FACT CHECK | ಹಿಂದೂ ಹುಡುಗಿಯನ್ನು ವಂಚಿಸಿದ ಮುಸ್ಲಿಂ ವ್ಯಕ್ತಿ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ
ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಹುಡುಗಿಯನ್ನು ವಂಚಿಸಲು ಯತ್ನಿಸುವಾಗ, ಪೊಲೀಸರಿಗೆ ರೆಡ್‌ಹ್ಯಾಂಡ್‌ಆಗಿ ಸಿಕ್ಕಿಬಿದ್ದ ಸಂದರ್ಭದಲ್ಲಿ ಓಡಿಹೋಗಲು ಯತ್ನಿಸಿದ ಘಟನೆ ನಡೆದಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಹಿಂದೂ-ಮುಸ್ಲಿಂ ಜೋಡಿ. ತನ್ನ ಹೆಸರು “ಗೌರವ್” ಎಂದು ಹೇಳಿ, ಹಿಂದೂ ಯುವತಿಯೊಡನೆ ಪ್ರೇಮ ವ್ಯವಹಾರ ಮಾಡುತ್ತಿದ್ದ ಸಲೀಂ ಎಂಬ ಮುಸ್ಲಿಂ ಯುವಕ ಪೊಲೀಸರ ಎದುರು ಸತ್ಯ ಗೊತ್ತಾದಾಗ, ಓಡಲು ಯತ್ನಿಸಿದ. ಮೋಸ ತಿಳಿದ ಹಿಂದೂ ಯುವತಿಗೆ ಆಶ್ಚರ್ಯ. ಈ ಘಟನೆ “ಸತ್ಯದ ಕನ್ನಡಿ”. ಹಿಂದೂ ಸಹೋದರಿಯರು ಇದನ್ನು ಬೇಗ ಅರ್ಥಮಾಡಿಕೊಂಡಷ್ಟೂ ಉತ್ತಮವಾಗಿರುತ್ತದೆ’’ ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜುಲೈ 28, 2025 ರಂದು ಮಾಂಟಿ ದೀಪಕ್ ಶರ್ಮಾ ಎಂಬಫೇಸ್‌ಬುಕ್ ಖಾತೆಯಲ್ಲಿ ವೈರಲ್ ವೀಡಿಯೊದ ಮತ್ತೊಂದು ಆವೃತ್ತಿ ಲಭ್ಯವಾಗಿದೆ.

ಇದನ್ನು ಬೇರೆ ಕೋನದಿಂದ ಚಿತ್ರೀಕರಿಸಲಾಗಿದೆ. ಈ ವಿಡಿಯೋದ 2ನೇ ಸೆಕೆಂಡ್ನಲ್ಲಿ, ಒಂದು ಡಿಸ್‌ಕ್ಲೈಮರ್ ಕೂಡ ಕಾಣಿಸಿಕೊಳ್ಳುತ್ತದೆ: “ಈ ವೀಡಿಯೊವನ್ನು ಮಾಂಟಿ ದೀಪಕ್ ಶರ್ಮಾ ಪ್ರಸ್ತುತಪಡಿಸಿದ್ದಾರೆ. ಈ ವೀಡಿಯೊ ಕಾಲ್ಪನಿಕ ಕೃತಿ. ಯಾವುದೇ ರೀತಿಯಲ್ಲಿ ಈ ವಿಡಿಯೋ ಯಾವುದೇ ಸಮುದಾಯ ಅಥವಾ ವೃತ್ತಿಯನ್ನು ಅವಮಾನಿಸುವುದಿಲ್ಲ. ಈ ವಿಡಿಯೋ ಮನರಂಜನಾ ಉದ್ದೇಶಗಳಿಗಾಗಿ ಮಾತ್ರ” ಎಂದು ಬರೆಯಲಾಗಿದೆ.
ಇದೇ ವೈರಲ್ ವಿಡಿಯೋದ ಮತ್ತೊಂದು ಆವೃತ್ತಿಯನ್ನು ನೀವು ಯೂಟ್ಯೂಬ್ನಲ್ಲೂ ಅದೇ ಮಾಂಟಿ ದೀಪಕ್ ಶರ್ಮಾ ಖಾತೆಯಲ್ಲಿ ವೀಕ್ಷಿಸಬಹುದು. ಮಾಂಟಿ ದೀಪಕ್ ಶರ್ಮಾ ತನ್ನನ್ನು ತಾನು ರೀಲ್ ಸೃಷ್ಟಿಕರ್ತ ಎಂದು ಬರೆದಿರುವುದನ್ನು ನಾವು ಗಮನಿಸಿದ್ದೇವೆ.

ಇಷ್ಟೇ ಅಲ್ಲದೆ ವೈರಲ್ ವೀಡಿಯೊದಲ್ಲಿ ಬಿಳಿ ಶರ್ಟ್ ಧರಿಸಿರುವ ಅದೇ ವ್ಯಕ್ತಿ ಹಲವಾರು ಇತರ ವೀಡಿಯೊಗಳಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿರುವುದನ್ನು ನಾವು ಗಮನಿಸಿದ್ದೇವೆ. ಅದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಹಿಂದೂ ಹೆಸರು ಹೇಳಿ ಹಿಂದೂ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂಬ ಹೇಳಿಕೆ ಸುಳ್ಳು, ಇದೊಂದು ಸ್ಕ್ರಿಪ್ಟೆಡ್ ವಿಡಿಯೋ ಆಗಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಹಿಂದೂ ಹುಡುಗಿಯನ್ನು ವಂಚಿಸಿದ ಮುಸ್ಲಿಂ ವ್ಯಕ್ತಿ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ

