FACT CHECK | ಗ್ರೀನ್ ಲ್ಯಾಂಡ್ನಲ್ಲಿ ಸಂಭವಿಸಿದ ಸುನಾಮಿಯ ಹಳೆಯ ದೃಶ್ಯಗಳನ್ನು ರಷ್ಯಾ-ಜಪಾನ್ನದ್ದು ಎಂದು ತಪ್ಪಾಗಿ ಹಂಚಿಕೆ
ರಷ್ಯಾದ ಪೂರ್ವ ಪ್ರದೇಶವಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ತೀವ್ರವಾಗಿ ಭೂಮಿ ಕಂಪಿಸಿದ ಬೆನ್ನಲ್ಲೇ ರಷ್ಯಾ-ಜಪಾನ್ ಸುನಾಮಿಯ ದೃಶ್ಯಗಳು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. 0.33 ಸೆಕೆಂಡ್ ಗಳ ವೀಡಿಯೋ ಒಂದನ್ನು ಫೇಸ್ಬುಕ್ ನಲ್ಲಿ ಬಳಕೆದಾರರು ಪೋಸ್ಟ್ ಮಾಡಿದ್ದು, ಸಮುದ್ರದಲ್ಲಿ ದೊಡ್ಡ ಅಲೆ ಬರುವುದು ಮತ್ತು ದೋಣಿಗಳು ನೀರುಪಾಲಾಗುವುದು ಹಾಗೂ ಇಬ್ಬರು ವ್ಯಕ್ತಿಗಳು ಇದರಿಂದ ತಪ್ಪಿಸಿಕೊಳ್ಳುವುದನ್ನು ಕಾಣಬುಹುದು.
![]()
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು, ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವಿಡಿಯೋದ ಕೀ ಫ್ರೇಮ್ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ರೆಡಿಟ್ ನ r/natureismetal ಎಂಬ ಬಳಕೆದಾರರು ನಾಲ್ಕು ವರ್ಷಗಳ ಹಿಂದೆ ಮಾಡಿರುವ ಪೋಸ್ಟ್ ಲಭ್ಯವಾಗಿದೆ. ಈ ಫೋಟೋಕ್ಕೆ ನೀಡಿದ ವಿವರಣೆಯಲ್ಲಿ “ಮೆಗಾ-ಸುನಾಮಿಯ ಅವಶೇಷಗಳಿಂದ ತಪ್ಪಿಸಿಕೊಳ್ಳುತ್ತಿರುವ ಗ್ರೀನ್ಲ್ಯಾಂಡ್ ಮೀನುಗಾರರು” ಎಂದಿದೆ.
![]()
ಈ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ, Licet Studios ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಏಪ್ರಿಲ್ 9, 2021ರಂದು ಪ್ರಕಟಿಸಿದ ವೀಡಿಯೋ ಲಭ್ಯವಾಗಿದೆ. ‘ಗ್ರೀನ್ ಲ್ಯಾಂಡ್ ಸುನಾಮಿ; ಜೀವ ಉಳಿಸಲು ಓಡುತ್ತಿರುವ ಮೀನುಗಾರರು ಎಂಬ’ ಶೀರ್ಷಿಕೆಯಡಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಇದರ ವಿವರಣೆಯಲ್ಲಿ ಜೂನ್ 17, 2017ರಲ್ಲಿ ಗ್ರೀನ್ ಲ್ಯಾಂಡ್ ನಲ್ಲಿ ಸಂಭವಿಸಿದ ಕಂಪನದಿಂದಾಗಿ ಸುನಾಮಿ ಎದ್ದಿದ್ದು, ಈ ವೀಡಿಯೋ ಆಗಿನ ಘಟನೆಗೆ ಸಂಬಂಧಿಸಿದ್ದು ಎಂದು ವಿವರಣೆಯಿದೆ.
![]()
Newsflare ಹೆಸರಿನ ಇನ್ನೊಂದು ಯೂಟ್ಯೂಬ್ ಚಾನೆಲ್ ನಲ್ಲೂ ಮೇ 10, 2021ರಂದು ‘ಗ್ರೀನ್ ಲ್ಯಾಂಡ್ ಗೆ ಸುನಾಮಿ ಬಡಿದಾಗ, ಮೀನುಗಾರರು ಅದೃಷ್ಟವಶಾತ್ ಪಾರು’ ಎಂಬ ಶೀರ್ಷಿಕೆಯಡಿ ವೀಡಿಯೋ ಪ್ರಕಟಿಸಲಾಗಿದೆ. ಇಲ್ಲೂ ಜೂನ್ 17, 2017ರಂದು ಗ್ರೀನ್ ಲ್ಯಾಂಡ್ ನಲ್ಲಿ ಸುನಾಮಿ ಉಂಟಾದ ಸಂದರ್ಭದ್ದು ಎಂದು ವಿವರಣೆಯಲ್ಲಿದೆ.
Issuk-_- ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಸೆಪ್ಟೆಂಬರ್ 8, 2017 ರಂದು ವೈರಲ್ ವೀಡಿಯೋ ಹೋಲುವ ವಿಡಿಯೋವನ್ನು ಗಮನಿಸಿದ್ದೇವೆ. ಇದರೊಂದಿಗೆ, ಜೂನ್ 18, 2017ರಂದು ಬಿಬಿಸಿ ಪ್ರಕಟಿಸಿದ ವರದಿಯಲ್ಲೂ ಗ್ರೀನ್ ಲ್ಯಾಂಡ್ ಗೆ ಸುನಾಮಿ ಅಪ್ಪಳಿಸಿದ್ದು, ನಾಲ್ವರು ಮೀನುಗಾರರು ನಾಪತ್ತೆಯಾಗಿರುವುದಾಗಿ ಹೇಳಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಇತ್ತೀಚಿನ ರಷ್ಯಾ-ಜಪಾನ್ ಭೂಕಂಪ, ಸುನಾಮಿಗೆ ಸಂಬಂಧಿಸಿದ ದೃಶ್ಯ ಎಂದು ಗ್ರೀನ್ ಲ್ಯಾಂಡ್ ಸುನಾಮಿಯ ದೃಶ್ಯಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಜಪಾನ್-ರಷ್ಯಾ ಭೂಕಂಪದ ದೃಶ್ಯ ಎಂದು ಸಂಬಧವಿಲ್ಲದ ವಿಡಿಯೋ ಹಂಚಿಕೆ

