ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆಗಿದ್ದ ರಹಸ್ಯ ಸುರಂಗ ಮಾರ್ಗ ಪತ್ತೆ!

ದೆಹಲಿ ವಿಧಾನಸಭೆಯಲ್ಲಿ ಸುರಂಗವೊಂದು ಗುರುವಾರ ಪತ್ತೆಯಾಗಿದೆ. ಈ ಸುರಂಗ ಮಾರ್ಗವು ವಿಧಾನಸಭೆಯಿಂದ ಕೆಂಪು ಕೋಟೆಗೆ ಸಂಪರ್ಕಿಸುತ್ತದೆ ಎಂದು ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಹೇಳಿರುವುದಗಿ ಎಎನ್‌ಐ ವರದಿ ಮಾಡಿದೆ.

ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕಲು ಈ ಸುರಂಗವನ್ನು ಬಳಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

“ನಾನು 1993ರಲ್ಲಿ ಶಾಸಕರಾಗಿ ಆಯ್ಕೆಯಾದಾಗ ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕಿಸುವ ಸುರಂಗದ ಬಗ್ಗೆ ಕೇಳಿದ್ದೆ. ನಾನು ಅದರ ಇತಿಹಾಸವನ್ನು ಹುಡುಕಲು ಪ್ರಯತ್ನಿಸಿದ್ದೆ. ಆದರೆ ಅದರ ಬಗ್ಗೆ ಸ್ಪಷ್ಟತೆ ಇರಲಿಲ್ಲ” ಎಂದು ಅವರು ತಿಳಿಸಿದ್ದಾರೆ.

“ಈಗ ನಮಗೆ ಸುರಂಗದ ದ್ವಾರ ಪತ್ತೆಯಾಗಿದೆ. ಆದರೆ ಮೆಟ್ರೋ ಯೋಜನೆಗಳು ಮತ್ತು ಒಳಚರಂಡಿ ಸ್ಥಾಪನೆಯಿಂದಾಗಿ ಸುರಂಗದ ಎಲ್ಲಾ ಮಾರ್ಗಗಳು ನಾಶವಾಗಿದ್ದು, ನಾವು ಅದನ್ನು ಮತ್ತಷ್ಟು ಅಗೆಯುತ್ತಿಲ್ಲ” ಎಂದು ಅವರು ಹೇಳಿದ್ದಾರೆ.

1912ರಲ್ಲಿ ಕೋಲ್ಕತ್ತಾದಿಂದ ದೆಹಲಿಗೆ ರಾಜಧಾನಿಯನ್ನು ವರ್ಗಾಯಿಸಿದ ನಂತರ ಕೇಂದ್ರ ಶಾಸಕಾಂಗ ಸಭೆಯಾಗಿ ಬಳಸಲಾಗುತ್ತಿದ್ದ ದೆಹಲಿ ವಿಧಾನ ಸಭೆಯನ್ನು 1926 ರಲ್ಲಿ ನ್ಯಾಯಾಲಯವಾಗಿ ಪರಿವರ್ತಿಸಲಾಗಿತ್ತು. ಬ್ರಿಟಿಷರು ಈ ಸುರಂಗವನ್ನು ಸ್ವಾತಂತ್ರ್ಯ ಹೋರಾಟಗಾರರನ್ನು ನ್ಯಾಯಾಲಯಕ್ಕೆ ಕರೆತರಲು ಬಳಸಿದ್ದರು ಎಂದು ಗೋಯೆಲ್ ಮಾಹಿತಿ ನೀಡಿದ್ದಾರೆ.

“ಇಲ್ಲಿ ಗಲ್ಲು ಶಿಕ್ಷೆ ನೀಡುತ್ತಿದ್ದ ಕೋಣೆಯಿತ್ತು ಎಂಬುದರ ಬಗ್ಗೆ ನಮಗೆಲ್ಲರಿಗೂ ತಿಳಿದಿತ್ತು. ಆದರೆ ಅದನ್ನು ಎಂದಿಗೂ ತೆರೆಯಲಿಲ್ಲ. ಈಗ ಸ್ವಾತಂತ್ರ್ಯದ 75 ನೇ ವರ್ಷವಾಗಿದೆ. ಹೀಗಾಗಿ, ನಾನು ಆ ಕೊಠಡಿಯನ್ನು ಪರೀಕ್ಷಿಸಲು ನಿರ್ಧರಿಸಿದೆ. ನಾವು ಆ ಕೊಠಡಿಯನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವವನ್ನು ನೀಡುವ ದೇಗುಲವಾಗಿ ಬದಲಾಯಿಸುವ ಉದ್ದೇಶ ಹೊಂದಿದ್ದೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರೈತ ಮಹಿಳೆಗೆ ಪರಿಹಾರ ವಿಳಂಬ: ಆಂಧ್ರದ ಐವರು ಐಎಎಸ್‌ ಅಧಿಕಾರಿಗಳಿಗೆ ಜೈಲು ಶಿಕ್ಷೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights