ಬಡವರಿಗೆ ಹಾಗೂ ಜನಸಾಮಾನ್ಯರ ಕೈಗೆ ನೇರ ನಗದು ಕೊಡದೆ ಬೇರೆ ದಾರಿಯೇ ಇಲ್ಲ: ಅಧ್ಯಯನ ವರದಿ

ಲಾಕ್‌ಡೌನ್‌ನಿಂದ ಉಂಟಾಗಿರುವ ಭಾರೀ ನಷ್ಟವನ್ನು ಭರಿಸಲು, ಆರ್ಥಿಕತೆ ಚೇತರಿಸಿಕೊಳ್ಳಲು ಬಡವರಿಗೆ ನೇರ ನಗದು ವರ್ಗಾವಣೆಯಲ್ಲದೇ ಬೇರೆ ದಾರಿ ಇಲ್ಲ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ಬಿಡುಗಡೆ ಮಾಡಿದ ’ಶ್ರಮಜೀವಿಗಳಿಗೆ ಲಾಕ್ ಡೌನ್’ ಅಧ್ಯಯನ ವರದಿ ತಿಳಿಸಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಚನ್ನಹಳ್ಳಿ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಇಂದು ಲಾಕ್ ಡೌನ್ ಸಮಯದಲ್ಲಿ ಕರ್ನಾಟಕದ ಶ್ರಮಜೀವಿಗಳ ಮೇಲೆ ಉಂಟಾದ ಆರ್ಥಿಕ‌, ಸಾಮಾಜಿಕ, ರಾಜಕೀಯ ಪರಿಣಾಮಗಳನ್ನು ಬಿಚ್ಚಿಡುವ ಅಧ್ಯಯನ ವರದಿ ಬಿಡುಗಡೆಯಾಗಿದೆ. ಲಾಕ್‌ಡೌನ್‌ನಿಂದ ಅತಿ ಹೆಚ್ಚು ಸಂಕಷ್ಟಕ್ಕೊಳಗಾದ ಅಲೆಮಾರಿ, ಆದಿವಾಸಿ ಸಮುದಾಯವಿರುವಲ್ಲಿಯೇ ವರದಿ ಬಿಡುಗಡೆ ಮಾಡಿರುವುದು ವಿಶೇಷವಾಗಿದೆ.

ಹಕ್ಕಿ ಪಿಕ್ಕಿ ಸಮುದಾಯದ ಮುಖಂಡರಾದ ರೈಸ್‌ರವರು‌ ಮಾತನಾಡಿ “ನಮ್ಮ ಜೀವನ ಮೊದಲೇ ನಿಕೃಷ್ಟವಾಗಿತ್ತು. ಈಗ ಇರುವ ಲಾಕ್‌ಡೌನ್‌ನಿಂದಾಗಿ ಇನ್ನು ಹದಗೆಟ್ಟಿದೆ. ಸಮರ್ಪಕ ಮನೆಗಳಿಲ್ಲದ ನಮಗೆ ಬಹಳ ತೊಂದರೆಯಾಗಿದೆ. ಮಳೆ ಶುರುವಾಗಿ ನಮ್ಮ ಜನರೆಲ್ಲರೂ ನೆನಯುತ್ತಿರುವಾಗ ತಾಲ್ಲೂಕು ಆಡಳಿತದ ಬಳಿ ಕನಿಷ್ಠ ಟಾರ್ಪಲ್‌ ಕೊಡಿಸಿ ಎಂದು ಸಹಾಯ ಕೇಳಿದರೆ ಆರ್‌ಟಿಸಿ ಕೇಳುತ್ತಾರೆ. ಮನೆಯೇ ಇಲ್ಲದ ನಾವು ಆರ್‌ಟಿಸಿ ಎಲ್ಲಿಂದ ತರುವುದು ಎಂದು ಪ್ರಶ್ನಿಸಿದ್ದಾರೆ. ಕಷ್ಟಗಳು ನಮಗೆ ಹೊಸದಲ್ಲ, ಆದರೆ ಈ ರೀತಿ ದುಡಿದು ಬದುಕಲು ಸಾಧ್ಯವಿಲ್ಲ ಎಂದಾದಮೇಲೆ ಬದುಕಿದ್ದು ಏನು ಪ್ರಯೋಜನ ಎಂದು ಆಕ್ರೋಶ ವ್ಯಕ್ತಪಡಿಸಿದರು.

#ಶ್ರಮಜೀವಿಗಳ_ಲಾಕ್ಡೌನ್#ಅಧ್ಯಯನವರದಿ_ಬಿಡುಗಡೆ#ಕರ್ನಾಟಕ_ಜನಶಕ್ತಿ#ಹಕ್ಕಿಪಿಕ್ಕಿ_ಅಲೆಮಾರಿ_ಸಮುದಾಯದವರಿಂದ#ಶ್ರೀರಂಗಪಟ್ಟಣ_ಮಂಡ್ಯ

Posted by Karnataka janashakthi ಕರ್ನಾಟಕ ಜನಶಕ್ತಿ on Wednesday, June 3, 2020

ಶೇ.59.9 ರಷ್ಟು ಅಸಂಘಟಿತ ವಲಯದ ಕಾರ್ಮಿಕರು ತಮ್ಮ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಶೇ.79 ಮಂದು ಲಾಕ್‌ಡೌನ್‌ ಸಂದರ್ಭದಲ್ಲಿ ಮೂಲಭೂತ ಸೌಲಭ್ಯಗಳು ಸಿಗದೆ ಒದ್ದಾಡಿದ್ದಾರೆ. ಶೇ.92 ರಷ್ಟು ಮಂದಿಗೆ ಆರೋಗ್ಯ ತಪಾಸಣೆ ಮಾಡಿಸಲು ಸಾಧ್ಯವಾಗಿಲ್ಲ. ಶೇ.73 ರಷ್ಟು ರೈತರು ತಮ್ಮ ಬೆಳೆಯನ್ನು ನಷ್ಟಕ್ಕೆ ಮಾರಿದ್ದಾರೆ. ಶೇ.95 ಆದಿವಾಸಿಗಳಿಗೆ ಈ ಅವಧಿಯಲ್ಲಿ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಅಧ್ಯಯನ ವರದಿಯು ಎತ್ತಿತೋರಿಸಿದೆ.

‘ಮಾತಿಂದ ಮಾವಿನ ಕಾಯಿ ಉದುರುವುದಿಲ್ಲ’. ಶ್ರಮಜೀವಿಗಳನ್ನು ಈ ಸಂಕಟದಿಂದ ಕಾಪಾಡಲು ಸರ್ಕಾರದ ಕಡೆಯಿಂದ ಬದ್ಧತೆಯಿಂದ ಕೂಡಿದ ದಿಟ್ಟ ಕ್ರಮ ಆಗತ್ಯ. ಹಾಗಾಗಿ ಅತಿ ಶ್ರೀಮಂತರಿಗೆ ಅವರ ಸಂಪತ್ತಿನ ಮೇಲೆ ಶೇ.2ರಷ್ಟು ತುರ್ತು ‘ಕೊರೋನಾ ತೆರಿಗೆ’ಯನ್ನು ವಿಧಿಸಬೇಕು ಎಂದು ಅಧ್ಯಯನ ವರದಿಯ ಶಿಫಾರಸ್ಸುಗಳಲ್ಲಿ ತಿಳಿಸಲಾಗಿದೆ.

ಜೀವನಾವಶ್ಯಕ ಕನಿಷ್ಟ ಮೊತ್ತದ ನೇರ ಹಣ ವರ್ಗಾವಣೆಯನ್ನು ದೇಶದ ಎಲ್ಲ, ಶ್ರಮಜೀವಿಗಳಿಗೆ ಬಿಪಿಎಲ್ ಕಾರ್ಡುದಾರರ ಅಕೌಂಟುಗಳಿಗೆ ಮಾಡಬೇಕು ಆಗ ಮಾತ್ರವೇ ಅವರ ಚೇತರಿಸಿಕೊಳ್ಳಲು ಸಾಧ್ಯ ಎಂದು ಅಧ್ಯಯನ ವರದಿ ಒತ್ತಾಯಿಸಿದೆ.

ಸರ್ಕಾರಕ್ಕೆ ಇತರ ಪ್ರಮುಖ ಶಿಫಾರಸ್ಸುಗಳು

  1. ಪಡಿತರ ಹಂಚಿಕೆಯ ವ್ಯವಸ್ಥೆಯ ಮೂಲಕ ಕೇವಲ ಅಕ್ಕಿ/ಗೋಧಿ ಮಾತ್ರವಲ್ಲದೆ ಜೀವನಾವಶ್ಯಕ ಆಹಾರ ಸಾಮಗ್ರಿಗಳನ್ನು ವಿತರಿಸುವ ತುರ್ತು ಕ್ರಮವನ್ನು ಕೈಗೊಳ್ಳಬೇಕು.
  2. ರೇಷನ್ ಕಾರ್ಡ್‌ಗಳಿಲ್ಲದ ಜನರಿಗೂ ಮತ್ತು ವಲಸೆ ಕಾರ್ಮಿಕರಿಗೂ ಆಹಾರ ಧಾನ್ಯಗಳ ಕೊರತೆಯಾಗದಂತೆ ತಾತ್ಕಾಲಿಕ ಪಡಿತರ ಗುರುತಿನ ಚೀಟಿಗಳ ವ್ಯವಸ್ಥೆ ಆಗಬೇಕು.
  3. 2 ತಿಂಗಳು ದುಡಿಮೆಯಿಲ್ಲದೆ ಕಷ್ಟಕ್ಕೆ ಸಿಲುಕಿರುವ ಬೀದಿ ಬದಿ ವ್ಯಾಪಾರಿಗಳು, ಟ್ಯಾಕ್ಸಿ-ಕ್ಯಾಬ್ ಡ್ರೈವರ್‌ಗಳು, ಆಟೋ ಚಾಲಕರು ಮತ್ತು ಸಣ್ಣ ಪುಟ್ಟ ಉದ್ದಿಮೆಗಳ ಉದ್ಯೋಗಸ್ಥರಿಗೆ ಸಹಾಯಧನವನ್ನು ಈ ಕೂಡಲೇ ನೀಡಬೇಕು.
  4. ಬಡವರು ಮತ್ತು ಸಾಮಾನ್ಯ ಜನರ ಆರೋಗ್ಯ ರಕ್ಷಣೆಗೆ ಅಗತ್ಯವಿರುವಷ್ಟು ಆರೋಗ್ಯ ಸಲಕರಣೆಗಳ ಪೂರೈಕೆಗೆ ಈಗಲೇ ಕ್ರಮ ಕೈಗೊಳ್ಳಬೇಕು
  5. ಲಾಕ್‌ಡೌನ್ ಹೊತ್ತಿಗೆ ತಾತ್ಕಾಲಿಕವಾಗಿ ಹೇರಿದ್ದ ಮದ್ಯನಿಷೇಧವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಮುಂದುವರಿಯಬಹುದಾಗಿದ್ದ ಸರ್ಕಾರ ಅದರ ಬದಲಿಗೆ, ಲಾಕ್‌ಡೌನ್ ನಡುವೆಯೇ, ಕೊರೊನಾ ಅಪಾಯವಿದ್ದಾಗಲೂ ಮದ್ಯ ಮಾರಾಟ ಆರಂಭಿಸಿತು. ಇದನ್ನು ನಿಲ್ಲಿಸಬೇಕು. ಸಂಪೂರ್ಣ ಮದ್ಯನಿಷೇಧದ ಕಡೆಗೆ ವೈಜ್ಞಾನಿಕವಾದಂತಹ ರೀತಿಯಲ್ಲಿ ಮುಂದಡಿಯಿಡಲು ಇರುವ ಅವಕಾಶಗಳ ಬಗ್ಗೆ ಹೋರಾಟಗಾರರು ಮತ್ತು ಪರಿಣತರೊಂದಿಗೆ ಚರ್ಚಿಸಿ, ಮುಂದುವರೆಯಬೇಕು.
  6. ಗ್ರಾಮೀಣ ಆರ್ಥಿಕತೆಯ ಪುನಶ್ಚೇತನಕ್ಕೆ ವಿಶೇಷ ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಬೇಕು: ನರೇಗಾ ಯೋಜನೆಗೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು.
  7. ‘ನಗರ ಉದ್ಯೋಗ ಖಾತರಿ ಯೋಜನೆ’ಯನ್ನು ಜಾರಿಗೆ ತರಬೇಕು.
  8. ವಲಸೆ ಕಾರ್ಮಿಕರ ಸರ್ವೇ ಮತ್ತು ದಾಖಲಾತಿ ನಡೆಯಬೇಕು.
  9. ಸಣ್ಣ-ಮಧ್ಯಮ ಉದ್ದಿಮೆಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು.

ಅಧ್ಯಯನ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಕರ್ನಾಟಕ ಜನಶಕ್ತಿಯ ಸಿದ್ದರಾಜು, ಚಂದ್ರಶೇಖರ್‌, ವರದರಾಜು, ಜ್ಯೋತಿ ಮುಂತಾದವರು ಭಾಗವಹಿಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights