FACT CHECK | ಈ ವಿಡಿಯೋ RCB ಗೆಲುವಿಗೆ ಸಂಬಂಧಿಸಿದ್ದಲ್ಲ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಐಪಿಎಲ್​​ ನಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಇದೇ ಖುಷಿಯಲ್ಲಿ RCB ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಮಾಡಿದೆ. ಆದ್ರೆ, ಈ ಸಂಭ್ರಮಾಚರಣೆಯಲ್ಲಿ 11 RCB ಅಭಿಮಾನಿಗಳು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇನ್ನು ಈ ಸಂಬಂಧ ಆರ್​ ಸಿಬಿ ಮ್ಯಾನೇಜ್‌ಮೆಂಟ್‌ ವಿರುದ್ಧ ಎಫ್​ ಐಆರ್ ದಾಖಲಾಗಿದೆ. ಈ ಮಧ್ಯೆ ಆರ್ ಸಿಬಿ ಗೆಲುವಿಗೆ ಬೆಂಗಳೂರಲ್ಲಿ ಮೊದಲ ಸಂಭ್ರಮಾಚರಣೆ ಎಂಬಂತೆ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾದ ಪೋಸ್ಟ್‌ಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ RCB ತಂಡ ಕಪ್‌ಗೆದ್ದಕ್ಕೆ ಅಭಿಮಾನಿಗಳು ಈ ಸಂಭ್ರಮಾಚರಣೆ ಮಾಡಿದ್ದಾರೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು,ವೈರಲ್ ವಿಡಿಯೋದ ಕೀಫ್ರೇಮ್ ಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದಾಗ, ಫೇಸ್‌ಬುಕ್ ನಲ್ಲಿ ಜೂನ್ 30, 2024ರಂದು cricketstats.in ಎಂಬ ಬಳಕೆದಾರರು ಹಂಚಿಕೊಂಡ ವಿಡಿಯೋ ಲಭ್ಯವಾಗಿದೆ. ಈ ಪೋಸ್ಟ್ ನಲ್ಲಿ ಬರೆದ ವಿವರಣೆಯಲ್ಲಿ ಭಾರತ ಟಿ20 ವರ್ಲ್ಡ್ ಕಪ್ 2024ರ ಗೆಲುವಿನ ಸಂಭ್ರಮಾಚರಣೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ ಎಂದಿದೆ. ಈ ವೀಡಿಯೋ ವೈರಲ್ ವೀಡಿಯೋಕ್ಕೆ ಸಾಮ್ಯತೆಯನ್ನು ಹೊಂದಿದೆ.

ಇದೇ ರೀತಿಯ ಹೇಳಿಕೆಯೊಂದಿಗೆ ಜೂನ್ 30 2024ರಂದು ಎಕ್ಸ್ ನಲ್ಲಿ @omii_msdians7 ಎಂಬ ಬಳಕೆದಾರರೂ ಹಂಚಿಕೊಂಡಿದ್ದಾರೆ. ಇದೂ ವೈರಲ್ ವೀಡಿಯೋ ಜೊತೆಗೆ ಸಾಮ್ಯತೆಯನ್ನು ಹೊಂದಿದೆ.

ಜೂನ್ 30, 2024ರಂದು aapal_kolhapur_mh09 ಎಂಬ ಇನ್‌ಸ್ಟಾಗ್ರಾಂ ಬಳಕೆದಾರರು ಪೋಸ್ಟ್ ಮಾಡಿರುವ ವೀಡಿಯೋ ವೀಡಿಯೋಕ್ಕೆ ಸಾಮ್ಯತೆಯನ್ನು ಹೊಂದಿದೆ. ಪರಿಶೀಲನೆ ವೇಳೆ ಲಭ್ಯವಾದ ವಿವಿಧ ವೀಡಿಯೋಗಳ ಕೀಫ್ರೇಮ್ ಗಳಲ್ಲಿ ಅಂಗಡಿಗಳ ಬೋರ್ಡ್ ಗಳು ಇತ್ಯಾದಿ ಮರಾಠಿಯಲ್ಲಿರುವುದು ಕಾಣಿಸುತ್ತದೆ.

ಆರ್ ಸಿಬಿ ಗೆಲುವಿಗೆ ಬೆಂಗಳೂರಲ್ಲಿ ಸಂಭ್ರಮಾಚರಣೆ ಎಂದು ವೈರಲ್ ಆಗುತ್ತಿರುವ ವೀಡಿಯೋ ಕೊಲ್ಹಾಪುರದ್ದು

ಆ ಅಂಗಡಿಗಳ ಬೋರ್ಡ್ ಆಧಾರದ ಮೇಲೆ ನಾವು ಗೂಗಲ್ ಲೊಕೇಶನ್ ಬಳಸಿ ಸಂಭ್ರಮಾಚರಣೆಯ ಸ್ಥಳವನ್ನು ಪತ್ತೆ ಮಾಡಿದ್ದೇವೆ. ಈ ಪ್ರಕಾರ ಸ್ಥಳ ಕೊಲ್ಹಾಪುರದ malkar sweets mart Kolhapur ಮುಂಭಾಗದ ಪ್ರದೇಶವಾಗಿದೆ. ಇದನ್ನು ಇಲ್ಲಿ ನೋಡಬಹುದು.

ಆರ್ ಸಿಬಿ ಗೆಲುವಿಗೆ ಬೆಂಗಳೂರಲ್ಲಿ ಸಂಭ್ರಮಾಚರಣೆ ಎಂದು ವೈರಲ್ ಆಗುತ್ತಿರುವ ವೀಡಿಯೋ ಕೊಲ್ಹಾಪುರದ್ದು

ಈ ಸಾಕ್ಷ್ಯಾಧಾರಗಳ ಪ್ರಕಾರ, ಭಾರತ ತಂಡ ಟಿ20 ವರ್ಲ್ಡ್ ಕಪ್ ಗೆದ್ದ ಹಿನ್ನೆಲೆಯಲ್ಲಿ ಕೊಲ್ಹಾಪುರದಲ್ಲಿ ಜೂನ್ 30, 2024ರಂದು ನಡೆಸಿದ ಸಂಭ್ರಮಾಚರಣೆಯಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2024ರಲ್ಲಿ ಭಾರತ ತಂಡ ಟಿ20 ವರ್ಲ್ಡ್ ಕಪ್ ಗೆದ್ದ ಸಂದರ್ಭದಲ್ಲಿ ಕೊಲ್ಹಾಪುರದಲ್ಲಿ ನಡೆದ ಸಂಭ್ರಮಾಚರಣೆಯ ವಿಡಿಯೋವನ್ನು ಇತ್ತೀಚೆಗೆ IPL ನಲ್ಲಿ RCB ತಂಡವು ಕಪ್ ಗೆದ್ದ ಬಳಿಕ ನಡೆದ ಮೊದಲ ಸಂಭ್ರಮಾಚರಣೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಟಿಪ್ಪು ಸುಲ್ತಾನ್‌ನನ್ನು ‘ಜಿಹಾದಿ’ ಎಂದು ಕರ್ನಾಟಕ ಹೈಕೋರ್ಟ್ ಘೋಷಿಸಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights