ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಪ್ರಯತ್ನ ಆರೋಪ; ಸಂಯಮ-ನಂಬಿಕೆ-ಪಾರದರ್ಶಕತೆ ತೋರಬೇಕಾದ ಸಮಯ ಇದು

ದೆಹಲಿಯಲ್ಲಿ ನಡೆದ ತಲ್ಬೀಗಿ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಭಾಗಿಯಾದ ಕೆಲವರು ಸಾರಾಯಿಪಾಳ್ಯದ ಸಾದಿಕ್ ಲೇಔಟ್ ನಲ್ಲಿ ಇದ್ದಾರೆ ಮತ್ತು ಅವರಿಗೆ ಕೊವಿಡ್-19 ಸೋಂಕು ತಗಲಿರುವ ಸಾಧ್ಯತೆ ಇದೆ ಎಂದು ಶಂಕಿಸಿ ತಪಾಸಣೆ ಮಾಡಲು ತೆರಳಿದ್ದ ಆಶಾ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು) ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಪ್ರಯತ್ನಿಸಲಾಗಿದೆ ಎಂಬ ಆರೋಪ ಎಂದಿನಂತೆ ಕೆಲವು ಮಾಧ್ಯಮಗಳಲ್ಲಿ ಮತ್ತು ಕೆಲವು ರಾಜಕಾರಣಿಗಳ ನಡುವೆ ಕೋಮು ಬಣ್ಣ ಪಡೆದಿದೆ.

ಆಶಾ ಕಾರ್ಯಕರ್ತೆಯಾದ ಕೃಷ್ಣವೇಣಿ ಎಂಬುವವರ ಆರೋಪದ ಪ್ರಕಾರ ಸಾದಿಕ್ ಲೇಔಟ್ ನ ಮಸೀದಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಯಾವುದೇ ಮಾಹಿತಿ ನೀಡಬೇಡಿ ಎಂದು ಮಸೀದಿಯ ಮೂಲಕ ಸಂದೇಶ ನೀಡಲಾಗಿತ್ತು. ನಮ್ಮ ಬಳಿಯಿಂದ ಕೈಚೀಲ, ಮೊಬೈಲ್  ಗಳನ್ನು ಕಸಿದುಕೊಂಡು, ನಮ್ಮನ್ನು ಸುತ್ತುವರೆದು ಹಲ್ಲೆಗೆ ಪ್ರಯತ್ನ ಮಾಡಲಾಗಿತ್ತು ಎಂದು ಆರೋಪಿಸಿದ್ದರು.

ಈ ವಿಡಿಯೋವನ್ನು ಟ್ವೀಟ್ ಮಾಡಿದ್ದ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು “ಇಲ್ಲಿ ಜಾತಿ, ಮತ, ಧರ್ಮ ಮುಖ್ಯವಲ್ಲ. ನಿಮ್ಮ ವೈಯಕ್ತಿಕ ಹಿತಾಸಕ್ತಿ ಮುಖ್ಯವಲ್ಲ. ಕೋಟ್ಯಂತರ ಕನ್ನಡಿಗರ, ಭಾರತೀಯರ ಆರೋಗ್ಯ ಮುಖ್ಯ. ‌ಬೆಂಗಳೂರಿನ ಸಾಧಿಕ್ ಪಾಳ್ಯದಲ್ಲಿ ಕೆಲವು ಕಿಡಿಗೇಡಿಗಳು ಸೇರಿ ನರ್ಸ್ ಮೇಲೆ ಹಲ್ಲೆ ಮಾಡಿದ್ದು ಅತ್ಯಂತ ಹೇಯ ಕೃತ್ಯ. ಯಾರೇ ಆಗಲಿ, ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನುರೀತ್ಯ ಕ್ರಮ ಕೈಗೊಳ್ಳಲಿದ್ದೇವೆ.” ಎಂದು ಬರೆದಿದ್ದರು.

ನಂತರ ಕಾರ್ಯಕರ್ತೆಯ ಮನೆಗೆ ಭೇಟಿ ನೀಡಿದ್ದ ಬಿಜೆಪಿ ಮುಖಂಡರು ಮತ್ತು ಸಚಿವರಾದ ಸಿ ಎನ್ ಅಶ್ವತ್ಥನಾರಾಯಣ ಮತ್ತು ಆರ್ ಅಶೋಕ್ ಅವರಿಗೆ ಸಾಂತ್ವನ ಹೇಳಿದ್ದರು.

ಸಾಮಾನ್ಯವಾಗಿ ಇಂತಹ ಒತ್ತಡ ಮತ್ತು ಸೋಂಕಿನ ಭಯದ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಿರುವ ಸಂದರ್ಭದಲ್ಲಿ, ಅಲ್ಲಿನ ನಿವಾಸಿಗಳ ಜೊತೆಗೆ ನಡೆದ ಮಾತಿನ ಚಕಮಕಿಗೆ ಬೇಸತ್ತು ಆಶಾ ಕಾರ್ಯಕರ್ತೆ ಈ ಆರೋಪಗಳನ್ನು ಮಾಡಿದ್ದಾರೆಯೇ ಎಂಬ ಪ್ರಶ್ನೆಗಳು ಕೂಡ ಎದ್ದಿದ್ದವು. “ಅವರ ಮೇಲಾಗಲೀ ಅಥವಾ ಅವರ ಸಹ ಕಾರ್ಯಕರ್ತೆಯರ ಮೇಲಾಗಲೀ ಹಲ್ಲೆಯಾಗಿಲ್ಲ ಎಂದು ಆಶಾ ಕಾರ್ಯಕರ್ತೆ ಕೃಷ್ಣವೇಣಿ ನಮಗೆ ಹೇಳಿದ್ದಾರೆ, ಆ ಪ್ರದೇಶದಲ್ಲಿ ಯಾರಿಗೂ ಸೋಂಕಿನ ಲಕ್ಷಣ ಇಲ್ಲ ಎಂದು ಪರಿಶೀಲನೆಗೆ ಬಂದಿದ್ದ ತಂಡವನ್ನು ತಡೆದಾಗ ಅಲ್ಲಿನ ನಿವಾಸಿಗಳ ಜೊತೆಗೆ ನಡೆದ ಮಾತಿನ ಚಕಮಕಿ ಅದಾಗಿತ್ತು. ಅವರು ಶೀಘ್ರದಲ್ಲಿಯೇ ದೂರು ನೀಡಲಿದ್ದಾರೆ ಮತ್ತು ಅವರ ದೂರಿನ ಆಧಾರದ ಮೇಲೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಹೆಚ್ಚುವರಿ ಪೋಲಿಸ್ ಕಮಿಷನರ್ (ಪೂರ್ವ) ಎಸ್ ಮುರುಗನ್ ಹೇಳಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿತ್ತು.

