FACT CHECK | ಪ್ರವಾಸವನ್ನು ರದ್ದು ಮಾಡಬೇಡಿ ಎಂದು ಭಾರತೀಯ ಪ್ರವಾಸಿಗರಲ್ಲಿ ಮನವಿ ಮಾಡ್ತಾ ಟರ್ಕಿ?

ಭಾರತ ಮತ್ತು ಪಾಕ್‌ ನಡುವಿನ ಸೇನಾ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಟರ್ಕಿ ವಿರುದ್ಧ ಭಾರತೀಯರಲ್ಲಿ ಅಸಮಾಧಾನ ಮೂಡಿರುವಂತೆಯೇ ಟರ್ಕಿಗೆ ಸಂಬಂಧಿಸಿದ ವಸ್ತುಗಳು, ಅಲ್ಲಿಗೆ ಪ್ರವಾಸ ಹೋಗುವುದಕ್ಕೆ ಬಹಿಷ್ಕಾರ ಹಾಕುವ ಬಗ್ಗೆ ಚರ್ಚೆಯಾಗುತ್ತಿದೆ. ಇದೇ ಹೊತ್ತಿನಲ್ಲಿ ಟರ್ಕಿಯ ಪ್ರವಾಸೋದ್ಯಮ ಇಲಾಖೆ, ತಮ್ಮ ಪ್ರವಾಸವನ್ನು ರದ್ದು ಮಾಡಬೇಡಿ ಎಂದು ಭಾರತೀಯ ಪ್ರವಾಸಿಗರಲ್ಲಿ ಮನವಿ ಮಾಡುತ್ತಿದೆ ಎಂದು ಪ್ರತಿಪಾದಿಸುತ್ತಾ ಸಾಮಾಜಿಕ ಮಾಧ್ಯಮಗಳಲ್ಲಿ ನೋಟಿಸ್‌ ರೂಪದ ಫೋಟೊವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್ ಆಧಾರದಲ್ಲಿ ಹಲವು ಮಾಧ್ಯಮಗಳೂ ಈ ಬಗ್ಗೆ ವರದಿ ಮಾಡಿವೆ. ರಾಜಕಾರಣಿಗಳು ಕೂಡ ಈ ಪೋಸ್ಟ್‌ ಹಂಚಿಕೊಂಡಿದ್ದಾರೆ.

FACT CHECK | ಭಾರತೀಯರು ಪ್ರವಾಸ ರದ್ದುಗೊಳಿಸದಂತೆ ಟರ್ಕಿ ಬಹಿರಂಗ ಪ್ರಕಟನೆ ನೀಡಿಲ್ಲ

ಇತ್ತೀಚಿನ ಸಂಘರ್ಷದಲ್ಲಿ ಟರ್ಕಿ ಪಾಕಿಸ್ತಾನವನ್ನು ಬೆಂಬಲಿಸಿದ್ದ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ ಹಿನ್ನೆಲೆಯಲ್ಲಿ ಆ ದೇಶವನ್ನು ಬಹಿಷ್ಕರಿಸುವಂತೆ ಕರೆಗಳು ಹೆಚ್ಚುತ್ತಿರುವ ನಡುವೆಯೇ ಈ ಟಿಪ್ಪಣಿ ಹೊರಬಿದ್ದಿದೆ. ಭಾರತೀಯರು ಹಲವಾರು ಪ್ರವಾಸ ಸಂಸ್ಥೆಗಳ ಮೂಲಕ ಬುಕ್ ಮಾಡಿದ್ದ ತಮ್ಮ ಟರ್ಕಿ ಪ್ರಯಾಣವನ್ನು ರದ್ದುಗೊಳಿಸಿದ್ದಾರೆ. ದಿಲ್ಲಿಯ ಜೆಎನ್‌ಯು ಮತ್ತು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಕೂಡ ತಮ್ಮ ದೇಶದೊಂದಿಗೆ ಏಕತೆಯನ್ನು ವ್ಯಕ್ತಪಡಿಸಿ ಟರ್ಕಿಯ ಸಂಸ್ಥೆಗಳೊಂದಿಗೆ ತಮ್ಮ ಪಾಲುದಾರಿಕೆಯನ್ನು ಸ್ಥಗಿತಗೊಳಿಸಿವೆ. ಈ ‘ಬಹಿರಂಗ ಪ್ರಕಟಣೆ’ಯನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು ಟರ್ಕಿಯು ಭಾರತೀಯ ಪ್ರವಾಸಿಗಳನ್ನು ‘ಭಿಕ್ಷೆ ಬೇಡುತ್ತಿದೆ ’ಎಂದು ಪರೋಕ್ಷವಾಗಿ ಸೂಚಿಸಿದ್ದರು.

ಈ ಪ್ರಕಟಣೆಯನ್ನು ಭಾರತದಾದ್ಯಂತ ಸುದ್ದಿಸಂಸ್ಥೆಗಳು ಪ್ರಮುಖವಾಗಿ ವರದಿ ಮಾಡಿದ್ದವು. ಕೇರಳ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ ಚಂದ್ರಶೇಖರ,ಕಾಂಗ್ರೆಸ್ ನಾಯಕ ರಾಜೀವ ಶುಕ್ಲಾ,ಶಿವಸೇನೆಯ ನಾಯಕಿ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ಹಲವಾರು ರಾಜಕಾರಣಿಗಳು,ವೀರ ಸಾಂಘ್ವಿ ಮತ್ತು ರೋಹಿಣಿ ಸಿಂಗ್ ಸೇರಿದಂತೆ ಪತ್ರಕರ್ತರು ಟರ್ಕಿಯನ್ನು ಟೀಕಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಮಾಡಿದ್ದರು. ಹಾಗಿದ್ದರೆ ಟರ್ಕಿ ತನ್ನ ದೇಶಕ್ಕೆ ಪ್ರವಾಸಗಳನ್ನು ರದ್ದುಗೊಳಿಸದಂತೆ ಭಾರತೀಯ ಪ್ರಯಾಣಿಕರಲ್ಲಿ ಟರ್ಕಿಯ ‘ಪ್ರವಾಸೋದ್ಯಮ ಇಲಾಖೆ’ಮನವಿ ಮಾಡಿ ‘ಬಹಿರಂಗ ಪ್ರಕಟಣೆ ಹೊರಡಿಸಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್ :

ಟರ್ಕಿಯ ‘ಬಹಿರಂಗ ಪ್ರಕಟಣೆ’ಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಟರ್ಕಿ ಸರಕಾರದ ಅಧಿಕೃತ ಸಾಮಾಜಿಕ ಜಾಲತಾಣ ಹ್ಯಾಂಡಲ್‌ಗಳನ್ನು ಸರ್ಚ್ ಮಾಡಿದಾಗ, ಅಂತಹ ಯಾವುದೇ ಪ್ರಕಟಣೆ ಅಥವಾ ಪತ್ರ ಅವುಗಳಲ್ಲಿ ಕಂಡು ಬಂದಿಲ್ಲ. ಬಹಿರಂಗ ಪ್ರಕಟಣೆಯಲ್ಲಿ ಟರ್ಕಿ ಸರಕಾರದ ‘ಪ್ರವಾಸೋದ್ಯಮ ಇಲಾಖೆ’ಯು ಅದನ್ನು ಹೊರಡಿಸಿದೆಯೆಂದು ಹೇಳಲಾಗಿದೆ,ಆದರೆ ಅಂತಹ ಯಾವುದೇ ಇಲಾಖೆ ಟರ್ಕಿ ಸರಕಾರದಲ್ಲಿ ಇಲ್ಲ,ಅಲ್ಲಿರುವುದು ಅಧಿಕೃತ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ಮಾತ್ರ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.

ಟರ್ಕಿ ಮೂಲದ ಸತ್ಯಶೋಧನೆ ಸಂಸ್ಥೆ ‘ಮಾಲುಮಟ್ಫುರುಸ್’ ಕೂಡ ಪ್ರಕಟಣೆಯು ನಕಲಿ ಎಂದು ಎಕ್ಸ್ ಪೋಸ್ಟ್‌ನಲ್ಲಿ ದೃಢಪಡಿಸಿದೆ. ಆಲ್ಟ್‌ನ್ಯೂಸ್ ಟರ್ಕಿಯ ಸಂಸೃತಿ ಮತ್ತು ಪ್ರವಾಸೋದ್ಯಮ ಇಲಾಖೆಯನ್ನು ಸಂಪರ್ಕಿಸಿದ್ದು,ಇಂತಹ ಪ್ರಕಟಣೆಯನ್ನು ತಾನು ಹೊರಡಿಸಿಯೇ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಟರ್ಕಿಯ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಖಾತೆಗಳನ್ನು ಪರಿಶೀಲಿಸಿದಾಗ ಇಂತಹ ಪ್ರಕಟಣೆ ಎಲ್ಲೂ ಕಂಡು ಬರಲಿಲ್ಲ. ಟರ್ಕಿಯ ವಿವಿಧ ಇಲಾಖೆಗಳು ಈ ಹಿಂದೆ ಪ್ರಕಟಿಸಿರುವ ಅಧಿಕೃತ ನೋಟಿಸ್‌ಗಳನ್ನು ನೋಡಿದಾಗ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ನೋಟಿಸ್‌ನ ವಿನ್ಯಾಸ ಮತ್ತು ಅದರಲ್ಲಿ ಬಳಸಿರುವ ಭಾಷೆಯಲ್ಲಿ ವ್ಯತ್ಯಾಸವಿದೆ. ಭಾರತದ ಪ್ರವಾಸಿಗರಲ್ಲಿ ಮನವಿ ಮಾಡಿರುವ ಬಗ್ಗೆ ಟರ್ಕಿ ಮಾಧ್ಯಮಗಳಲ್ಲಿ ವರದಿಯೂ ಆಗಿಲ್ಲ.

ಟರ್ಕಿಯ ಫ್ಯಾಕ್ಟ್‌ಚೆಕ್‌ ಸಂಸ್ಥೆ ‘ಟೆಯಿಟ್‌’ ಅನ್ನು ಸಂಪರ್ಕಿಸಿದಾಗ, ಸಂಸ್ಥೆಯ ಸಂಪಾದಕ ಬೆಸಿರ್‌ ಕೊರ್ಕ್‌ಮಜ್‌  ಅವರು ‘ಅಂತಹ ಯಾವುದೇ ಪ್ರಕಟಣೆಯನ್ನು ಸರ್ಕಾರ ಹೊರಡಿಸಿಲ್ಲ. ನೋಟಿಸ್‌ನಲ್ಲಿ ಇಂಗ್ಲಿಷ್‌ನಲ್ಲಿ ಬರೆದಿರುವುದು ಕೂಡ ಸಮರ್ಪಕವಾಗಿಲ್ಲ’ ಎಂದು ಹೇಳಿದ್ದಾರೆ ಎಂದು ಬೂಮ್‌ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ನಟಿ ಆಲಿಯಾ ಭಟ್ ಜೊತೆ ಇರುವುದು ಪಾಕ್ ಪರ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಬಂಧಿತಳಾಗಿರುವ ಜ್ಯೋತಿ ಮಲ್ಹೋತ್ರಾ ಅಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights