FACT CHECK : ಬಿಜೆಪಿ ರ್ಯಾಲಿಯ ಟ್ರಾಫಿಕ್ ವಿರುದ್ಧ ಕಿಡಿಕಾರಿದ ಮಹಿಳೆಯ ಮೇಲೆ FIR ದಾಖಲಾಗಿದೆಯೇ?
ಮುಂಬೈನ ವರ್ಲಿಯಲ್ಲಿ ಇತ್ತೀಚೆಗೆ ನಡೆದ ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದ ಬಿಜೆಪಿ ರ್ಯಾಲಿಯ ವೇಳೆ ಮಹಿಳೆಯೊಬ್ಬರು ಪ್ರತಿಭಟನಾಕಾರರ ಮೇಲೆ ಆಕ್ರೋಶ ಹೊರಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ, ಆ ಮಹಿಳೆಯ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಇದರ ಬೆನ್ನಲ್ಲೆ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಸೇರಿದಂತೆ ಹಲವರು ಈ ಬಗ್ಗೆ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.
Irony died a thousand deaths
BJP was protesting in Mumbai for women empowerment
A woman lashed out against the traffic jam
BJP first mocked her and now a police case has been filed against her.
She was only claiming what is rightfully her’s – the roads of Mumbai!
— Supriya Shrinate (@SupriyaShrinate) April 24, 2026
ರ್ಯಾಲಿಯಿಂದಾಗಿ ಉಂಟಾಗಿದ್ದ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದ ಮಹಿಳೆ, ತನ್ನ ಮಗುವನ್ನು ಕರೆತರಲು ಹೋಗುವಾಗ ತಡವಾದ ಕಾರಣ ರಸ್ತೆಯಲ್ಲೇ ಪ್ರತಿಭಟನಾಕಾರರನ್ನು ಪ್ರಶ್ನಿಸಿದ್ದರು. “ಇಲ್ಲಿಂದ ಹೊರಡಿ, ರಸ್ತೆ ಬ್ಲಾಕ್ ಮಾಡಬೇಡಿ” ಎಂದು ಸಚಿವ ಗಿರೀಶ್ ಮಹಾಜನ್ ಹಾಗೂ ಪೊಲೀಸರ ಎದುರೇ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಸಚಿವರು ಕ್ಷಮೆಯಾಚಿಸಿದ್ದರೂ, ಮಹಿಳೆಯ ಭಾಷೆ ಸರಿಯಿರಲಿಲ್ಲ ಎಂದಿದ್ದರು.
ಇನ್ನು ಹಲವರು ಇದೇ ಮಾಹಿತಿಯೊಂದಿಗೆ ಪೋಸ್ಟ್ಅನ್ನು ಹಂಚಿಕೊಂಡಿದ್ದು, ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ವೈರಲ್ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಈ ಕೆಳಗಿನ ಪ್ರಮುಖ ಅಂಶಗಳು ಕಂಡುಬಂದಿವೆ. ಈ ಕುರಿತು ಎದ್ದಿರುವ ವದಂತಿಗಳಿಗೆ ಮುಂಬೈ ಪೊಲೀಸರು ತಮ್ಮ ಅಧಿಕೃತ ಎಕ್ಸ್ (X) ಖಾತೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ. “ಸಂಬಂಧಪಟ್ಟ ಮಹಿಳೆಯ ವಿರುದ್ಧ ಯಾವುದೇ ಎಫ್ಐಆರ್ (FIR) ದಾಖಲಾಗಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಅಧಿಕೃತ ಮೂಲಗಳಿಂದ ಮಾಹಿತಿ ಪಡೆಯದೆ ಸುಳ್ಳು ಸುದ್ದಿ ಹರಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವರದಿಗಳ ಪ್ರಕಾರ, ವಕೀಲ ಗುಣರತ್ನ ಸದಾವರ್ತೆ ಅವರ ಪುತ್ರಿ ಜೆನ್ ಸದಾವರ್ತೆ ಎಂಬುವವರು ಆ ಮಹಿಳೆಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗೆ ಕೇವಲ ಒಂದು ‘ದೂರು ಅರ್ಜಿ’ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ದೂರು ಅರ್ಜಿಯನ್ನು ಯಾರು ಬೇಕಾದರೂ ನೀಡಬಹುದಾದ ಒಂದು ಲಿಖಿತ ಮನವಿ ಅಥವಾ ದೂರು. ಇದರ ಆಧಾರದ ಮೇಲೆ ತನಿಖೆ ನಡೆಯಬೇಕೇ ಅಥವಾ ಬೇಡವೇ ಎಂದು ಪೊಲೀಸರು ನಿರ್ಧರಿಸುತ್ತಾರೆ.
No FIR has been registered against the lady.
We request you and everyone to verify the facts from official channel before posting on social media and refrain from spreading misinformation. https://t.co/A5qHv3B3cp
— मुंबई पोलीस Mumbai Police (@MumbaiPolice) April 24, 2026
ಹಾಗೆಯೇ ಎಫ್ಐಆರ್ (FIR) ಎಂಬುದು ಗಂಭೀರ ಅಪರಾಧ ನಡೆದಾಗ ಪೊಲೀಸರು ದಾಖಲಿಸುವ ಅಧಿಕೃತ ಕಾನೂನು ದಾಖಲೆ. ಈ ಪ್ರಕರಣದಲ್ಲಿ ಯಾವುದೇ ಎಫ್ಐಆರ್ ದಾಖಲಾಗಿಲ್ಲ.
‘ಟೈಮ್ಸ್ ಆಫ್ ಇಂಡಿಯಾ’ ಸೇರಿದಂತೆ ಕೆಲವು ಮಾಧ್ಯಮಗಳು “ಮಹಿಳೆಯ ವಿರುದ್ಧ ದೂರು ದಾಖಲಾಗಿದೆ” ಎಂದು ವರದಿ ಮಾಡಿದ್ದವು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಅನೇಕರು ಪೊಲೀಸರು ಆಕೆಯ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಮುಂಬೈನಲ್ಲಿ ಬಿಜೆಪಿ ರ್ಯಾಲಿಯ ಟ್ರಾಫಿಕ್ ಪ್ರಶ್ನಿಸಿದ ಮಹಿಳೆಯ ವಿರುದ್ಧ ಎಫ್ಐಆರ್ ದಾಖಲಾಗಿದೆ ಎನ್ನುವ ಸುದ್ದಿ ಸಂಪೂರ್ಣ ಸುಳ್ಳು. ಆಕೆಯ ವಿರುದ್ಧ ಕೇವಲ ದೂರು ಅರ್ಜಿಯೊಂದನ್ನು ಸಲ್ಲಿಸಲಾಗಿದೆಯೇ ಹೊರತು, ಮುಂಬೈ ಪೊಲೀಸರು ಯಾವುದೇ ಕಾನೂನು ಕ್ರಮ ಅಥವಾ ಎಫ್ಐಆರ್ ದಾಖಲಿಸಿಲ್ಲ. ಹಾಗಾಗಿ ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಸುದ್ದಿ ಹಂಚಿಕೊಳ್ಳುವ ಮೊದಲು ಅಧಿಕೃತ ಪೊಲೀಸ್ ಇಲಾಖೆಯ ಹೇಳಿಕೆಗಳನ್ನು ಗಮನಿಸುವುದು ಒಳಿತು.
ಇದನ್ನು ಓದಿರಿ : FACT CHECK : TMC ಕಾರ್ಯಕರ್ತರಿಗೆ ಪೋಲೀಸರಿಂದ ಲಾಠಿ ಚಾರ್ಜ್ ಎಂದು ಹಳೆಯ ವಿಡಿಯೋ ಹಂಚಿಕೆ
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

