗ ರೈಲು ದಕ್ಷಿಣ ನಗರವಾದ ಕರಾಚಿಯಿಂದ ರಾವಲ್ಪಿಂಡಿಗೆ ಹೋಗುತ್ತಿತ್ತು. ರೈಲಿನಲ್ಲಿ ಉಪಾಹಾರ ಬೇಯಿಸಲು ಪ್ರಯಾಣಿಕರು ಬಳಸಿದ ಎರಡು ಗ್ಯಾಸ್ ಸ್ಟೌವ್‌ಗಳು ಸ್ಫೋಟಗೊಂಡಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ” ಎಂಬ ಮಾಹಿತಿ ಇದರಲ್ಲಿದೆ.

ಮಾಧ್ಯಮಗಳಲ್ಲಿನ ವರದಿ ಮತ್ತು ನಮ್ಮ ತನಿಖೆಯಿಂದ ತಿಳಿಯುದೇನೆಂದರೆ ರೈಲಿಗೆ ಬೆಂಕಿ ಹಚ್ಚಿದ ಈ ವಿಡಿಯೋ ಇತ್ತೀಚಿನದಲ್ಲ. ವಾಸ್ತವವಾಗಿ, ಈ ಘಟನೆ 2019 ರಲ್ಲಿ ನಡೆದಿದ್ದು, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ತೇಜ್‌ಗಮ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಗ್ಯಾಸ್ ಸ್ಟೌವ್ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿತು.

ಒಟ್ಟಾರೆಯಾಗಿ ಹೇಳುವುದಾದರೆ, ಈ ಘಟನೆ 2019 ರಲ್ಲಿ ನಡೆದಿದ್ದು, ಗ್ಯಾಸ್ ಸ್ಟೌವ್ ಸ್ಫೋಟಗೊಂಡ ನಂತರ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ವೀಡಿಯೊಗೂ ಜಮ್ಮು-ಕಾಶ್ಮೀರ ಮತ್ತು ಪಹಲ್ಗಾಮ್ ದಾಳಿಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾರತದಲ್ಲಿ ‘ಪಾಕ್ ಜಿಂದಾಬಾದ್’ ಎಂದು ಹೇಳಿದ್ದಕ್ಕೆ ಪೊಲೀಸರು ಬಂಧಿಸಿ ಥಳಿಸಿಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights