FACT CHECK | BMTC ಬಸ್ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದು ನಿಜವೇ?
ಜನರ ದೊಡ್ಡ ಗುಂಪೊಂದು ಬಸ್ಸುಗಳ ಮೇಲೆ ಕಲ್ಲು ತೂರಾಟ ನೆಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಮುಸ್ಲಿಂ ಮಹಿಳೆ ತನ್ನ ಮನೆಯ ಎದುರು ಬಸ್ ನಿಲ್ಲಿಸಲು ಹೇಳಿದಳು ಪಾಪ ಡ್ರೈವರ್ ನೇರ ಬಸ್ ಸ್ಟಾಂಡ್ ನಲ್ಲಿ ನಿಲ್ಲಿಸಿದ… ನಂತರ ಕತೆ ನೋಡಿ. ಸರ್ಕಾರದ ಆಸ್ತಿಗಳನ್ನ ಉಗ್ರಾಗಾಮಿಗಳಂತೆ ಹಾಳು ಮಾಡುವ ಇವರಿಗೆ ಯಾವ ಶಿಕ್ಷೆಯು ಇಲ್ಲಾ..ಇದು ನಮ್ಮ ಕರುನಾಡಿನ ದುರಂತ ,ಯೋಗಿ ಆದಿತ್ಯನಾಥ ಅಂತ CM ನಾಯಕ ಯಾಕೆ ಬೇಕು ಅಂತ ಈಗ ಯೋಚಿಸಿ! ಕಾಂಗ್ರೆಸ್ ನ ಶಾಂತಿ ಧೂತ ಬ್ರದರ್ಸ್
‘ಮಹಿಳೆಯರಿಗೆ ಕರ್ನಾಟಕ ಸರ್ಕಾರವು ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿದೆ. ಮುಸ್ಲಿಂ ಮಹಿಳೆಯೊಬ್ಬರು ಬಸ್‌ವೊಂದನ್ನು ನಿಲ್ಲಿಸಲು ಕೇಳಿಕೊಂಡರು. ಬಸ್ ಚಾಲಕ ಬಸ್ ನಿಲ್ಲಿಸದಿದ್ದ ಪರಿಣಾಮವಿದು’ ಎಂಬ ಬರಹದೊಂದಿಗೆ, ಬಸ್‌ವೊಂದಕ್ಕೆ ಮುಸ್ಲಿಮರು ಕಲ್ಲು ತೂರಾಟ ನಡೆಸುತ್ತಿರುವ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ವಾಟ್ಸಾಪ್‌ಗಳಲ್ಲಿ ಇದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಕರ್ನಾಟಕ ಸರ್ಕಾರ ಶಕ್ತಿ ಯೋಜನೆಯನ್ನು ಗುರಿಯಾಗಿಸಿಕೊಂಡು ಈ ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಜನರ ಗುಂಪು ಕಲ್ಲು ತೂರಾಟ ನಡೆಸುತ್ತಿರುವ ದೃಶ್ಯದಲ್ಲಿ ಬಸ್ಸಿನ ಬಣ್ಣ ನೀಲಿ ಇರುವುದರಿಂದ ಕರ್ನಾಟಕದ ಬಿಎಂಟಿಸಿ ಓಲ್ವೋ ಬಸ್‌ನಂತೆ ಕಾಣುತ್ತಿದ್ದು, ಇದನ್ನೆ ಆಧಾರವಾಗಿಟ್ಟುಕೊಂಡು ಗೂಲ್ ಸರ್ಚ್ ಮಾಡಿದಾಗ ಈ ಘಟನೆ ಕರ್ನಾಟಕಕ್ಕೆ ಸಂಬಂಧಿಸಿಲ್ಲ ಎಂದು ತಿಳಿದುಬಂದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ಮುಖ್ಯವಾಹಿನಿ ಮತ್ತು ಪತ್ರಿಕೆಗಳಲ್ಲಿ ಸರ್ಚ್ ಮಾಡಿದಾಗ, ಇಂತಹ ಘಟನೆಗಳು ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾದ ಯಾವ ವರದಿಗಳು ಲಭ್ಯವಾಗಿಲ್ಲ. ಹಾಗಿದ್ದರೆ ಈ ಘಟನೆ ಎಲ್ಲಿ ನಡೆದಿದೆ ಎಂದು ಮತ್ತಷ್ಟು ಸರ್ಚ್ ಮಾಡಿದಾಗ, ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ ಎಂದು ಪ್ರಕಟವಾದ ಸುದ್ದಿ ವರದಿಗಳು ಲಭ್ಯವಾಗಿವೆ.
ಗುಜರಾತ್‌ನ ಸೂರತ್‌ನಲ್ಲಿ ಗುಂಪು ಹಲ್ಲೆ, ಹತ್ಯೆಯನ್ನು ಖಂಡಿಸಿ, 2019ರ ಜುಲೈನಲ್ಲಿ ದೊಡ್ಡ ಮಟ್ಟದ ಶಾಂತಿಯುತ ಪ್ರತಿಭಟನೆ ಆಯೋಜಿಸಲಾಗಿತ್ತು. ಆದರೆ, ಪ್ರತಿಭಟನೆಗೆ ಅನುಮತಿ ಇಲ್ಲ ಎಂದು ಪೊಲೀಸರು ಜನರನ್ನು ಚದುರಿಸಲು ಮುಂದಾದಾಗ ಈ ಘಟನೆ ನಡೆದಿತ್ತು, ಈ ಹಳೆಯ ಘಟನೆಯನ್ನು ಕರ್ನಾಟಕದ ಶಕ್ತಿಯೋಜನೆಗೆ ಅನಗತ್ಯವಾಗಿ ಲಿಂಕ್ ಮಾಡಿ ಸುಳ್ಳು ಸಂದೇಶದೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.
ಇದೇ ವಿಡಿಯೊವು 2019ರಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿತ್ತು. ಅಂದೂ ಕೂಡ ಹಲವು ಸುದ್ದಿ ಸಂಸ್ಥೆಗಳು ಈ ವಿಡಿಯೊದ ಫ್ಯಾಕ್ಟ್‌ಚೆಕ್ ಪ್ರಕಟಿಸಿದ್ದವು. ಆಗ ಈ ವಿಡಿಯೊವು ಮುಂಬೈನಲ್ಲಿ ನಡೆದಿದೆ ಎಂದು ಹಂಚಿಕೆಯಾಗಿತ್ತು. ಬಾಂದ್ರದಿಂದ ಬಿಕೆಎಸ್‌ವರೆಗೆ ಬಸ್ ಸಂಚಾರ ಆರಂಭಿಸಲಾಗಿದೆ. ಈ ಮಾರ್ಗದಲ್ಲಿ ಆಟೊ ಓಡಿಸುತ್ತಿದ್ದ ಮುಸ್ಲಿಂ ಆಟೊ ಚಾಲಕರು ಬಸ್‌ಗೆ ಕಲ್ಲು ಹೊಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, 2019ರಲ್ಲಿ ಗುಜರಾತ್‌ನ ಸೂರತ್‌ನಲ್ಲಿ ನಡೆದ ಘಟನೆಯ ದೃಶ್ಯಗಳನ್ನು ಕರ್ನಾಟಕದಲ್ಲಿ ಮುಸ್ಲಿಮರಿಂದ ಬಸ್ಸಿನ ಮೇಲೆ ಕಲ್ಲು ತೂರಾಟ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ದೇವಸ್ಥಾನವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ಸುಳ್ಳು ಸುದ್ದಿ ಹಂಚಿಕೆ