ಕಾಫಿನಾಡನಲ್ಲಿ ಸೃಷ್ಠಿಯಾದ ಬೆಳ್ಳಕ್ಕಿ ಪ್ರಪಂಚ : ನೀವು ನೋಡಿದ್ರೆ ಕಳೆದೇ ಹೋಗ್ತೀರಾ….

ಆಕಾಶದಲ್ಲೋ ಅಥವಾ ಮರಗಳ ಮೇಲೋ ಒಂದೆರೆಡು ಬೆಳಕ್ಕಿಗಳನ್ನ ನೋಡಿದ್ರೆ ಮನಸ್ಸು ಖುಷಿಯಾಗುತ್ತೆ. ಆದ್ರೆ, ಕಾಫಿನಾಡನಲ್ಲಿ ಸೃಷ್ಠಿಯಾಗ್ತಿರೋ ಬೆಳ್ಳಕ್ಕಿ ಪ್ರಪಂಚವನ್ನ ನೋಡಿದ್ರೆ ನಿಜಕ್ಕೂ ನೀವು ಕಳೆದೇ ಹೋಗ್ತೀರಾ. ಇಲ್ಲಿನ ಬೆಳ್ಳಕ್ಕಿಯ ವೈಭವನ್ನ ನೀವೊಮ್ಮೆ ನೋಡುದ್ರೆ ನಿಮ್ಗೂ ಹಕ್ಕಿಗಳಂತೆ ಆಕಾಶದಲ್ಲಿ ಹಾರಾಡ್ಬೇಕು ಅನ್ನೋ ಆಸೆ ಶುರುವಾಗುತ್ತೆ. ಆಗಸದಲ್ಲಿ ಸ್ವಚ್ಚಂದವಾಗಿ ಹಾರಾಡುತ್ತಾ, ಕಣ್ಣಿಗೆ ರಸದೌತಣ ನೀಡ್ತಾ, ಸಾವಿರ ಸಾವಿರ ಬೆಳ್ಳಕ್ಕಿಗಳು ಮತ್ತೊಂದು ಲೋಕವನ್ನೇ ಸೃಷ್ಠಿಸಿದೆ.

ಆಕಾಶದಲ್ಲಿ ಬೆಳ್ಳಕ್ಕಿಗಳ ಚಿತ್ತಾರ. ಬಾನಂಗಳದಲ್ಲಿ ಬೆಳ್ಳಕ್ಕಿಗಳ ಹಿಂಡು. ಗುಂಪು ಗುಂಪಾಗಿ ಹಾರಾಡ್ತಿರೋ ಬೆಳ್ಳಕ್ಕಿಗಳು. ತಿಳಿದೋ ತಿಳಿಯದೋ ಬಾನಂಗಳದಲ್ಲಿ ಬಿಳಿ ರಂಗೋಲೆ ಬಿಡಿಸಿ ಆಗಸದಲ್ಲಿ ಚಿತ್ತಾರ ಬಿಡಿಸುತ್ತಿರೋ ಹಕ್ಕಿಗಳ ಸಾಲು. ಹಸಿರ ಕಾನನದಲ್ಲಿ ಬಿಳಿ ಚುಕ್ಕಿ ಇಟ್ಟಂತೆ ಬಾಸವಾಗ್ತಿರೋ ಬೆಳ್ಳಕ್ಕಿಗಳ ನೋಟ. ಹೌದು, ಇದೆಲ್ಲಾ ಕಂಡು ಬಂದದ್ದು, ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಇಟ್ಟಿಗೆ ಸೀಗೋಡು ಗ್ರಾಮದಲ್ಲಿ. ಬಾಳೆಹೊನ್ನೂರು ಸಮೀಪವಿರೋ ಈ ಗ್ರಾಮದ ವಿನಾಯಕ ಕೆರೆಯ ಅಂಗಳದಲ್ಲಿರೋ ಮರಗಳಲ್ಲಿ ನೆಲೆಸಿರೋ ಬೆಳ್ಳಕ್ಕಿಗಳ ಹಿಂಡು ನೋಡುಗರ ಮನಸ್ಸಿಗೆ ಮುದ ನೀಡುತ್ತಿದೆ. ಪ್ರತಿ ವರ್ಷವೂ ಚಳಿಗಾದಲ್ಲಿ ಸುತ್ತಮುತ್ತಲ ಬತ್ತದಗದ್ದೆ, ಹಳ್ಳ-ಕೊಳ್ಳಗಳಲ್ಲಿ ಮೀನು, ಸಣ್ಣ-ಪುಟ್ಟ ಕೀಟಗಳನ್ನ ತಿಂದು ವಿನಾಯಕ ಕೆರೆಯ ಅಂಗಳದಲ್ಲಿರೋ ಮರಗಳಲ್ಲಿ ಸಾವಿರಾರು ಬೆಳ್ಳಕ್ಕಿಗಳು ಆಶ್ರಯ ಪಡೆದಿವೆ. ಬೆಳಗಿನ ಜಾವ 6 ಗಂಟೆ ಹಾಗೂ ಸಂಜೆ 6ರ ವೇಳೆಯ ಅಸುಪಾಸಿನಲ್ಲಿ ಹಸಿರು ಚೆಲ್ಲಿ ನಿಂತಿರೋ ಮರಗಳ ಮೇಲೆ ಒಮ್ಮೆಲೆ ಸಾವಿರಾರು ಬೆಳ್ಳಕ್ಕಿಗಳು ಹಾರಾಡೋ ದೃಶ್ಯ ನೋಡುಗರ ಮನಸ್ಸಿಗೆ ಮುದ ನೀಡ್ತಿದೆ. ಚಿವ್ ಚಿವ್ ಅನ್ನೋ ಮರಿ ಹಕ್ಕಿಗಳ ನಿನಾದದ ಜೊತೆ ಅತ್ತಿಂದಿತ್ತ ಇತ್ತಿಂದಿತ್ತ ಮರದಿಂದ ಮರಕ್ಕೆ ಹಾರಾಡೋ ಬೆಳ್ಳಕ್ಕಿಗಳ ರಂಗಿನಾಟ ಮತ್ತಷ್ಟು ಸುಂದರ.

ಇನ್ನು ಮುಸ್ಸಂಜೆಯಲ್ಲಿ ರವಿ ಮೆಲ್ಲಗೆ ಮರೆಯಾಗ್ತಿದಂತೆ ಬೆಳ್ಳಕ್ಕಿಗಳ ಗುಂಪು ಕೆರೆಯ ಬಳಗ ಸೇರಿಕೊಳ್ತಾವೆ. ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಒಂದು ಎರಡು ಮೂರು ಅಂತ ಲೆಕ್ಕ ಹಾಕೋದ್ರಲ್ಲಿ ಒಮ್ಮೆಲೆ ಸಾವಿರಾರು ಬೆಳ್ಳಕ್ಕಿಗಳು ಕಣ್ಣಿಗೆ ಹಬ್ಬದೂಟ ಬಡಿಸುತ್ವೆ. ಮರಗಳ ಮೇಲೆ ಒಟ್ಟೊಟ್ಟಗಿ ಆಟವಾಡೋ ಹಕ್ಕಿಗಳು ಕತ್ತಲು ಆವರಿಸುತ್ತಿದ್ದಂತೆ ಫುಲ್ ಸೈಲೆಂಟಾಗಿ ಗೂಡು ಸೇರುತ್ವೆ. ಪ್ರತಿ ಬಾರಿ ಡಿಸೆಂಬರ್ ವೇಳೆಗೆ ನಾನಾ ಪ್ರದೇಶಗಳಿಂದ ಬರ್ತಿದ್ದ ಬೆಳ್ಳಕ್ಕಿಗಳು ಈ ಬಾರಿ ನವೆಂಬರ್ ತಿಂಗಳಲ್ಲೇ ಆಹಾರವನ್ನ ಅರಸಿಕೊಂಡು ಮಲೆನಾಡಿಗೆ ಲಗ್ಗೆ ಇಟ್ಟಿವೆ. ಮಲೆನಾಡು ಭಾಗದಲ್ಲಿ ಈ ವೇಳೆ ಭತ್ತದ ಕಟಾವು ನಡೆಯೋದ್ರಿಂದ ಸಹಜವಾಗಿಯೇ ಬೆಳಕ್ಕಿಗಳು ಇಲ್ಲಿ ನೆಲೆಸಿ ವಂಶಾಭಿವೃದ್ಧಿ ನಡೆಸಿ ಬಳಿಕ ತಮ್ಮ ತಮ್ಮ ಊರುಗಳಿಗೆ ವಾಪಾಸ್ ಹೋಗುತ್ವೆ. ಹೀಗೆ ಒಂದೆಡೆ ಸಾವಿರಾರು ಬೆಳ್ಳಕ್ಕಿಗಳು ಒಟ್ಟಿಗೆ ಸೇರಿ ಮಲೆನಾಡಿನ ಚುಮು-ಚುಮು ಚಳಿಯ ಮಂಜಿಗೆ ಮತ್ತಷ್ಟು ರಂಗು ನೀಡಿರೋದು ಸ್ಥಳೀಯರು ಸೇರಿದಂತೆ ಪಕ್ಷಿಪ್ರಿಯರ ಪಾಲಿನ ನೆಚ್ಚಿನ ತಾಣವಾಗಿ ಕೆರೆ ಮಾರ್ಪಟ್ಟಿದೆ.

ದಶಕಗಳಿಂದಲೂ ಈ ಕೆರೆಯನ್ನೇ ಆಶ್ರಯ ತಾಣವನ್ನಾಗಿಸಿಕೊಂಡಿರೋ ಈ ಬೆಳ್ಳಕ್ಕಿಗಳು ಎಲ್ಲೇ ಇದ್ರೂ ಕೂಡ ಪ್ರತಿ ವರ್ಷವೂ ಇತ್ತ ಬರೋದನ್ನ ಮಿಸ್ ಮಾಡೋದಿಲ್ಲ. ಒಣಗಿದ ಮರಗಳ ಕೊಂಬೆಗಳ ಮೇಲೆ ಕುಳಿತು ಅವುಗಳು ರಿಲ್ಯಾಕ್ಸ್ ಮಾಡೋ ಪರಿ ನಿಜಕ್ಕೂ ಕಣ್ಣಿಗೆ ಹಬ್ಬ. ಈ ನಯನ ಮನೋಹರ ದೃಶ್ಯವನ್ನ ನೋಡಲೆಂದೇ ಪಕ್ಷಿಪ್ರಿಯರು ಸಂಜೆಯಾಗುತ್ತಲೇ ಕೆರೆಯತ್ತ ಮುಖಮಾಡಿ ಬೆಳ್ಳಕ್ಕಿಗಳ ವೈಯಾರವನ್ನ ಕಣ್ತುಂಬಿಸಿಕೊಳ್ಳುತ್ತಾರೆ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights