ಆಂಜಿನಪ್ಪಗೆ ಒಂದು ಅವಕಾಶ ಮಾಡಿಕೊಡಿ, ಇದು ಚಿಕ್ಕಬಳ್ಳಾಪುರದ ಸ್ವಾಭಿಮಾನದ ಪ್ರಶ್ನೆ: ಡಿಕೆಶಿ
ಬಡವರಿಗೆ ಅಕ್ಕಿ ಹಂಚಿ ಅಕ್ಕಿ ಆಂಜಿನಪ್ಪ ಎಂದೇ ಹೆಸರು ಪಡೆದಿರುವ ನಮ್ಮ ಅಭ್ಯರ್ಥಿಗೆ ನಿಮ್ಮ ಆಶೀರ್ವಾದ ಬೇಕು. ನಿಮ್ಮ ಸೇವೆ ಮಾಡಲು ಈತನಿಗೆ ಒಂದು ಅವಕಾಶ ಮಾಡಿಕೊಡಿ. ನಿಮ್ಮ ಮತ, ಸ್ವಾಭಿಮಾನವನ್ನು ಮಾರಿದವನಿಗೆ ತಕ್ಕ ಪಾಠ ಕಲಿಸಿ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಮತದಾರರಿಗೆ ಕರೆ ನೀಡಿದ್ದಾರೆ.
ಚಿಕ್ಕಬಳ್ಳಾಪುರದ ನಂದಿ ಗ್ರಾಮ, ದಿಬ್ಬೂರು ಹಾಗೂ ಟೌನ್ ಪ್ರದೇಶಗಳಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಆಂಜಿನಪ್ಪ ಅವರ ಪರ ಪ್ರಚಾರ ಮಾಡಿದ ಡಿಕೆ ಶಿವಕುಮಾರ್, ‘ಪಕ್ಷದ್ರೋಹ ಮಾಡಿದವರು ತಾಯಿಗೆ ದ್ರೋಹ ಮಾಡಿದಂತೆ ಅಂತಹವರನ್ನು ಕ್ಷಮಿಸಬಾರದು. ನೀವು ಮತಹಾಕಿ ನಮಗೆ ಶಕ್ತಿ ತುಂಬಬೇಕು’ ಎಂದು ಮತದಾರರಲ್ಲಿ ಮನವಿ ಮಾಡಿದರು.
ಪ್ರಜಾಪ್ರಭುತ್ವದ ಆಧಾರ ಸ್ತಂಭವಾಗಿರುವ ಮತದಾರರು ನೀವು ಇಂದಿನ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದೀರಿ. ಇವತ್ತು ಒಂದು ಇತಿಹಾಸ ಸೃಷ್ಟಿ ಮಾಡಲು ನೀವೆಲ್ಲರು ಸಭೆ ನಡೆಸಿದ್ದೀರಿ. ನಿಮಗೆ ಕೋಟಿ ಕೋಟಿ ನಮಸ್ಕಾರಗಳು. ಬಿಜೆಪಿ ಸ್ನೇಹಿತರು ನನ್ನ ಮೇಲೆ ಸುಳ್ಳಿನ ಆರೋಪ ಮಾಡಿದಾಗ, ನನ್ನ ಮೇಲೆ ಕೇಸು ದಾಖಲಿಸಿ ದಾಳಿ ಮಾಡಿದಾಗ, ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಿದಾಗ ಕಷ್ಟದ ದಿನಗಳಲ್ಲಿ ನೀವೆಲ್ಲರು ತಮ್ಮ ತಮ್ಮ ಊರುಗಳಲ್ಲಿ ಪ್ರತಿಭಟನೆ ಮಾಡಿ ಈ ಡಿಕೆ ಶಿವಕುಮಾರ್ ಗೆ ನೀವು ಮಾಡಿರೋದು ಸರಿಯಿಲ್ಲ. ನಮ್ಮ ಕುಟುಂಬ ಸದಸ್ಯನಿಗೆ ಆದ ಅನ್ಯಾಯ ಅಂತಾ ನೀವು ಹೋರಾಟ ಮಾಡಿದ್ದೀರಿ. ನೀವು ಮಾಡಿದ ಪೂಜಾ ಫಲ, ಹರಕೆ, ಪ್ರಾರ್ಥನೆ ಇವೆಲ್ಲವೂ ದೆವರಿಗೆ ಹಾಗೂ ನ್ಯಾಯಾಲಯಕ್ಕೆ ಮುಟ್ಟಿ ನಾನು ಕೇವಲ 50 ದಿನಗಳಲ್ಲಿ ವಾಪಸ್ ಬಂದು ನಿಮ್ಮ ಸೇವೆಗೋಸ್ಕರ ಇಲ್ಲಿಗೆ ಆಗಮಿಸಿದ್ದೇನೆ. ನಿಮ್ಮ ಋಣ ಯಾವ ರೀತಿ ತೀರಿಸಬೇಕೋ ಗೊತ್ತಿಲ್ಲ. ನಿಮ್ಮ ಋಣ ತೀರಿಸಲು, ನೀವು ಕೊಟ್ಟಿರುವ ಪ್ರೀತಿ, ಅಭಿಮಾನ, ನಂಬಿಕೆ ಉಳಿಸಿಕೊಳ್ಳುವಷ್ಟು ಶಕ್ತಿ ನನಗೆ ಕೊಡಪ್ಪಾ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ನಾನು ಚುನಾವಣೆಗೆ ನಿಂತಾಗ ನಡೆಸಿದ ಸಭೆಯಲ್ಲೂ ಇಷ್ಟು ದೊಡ್ಡಪ್ರಮಾಣದಲ್ಲಿ ಜನ ಸೇರಿರಲಿಲ್ಲ. ನಿಮ್ಮ ಶಕ್ತಿ ಕಂಡು ಸಂತೋಷವಾಗಿದೆ. ನಿಮ್ಮ ಶಕ್ತಿ ಮುಂದೆ ಬಿಜೆಪಿಯವರ ನಿಲ್ಲುವುದಿಲ್ಲ. ಬಿಜೆಪಿಯವರ ನೋಟು ಅಕ್ಕಿ ಆಂರಿನಪ್ಪಗೆ ವೋಟು ಅನ್ನೋದನ್ನು ಮರೆಯಬೇಡಿ. ಎಲ್ಲ ಹೆಣ್ಣುಮಕ್ಕಳು, ಯುವಕರಿಗೆ ಹೇಳುತ್ತಿದ್ದೇನೆ. ಏನು ಕೊಟ್ಟರೂ ಬೇಡ ಅನ್ನಬೇಡಿ, ಎಲ್ಲವನ್ನು ತೆಗೆದುಕೊಳ್ಳಿ. ಚಿನ್ನ, ಬೆಳ್ಳಿ, ಉಂಗುರ ಆದ್ರೂ ಕೊಡಲಿ ಸೀರೆ ಆದ್ರೂ ಕೊಡಲಿ ಏನನ್ನೂ ಬೇಡ, ನಿಮಗೆ ವೋಟು ಹಾಕುವುದಿಲ್ಲ ಅಂತಾನೂ ಹೇಳಬೇಡಿ. ಆತ ಹೇಗೆ ಸಿದ್ರಾಮಣ್ಣಾ, ಕುಮಾರಣ್ಣಾ ನಾನು ನಿಮ್ಮ ಜತೆಲೇ ಇರ್ತೀನಿ ಅಂತಾ ಹೇಳಿ ಕೈಕೊಟ್ಟು ಮೋಸ ಮಾಡಿದನೋ ಅದೇ ರೀತಿ ನೀವು ಅಣ್ಣಾ ನಿನಗೇ ವೋಟು ಅಂತಾ ಹೇಳಿ.
ಈ ಚುನಾವಣೆ ಯಾರಿಗೋಸ್ಕರ, ಏತಕ್ಕೆ ಬಂತು? ಇದರ ಅವಶ್ಯಕತೆ ಇದೆಯಾ? ರೈತರಿಗಾಗಿ, ನೀರಿಗಾಗಿ, ಅನ್ಯಾಯದ ವಿರುದ್ಧ ಹೋರಾಟ ಮಾಡಿ ಅವರು ರಾಜೀನಾಮೆ ನೀಡಿಲ್ಲ. ರಾಜೀನಾಮೆ ನೀಡುವಾಗ ನಿಮ್ಮನೇನಾದ್ರ ಅವರು ಬಂದು ಕೇಳಿದ್ರಾ? ಇಲ್ಲ, ನಿಮ್ಮನ್ನೂ ಕೇಳಲಿಲ್ಲ, ನಮ್ಮನ್ನು ಕೇಳಲಿಲ್ಲ. ಐವತ್ತು ಕೋಟಿ ಪಡೆದು ನಿಮ್ಮ ಮತವನ್ನು ಮಾರಿಕೊಂಡರೆ ಇದು ಸ್ವಾಭಿಮಾನದ ಪ್ರಶ್ನೆ ಅಲ್ಲವಾ? ಇದು ಇಡೀ ಚಿಕ್ಕಬಳ್ಳಾಪುರದ ಸ್ವಾಭಿಮಾನದ ಪ್ರಶ್ನೆ. ನಿಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀವು ನಾವೆಲ್ಲ ಸೇರಿ ಯೋಚನೆ ಮಾಡಬೇಕು. ಎರಡು ಬಾರಿ ನೀವು ಯಾರನ್ನು ಶಾಸಕರಾಗಿ ಆಯ್ಕೆ ಮಾಡಿದ್ದೀರೋ ಅವರನ್ನು ಬೆಳೆಸುವ ಮೂಲಕ ಕಾಂಗ್ರೆಸ್ ಪಕ್ಷ ಒಂದು ದೊಡ್ಡ ಅನಾಹುತವನ್ನೇ ಮಾಡಿದೆ ಎಂದು ಹೇಳಲು ಬೇಸರವಾಗುತ್ತದೆ. ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್ ಕೊಟ್ಟಿದ್ದೇ ಒಂದು ದೊಡ್ಡ ದುರಂತ. ನಾನು ಬಹಳಷ್ಟು ದೊಡ್ಡ ನಾಯಕರನ್ನು ನೋಡಿದ್ದೇನೆ. ಅವರು ಕೂಡ ಇಷ್ಟು ವೇಗವಾಗಿ ಇಲ್ಲ.
ಅಕ್ಕಿ ಆಂಜಿನಪ್ಪ ಬಡವರಿಗೆ ಅಕ್ಕಿ ಕೊಟ್ಟಿದ್ದಾನೆ, ಸೇವೆ ಮಾಡಿದ್ದಾನೆ. ಅವನಿಗೆ ಯಾರೂ ಅಧಿಕಾರ ಕೊಟ್ಟಿಲ್ಲ. ಅವರು ಅಕೌಂಟ್ ಗೆ ದುಡ್ಡಿ ಹಾಕ್ತೀನಿ ಅಂದಿದ್ರು, ಅವರು ಬಂದಾಗ ಮೊದಲು ಅಕೌಂಟ್ ಗೆ ದುಡ್ಡು ಹಾಕಿ ಆಮೇಲೆ ಮತ ಕೇಳಿ ಅಂತಾ ಪಟ್ಟು ಹಿಡಿಯಿರಿ.
ನಾನು ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ. ಯಾಕೋ ಈ ನ್ಯಾಯ ಸರಿ ಇಲ್ಲ. ನೀವು ಯುವ ನಾಯಕ ಅಂತಾ ಹೇಳಿ ಬೆಳೆಸುತ್ತಿದ್ದೀರಾ ಆದರೆ ಇದು ಹೆಚ್ಚುಕಮ್ಮಿ ಆಗುವ ಸಾಧ್ಯತೆ ಇದೆ ಹುಷಾರಾಗಿರಿ ಅಂತಾ ಎಚ್ಚರಿಸಿದ್ದೆ. ಆದರೂ ಕೂಡ ಅವರು ಬಹಳ ನಂಬಿದ್ದರು.
ನಾವು ಕಳೆದ ಚುನಾವಣೆಯಲ್ಲಿ ನಮ್ಮದೇ ಆದ ತಪ್ಪುಗಳಿಂದ ಜನ ನಮ್ಮ ಕೈ ಹಿಡಿಯಲಿಲ್ಲ. ನಮಗೆ ಕೇವಲ 80 ಸೀಟುಗಳನ್ನು ಮಾತ್ರ ಕೊಟ್ಟರು. ಆದರೆ ಜಾತ್ಯಾತೀತ ವ್ಯವಸ್ಥೆ ಉಲಿಸಿಕೊಳ್ಳಲು ಬಿಜೆಪಿಯವರಿಗೆ 104 ಸೀಟು ಕೊಟ್ಟಿದ್ದರೂ ರಾಹುಲ್ ಗಾಂಧಿ ಅವರ ಆದೇಶದ ಮೇರೆಗೆ ನಾವು ಜನತಾದಳ ಸೇರಿ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿ ಸರ್ಕಾರ ರಚನೆ ಮಾಡಿದೆವು. ನಮ್ಮ ಕೆಲಸ ನಾವು ಮಾಡಿಕೊಂಡು ಬಂದಿದ್ದೇವೆ. ಆದರೆ ಮೊದಲ ದಿನದಿಂದ ಯಡಿಯೂರಪ್ಪನವರು ಈ ಸರ್ಕಾರ ತೆಗೆಯಲು ಬೇಕಾದಷ್ಟು ಪ್ರಯತ್ನ ಮಾಡಿ ವಿಫಲರಾದರು. ಆದರೆ ಸಂಸತ್ ಚುನಾವಣೆ ನಂತರ ನಡೆದ ರಾಷ್ಟ್ರದ ರಾಜಕಾರಣದಲ್ಲಿ ಬದಲಾವಣೆ ಆಗಿ ಕೇಂದ್ರ ಸರ್ಕಾರ, ಕೇಂದ್ರದ ಮಂತ್ರಿಗಳು ಸೇರಿ ದೊಡ್ಡ ಪ್ರಯೋಗ ಮಾಡಿ ಈ ಸರ್ಕಾರ ಕೆಡವಿದ್ದಾರೆ. ಈ ಸರ್ಕಾರ ಕೆಡವಿದ್ದಕ್ಕೂ ಬಹಳ ಜನ ಸರ್ಟಿಫಿಕೇಟ್ ತಗೋತಿದ್ದಾರೆ.
ನಮ್ಮ ಶಾಸಕರು ರಾಜೀನಾಮೆ ಕೊಟ್ಟು ಬಾಂಬೆಗೆ ಹೋದಾಗ ನಡೆದ ನಾಟಕೀಯ ಬೆಳವಣಿಗೆಗಳು, ಬಿಜಿಪಿ ಮುಖಂಡರು ಹೇಳಿದ ಹೇಳಿಕೆ ಗಮನಿಸಿದ್ದೀರಿ. ಆ ಪಕ್ಷದ ನಾಯಕರು ಉದ್ದೇಶಿಸಿ ಮಾತನಾಡಿದ್ದನ್ನು ಗಮನಿಸಿದ್ದಾರೆ. ನಂತರ ನಿಮ್ಮ ಕ್ಷೇತ್ರಕ್ಕೆ ಬಂದಿದ್ದಾಗ ನೀಡಿದ ಹೇಳಿಕೆ ಗಮನಿಸಿದ್ದೀರಿ. ಇದೆಲ್ಲಾ ದೊಡ್ಡ ಕೃಪಾಪೋಷಿತ ನಾಟಕ ಮಂಡಳಿ. ಇಲ್ಲಿ ವ್ಯವಸ್ಥಿತವಾಗಿ ಕೆಳಗಿಳಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಾವು ಇದನ್ನು ಒಪ್ಪಿದ್ದೇವೆ. ಆದರೆ ಸೂರ್ಯ ಯಾವಾಗಲೂ ಮೇಲೆ ಇರುವುದಿಲ್ಲ. ಮೇಲಿರುವ ಸೂರ್ಯ ಕೆಳಗೆ ಬಂದೇ ಬರ್ತಾನೆ, ಕೆಳಗಿರುವ ಸೂರ್ಯ ಮೇಲೆ ಹೋಗೇ ಹೋಗ್ತಾನೆ. ಕತ್ತಲು ಆಗಿ ಬೆಳಕು ಮೂಡುತ್ತದೆ.
ಮೊನ್ನೆ ಮಹಾರಾಷ್ಟ್ರದಲ್ಲಿ ರಾಜಕೀಯ ಗಮನಿಸಿದ್ದೀರಿ. ಬೆಳಗ್ಗೆ ಪತ್ರಿಕೆ ಓದುವಾಗ ಮಧ್ಯಾಹ್ನ ಶಿವಸೇನಾ, ಕಾಂಗ್ರೆಸ್, ಎನ್ ಸಿಪಿ ಸರ್ಕಾರ ರಚನೆ ಅಂತಾ ಓದುತ್ತಿದ್ದೆ. ಅದೇ ಸಮಯದಲ್ಲಿ ಟಿವಿಯಲ್ಲಿ ಬಿಜೆಪಿ ಸರ್ಕಾರ ರಚನೆ ಸುದ್ದಿ ಪ್ರಸಾರ ಆಗುತ್ತಿದೆ. ನೀವಿಲ್ಲಿ ಪಂಚಾಯ್ತಿ, ಸೋಸೈಟಿ ಸದಸ್ಯರಿದ್ದೀರಿ. ಎಲ್ಲಾದ್ರೂ ಈ ರೀತಿ ಸಚಿವ ಸಂಪುಟ ಸಭೆ ನಡೆಯದೇ ರಾತ್ರೋರಾತ್ರಿ ಈ ದೇಶದ ರಾಷ್ಟ್ರಪತಿ ಸಹಿ ಸಿಕ್ಕಿ ಸರ್ಕಾರ ರಚನೆ ಆಗಿರೋದನ್ನು ನೋಡಿದ್ದೀರಾ? ಇದಕ್ಕಿಂತ ಅವಮಾನದ ಪರಿಸ್ಥಿತಿ ನೋಡಿದ್ದೀರಾ? ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕಗ್ಗೊಲೆಯಿಂದ ವಿಶ್ವಮಟ್ಟದಲ್ಲಿ ಬಿಜೆಪಿಯವರಿಗೆ ಉಗಿಯುತ್ತಿದ್ದಾರೆ.
ಇವತ್ತು ನಾಳೆಯೊಳಗೆ ಎನ್ ಸಿಪಿ, ಕಾಂಗ್ರೆಸ್, ಶಿವಸೇನಾ ಮೈತ್ರಿಯಲ್ಲಿ ಸರ್ಕಾರ ರಚನೆ ಆಗುತ್ತಿದೆ. ದೇಶದ ಒಂದು ರಾಜ್ಯದಲ್ಲಿ ಧಿಕಾರಕ್ಕೆ ಬರುವುದರ ಜತೆಗೆ ವಿರೋಧ ಪಕ್ಷವನ್ನು ನಾಶ ಮಾಡಲು ಹೋರಟರೆ, ಇದು ಸಾಧ್ಯವಿಲ್ಲ. ಮೇಲೊಂದು ಶಕ್ತಿ ಇದೆ, ಅದು ಎಲ್ಲವನ್ನು ಗಮನಿಸುತ್ತಿದೆ. ಇಷ್ಟೊಂದು ಜನ ಇಲ್ಲಿ ಸೇರಿದ್ದೀರಿ, ಈ ಯುವಕರಲ್ಲಿ ಹುರುಪು, ಶಕ್ತಿ ನೋಡುತ್ತಿದ್ದೇನೆ. ನಿಮ್ಮ ತಾಯಿ, ಕುಟುಂಬಕ್ಕೆ ಮೋಸ ಮಾಡಿದರೆ ನೀವು ಯಾರು ಸಹಿಸಿಕೊಳ್ಳುವುದಿಲ್ಲ. ನಿಮ್ಮ ಮನಗೆ ದ್ರೋಹ ಮಾಡಿದವರನ್ನು ನೀವು ಸುಮ್ಮನೇ ಬಿಡ್ತೀರಾ? ನಿಮ್ಮ ಮತವನ್ನು ಮಾರಿಕೊಂಡವನನ್ನು ಸುಮ್ಮನೇ ಬಿಡ್ತೀರಾ? ನಿಮಗೆ ದ್ರೋಹ ಬಗೆದವನನ್ನು ಸುಮ್ಮನೇ ಬಿಡ್ತೀರಾ? ನಿಮ್ಮ ಸ್ವಾಭಿಮಾನ ಮಾರಿದವನನ್ನು ಸುಮ್ಮನೇ ಬಿಡ್ತೀರಾ? ಐದನೇ ತಾರೀಕು ಮತವನ್ನು ಒತ್ತಿದಾಗ ಬರುವ ಸದ್ದು ಅದು ಮೋದಿ ಸಾಹೇಬ್ರಿಗೆ ಕೇಳಬೇಕು. ಡಿಕೆ ಶಿವಕುಮಾರ್ 80 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾನೆ. ಅದಕ್ಕಿಂತ ಹೆಚ್ಚಿನ ಅಂತರದಲ್ಲಿ ಮತ ಹಾಕಿ ಆಂಜಿನಪ್ಪನನ್ನು ಗೆಲ್ಲಿಸಿ ತೋರಿಸಬೇಕು. ಆ ಮೂಲಕ ಈ ಮಾತೃ ದ್ರೋಹಿಗಳನ್ನು ಸಾರಾಸಗಟಾಗಿ ನಿರಾಕರಿಸಿ.
ಮಹಾರಾಷ್ಟ್ರ, ಗುಜರಾತಿನಲ್ಲಿ ಇದೇ ರೀತಿ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಸೇರಿದವರಿಗೆ ಮತದಾರರು ಪಾಠ ಕಲಿಸಿದ್ದಾರೆ. ಚುನಾವಣೆಯಲ್ಲಿ ಅಣ್ಣಾ ನೀನು ಪಕ್ಷಕ್ಕೆ ಮೋಸ ಮಾಡಿದ್ದೀಯಾ, ಪಕ್ಷಕ್ಕೆ ಮೋಸ ಮಾಡಿದರೆ ತಾಯಿಗೆ ಮೋಸ ಮಾಡಿದಂತೆ ನಿನ್ನನ್ನು ಕ್ಷಮಿಸುವುದಿಲ್ಲ ಅಂತಾ ಅವರಿಗೆ ಬಿಸಿ ಮುಟ್ಟಿಸಿದ್ದಾರೆ. ಅದೇ ರೀತಿ ಇವತ್ತು ಇಲ್ಲಿರುವ ಎಲ್ಲ ಯುವಕರು, ತಾಯಂದಿರು ಅವರಿಗೆ ಪಾಠ ಕಲಿಸಬೇಕು.
ಇವತ್ತು ನೀವೆಲ್ಲರೂ ಆಂಜಿನಪ್ಪಗೆ ಆಶೀರ್ವಾದ ಮಾಡಬೇಕು. ರಾಮನ ಭಂಟ ಆಂಜನೇಯ. ಇವತ್ತು ಜಗತ್ತಿನಲ್ಲಿ ರಾಮನ ತಂದೆಯ ದೇವಾಲಯ ಎಲ್ಲಿಯೂ ಇಲ್ಲ. ಹೆಚ್ಚು ದೇವಾಲಯ ಇರುವುದು ರಾಮನ ಭಂಟ ಆಂಜನೇಯನಿಗೆ. ಅದೇ ರೀತಿ ಆಂಜಿನಪ್ಪ ನಿಮ್ಮ ಸೇವೆ ಮಾಡಲು ಒಂದು ಅವಕಾಶ ಕೊಡಿ ಅಂತಾ ಕೇಳಿಕೊಳ್ಳುತ್ತೇನೆ.
ಇವತ್ತು ಶ್ರೀಮತಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಎರಡು ಬಾರಿ ಅವರನ್ನು ದೇಶದ ಪ್ರಧಾನಿ ಮಾಡಲು ಎರಡು ಬಾರಿ ಮತ ನೀಡಿದರು. ಅಬ್ದುಲ್ ಕಲಾಂ ಅವರು ಕರೆದು ನಿಮಗೆ ಎಲ್ಲ ಸಂಸದರ ಬೆಂಬಲ ಇದೆ. ಅಧಿಕಾರ ಮಾಡಿ ಅಂತಾ ಪತ್ರ ಬರೆದರು. ಆದರೆ ಅವರು ಈ ದೇಶ ಉದ್ಧಾರ ಆಗಬೇಕು, ಯುವಕರಿಗೆ ಉದ್ಯೋಗ ಸಿಗಬೇಕು. ಒಬ್ಬ ಆರ್ಥಿಕ ತಜ್ಞ ಪ್ರಧಾನಮಂತ್ರಿ ಆಗಬೇಕು ಅಂತಾ ಪ್ರಧಾನ ಮಂತ್ರಿ ಸ್ಥಾನವನ್ನು ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಆ ಹೆಣ್ಣು ಮಗಳು ಈ ಆಂಜಿನಪ್ಪಗೆ ಹಸ್ತದ ಗುರುತನ್ನು ಕೊಟ್ಟಿ ಕಳುಹಿಸಿದ್ದಾಳೆ. ಇದು ಡಿಕೆ ಶಿವಕುಮಾರ್ ಕೊಟ್ಟಿದ್ದಲ್ಲ. ದಿನೇಶ್ ಕೊಟ್ಟಿದ್ದಲ್ಲ, ನಾವ್ಯಾರು ಕೊಟ್ಟಿದ್ದಲ್ಲ. ಈ ದೇಶಕ್ಕೋಸ್ಕರ ತ್ಯಾಗ ಮಾಡಿದ ಇಂದಿರಾಗಾಂಧಿ ಸೊಸೆ, ರಾಜೀವ್ ಗಾಂಧಿ ಅವರ ಧರ್ಮಪತ್ರಿ ಆ ತಾಯಿ ಸೋನಿಯಾ ಗಾಂಧಿ ಅವರು ಕೊಟ್ಟಿದ್ದಾರೆ.
ಇವತ್ತು ನಾನು, ಮುನಿಯಪ್ಪ, ರೆಡ್ಡಿ ಅವರು ಹೇಳುತ್ತಿದ್ದಾರೆ, ನಾವೆಲ್ಲರೂ ಜತೆಯಲ್ಲಿರುತ್ತೇವೆ. ನಾವು ಆಂಜನಪ್ಪನನ್ನು ಕೈಬಿಡುವುದಿಲ್ಲ. ಆತ ತನ್ನ ಚರ್ಮವನ್ನು ಪಾದರಕ್ಷೆ ಮಾಡಿಕೊಂಡು ನಿಮಗಾಗಿ ದುಡಿಯಬೇಕು ಆ ರೀತಿ ಮಾಡುತ್ತೇವೆ.