FACT CHECK | ನಟಿ ಆಲಿಯಾ ಭಟ್ ಜೊತೆ ಇರುವುದು ಪಾಕ್ ಪರ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಬಂಧಿತಳಾಗಿರುವ ಜ್ಯೋತಿ ಮಲ್ಹೋತ್ರಾ ಅಲ್ಲ

ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ Youtuber ಜ್ಯೋತಿ ಮಲ್ಹೋತ್ರಾ ಅವರನ್ನು ಮೇ 17 ರಂದು ಬಂಧಿಸಲಾಯಿತು. ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ 26 ನಾಗರಿಕರು ಸಾವನ್ನಪ್ಪಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ನಾಲ್ಕು ದಿನಗಳ ಸಂಘರ್ಷದ ಸಮಯದಲ್ಲಿ ಮಲ್ಹೋತ್ರಾ ನವದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ನಿಯೋಜಿಸಲಾದ ಪಾಕಿಸ್ತಾನಿ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ವರದಿಯಾಗಿದೆ.

ಇದೀಗ ಇದಕ್ಕೆ ಸಂಬಂಧಪಟ್ಟಂತೆ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್‌ ಫೋಟೋದಲ್ಲಿ ಸೋಫಾದ ಮೇಲೆ ಕುಳಿತಿರುವ ಮಹಿಳೆ ಜ್ಯೋತಿ ಮಲ್ಹೋತ್ರಾ ಎಂದು ಹೇಳಿಕೊಳ್ಳಲಾಗುತ್ತಿದೆ. ಇವರ ಜೊತೆಗೆ ನಟಿ ಆಲಿಯಾ ಭಟ್ ಮತ್ತು ಅವರ ಸಹೋದರಿ ಪೂಜಾ ಭಟ್ ಕೂಡ ಫೋಟೋಗೆ ಫೋಸ್‌ ನೀಡಿದ್ದಾರೆ ಎಂದು ಬರೆದುಕೊಳ್ಳಲಾಗಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಫೋಟೋ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  27  ನವೆಂಬರ್, 2014 ರಂದು ರಾಣ ಅಯ್ಯೂಬ್ ಅವರು X ನಲ್ಲಿ ಪೋಸ್ಟ್ ಮಾಡಿದ ಫೋಟೊ ಲಭ್ಯವಾಗಿದೆ. ಇದರಲ್ಲಿ ಅವರು ಆಲಿಯಾ ಮತ್ತು ಪೂಜಾ ಭಟ್‌ ಅವರು ಇರುವ ಚಿತ್ರವನ್ನು ಪೋಸ್ಟ್‌ ಮಾಡಿ ‘ಸಿಸ್ಟರ್ಸ್‌ ಆಕ್ಟ್‌’ ಎಂದು ಬರೆದುಕೊಂಡಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಹೀಗಾಗಿ ವೈರಲ್‌ ಚಿತ್ರದಲ್ಲಿ ಇರುವುದು ಜ್ಯೋತಿ ಮಲ್ಹೋತ್ರಾ ಅಲ್ಲ ರಾಣ ಆಯ್ಯೂಬ್‌ ಎಂಬುದು ಸ್ಪಷ್ಟವಾಗಿದೆ.

ಈ ಬಗ್ಗೆ ಇನ್ನಷ್ಟು ಸ್ಪಷ್ಟತೆಗಾಗಿ ನಾವು ರಾಣ ಆಯ್ಯೂಬ್‌ ಮತ್ತು ಜ್ಯೋತಿ ಮಲ್ಹೋತ್ರಾ ಅವರ ಫೋಟೋವನ್ನು ಕೂಡ ಹೋಲಿಕೆ ಮಾಡಿ, ಇಬ್ಬರ ಫೋಟೊಗಳನ್ನು ಹೋಲಿಕೆ ಮಾಡಿದ್ದೇವೆ. ಆದರೆ ಈ ಎರಡೂ ಫೋಟೋಗಳು ತಾಳೆಯಾಗಿಲ್ಲ. ಹೀಗಾಗಿ ವೈರಲ್‌ ಫೋಟೋ ಸುಳ್ಳು ಮಾಹಿತಿಯಿಂದ ಹಂಚಿಕೊಂಡಿರುವುದು ನಮಗೆ ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಾಕ್‌ ಪರ ಬೇಹುಗಾರಿಕೆ ಮಾಡಿರುವ ಆರೋಪದ ಮೇಲೆ ಬಂಧಿತಳಾಗಿರುವ ಜ್ಯೋತಿ ಮಲ್ಹೋತ್ರಾ ಅವರು ಆಲಿಯಾ ಮತ್ತು ಪೂಜಾ ಭಟ್‌ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಟೊದಲ್ಲಿರುವುದು ಜ್ಯೋತಿ ಮಲ್ಹೋತ್ರಾ ಅಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | “ಆಪರೇಷನ್ ಸಿಂಧೂರ್” ಯಶಸ್ಸಿನ ಹಿನ್ನಲೆಯಲ್ಲಿ ಬಲೂಚಿಸ್ತಾನದಲ್ಲಿ ತಿರಂಗ ಯಾತ್ರೆ ನಡೆಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights