FACT CHECK | ಇರಾನ್​ ಕ್ಷಿಪಣಿ ದಾಳಿಯಿಂದ ಅದಾನಿಯ ಹೈಫಾ ಬಂದರು ನಾಶವಾಗಿದೆಯೇ?

ಇರಾನ್ ಮತ್ತು ಇಸ್ರೇಲ್ ಪ್ರಸ್ತುತ ನೇರ ಸಂಘರ್ಷದಲ್ಲಿ ತೊಡಗಿವೆ, ಇಸ್ರೇಲ್ ಜೂನ್ 13, 2024 ರಂದು ಇರಾನಿನ ಮಿಲಿಟರಿ ಮತ್ತು ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿಗಳನ್ನು ನಡೆಸಿದೆ. ಪ್ರತೀಕಾರವಾಗಿ ಇರಾನ್, ಟೆಲ್ ಅವೀವ್ ಮತ್ತು ಹೈಫಾದಂತಹ ಇಸ್ರೇಲಿ ನಗರಗಳ ಮೇಲೆ ಹಲವಾರು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಿದೆ.

ಇದೆಲ್ಲದರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಿಂದಾಗಿ ಹೈಫಾದಲ್ಲಿರುವ ಅದಾನಿ ಬಂದರು ನಾಶವಾಗಿದೆ ಎಂದು ಪ್ರತಿಪಾದಿಸಲಾಗಿದೆ. ಇರಾನ್ ಅಪ್‌ಡೇಟ್ ಎಂಬ ಎಕ್ಸ್‌ ಹ್ಯಾಂಡಲ್ ನಲ್ಲಿ, “ಇಸ್ರೇಲ್‌ನ ಹೈಫಾ ಬಂದರಿನಲ್ಲಿರುವ $4.2 ಬಿಲಿಯನ್ ಮೌಲ್ಯದ ಭಾರತೀಯ ಕಂಪನಿ ಅದಾನಿಯ ಸರಕು ಸೌಲಭ್ಯ, ಇರಾನಿನ ದಾಳಿಯಿಂದ ನಾಶವಾಗಿದೆ” ಎಂದು ಬರೆದಿದೆ.

ಅವೇಶ್‌ ತಿವಾರಿ ಎಂಬ ಎಕ್ಸ್‌ ಬಳಕೆದಾರರೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು “ನಾನು ತೀವ್ರವಾಗಿ ದುಃಖಿತನಾಗಿದ್ದೇನೆ; ನನ್ನ ಆತ್ಮ ಅಳುತ್ತಿದೆ. ಇಸ್ರೇಲ್‌ನಲ್ಲಿರುವ ಅದಾನಿಯ ಹೈಫಾ ಬಂದರು ಇರಾನ್‌ನ ಶಾಪಗ್ರಸ್ತ ಕ್ಷಿಪಣಿಗಳಿಗೆ ಗುರಿಯಾದ ನಂತರ ನಾಶವಾಗಿದೆ. ಇದು ನಿಷ್ಠಾವಂತ ಅನುಯಾಯಿಗಳಿಗೆ ಅಪಾರ ಬಿಕ್ಕಟ್ಟಿನ ಕ್ಷಣವಾಗಿದೆ. ಇಸ್ರೇಲ್ ತನ್ನ ಆಮದುಗಳಲ್ಲಿ 30% ಕ್ಕೆ ಈ ಬಂದರನ್ನು ಅವಲಂಬಿಸಿದೆ. ಹತ್ತಿರದ ತೈಲ ಸಂಸ್ಕರಣಾ ಘಟಕವನ್ನು ಸಹ ಇರಾನ್ ನಾಶಪಡಿಸಿದೆ. ಎಲ್ಲವೂ ಹೊಗೆಯಲ್ಲಿದೆ. ಅಲ್ಲಾಹನು ಕರುಣಿಸಲಿ.” ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದು, ನಿಜವಾಗಿಯೂ ಇಸ್ರೇಲ್‌ನಲ್ಲಿರುವ ಅದಾನಿಯ ಹೈಫಾ ಬಂದರು ಇರಾನ್‌ ನಡೆಸಿದ ದಾಳಿಯಲ್ಲಿ ನಾಶವಾಗಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಇದಕ್ಕೆ ಸಂಬಂಧಿಸಿದ ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್‌ ಮಾಡಿದಾಗ, ಜೂನ್ 16, 2025 ರ ಟೈಮ್ಸ್ ಆಫ್ ಇಂಡಿಯಾ ವರದಿ ಲಭ್ಯವಾಗಿದೆ.

ಇರಾನ್ ಹೈಫಾ ಬಂದರಿನ ಸುತ್ತಲೂ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ್ದರೂ, ಅದಾನಿ ಗ್ರೂಪ್​ನ ಬಂದರಿನಲ್ಲಿ ಸರಕು ಸಾಗಾಣಿಕೆಗೆ ಯಾವುದೇ ಅಡೆತಡೆ ಉಂಟಾಗಿಲ್ಲ. “ಬಂದರಿನಲ್ಲಿ ಈಗ ಎಂಟು ಹಡಗುಗಳಿವೆ. ಸರಕು ಸಾಗಣಿಕೆ ನಡೆಯುತ್ತಿದೆ” ಎಂದು ಮೂಲಗಳು ತಿಳಿಸಿವೆ. ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯು ಅದಾನಿ ಗ್ರೂಪ್​ನ ಬಂದರಿಗೆ ಅಥವಾ ಅದರ ಕಾರ್ಯಗಳಿಗಳಿಗೆ ಯಾವುದೇ ಹಾನಿಯನ್ನುಂಟು ಮಾಡಿಲ್ಲ ಎಂದು ಮೂಲಗಳು ಹೇಳಿವೆ.

ಹೈಫಾ ಬಂದರು ನಿರ್ಣಾಯಕ ಕಡಲ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇಸ್ರೇಲ್‌ನ ಆಮದುಗಳಲ್ಲಿ ಶೇಕಡಾ 30 ಕ್ಕಿಂತ ಹೆಚ್ಚು ಕಾರ್ಯನಿರ್ವಹಿಸುತ್ತದೆ. ಇದು ಅದಾನಿ ಪೋರ್ಟ್ಸ್​ ಒಡೆತನಲ್ಲಿದ್ದು, ಶೇಕಡಾ 70 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಕ್ಷಿಪಣಿಗಳು ಬಂದರಿಗೆ ಸಮೀಪವಿರುವ ಪ್ರಮುಖ ತೈಲ ಸಂಸ್ಕರಣಾ ಘಟಕಕ್ಕೆ ಹಾನಿ ಮಾಡಿರಬಹುದು, ಆದರೆ ಬಂದರು ಮೇಲಿನ ಹಾನಿ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.

ಈ ಬಗ್ಗೆ ಅದಾನಿ ಗ್ರೂಪ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಸ್ರೇಲ್​ನ ಸರ್ಕಾರಿ ಅಧಿಕಾರಿಗಳು ಕೂಡ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಇದಕ್ಕೆ ಸಂಬಂಧಿಸಿದಂತೆ, ಅದಾನಿ ಎಂಟರ್‌ಪ್ರೈಸಸ್‌ನ ಮುಖ್ಯ ಹಣಕಾಸು ಅಧಿಕಾರಿ ಜುಗೇಶಿಂದರ್ ರಾಬಿ ಸಿಂಗ್ ಅವರ ಟ್ವೀಟ್ ಮೂಲಕ ಸ್ಪಷ್ಟನೆಯನ್ನು ನೀಡಿದ್ದು, ವೈರಲ್ ಆಗುತ್ತಿರುವ ಸುದ್ದಿಯನ್ನು ಸುಳ್ಳು ಎಂದು ಕರೆದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಹೈಫಾ ಮೇಲೆ ಇರಾನ್ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಅದಾನಿ ಬಂದರು ಹಾನಿಗೊಳಗಾಗಿದೆ ಎಂಬ ಹೇಳಿಕೆ ಸುಳ್ಳು. ಮೂಲಗಳ ಪ್ರಕಾರ, ದಾಳಿ ನಡೆದಿದ್ದರೂ, ಬಂದರು ಹಾನಿಗೊಳಗಾಗದೆ ಉಳಿದಿದೆ ಮತ್ತು ಸರಕು ಸಾಗಣೆ ಕಾರ್ಯಾಚರಣೆಗಳು ಎಂದಿನಂತೆ ಮುಂದುವರೆದಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳು ಎಂದು Only Facts  ವರದಿ ಮಾಡಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಏರ್ ಇಂಡಿಯಾ ದುರಂತಕ್ಕೂ ಮುನ್ನ ವಿಮಾನದಲ್ಲಿ “ಅಲ್ಲಾ ಹು ಅಕ್ಬರ್‌” ಎಂದು ಪ್ರಾರ್ಥಿಸಲಾಗಿದೆ ಎಂಬ ವಿಡಿಯೋದ ಅಸಲೀಯತ್ತೇನು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights