ಆರ್‌ಟಿಓ ಚೆಕ್ ಪೋಸ್ಟ್‌ಗೆ ಹೋಗಿ ಆವಾಜ್ ಹಾಕಿದ ಅಬಕಾರಿ ಸಬ್ ಇನ್ಸಪೆಕ್ಟರ್….
ಅಬಕಾರಿ ಇಲಾಖೆ ಸಬ್ ಇನ್ಸ್ಪೆಕ್ಟರ್ಆರ್ಟಿಓ ಚೆಕ್ಪೋಸ್ಟ್ ಗೆ ನುಗ್ಗಿ ಸ್ಪಿರಿಟ್ ಲಾರಿಗಳನ್ನು ಬಿಡಿಸುವ ಸಂಬಂಧ ಆವಾಜ್ ಹಾಕಿದ ಘಟನೆ ವಿಜಯಪುರ ಜಿಲ್ಲೆಯ ಅಣಚಿ ಕ್ರಾಸ್ ಬಳಿ ನಡೆದಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿ ಬರುವ ಅಣಚಿ ಕ್ರಾಸ್ ಬಳಿ ಅಬಕಾರಿ ಮತ್ತು ಆರ್ಟಿಓ ಚೆಕ್ಪೋಸ್ಟ್ಗಳಿವೆ. ಇಲ್ಲಿ ಸ್ಪಿರಿಟ್ ಸಾಗಿಸುತ್ತಿದ್ದ ಸುಮಾರು 35 ಲಾರಿಗಳನ್ನು ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿ ಕಳುಹಿಸಿದ್ದರು. ಆದರೆ, ಇದರ ಪಕ್ಕದಲ್ಲಿಯೇ ಇರುವ ಆರ್ಟಿ ಓ ಅಧಿಕಾರಿಗಳು ದಾಖಲಾತಿ ಪರಿಶೀನಲೆಗಾಗಿ ಕೆಲವು ವಾಹನಗಳನ್ನು ತಪಾಸಣೆಗೆ ತಡೆದಿದ್ದಾರೆ. ಈ ವಿಷಯ ತಿಳಿದು ಆರ್ ಟಿ ಓ ಚೆಕ್ಪೋಸ್ಟ್ಗೆ ದೌಡಾಯಿಸಿದ ಅಬಕಾರಿ ಸಬ್ಇನ್ಸ್ಪೆಕ್ಟರ್ ಸದಾಶಿವ ಕೊರ್ತಿ, ಈ ವಾಹನಗಳನ್ನು ಯಾಕೆ ತಡೆದಿದ್ದೀರಿ? ನೀವು ಲಂಚಕ್ಕಾಗಿ ಈ ವಾಹನಗಳನ್ನು ತಡೆದಿದ್ದೀರಿ ಎಂದು ಆರೋಪಿಸಿ ಆವಾಜ್ ಹಾಕಿದ್ದಾನೆ. ಅಲ್ಲದೇ, ಈ ಕುರಿತು ಮೊಬೈಲಿನಲ್ಲಿ ವಿಡಿಯೋ ರೆಕಾರ್ಡ್ ಮಾಡುವಂತೆ ತನ್ನ ಜೊತೆ ಬಂದಿದ್ದ ಸಿಬ್ಬಂದಿಗೆ ಸೂಚಿಸಿದ್ದಾನೆ.
ಆಗ ಸಿಟ್ಟಾದ ಆರ್ಟಿಓ ಅಧಿಕಾರಿಗಳು ನಮ್ಮ ಚೆಕ್ಪೋಸ್ಟ್ಗೆ ಬಂದು ಯಾಕೆ ಆವಾಜ್ ಹಾಕುತ್ತಿದ್ದೀರಿ ಎಂದು ಪ್ರತ್ಯುತ್ತರ ನೀಡಿದ್ದಾರೆ. ಆಗ ಇಬ್ಬರ ಮಧ್ಯೆಯೂ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಅಬಕಾರಿ ಸಬ್ಇನ್ಸ್ಪೆಕ್ಟರ್ ಸದಾಶಿವ ಕೊರ್ತಿ ತನ್ನ ವ್ಯಾಪ್ತಿ ಮೀರಿ ಆರ್ ಟಿ ಓ ಚೆಕ್ಪೋಸ್ಟ್ ಗೆ ನುಗ್ಗಿ ಆವಾಜ್ ಹಾಕಿದ್ದು ಮಾತ್ರ ಈಗ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.