FACT CHECK | ದೀಪಾವಳಿ ವೇಳೆ ಸ್ವದೇಶಿ ಉತ್ಪನ್ನ ಬಳಸುವಂತೆ ಕರೆ ನೀಡಿದ್ರಾ ಪ್ರಧಾನಿ ಮೋದಿ
ದೀಪಾವಳಿ ವೇಳೆ ಸ್ವದೇಶಿ ಉತ್ಪನ್ನ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
![]()
ವಾಟ್ಸಾಪ್ ನಲ್ಲಿ ಕಂಡುಬಂದ ಸಂದೇಶದಲ್ಲಿ “ನನ್ನ ಪ್ರೀತಿಯ ಭಾರತೀಯ ನಾಗರಿಕರೇ, ಈ ಬಾರಿ ನೀವೆಲ್ಲರೂ ಇದನ್ನೇ ಮಾಡಬೇಕು ಅಂದರೆ ಮುಂಬರುವ ದೀಪಾವಳಿ ಹಬ್ಬದಂದು, ನಿಮ್ಮ ಮನೆಗಳಲ್ಲಿ ದೀಪ ಹಚ್ಚುವುದು, ಅಲಂಕಾರ, ಸಿಹಿತಿಂಡಿಗಳು ಇತ್ಯಾದಿಗಳಲ್ಲಿ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನೇ ಬಳಸಿ. ನೀವು ಖಂಡಿತವಾಗಿ ಪ್ರಧಾನ ಮಂತ್ರಿಯ ಮಾತುಗಳನ್ನು ಕೇಳುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಸಣ್ಣ ಹೆಜ್ಜೆಗಳೊಂದಿಗೆ ನನಗೆ ಬೆಂಬಲ ನೋಡಿದರೆ, ನಮ್ಮ ಭಾರತವನ್ನು ವಿಶ್ವದ ಮೊದಲ ಸಾಲಿನಲ್ಲಿ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ನಿಮಗೆ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ.” ಎಂದಿದೆ. ಇದರ ಕೊನೆಯಲ್ಲಿ ನರೇಂದ್ರ ಮೋದಿ ಎಂಬ ಸಹಿ ಇದೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ವಾಟ್ಸಾಪ್‌ನಲ್ಲಿ ಶೇರ್ ಆಗುತ್ತಿರುವ ಈ ಸಂದೇಶವನ್ನು ನಿಜವಾಗಿಯೂ ಪ್ರಧಾನಿ ಮೋದಿ ಹೇಳಿಕೆಯೇ ಎಂದು ಪರಿಶೀಲಿಸಲು ವೈರಲ್ ಸಂದೇಶದ ಫೋಟೋವನ್ನು ಕೂಲಂಕಷವಾಗಿ ಗಮನಿಸಿದ್ದೇವೆ. ಇದರಲ್ಲಿ ಗೂಗಲ್ ಲೆನ್ಸ್ ಮೂಲಕ ಟ್ರಾನ್ಸ್ ಲೇಟ್ ಮಾಡಲಾಗಿದೆ ಎಂದಿದೆ. ಆದ್ದರಿಂದ ಇದರಲ್ಲಿ ಮೂಲ ಭಾಷೆ ಬೇರೆ ಇದ್ದಿರಬಹುದು ಎಂದು ತಿಳಿದುಬಂದಿದೆ. ಜೊತೆಗೆ ಈ ಸಂದೇಶದಲ್ಲಿ ಯಾವುದೇ ದಿನಾಂಕವಿಲ್ಲ, ಅಶೋಕ ಲಾಂಛನದ ಬದಿಯಲ್ಲಿ ಮೋದಿಯವರ ಫೋಟೋ ಹಾಕಿರುವುದೂ ಸಂಶಯಕ್ಕೆಡೆ ಮಾಡಿದೆ.
![]()
ಆ ನಂತರ ನಾವು ಮೋದಿ ಸಂದೇಶದ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದ್ದು ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಪ್ರಧಾನಿ ಮೋದಿ ಅವರು ಇಂತಹ ಕರೆ ನೀಡಿದ್ದರ ಬಗ್ಗೆ ಯಾವುದೇ ವಿವರಗಳೂ ದೊರಕಿಲ್ಲ. ಆ ಬಳಿಕ ನಾವು ಪ್ರಧಾನಿ ಮೋದಿ ಅವರ ಸಾಮಾಜಿಕ ಜಾಲತಾಣಗಳನ್ನೂ ಪರಿಶೀಲಿಸಿದಾಗ, ಅಂತಹ ಯಾವುದೇ ಸಂದೇಶಗಳು ಕಂಡುಬಂದಿಲ್ಲ.
ಆ ನಂತರ ನಾವು ವೈರಲ್ ಆದ ಸಂದೇಶದ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಹಿಂದಿಭಾಷೆಯಲ್ಲೂ ಇಂತಹುದೇ ಪೋಸ್ಟ್ ಗಳನ್ನು ನೋಡಿದ್ದೇವೆ. ಅವುಗಳನ್ನು ಇಲ್ಲಿ ಇಲ್ಲಿ ನೋಡಬಹುದು.
![]()
ಇದರ ಆಧಾರದಲ್ಲಿ ನಾವು ಇನ್ನಷ್ಟು ಸರ್ಚ್ ಮಾಡಿದಾಗ, ಆಗಸ್ಟ್ 31, 2016 ರಂದು ಪಿಎಂಒ ಇಂಡಿಯಾದ ಅಧಿಕೃತ ಎಕ್ಸ್ ಖಾತೆಯಿಂದ ಮಾಡಿರುವ ಪೋಸ್ಟ್ ಲಭ್ಯವಾಗಿದೆ. ಇದರ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸಂದೇಶ ನಕಲಿ. ಪಿಎಂಒದ ಪೋಸ್ಟ್ ನಲ್ಲಿ ‘ಪ್ರಧಾನಿಯವರ ಸಹಿಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಜನರಿಗೆ ಕೆಲವು ಮನವಿಗಳನ್ನು ಮಾಡಲಾಗುತ್ತಿದೆ. ಈ ದಾಖಲೆ ನಿಜವಾದ್ದಲ್ಲ’ ಎಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ದೀಪಾವಳಿ ವೇಳೆ ಸ್ವದೇಶಿ ಉತ್ಪನ್ನ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ ಎಂಬ ಸಂದೇಶ ನಿಜವಲ್ಲ ಎಂಬುದು ಸ್ಪಷ್ಟವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸಂದೇಶ ನಕಲಿ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮೈಸೂರಿನ ಮಾಲ್‌ನಲ್ಲಿ ಎಸ್ಕಲೇಟರ್‌ಗಳು ಕುಸಿದು ಹಲವು ಜನರು ಸಾವನಪ್ಪಿದ್ದು ನಿಜವೇ?