ಈಗ ಈ ಸಂಬಂಧದಲ್ಲಿ ಹೆಣ್ಣೂರು ಪೋಲಿಸ್  ಠಾಣೆಯಲ್ಲಿ ಆರೋಗ್ಯ ನಿರೀಕ್ಷಕ ಮುನಿರಾಜು ಅವರು ಗುರುವಾರ ನೀಡಿರುವ ದೂರಿನ ಹಿನ್ನಲೆಯಲ್ಲಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಇದರ ಬಗ್ಗೆ ನಮ್ಮ ಜೊತೆಗೆ ಮಾತನಾಡಿದ ಅಲ್ಲಿ ನಿವಾಸಿ ಅಬ್ದುಲ್ ಹಫೀಜ್, ಹಲ್ಲೆಗೆ ಪ್ರಯತ್ನಿಸಲಾಗಿತ್ತು ಎಂಬ ಆರೋಪವನ್ನು ನಿರಾಕರಿಸುತ್ತಾರೆ. “ಇಲ್ಲಿ ಮೊದಲಿನಿಂದಲೂ ಎನ್ ಆರ್ ಸಿ ಮತ್ತು ಎನ್ ಪಿ ಆರ್ ಬಗ್ಗೆ ಚರ್ಚೆಗಳು ಆಗುತ್ತಿದ್ದವು. ಆಶಾ ಕಾರ್ಯಕರ್ತೆಯರು ಕೊರೊನ ಸೋಂಕಿನ ಪರಿಶೀಲನೆಗೆ ಬಂದಾಗ ಕೆಲವರಿಗೆ ಎನ್ ಪಿ ಆರ್ ಮಾಹಿತಿ ಸಂಗ್ರಹಿಸಲು ಬಂದಿದ್ದಾರೆ ಎಂದು ಗೊಂದಲವಾಗಿ ವಾದ ವಿವಾದ ಆಗಿದೆ. ಇಲ್ಲಿನ ನಿವಾಸಿಗಳು ಕಾರ್ಯಕರ್ತೆಯರ ಜೊತೆಗೆ ಬಹಳ ಗೌರವಪೂರ್ವಕವಾಗಿ ನಡೆದುಕೊಂದಿದ್ದಾರೆ. ಅದನ್ನು ವಿಡಿಯೋದಲ್ಲೂ ಕಾಣಬಹುದಾಗಿದೆ. ಫೋನ್ ನಂಬರ್ ತೆಗೆದುಕೊಳ್ಳುತ್ತಿರುವುದರ ಬಗ್ಗೆ ಆಗಿರುವ ಗೊಂದಲ ಇದು, ಅವರು ಆರೋಗ್ಯ ತಪಾಸಣೆಗೆ ಬರುತ್ತಿರುವ ಕಾರ್ಯಕರ್ತೆಯರು ಯಾರೂ ಭೀತಿಗೆ ಒಳಗಾಗಬೇಕಿಲ್ಲ ಎಂದು  ನಂತರ ಇಲ್ಲಿನ ಸಮುದಾಯದ ಎಲ್ಲರಿಗೂ ಹೇಳಲಾಗಿದೆ” ಎನ್ನುವ ಅವರು ಇದಕ್ಕೆ ಕೋಮುಬಣ್ಣ ನೀಡಿರುವ ಮಾಧ್ಯಮಗಳ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ.

ರಾಷ್ಟ್ರದಾದ್ಯಂತ ಕೊರೊನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಮಯದಲ್ಲಿ, ವೈದ್ಯರು, ನರ್ಸ್ ಗಳು ಮತ್ತು ಆರೋಗ್ಯ ಕಾರ್ಯಕರ್ತರು ಎಲ್ಲರಿಗಿಂತಲೂ ಹೆಚ್ಚಿನ ರಿಸ್ಕ್ ತೆಗೆದುಕೊಂಡು ಸೋಂಕಿನ ವಿರುದ್ಧ ಹೋರಾಡುತ್ತಿರುವಾಗ ಸಾಮಾನ್ಯ ನಾಗರಿಕರು ಅವರ ಜೊತೆಗೆ ಸಂಯಮದಿಂದ ವರ್ತಿಸಬೇಕಲ್ಲವೆ? ಅವರ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗೊಳನ್ನು ಕೊಟ್ಟು ಗೊಂದಲಗಳನ್ನು ನಿವಾರಿಸಿಕೊಳ್ಳಬೇಕಲ್ಲವೇ ಎಂಬ ಪ್ರಶ್ನೆಯೂ ಎದ್ದಿದೆ. ಇದರ ಬಗ್ಗೆ ಸ್ಪಷ್ಟೀಕರಣ ನೀಡಿದ ಸಾದಿಕ್ ಪಾಳ್ಯದ ನಿವಾಸಿ ಸಾಮಾಜಿಕ ಕಾರ್ಯಕರ್ತ ಭಾಷ ಅವರು “ಎನ್ ಪಿ ಆರ್ ಬಗ್ಗೆ ಇಲ್ಲಿ ಮೊದಲಿಂದಲೂ ಚರ್ಚೆಗಳು ನಡೆಯುತ್ತಿದ್ದವು. ಆ ಪ್ರಕ್ರಿಯೆಗೆ ಜನರು ಹೇಗೆ ಪ್ರತಿಕ್ರಿಯಿಸಬೇಕು ಎಂದು ಸಮುದಾಯದ ಹಿರಿಯರು ಜನರಿಗೆ ತಿಳಿಸಿದ್ದರು. ಇದು ಹಳೆಯ ಚರ್ಚೆ. ಈಗ ಆರೋಗ್ಯ ಕಾರ್ಯಕರ್ತೆಯರು ಬಂದಾಗ ಸಾಮಾನ್ಯರಿಗೆ ಸರಿಯಾಗಿ ವಿಷಯ ತಿಳಿಯದೆ ಗೊಂದಲ ಆಗಿದೆ. ಇದರ ಬಗ್ಗೆ ಇಲ್ಲಿನ ನಿವಾಸಿಗಳು ಮತ್ತು ಆರೋಗ್ಯ ಕಾರ್ಯಕರ್ತೆಯರ ನಡಯುವ ವಾಗ್ವಾದ ಆಗಿದ್ದು ನಿಜ. ಆದರೆ ಯಾರೂ ಅನುಚಿತವಾಗಿ ವರ್ತಿಸಲಿಲ್ಲ. ಅವರಿಗೆ ಗೌರವ ನೀಡುತ್ತೇವೆ ಎಂದು ಕೂಡ ಎಲ್ಲರೂ ಹೇಳಿದ್ದಾರೆ. ಈಗ ಬರುತ್ತಿರುವವರು ಆರೋಗ್ಯ ಕಾರ್ಯಕರ್ತರು ಮತ್ತು ಅವರಿಗೆ ಎಲ್ಲ ರೀತಿಯ ಸಹಕಾರಿ ನೀಡಿ. ಇದು ಎನ್ ಪಿ ಆರ್ ಪ್ರಕ್ರಿಯೆ ಅಲ್ಲ ಎಂದು ತಿಳಿಹೇಳುವ ಕೆಲಸ ಕೂಡ ನಡೆದಿದೆ” ಎನ್ನುತ್ತಾರೆ.

ಇದೊಂದು ಅಸಾಮಾನ್ಯ ಸಂದರ್ಭ. ಅರೋಗ್ಯ ಕಾರ್ಯಕರ್ತರು ತಮ್ಮ ವ್ಯಯಕ್ತಿಕ ಜೀವನವನ್ನು ಲೆಕ್ಕಿಸದೆ ಸೋಂಕಿನ ವಿರುದ್ಧ ಹೊರಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಜನಸಾಮಾನ್ಯರು ಅವರಿಗೆ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡುವುದು ಅಗತ್ಯ. ಇದೇ ಸಮಯದಲ್ಲಿ ಲಾಕ್ ಡೌನ್ ಮತ್ತಿತರ ಸಂಗತಿಗಳಿಂದ, ದಿನನಿತ್ಯದ ಜೀವನಕ್ಕೆ ಸಮಸ್ಯೆಯಾಗಿ ಬಡ ಮತ್ತು ಕೆಳ ಮಧ್ಯಮವರ್ಗದ ಜನಸಾಮಾನ್ಯರು ಅತೀವ ಗೊಂದಲದಲ್ಲಿ ಇದ್ದಾರೆ, ಇಂತಹ ಗೊಂದಲಗಳನ್ನು ನಿವಾರಿಸುವುದು ಸರ್ಕಾರದ ಮತ್ತು ಸರ್ಕಾರದ ಸಂಸ್ಥೆಗಳ, ರಾಜಕಾರಣಿಗಳ ಮತ್ತು  ಅಧಿಕಾರಿಗಳ ಕರ್ತವ್ಯ. ಮಾಧ್ಯಮಗಳು ಕೂಡ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕಾದ ಸಂದರ್ಭ ಇದು.

ಇಂದು ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮುಸ್ಲಿಂ ಸಮುದಾಯದ ಮುಖಂಡರಾದ ಸಿ ಎಂ ಇಬ್ರಾಹಿಂ, ಎನ್ ಎ ಹ್ಯಾರಿಸ್, ಜಮೀರ್ ಅಹಮದ್, ನಸೀರ್ ಅಹಮದ್, ರಿಜ್ವಾನ್ ಅರ್ಷದ್, ಅಖಂಡ ಶ್ರೀನಿವಾಸಮೂರ್ತಿ, ಸಲೀಮ್ ಅಹಮದ್ ಅವರೊಂದಿಗೆ ಸಭೆ ನಡೆಸಿದ ವಿಡಿಯೋ ಮತ್ತು ಮುಖ್ಯಾಂಶಗಳನ್ನು ಹಂಚಿಕೊಂಡಿದ್ದಾರೆ.

https://twitter.com/CMofKarnataka/status/1246018317577416704

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights