FACT CHECK | ಕಾಂಗ್ರೆಸ್ ದಲಿತರಿಗೆ ಮತದಾನದ ಹಕ್ಕನ್ನು ಬೇಡ ಎಂದು ಹೇಳಿತ್ತೇ? ಬಲಪಂಥೀಯ ಮಾಧ್ಯಮವೊಂದು ಹಂಚಿಕೊಂಡ ಪೋಸ್ಟ್‌ನ ಅಸಲೀಯತ್ತೇನು? ಈ ಸ್ಟೋರಿ ಓದಿ

ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ದಲಿತರಿಗೆ ಮತದಾನದ ಹಕ್ಕು ಬೇಡ ಎಂದು ಕಾಂಗ್ರೆಸ್ ಹೇಳಿತ್ತು ಎಂಬ ಪತ್ರಿಕಾ ವರದಿಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಕನ್ನಡದ ಬಲಪಂಥೀಯ ಮಾಧ್ಯಮ, ಬಿಜೆಪಿ ಬಿಂಬಲಿತ ಟಿವಿ ವಿಕ್ರಮ ಎಂಬ ಡಿಜಿಟಲ್ ಮೀಡಿಯಾವೊಂದು ದಲಿತರ ಮತದಾನದ ಹಕ್ಕನ್ನು ಕಾಂಗ್ರೆಸ್ ಬೇಡ ಎಂದಿತ್ತು “ಅಂದು ಕಾಗ್ರೆಸ್ ದಲಿತತರನ್ನು ಯಾವ ರತಿ ನಡೆಸಿಕೊಂಡಿತ್ತು ನೋಡಿ,ಇಂತವರಿಗೆ ಬುದ್ದಿ ಕಲಿಸಬೇಕೆಂದರೆ ಕಾಂಗ್ರೆಸ್‌ಗೆ ಓಟ್‌ ಹಾಕುವುದನ್ನು ನಿಲ್ಲಿಸಬೇಕು” ಎಂಬ ಪ್ರತಿಪಾದನೆಯೊಂದಿಗೆ ಹೊಸದಿಗಂತ ಪ್ರತಿಕೆಯಲ್ಲಿ ಪ್ರಕಟವಾದ ಲೇಖನವನ್ನು ಹಂಚಿಕೊಂಡಿದೆ.

ಹೊಸ ದಿಗಂತ ಪತ್ರಿಕೆಯ ಲೇಖನವನ್ನು ಹಲವು ಸಾಮಾಜಿಕ ಮಾಧ್ಯಮಗಳು ಹಂಚಿಕೊಂಡು ಕಾಂಗ್ರೆಸ್‌ ದಲಿತ ವಿರೋಧಿ ಎಂಬ ಭಾವನೆ ಮೂಡುವಂತೆ ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ. RSS ದಲಿತ ವಿರೋಧಿಗಳು ಎಂದು ಅಪಪ್ರಚಾರ ಮಾಡುವ ಕಾಂಗ್ರೆಸ್ಸಿಗರೇ ಮತ್ತೆ ಇದರ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಇತ್ತೀಚೆಗೆ ಹೊಸದಿಗಂತ  ದಿನ ಪತ್ರಿಕೆಯಲ್ಲಿ ಸುರೇಶ್ ಅವಧಾನಿ ಬರೆದ “ದಲಿತರಿಗೆ ಮತದಾನದ ಹಕ್ಕು ಬೇಡ ಎಂದಿತ್ತು ಕಾಂಗ್ರೆಸ್!” ಎಂಬ ಲೇಖನವನ್ನು ಹಲವು ಬಲಪಂಥೀಯ ಪ್ರತಿಪಾದಕರು ತಮ್ಮ ಫೇಸ್‌ಬುಕ್ ಪುಟಗಳಲ್ಲಿ “ಕಾಂಗ್ರೆಸ್ಸಿಗರಿಗೆ ಇಷ್ಟವಿಲ್ಲದಿದ್ದರೂ ದಲಿತರಿಗೆ ಮತದಾನದ ಹಕ್ಕು ಸಿಗುವಂತೆ ಮಾಡಿದ ಅಂಬೇಡ್ಕರ್ ಅವರನ್ನೇ ಚುನಾವಣೆಯಲ್ಲಿ ಸೋಲಿಸಿಬಿಟ್ಟರು..!” ಎಂದು ಪ್ರತಿಪಾದಿಸಿದ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪ್ರತಿಪಾದನೆಯನ್ನು ಪರಿಶೀಲಿಸಲು  ಗೂಗಲ್ ಸರ್ಚ್ ಮಾಡಿದಾಗ, ಸೈಮನ್ ಆಯೋಗವು ಸರ್ ಜಾನ್ ಸೈಮನ್ ಅವರ ಅಧ್ಯಕ್ಷತೆಯಲ್ಲಿ ಬ್ರಿಟಿಷ್ ಸಂಸತ್ತಿನ ಏಳು ಸದಸ್ಯರ ಗುಂಪಾಗಿತ್ತು. ಬ್ರಿಟನ್ನಿನ ಸ್ವಾಧೀನದಲ್ಲಿ ಸಾಂವಿಧಾನಿಕ ಸುಧಾರಣೆಯನ್ನು ಅಧ್ಯಯನ ಮಾಡಲು ಆಯೋಗವು 1928 ರಲ್ಲಿ ಭಾರತಕ್ಕೆ ಬಂದಿತು. ಆರಂಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್, ಪೆರಿಯಾರ್ ಮತ್ತು ಚೌಧರಿ ಛೋಟು ರಾಮ್, ಸೈಮನ್ ಆಯೋಗವನ್ನು ಬೆಂಬಲಿಸಿದರು ಎಂಬ ಮಾಹಿತಿ ಲಭ್ಯವಾಗಿದೆ

ಆದರೆ ಆಯೋಗದಲ್ಲಿ ಭಾರತೀಯ ಸದಸ್ಯರಿಲ್ಲದ ಕಾರಣ ಮುಸ್ಲಿಂ ಲೀಗ್ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇದನ್ನು ಬಲವಾಗಿ ವಿರೋಧಿಸಿತು. ಅಷ್ಟೇ ಅಲ್ಲದೆ ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾಮಾನ್ಯ ಭಾರತೀಯರು ಸೇರಿದಂತೆ ಈ ಆಯೋಗವನ್ನು ವಿರೋಧಿಸಿ “ಸೈಮನ್ ಗೋ ಬ್ಯಾಕ್” ಎಂಬ ಚಳುವಳಿಯನ್ನು ಹಮ್ಮಿಕೊಂಡರು. (ಈ ಹೋರಾಟದ ಸಂದರ್ಭದಲ್ಲೇ ಲಾಲ ಲಜಪತ್ ರಾಯರು ಲಾಠಿ ಚಾರ್ಜ್‌ನಿಂದ ತೀವ್ರವಾಗಿ ಗಾಯಗೊಂಡು ಅಸುನೀಗಿದರು.)

1930ರ ಮೇ ತಿಂಗಳಲ್ಲಿ ಸೈಮನ್ ಆಯೋಗವು ತನ್ನ ವರದಿಯಲ್ಲಿ ದ್ವಿಪ್ರಭುತ್ವ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಪ್ರಸ್ತಾಪಿಸಿತು ಮತ್ತು ವಿವಿಧ ಪ್ರಾಂತ್ಯಗಳಲ್ಲಿ ಪ್ರಾತಿನಿಧಿಕ ಸರ್ಕಾರವನ್ನು ಸ್ಥಾಪಿಸಲು ಸಲಹೆ ನೀಡಿತು. ಸೈಮನ್ ಆಯೋಗದ ವರದಿಗೆ ಮುಂಚೆಯೇ ಮೋತಿಲಾಲ್ ನೆಹರು 1928ರ ಸೆಪ್ಟೆಂಬರ್ ನಲ್ಲಿ ಆಯೋಗದ ಆರೋಪಗಳನ್ನು ಎದುರಿಸಲು ತಮ್ಮ ‘ನೆಹರೂ ವರದಿ’ಯನ್ನು ಸಲ್ಲಿಸಿದ್ದರು. ‘ನೆಹರೂ ವರದಿ’ ಸಂಪೂರ್ಣ ಆಂತರಿಕ ಸ್ವಯಂ ಆಡಳಿತದೊಂದಿಗೆ ಭಾರತಕ್ಕೆ ಡೊಮಿನಿಯನ್ ಸ್ಥಾನಮಾನಕ್ಕಾಗಿ ಒತ್ತಾಯಿಸಿತು. ಹಾಗೂ ಸಾರ್ವತ್ರಿಕ ವಯಸ್ಕ ಮತದಾನದ ಬೇಡಿಕೆಯನ್ನು ಮುಂದಿಟ್ಟಿತು ಮತ್ತು ಇತರ ಶಿಫಾರಸುಗಳ ನಡುವೆ ಪ್ರತ್ಯೇಕ ಕೋಮುವಾರು ಅಥವಾ ಸಮುದಾಯವಾರು ಮತದಾನದ ಬೇಡಿಕೆಯನ್ನು ತಿರಸ್ಕರಿಸಿತು.

ಮೋತಿಲಾಲ್‌ “ನೆಹರೂ” ವರದಿಯು ಸಾರ್ವತ್ರಿಕ ಮತದಾನವನ್ನು ಶಿಫಾರಸ್ಸು ಮಾಡಿತೇ ವಿನಃ ದಲಿತರಿಗೆ ಮತದಾನದ ಹಕ್ಕು ಬೇಡ ಎಂದು ಯಾರೂ ವಾದಿಸಿಲ್ಲ. ಡಾ. ಬಿ. ಆರ್. ಅಂಬೇಡ್ಕರ್ ಸಹ ಸೈಮನ್ ಆಯೋಗದ ಮುಂದೆ ಎಲ್ಲರಿಗೂ ಮತದಾನದ ಹಕ್ಕೊತ್ತಾಯ ಮುಂದಿಟ್ಟಿದ್ದರು. ಆದ್ದರಿಂದ ಕಾಂಗ್ರೆಸ್ ದಲಿತರಿಗೆ ಮತದಾನದ ಹಕ್ಕು ಬೇಡ ಎಂದಿತ್ತು ಎಂಬುದು ಸುಳ್ಳು.

ಒಟ್ಟಾರೆಯಾಗಿ ಹೆಳುವುದಾದರೆ, ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಸೈಮನ್ ಆಯೋಗವನ್ನು ವಿರೋಧಿಸಿ ನಡೆದ “ಸೈಮನ್ ಗೋ ಬ್ಯಾಕ್” ಚಳವಳಿಯು ಇತಿಹಾಸದಲ್ಲಿ ಮಹತ್ವದ ಘಟನೆಯಾಗಿ ಉಳಿದಿದೆ. ಆದರೆ BJP ಮತ್ತು RSS ಬೆಂಬಲಿಗರು ಈ ಚಳವಳಿಯನ್ನು ಕಾಂಗ್ರೆಸ್ ದಲಿತ ವಿರೋಧಿಯಾಗಿತ್ತು ಎಂದು ಬಿಂಬಿಸುವ ಸಲುವಾಗಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ವಾಸ್ತವವಾಗಿ ಕಾಂಗ್ರೆಸ್‌ ಸಾರ್ವತ್ರಿಕ ವಯಸ್ಕ ಮತದಾನದ ಬೇಡಿಕೆಯನ್ನು ಮುಂದಿಟ್ಟಿತ್ತು. ಇದರಿಂದ ಎಲ್ಲರಿಗೂ ಮತದಾನದ ಹಕ್ಕು ಸಿಗುತ್ತಿತ್ತು. ಆದರೆ ಸೈಮನ್ ಆಯೋಗದ ಶಿಫಾರಸ್ಸನಲ್ಲಿ ಪ್ರತ್ಯೇಕ ಕೋಮುವಾರು ಅಥವಾ ಸಮುದಾಯವಾರು ಮತದಾನದ ಬೇಡಿಕೆಯ ಅಂಶಗಳು ಇದ್ದರಿಂದ ಕಾಂಗ್ರೆಸ್  ಸೈಮನ್ ಆಯೋಗದ ಶಿಫಾರಸ್ಸನ್ನು ವಿರೋಧಿಸಿತ್ತು.  ಹಾಗಾಗಿ ಕಾಂಗ್ರೆಸ್‌ ದಲಿತರಿಗೆ ಮತದಾನದ ಹಕ್ಕನ್ನು ಬೇಡ ಎಂದು ಹೇಳಿತ್ತು ಎಂಬುದು ಸುಳ್ಳು.

ಪ್ರತಿ ಚುನಾವಣೆ ಸಂದರ್ಭದಲ್ಲೂ ಇದೇ ಪ್ರತಿಪಾದನೆಯೊಂದಿಗೆ ಸಂಘ ಪರಿವಾರ ಮತ್ತು ಬಿಜೆಪಿ ಬೆಂಬಲಿತ ಸಾಮಾಜಿಕ ಮಾಧ್ಯಮಗಳು ಮತ್ತು ಡಿಜಿಟಲ್ ಮೀಡಿಯಾಗಳು ಹಂಚಿಕೊಳ್ಳುವುದನ್ನು ನೋಡಬಹುದು.

ಫ್ಯಾಕ್ಟ್‌ಚೆಕ್ : ದಲಿತರಿಗೆ ಮತದಾನದ ಹಕ್ಕು ನೀಡಬಾರದು ಎಂದು ಕಾಂಗ್ರೆಸ್ ಹೇಳಿತ್ತು ಎಂಬುದು ಸುಳ್ಳು

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights