ಎಪಿಎಂಸಿ ತಿದ್ದುಪಡಿ ಪ್ರಸ್ತಾಪವನ್ನು ರಾಜಭವನ ವಾಪಸ್ ಕಳಿಸಿದ್ದೇಕೆ? ಡಿಟೈಲ್ಸ್
ಕರ್ನಾಟಕದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ವಿವಾದ ಭುಗಿಲೆದ್ದಿದೆ. ಎಪಿಎಂಸಿ ರಾಜ್ಯಪಟ್ಟಿಯಲ್ಲಿ ಬರುವುದರಿಂದ ಕೇಂದ್ರ ಸರ್ಕಾರವು ರಾಜ್ಯಸರ್ಕಾರಗಳಿಗೆ ಸುತ್ತೋಲೆಯೊಂದನ್ನು ಕಳಿಸಿ ರಾಜ್ಯಗಳು 2017ರ 8ನೇ ಪಟ್ಟಿಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರುವಂತೆ ಒತ್ತಡ ತಂದಿತ್ತು.
ಈ ನಡುವೆ ಕರ್ನಾಟಕದ ರಾಜ್ಯಪಾಲರ ಕಚೇರಿಯು ಸರ್ಕಾರಕ್ಕೆ ಆದಷ್ಟು ಬೇಗ ತಿದ್ದುಪಡಿ ತರಲು ಸುಗ್ರಿವಾಜ್ಞೆ ತರುವಂತೆ ಒತ್ತಾಯಿಸಿದೆ. ಎಷ್ಟರಮಟ್ಟಿಗೆಂದರೆ ಪ್ರತಿ ಗಂಟೆಗೊಮ್ಮೆ ಸರ್ಕಾರ ಸುಗ್ರಿವಾಜ್ಞೆ ವಿಧೇಯಕ ಸಹಿಗಾಗಿ ರಾಜ್ಯಪಾಲರ ಕಚೇರಿಗೆ ಆದಷ್ಟು ಬೇಗ ಕಳಿಸಿಕೊಡಬೇಕೆಂದು ಒತ್ತಾಯಿಸಲಾಗುತ್ತಿತ್ತು ಎಂದು ಹೆಸರು ಹೇಳಲಿಚ್ಚಿಸಿದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಈ ಕುರಿತು ರಾಜ್ಯಸರ್ಕಾರದ ಅಡಿಷನಲ್ ಚೀಫ್ ಸೆಕ್ರಟರಿ ಡಾ.ನಾಗಾಂಬಿಕಾ ದೇವಿಯವರಿಗೆ ಪತ್ರ ಬರೆದಿದ್ದು, ನೀವು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಎಪಿಎಲ್‌ಎಂ 2017ರ ಕಾಯ್ದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರಬೇಕೆಂದು ಸೂಚಿಸಿರುವ ಪತ್ರವು ರೈತ ಮುಖಂಡರಿಂದ ನಾನುಗೌರಿ.ಕಾಂಗೆ ಲಭ್ಯವಾಗಿದೆ.
ರಾಜ್ಯಪಾಲರ ಕಚೇರಿಯು ಈ ಕುರಿತು ಬೇಗ ಸುಗ್ರಿವಾಜ್ಞೆ ವಿಧೇಯಕ ಕಳಿಸಬೇಕೆಂದು ಪಟ್ಟು ಹಿಡಿದಿರುವುದಕ್ಕೂ ಕೇಂದ್ರ ಸರ್ಕಾರದ ಒತ್ತಡವೇ ಕಾರಣ ಎನ್ನಲಾಗಿದೆ. ಎಪಿಎಂಸಿ ರಾಜ್ಯಪಟ್ಟಿಯಲ್ಲಿರುವುದರಿಂದ ಕೇಂದ್ರವು ತುಂಬಾ ಒತ್ತಡ ಹೇರಲು ಸಾಧ್ಯವಿಲ್ಲದ್ದರಿಂದ ರಾಜ್ಯಪಾಲರ ಕಚೇರಿಯನ್ನು ಬಳಸಿಕೊಂಡಿ ಒತ್ತಡ ಹೇರಿದೆ.
ಇನ್ನು ಇಂದು ರಾಜ್ಯಸರ್ಕಾರವು ಕಾಯ್ದೆಗೆ ತಿದ್ದುಪಡಿ ತರುವುದಕ್ಕಾಗಿ ಸುಗ್ರಿವಾಜ್ಞೆ ವಿಧೇಯಕದ ಸಹಿಗಾಗಿ ರಾಜ್ಯಪಾಲರ ಕಚೇರಿಗೆ ಕಳಿಸಿದ್ದು ಆಶ್ಚರ್ಯಕರ ರೀತಿಯಲ್ಲಿ ರಾಜ್ಯಪಾಲರು ಅದಕ್ಕೆ ಸಹಿ ಹಾಕದೇ ವಾಪಸ್ ಕಳಿಸಿದ್ದಾರೆ ಎಂಬು ಸುದ್ದಿ ತಿಳಿದುಬಂದಿದೆ.
ರಾಜ್ಯ ಸರ್ಕಾರ ವಿಧೇಯಕ ಕಳಿಸಿಲ್ಲವೆಂದು ತರಾತುರಿ ಮಾಡಿದ ರಾಜ್ಯಪಾಲರು ಈಗ ಏಕಾಏಕಿ ವಿಧೇಯಕಕ್ಕೆ ಸಹಿ ಮಾಡದೇ ವಾಪಸ್ ಕಳಿಸದೇ ಇರುವುದಕ್ಕೆ ಕಾರಣವೇನೆಂದು ಗಮನಿಸಿದಾಗ ತಿಳಿದುಬಂದ ವಿಷಯವೇನೆಂದರೆ, ಕೇಂದ್ರ ಸರ್ಕಾರವು ಬಯಸಿದ್ದ ರೀತಿಯಲ್ಲಿ ರಾಜ್ಯಸರ್ಕಾರ ವಿದೇಯಕವನ್ನು ರಚಿಸಿಲ್ಲವೆಂಬ ಕಾರಣಕ್ಕಾಗಿ, ವಿದೇಯಕವನ್ನು ಮರು ಪರಿಶೀಲಿಸಿ ಕೇಂದ್ರ ಸರ್ಕಾರ ಬಯಸಿದ್ದ ರೀತಿಯಲ್ಲಿ ಮಾರ್ಪಾಡು ಮಾಡಿ ಕಳಿಸಿಕೊಡಬೇಕೆಂದು ರಾಜ್ಯಪಾಲರು ವಾಪಸ್ ಕಳಿಸಿದ್ದಾರೆ ಎಂದು ಮಾಹಿತಿ ಬಂದಿದೆ.