ಒಂದು ಆನೆಯ ಸಾವಿನ ಸುತ್ತ; ನಾಗಾಲೋಟದ ಪ್ರತಿಕ್ರಿಯೆಗಳು ಮತ್ತು ಕೋಮುವಾದದ ಸಂಚು

ಕೇರಳದ ಪಾಲಕ್ಕಾಡ್ ನಲ್ಲಿ ಪಟಾಕಿ ಮತ್ತು ಸಿಡಿಮದ್ದುಗಳನ್ನು ಇಟ್ಟಿದ್ದ ಪೈನಾಪಲ್ ಹಣ್ಣನ್ನು ತಿಂದು ಗರ್ಭಿಣಿ ಆನೆಯೊಂದು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದು ನೆನ್ನೆ ವರದಿಯಾಗಿತ್ತು. ಈ ವರದಿ ವೈರಲ್ ರೂಪ ಪಡೆದು, ಈ ಕೃತ್ಯಕ್ಕೆ ಕಾರಣವಾಗಿರುವವರನ್ನು ಶಿಕ್ಷಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಆಕ್ರೋಶ ಎದ್ದಿತ್ತು. ಸಾಮಾನ್ಯವಾಗಿ ದೇಶದ ಆಗುಹೋಗುಗಳು, ಸಾವುನೋವುಗಳಿಗೆ ಅಷ್ಟೇನು ತಲೆಕೆಡಿಸಿಕೊಳ್ಳದ ನಟರು, ಉದ್ದಿಮೆದಾರರೂ ಕೂಡ ಜಿದ್ದಿಗೆ ಬಿದ್ದವರಂತೆ ತಮಗಾದ ಅಘಾತವನ್ನು ಹಂಚಿಕೊಂಡರು.

ಪ್ರಖ್ಯಾತ ಉದ್ದಿಮೆದಾರ ರತನ್ ಟಾಟ ಕೂಡ ಇದರ ಬಗ್ಗೆ ಟ್ವೀಟ್ ಮಾಡಿ, ಮುಗ್ದ ಪ್ರಾಣಿಗಳ ಮೇಲೆ ನಡೆದಿರುವ ಈ ಹಿಂಸೆ, ಮನುಷ್ಯರನ್ನು ಕೊಲ್ಲುವುದುಕ್ಕಿಂತಲೂ ಕಡಿಮೆ ಅಪರಾಧವೇನಲ್ಲ ಎಂದು ಟ್ವೀಟ್ ಮಾಡಿದ್ದರು.

ಇದು ಇಷ್ಟಕ್ಕೇ ಮುಗಿಯದೆ ಕೇರಳ ರಾಜ್ಯದ ವಿರುದ್ಧ, ಈ ಘಟನೆ ನಡೆದಿರುವ ಪ್ರದೇಶದಲ್ಲಿ ಹೆಚ್ಚು ನೆಲೆಸಿರುವ ಆದರೆ ಸಾಮಾನ್ಯರಾಗಿ ಅಲ್ಪಸಂಖ್ಯಾತರಾಗಿರುವ ಒಂದು ಕೋಮಿನ ವಿರುದ್ಧ ತಿರುಗಿಸುವ ಸಂಚು ಕೂಡ ದೊಡ್ಡ ಮಟ್ಟದಲ್ಲಿ ನಡೆಯಿತು.

ಕೇಂದ್ರ ಪರಿಸರ ಮತ್ತು ವನ್ಯ ಸಂರಕ್ಷಣೆ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಇದರ ಬಗ್ಗೆ ಟ್ವೀಟ್ ಮಾಡಿ ಕೇರಳದ ಮಲಪ್ಪುರಂನಲ್ಲಿ ನಡೆದಿರುವ ಘಟನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡಿ ಅಪರಾಧಿಗಳನ್ನು ಶಿಕ್ಷಿಸಿಸುವುದಾಗಿ ಟ್ವೀಟ್ ಮಾಡುವಾಗ, ಕೇರಳವನ್ನು ಹೈಲೈಟ್ ಮಾಡುವುದನ್ನೂ ಮರೆಯಲಿಲ್ಲ, ಜೊತೆಗೆ ಪಟಾಕಿಯಿಂದ ಪ್ರಾಣಿಗಳನ್ನು ಸಾಯಿಸುವುದು ಭಾರತಿಯ ಸಂಸ್ಕೃತಿ ಅಲ್ಲ ಎಂಬುದನ್ನು ಒತ್ತಿ ಹೇಳುವುದನ್ನೂ ಮರೆಯಲಿಲ್ಲ.

ಕಾಡು ಹಂದಿ ಹಾವಳಿ ಮತ್ತು ನಿಯಂತ್ರಣ

ದೇಶದಾದ್ಯಂತ ಕಾಡು ಪ್ರದೇಶಗಳ ವಿಸ್ತೀರ್ಣ ಕಡಿಮೆಯಾಗುತ್ತಿದ್ದಂತೆ ಮನುಷ್ಯರು ಮತ್ತು ಕಾಡುಪ್ರಾಣಿಗಳ ಘರ್ಷಣೆಗಳು ಹೆಚ್ಚಾಗುತ್ತಲೇ ಬಂದಿವೆ. ಕಾಡುಗಳ ಅಂಚಿನಲ್ಲಿ ವ್ಯವಸಾಯ ಮಾಡುವಾಗ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ನಾಶದ ಸಮಸ್ಯೆ ತೀವ್ರತಮವಾಗಿ ಬೆಳೆದಿದೆ. ಇದರಿಂದ ಕಾಡುಸಂತತಿಯ ನಾಶಕ್ಕೂ ಕಾರಣವಾಗಿ ಒಟ್ಟಾರೆಯಾಗಿ ಇಡೀ ಎಕಾಲಜಿಯ ಸಮಸ್ಯೆಯಾಗಿ ಇದು ಬೆಳೆದಿದೆ.

ಉತ್ತರಭಾರತದ ಹಲವು ರಾಜ್ಯಗಳಲ್ಲಿ ತಮ್ಮ ಕೃಷಿ ಜಮೀನುಗಳಿಗೆ ನೀಲ್ಗಾಯ್ ಗಳು ಬಂದರೆ ಅವುಗಳನ್ನು ಕೊಲ್ಲಲು, ಅದೇ ರೀತಿ ಕೇರಳದಲ್ಲಿ ಕಾಡುಹಂದಿಗಳು ಬೆಳೆನಾಶವನ್ನು ತಡೆಯಲು ಶೂಟ್ ಮಾಡಿ ಕೊಲ್ಲಲು ಅನುಮತಿ ಇದೆ. ಬಂದೂಕಿನಿಂದ ಗುಂಡು ಹಾರಿಸಿ ಕೊಲ್ಲುವುದು ಭಾರತೀಯ ಸಂಸ್ಕೃತಿಯೇ ಎಂಬ ಪ್ರಶ್ನೆ ಪ್ರಕಾಶ್ ಜಾವ್ಡೇಕರ್ ಅವರು ಹಾಕಿಕೊಂಡಂತೆ ಕಾಣುತ್ತಿಲ್ಲ. ಕೆಲವು ವರ್ಷಗಳ ಹಿಂದೆ ಪ್ರಕಾಶ್ ಜಾವ್ಡೇಕರ್ ನೇತೃತ್ವದ ಅರಣ್ಯ ಇಲಾಖೆ ನೀಲ್ಗಾಯ್, ಕಾಡು ಹಂದಿ ಮತ್ತು ರೀಸಸ್ ಮಂಗಗಳನ್ನು ಬೆಳೆ ನಾಶದ ಕಾರಣಗಳಿಗೆ ಕೊಲ್ಲಲು ಅವಕಾಶ ನೀಡಿ ನಿರ್ದೇಶನ ನೀಡಿತ್ತು.

ಪಟಾಕಿ ಸಿಡಿಸಿ ಕಾಡುಹಂದಿಗಳನ್ನು ಕೊಲ್ಲುವ ಅಭ್ಯಾಸ ಕರ್ನಾಟಕ ಮತ್ತು ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಾಲ್ತಿ ಇದೆ. “ಹಣ್ಣು ಮತ್ತು ಮಾಂಸದಲ್ಲಿ ಸಿಡಿಮದ್ದು ಹಾಕಿ, ಅದನ್ನು ತಿಂದೊಡನೆ ಮುಖ ಸಿಡಿದು, ಕಾಡು ಹಂದಿ ಸಾಯುತ್ತದೆ. ಇದು ಕಾನೂನು ಪ್ರಕಾರ ನಿಷಿದ್ದವಾದರೂ ಇಂದಿಗೂ ನಡೆದುಕೊಂಡು ಬಂದಿದೆ. ಇದೊಂದು ಗಂಭೀರ ಸಮಸ್ಯೆ. ಇದಕ್ಕೆ ಸರ್ಕಾರದ ನೀತಿಗಳು ದೊಡ್ಡ ಕಾರಣ. ಕಾಡನ್ನು ಸಂರಕ್ಷಿಸುವ ಕಡೆಗೆ ಸರ್ಕಾರಗಳು, ಅರಣ್ಯ ಇಲಾಖೆ ಹೆಚ್ಚು ಆಸ್ತೆ ವಹಿಸಿಲ್ಲ. ಕಾಡುಗಳು ನಾಶ ಆಗುತ್ತಿರುವ ಸಮಸ್ಯೆಯನ್ನು ಒಂದು ಆನೆಯ ಸಾವಿಗೆ ಕಂಬನಿ ಮಿಡಿಯುವುದರಿಂದ ಪರಿಹಾರ ದೊರಕಿಸುವುದಕ್ಕೆ ಸಾಧ್ಯವಿಲ್ಲ. ಈಗ ದೊಡ್ಡ ಸಮಸ್ಯೆಯನ್ನು ಮರೆಮಾಚಲು ಈ ಒಂದು ಆನೆಯ ಸಾವನ್ನು ಸರ್ಕಾರಗಳು ಮತ್ತು ಒಂದು ಬಣ ಬಳಸಿಕೊಳ್ಳುತ್ತಿದೆ. ಪ್ರತಿ ವರ್ಷ ನೂರಾರು ಆನೆಗಳು ವಿದ್ಯುತ್ ತಂತಿ ಬೇಲಿಗಳಿಂದ ಸಾಯುತ್ತಿವೆ” ಎನ್ನುತ್ತಾರೆ ಕಾಡುಸಂತತಿಯ ಜೀವಶಾಸ್ತ್ರಜ್ಞ ಅನೂಪ್ ಪ್ರಕಾಶ್.

2009 ರಿಂದ 2017 ರೊಳಗೆ 461 ಆನೆಗಳು ವಿದ್ಯುತ್ ತಂತಿ ಬೇಲಿಗಳಿಂದಲೇ ಮೃತಪಟಿರುವುದನ್ನು ಈ ಹಿಂದೆ ‘ದ ಹಿಂದೂ’ ಪತ್ರಿಕೆ ವರದಿ ಮಾಡಿತ್ತು.

ಇದೇ ವಿಷಯವಾಗಿ ಮತ್ತೊಬ್ಬ ತಜ್ಞರು ಟ್ವೀಟ್ ಮಾಡಿದ್ದು, ಆನೆಗಳು ತಮ್ಮ ವಾಸಕ್ಷೇತ್ರದ ಅರಣ್ಯವನ್ನು ವ್ಯಾಪಕವಾಗಿ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಈ ಒಂದು ಘಟನೆಯನ್ನು ಸೆನ್ಸೇಶನಲೈಸ್ ಮಾಡುವುದು ಅಪಾಯ ಎನ್ನುತ್ತಾರೆ.

ಗರ್ಭಿಣಿ ಆನೆಯನ್ನು ಗುರಿಯಾಗಿಸಿಕೊಂಡು ಕೊಂದಿರುವ ಸಾಧ್ಯತೆ ಅತಿ ಕಡಿಮೆ  ಎಂಬ ತಿಳಿವು ನೆನ್ನೆಯ ಚರ್ಚೆಯಲ್ಲಿ ಸುಳಿದಿದ್ದರೆ, ಇದು ಕಾಡುಗಳು ನಾಶವಾಗುತ್ತಿರುವ ಪ್ರಕ್ರಿಯೆಯ ವಿರುದ್ಧದ ಚರ್ಚೆಯಾಗಿ ಮಾರ್ಪಾಡಾಗುತ್ತಿತ್ತು. ಕಾಡುಪ್ರಾಣಿ ಮತ್ತು ಕಾಡಿನ ಅಂಚಿನಲ್ಲಿ ವಾಸಿಸುವವರ ಘರ್ಷಣೆಯನ್ನು ಹೇಗೆ ತಗ್ಗಿಸಬೇಕು ಎಂಬುದರ ಚರ್ಚೆಯಾಗಿ ಹೊಮ್ಮಬೇಕಿತ್ತು. ಅತಿ ಭಾವುಕತೆಯ ಪ್ರತಿಕ್ರಿಯೆಗಳು ಇಡೀ ಎಕಾಲಜಿಯ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಎಂಬ ತಿಳುವು ಜಾಗ್ರತವಾಗಬೇಕಿತ್ತು.

ಗರ್ಭಿಣಿ ಆನೆ ಎಂಬ ಅಂಶ ಇಷ್ಟು ಸಾಮಾಜಿಕ ವೇದನೆಗೆ ಕಾರಣವಾಯಿತೇ?

ಸಾಮಾನ್ಯವಾಗಿ ಗರ್ಭ ಧರಿಸಿದ ಪ್ರಾಣಿಗಳನ್ನು ಕೊಲ್ಲುವುದು ಯಾರಿಗಾದರೂ ನೋವು ತರುವ ಸಂಗತಿಯೇ. ಕಾಡು ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಘರ್ಷಣೆಯ ಬಗ್ಗೆ ಸರಿಯಾಗಿ ತಿಳಿವು ಇಲ್ಲದೆ ಇರುವುದು ಬಹುತೇಕ ಮಂದಿ ಈ ಘಟನೆಯ ಬಗ್ಗೆ ತೀವ್ರ ಭಾವುಕರಾಗಿ ಟ್ವಿಟ್ಟರ್ ನಲ್ಲಿ ಕಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಕಾರಣ ಇರಬಹುದು.

“ಆದರೆ ಹೆಣ್ಣು ಆನೆಯ ವಿಷಯದಲ್ಲಿ ಒಂದು ಸಂಗತಿಯನ್ನು ನಾವು ಸದಾ ನೆನಪಿನಲ್ಲಿ ಇಡಬೇಕು. ಏಷಿಯಾದ ಹೆಣ್ಣು ಆನೆ ಗರ್ಭ ಧರಿಸಲು 18 ರಿಂದ 25 ತಿಂಗಳು ಹಿಡಿಯುತ್ತದೆ. ಅಲ್ಲದೆ ಹೆಣ್ಣು ಆನೆ ಹೆತ್ತ ಮೇಲೆ ಮರಿ ಆನೆಗೆ ಸರಿಸುಮಾರು 2 ರಿಂದ 8 ವರ್ಷದವರೆಗೆ ಹಾಲುಣಿಸುತ್ತದೆ. ಮತ್ತು ಆನೆ ಸಾಮಾನ್ಯವಾಗಿ 4-5 ವರ್ಷಕ್ಕೊಮ್ಮೆ ಮರಿ ಹಾಕುತ್ತದೆ. ಆದುದರಿಂದ ಹೆಣ್ಣಾನೆ ಯಾವಾಗಲಾದರೂ ಗರ್ಭ ಧರಿಸಿರುತ್ತದೆ ಅಥವಾ ಹಾಲುಣಿಸುತ್ತಿರುತ್ತದೆ ಎಂಬ ಸಾಮಾನ್ಯ ಜ್ಞಾನ ಇದ್ದಿದ್ದರೆ ಗರ್ಭಿಣಿ ಆನೆಯೊಂದು ಸತ್ತಿತು ಎಂದು ಮಾಧ್ಯಮಗಳು ರೋಚಕಗೊಳಿಸುತ್ತಿರಲಿಲ್ಲ. ದೇಶದೆಲ್ಲೆಡೆ ಆನೆಗಳು ಇಂತಹ ಘರ್ಷಣೆಯಿಂದ ಸಾವನ್ನಪ್ಪುತ್ತಿವೆ. ಇದು ಸರ್ಕಾರಗಳ ನೀತಿಗಳ ಸಮಸ್ಯೆ. ಇದನ್ನು ಸಮಗ್ರವಾಗಿ ಚರ್ಚೆ ಮಾಡಿ ಪರಿಹರಿಸಿಕೊಳ್ಳಬೇಕು” ಎನ್ನುತ್ತಾರೆ ವನ್ಯಜೀವಿ ಸಂರಕ್ಷಣೆಗೆ ಸ್ವಯಂಸೇವಕರಾಗಿ ಕೆಲಸ ಮಾಡುವ ಅವಿನಾಶ್ ಕನ್ನಮ್ಮನವರ್.

