ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್‌ವೈ ಕೆಳಗಿಳಿಸಲು RSS ನಾಯಕರು ಹವಣಿಸುತ್ತಿದ್ದಾರೆ: ಸಿದ್ದರಾಮಯ್ಯ

ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಒಡೆದು ಬಣಗಳಾಗಿ ಮಾರ್ಪಟ್ಟಿದೆ. ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದವರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಲು ಹವಣಿಸುತ್ತಿದ್ದಾರೆ. ಅದಕ್ಕಾಗಿ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಪ್ರಕರಣವನ್ನು ಅಗತ್ಯ ಬಿದ್ದಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕಾವಲಭೈರಸಂದ್ರ ಗಲಭೆಯ ತನಿಖೆಯ ಹಾದಿ ತಪ್ಪಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಯೋಜಿತ ರೀತಿಯಲ್ಲಿ ಮಾಡುತ್ತಿದೆ. ದಿನಕ್ಕೊಬ್ಬ ಸಚಿವರು, ಶಾಸಕರು ಭೇಟಿ ನೀಡಿ, ಗಲಭೆಗೆ ಎಸ್ ಡಿಪಿಐ, ಕಾಂಗ್ರೆಸ್ ಹಾಗೂ ಭಯೋತ್ಪಾದಕರು ಕಾರಣ ಎಂದು ತರಹೇವಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಅವರು ರೂಪಿಸುತ್ತಿರುವ ಸಂಚಿಗೆ ಸಾಕ್ಷಿಯಾಗಿದೆ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಗಲಭೆಯ ಹಿಂದಿನ ಅಪರಾಧಿಗಳನ್ನು ಪತ್ತೆ ಹಚ್ಚುವುದಕ್ಕಿಂತ ಹೆಚ್ಚು ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಿಲುಕಿಸುವುದು ಹೇಗೆ? ಇದನ್ನು ಕೋಮುಗಲಭೆ ಎಂದು ಬಣ್ಣಿಸಿ ರಾಜಕೀಯ ಲಾಭ ಗಳಿಸುವುದು ಹೇಗೆ? ಎನ್ನುವ ಬಗ್ಗೆ ಬಿಜೆಪಿ ನಾಯಕರು ತಲೆಕೆಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಅತ್ಯಧಿಕ ಮತಗಳಿಸಿ ಆಯ್ಕೆಯಾಗಿರುವ ನಮ್ಮದೇ ಪಕ್ಷದ ಶಾಸಕರು ಮತ್ತು ನಮ್ಮ ಪಕ್ಷದ ಕಾರ್ಪೋರೇಟರ್‌ಗಳು ಇರುವಾಗ ಕಾವಲಭೈರಸಂದ್ರ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ಆಸಕ್ತಿಯಾದರು ಏನು? ಅಲ್ಲಿ ಚುನಾವಣೆಯಲ್ಲಿ ಎದುರಿಸಲಾಗದ ರಾಜಕೀಯ ಪಕ್ಷಗಳೇ ಪ್ರಕರಣದ ರಾಜಕೀಯ ಲಾಭ ಪಡೆಯಲು ಹೊರಟಿರುವುದು ಸ್ಪಷ್ಟ ಎಂದು ಅವರು ತಿಳಿಸಿದ್ದಾರೆ.

ಕಾವಲಭೈರಸಂದ್ರ ಗಲಭೆಯ ನಿಜವಾದ ತನಿಖೆ ಬಿಜೆಪಿ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯದಿಂದ ಶುರುವಾಗಬೇಕು. ಸರ್ಕಾರದ ಪ್ರಕಾರ ಇದು ಪೂರ್ವಯೋಜಿತ ಕೃತ್ಯವಾಗಿದ್ದರೆ ಅದು ಯಾಕೆ ಪೊಲೀಸರ ಗಮನಕ್ಕೆ ಬಂದಿಲ್ಲ? ಪ್ರಚೋದನಕಾರಿ ಪೋಸ್ಟ್ ಹಾಕಿರುವ ನವೀನ್ ವಿರುದ್ಧ ಪ್ರಕರಣ ದಾಖಲಿಸಲು ವಿಳಂಬಕ್ಕೆ ಯಾರು ಕಾರಣ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಎಸ್‌ಡಿಪಿಐ ನಾಯಕರು ತಪ್ಪು ಮಾಡಿದ್ದರೆ ಅವರನ್ನು ಶಿಕ್ಷಿಸಿ, ಆ ಸಂಘಟನೆ ತಪ್ಪು ಮಾಡಿದ್ದರೆ ಅದರ ವಿರುದ್ಧ ಕ್ರಮಕೈಗೊಳ್ಳಿ. ಮುಸ್ಲಿಮ್ ಮತಗಳನ್ನು ಒಡೆಯಲು ಎಸ್‌ಡಿಪಿಐ ಅನ್ನು ಯೋಜಿತ ರೀತಿಯಲ್ಲಿ ಬಳಸಿಕೊಳ್ಳುತ್ತಾ ಬಂದಿರುವ ಬಿಜೆಪಿಗೆ ಅದನ್ನು ನಿಷೇಧಿಸುವ ಧೈರ್ಯ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ:  ಬಿಜೆಪಿಯ ಫ್ಯಾಸಿಸ್ಟ್‌ ವಿರೋಧಿ ಶಕ್ತಿಯಾಗಬಹುದೇ ಕಾಂಗ್ರೆಸ್? ಬಿಜೆಪಿಗೂ ಕಾಂಗ್ರೆಸ್‌ಗೂ ಏನು ವ್ಯತ್ಯಾಸ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love
Verified by MonsterInsights