ಪ್ರತಿ ಘಟನೆಗೂ ಕೋಮು ಬಣ್ಣ ಬಳಿಯುವ ಚಾಳಿ

ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್ ಭಾರತೀಯ ಸಂಸ್ಕೃತಿಗೂ ಆನೆ ಸಾವಿಗೂ ಸಂಬಂಧ ಕಲ್ಪಿಸಿದ್ದಷ್ಟೇ ಅಲ್ಲ, ಬಿಜೆಪಿಯ ಮತ್ತೊಬ್ಬ ಕೇಂದ್ರ ಸಚಿವೆ ಕೂಡ ಈ ಪ್ರಕರಣಕ್ಕೆ ವಿಭಿನ್ನ ಬಣ್ಣ ನೀಡಲು ಪ್ರಯತ್ನ ಪಟ್ಟಿದ್ದಾರೆ. ಮಲಾಪ್ಪುರಂ ಅಪರಾಧಗಳ ಕೇಂದ್ರ ಎಂಬಂತೆ ಬಿಂಬಿಸಿ ಕೇರಳ ರಾಜ್ಯವನ್ನು ದೂರಲು ಈ ಅವಕಾಶವನ್ನು ಬಳಸಿಕೊಂಡಿದ್ದಾರೆ.

ಮುಖಂಡರ ಟ್ವೀಟ್ ಗಳನ್ನು ಕಂಡ ಮೇಲೆ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದು ಮುಸ್ಲಿಮರು ಹೆಚ್ಚು ಸಂಖ್ಯೆಯಲ್ಲಿ ಇರುವ ಪ್ರದೇಶದಲ್ಲಿ ನಡೆದ ಅಪರಾಧ ಕೃತ್ಯ ಎಂಬಂತೆ ಬಿಂಬಿಸಿ ಕೋಮು ಸೌಹಾರ್ದವನ್ನು ಕೆಡಿಸುವಂತಹ ಟ್ವೀಟ್ ಗಳನ್ನು ಮಾಡಿದ್ದಾರೆ.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಅಶೀಂ ಎಂಬ ಪತ್ರಕರ್ತರು, ಈ ದುರದೃಷ್ಟಕರ ಘಟನೆ ನಡೆದಿದ್ದು ಮಲಾಪ್ಪುರಂನಲ್ಲಿ ಅಲ್ಲ, ಬದಲಾಗಿ ಪಾಲಕ್ಕಾಡಿನ ಮನ್ನಾರ್ ಕಾಡಿನಲ್ಲಿ. ಮಲಾಪ್ಪುರಂ ನಲ್ಲಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವುದರಿಂದ ಅವರ ವಿರುದ್ಧ ಈಗಾಗಲೆ ಪಿತೂರಿ ಪ್ರಾರಂಭವಾಗಿದೆ ಎಂದಿದ್ದಾರೆ.

ಬೇಟೆ ಬಗ್ಗೆ ಕಾನೂನು ಕ್ರಮ ತೀವ್ರವಾಗಬೇಕಿದೆ ಮತ್ತು ತಿಳಿವು ಮೂಡಬೇಕಿದೆ

ಈ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆ ಆಗುತ್ತಿದೆ ಆದರೆ ಬೇಟೆ ಗಂಭೀರ ಸಮಸ್ಯೆ ಎನ್ನುತ್ತಾರೆ ಕರ್ನಾಟಕದ ವನ್ಯಜೀವಿ ತಜ್ಞ ಮತ್ತು ಸಂರಕ್ಷಕ ಸಂಜಯ್ ಗುಬ್ಬಿ. “ಬೇಟೆ ಅನ್ನುವುದು ಗಂಭೀರ ಸಮಸ್ಯೆ. ಪಟಾಕಿ ಹೊಡೆಯುವುದು ಕೊಲ್ಲುವುದು ಒಂದು ಮಾರ್ಗವಾದರೆ ಉರುಳು ಹಾಕಿ ಕೊಲ್ಲುವುದು ಮತ್ತು ಬೇಟೆ ನಾಯಿಗಳನ್ನು ಬಳಸಿ ಕೊಲ್ಲುವುದು ಸೈಲೆಂಟ್ ಕಿಲ್ಲರ್ ಮಾರ್ಗಗಳು. ಇವುಗಳು ಎಷ್ಟೋ ಬಾರಿ ಗೊತ್ತಾಗುವುದೇ ಇಲ್ಲ. ಹೀಗಾಗಿ ವೃತ್ತಿಪರವಾಗಿ ಬೇಟೆ ಆಡುವವರ ವಿರುದ್ಧ ಕಠಿನ ಕಾನೂನ ಕ್ರಮ ಜರುಗಿಸಬೇಕು. ಕಣ್ಗಾವಲಿನ ಜೊತೆಗೆ ಕಾನೂನು ಕ್ರಮದ ಬಗ್ಗೆ ಅಧಿಕಾರಿಗಳು ಮತ್ತು ನ್ಯಾಯಾಲಯಗಳು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಇಂತಹ ಬೇಟೆಗಳನ್ನು ಮುಂದುವರೆಸಲು ಜನರು ಹಿಂಜರಿಯಬಹುದು. ಇದರ ಜೊತೆಗೆ ತಿಳಿವು ಮೂಡಿಸುವ ಕ್ರಮಗಳನ್ನು ಕೂಡ ವ್ಯಾಪಕವಾಗಿ ತೆಗೆದುಕೊಳ್ಳಬೇಕು” ಎನ್ನುತ್ತಾರೆ ಸಂಜಯ್ ಗುಬ್ಬಿ.

ಹೀಗೆ ಸಿಡಿಮದ್ದು ಇದ್ದ ಆಹಾರ ಸೇವಿಸಿ ಮೂರು ನಾಲ್ಕು ವರ್ಷಗಳ ಹಿಂದೆ ಜಗಳೂರು ತಾಲ್ಲೂಕಿನಲ್ಲಿ ಚಿರತೆಯೊಂದು ಮೃತಪಟ್ಟ ಘಟನೆಯನ್ನು ನೆನಪಿಸಿಕೊಳ್ಳುವ ಗುಬ್ಬಿ ಅವರು ಮನುಷ್ಯನ ಜೀವಕ್ಕೆ ಆಪತ್ತು ಬಂದಾಗ ಅಥವಾ ಅವನ ಸಂಪತ್ತು ನಷ್ಟವಾಗುವ ತುರ್ತು ಮತ್ತು ಗಂಭೀರ ಸಮಯದಲ್ಲಿ ಕೆಲವು ಕಾಡುಪ್ರಾಣಿಗಳನ್ನು ಕೊಲ್ಲಲು ಕಾನೂನಿನಲ್ಲಿ ಅವಕಾಶ ಇದ್ದರೂ ಅದನ್ನು ಬಹಳ ಜ್ಯುಡಿಷಿಯಲ್ ಆಗಿ ಬಳಸಬೇಕು ಮತ್ತು ವನ್ಯಜೀವಿಗಳ ಬಗ್ಗೆ ಸೂಕ್ಷ್ಮತೆಯನ್ನು ಹೊಂದಿರಬೇಕು ಎನ್ನುತ್ತಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights