ಬಿಹಾರ: ಓವೈಸಿಯವರ AIMIM ಪಕ್ಷ ಐದು ಸ್ಥಾನಗಳನ್ನು ಗೆಲ್ಲಲು ಕಾರಣವೇನು ಗೊತ್ತೇ?

ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಮೊದಲು ನಾನು ಕಿಷನ್‌ಗಂಜ್ ಲೋಕಸಭಾ ಕ್ಷೇತ್ರದ ಬಹದ್ದೂರ್‌ಗಂಜ್‌ನಲ್ಲಿ ಒಬ್ಬ ಹಿರಿಯರನ್ನು ಮಾತನಾಡಿಸಿ, ಈ ಬಾರಿ ಹಲವಾರು ಮಂದಿ ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ (AIMIM) ಟಿಕೆಟ್ ಆಕಾಂಕ್ಷಿಗಳು ಇರುವುದರಿಂದ ಯಾರಿಗೆ ಟಿಕೆಟ್ ಸಿಗಬೇಕು ಎಂದು ಕೇಳಿದೆ. ಅವರು ಉತ್ತರಿಸಿದರು: “ಯಾರಿಗೆ ಕೊಟ್ಟರೆ ನನಗೇನು? ನನಗೆ ಅಸಾದುದ್ದೀನ್ ಓವೈಸಿ ಮತ್ತು ಅಖ್ತರುಲ್ ಇಮಾನ್ ಮಾತ್ರ ಗೊತ್ತು. ಯಾರು ಅಭ್ಯರ್ಥಿಯಾದರೂ ನಾನು ಓಟು ಹಾಕುವುದು ಎಐಎಂಐಎಂಗೇ.”

ಬಿಹಾರದಲ್ಲಿ ಚುನಾವಣೆಯ ಘೋಷಣೆ ಆಗುವ ಬಹಳ ಮೊದಲೇ ಕಿಷನ್‌ಗಂಜ್ ಲೋಕಸಭಾ ಕ್ಷೇತ್ರದ ಹಲವು ಕಡೆಗಳಲ್ಲಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಮತ್ತು ರಾಜ್ಯಾಧ್ಯಕ್ಷ ಅಖ್ತರುಲ್ ಇಮಾನ್ ಅವರ ವ್ಯಕ್ತಿತ್ವದ ಮೂರ್ತಿ ಪ್ರತಿಷ್ಠಾಪನೆಯಾಗಿತ್ತು. ಕಿಷನ್‌ಗಂಜ್ ಲೋಕಸಭಾ ಕ್ಷೇತ್ರದಲ್ಲಿ ಆರು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಅವುಗಳಲ್ಲಿ ನಾಲ್ಕರಲ್ಲಿ ಎಐಎಂಐಎಂ ಗೆದ್ದಿದೆ. ಅವೆಂದರೆ, ಅಮೋರ್, ಬೈಸಿ, ಬಹಾದ್ದೂರ್‌ಗಂಜ್ ಮತ್ತು ಕೋಚಧಮನ್. ಅದು 2019ರ ಉಪಚುನಾವಣೆಯಲ್ಲಿ ಗೆದ್ದಿದ್ದ ಕಿಷನ್‌ಗಂಜ್ ಕ್ಷೇತ್ರವನ್ನು ಕಳೆದುಕೊಂಡಿತು. ಆದರೆ, ಅರಾರಿಯಾ ಲೋಕಸಭಾ ಕ್ಷೇತ್ರದ ಜೋಕಿಹಾತ್ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವುದರೊಂದಿಗೆ ತನ್ನ ಸ್ಥಾನವನ್ನು ಐದಕ್ಕೆ ಏರಿಸಿಕೊಂಡಿತು.

ಈ ಐದೂ ಸ್ಥಾನಗಳನ್ನು ಅದು ಆರಾಮವಾಗಿ ದೊಡ್ಡ ಅಂತರದಿಂದ ಗೆದ್ದಿತು. ಅಮೋರ್ ಕ್ಷೇತ್ರದಲ್ಲಿ ಅಖ್ತರುಲ್ ಇಮಾನ್ 52,515 ಮತಗಳ ಭಾರೀ ಅಂತರದಿಂದ ಗೆದ್ದರು. ಇದು ರಾಜ್ಯದಲ್ಲಿಯೇ ಎರಡನೇ ದೊಡ್ಡ ಗೆಲುವು. ಅದೇ ರೀತಿ ಅನ್ಝಾರಾ ನಯೀಮಿ ಬಹದ್ದೂರ್‌ಗಂಜ್ ಕ್ಷೇತ್ರದಲ್ಲಿ 45,215 ಮತಗಳ ಅಂತರದಿಂದ ಗೆದ್ದಿದ್ದಾರೆ. ಇಝಾರ್ ಅಸ್ಫಿ ಕೋಚಧಮನ್ ಕ್ಷೇತ್ರದಲ್ಲಿ 36,143 ಮತಗಳಿಂದ, ಸೈದ್ ರುಕ್ನುದ್ದೀನ್ ಆಹ್ಮದ್ ಬೈಸಿಯಲ್ಲಿ 16,373 ಮತಗಳಿಂದ ಮತ್ತು ಶಾನವಾಝ್ ಕಿಹಾತ್‌ನಲ್ಲಿ 7,383 ಮತಗಳಿಂದ ಗೆದ್ದಿದ್ದಾರೆ.

ದಿಢೀರ್ ಯಶಸ್ಸು

2015ರ ಚುನಾವಣೆಯಲ್ಲಿ ಎಐಎಂಐಎಂ ಸೀಮಾಂಚಲದಲ್ಲಿ ಮೊದಲ ಬಾರಿಗೆ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಅದು ಒಂದೂ ಕ್ಷೇತ್ರದಲ್ಲಿ ಗೆಲ್ಲಲಿಲ್ಲವಾದರೂ ಒಂದು ಕ್ಷೇತ್ರದಲ್ಲಿ ಎರಡನೇ ಸ್ಥಾನಿಯಾಯಿತು. ನಾಲ್ಕು ವರ್ಷಗಳ ನಂತರ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಕಿಷನ್‌ಗಂಜ್ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಪಕ್ಷವು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿತು. ಅವೆಂದರೆ, ಕೋಚಧಮನ್ ಮತ್ತು ಬಹದ್ದೂರ್‌ಗಂಜ್. ಅಮೋರ್ ಮತ್ತು ಕಿಷನ್‌ಗಂಜ್ ಕ್ಷೇತ್ರಗಳಲ್ಲಿ ಅದು ಎರಡನೇ ಸ್ಥಾನದಲ್ಲಿತ್ತು. ಅದೇ ವರ್ಷದ ಅಕ್ಟೋಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಪಕ್ಷವು ಕಿಷನ್‌ಗಂಜ್ ಕ್ಷೇತ್ರದಲ್ಲಿ ಗೆದ್ದಿತು.

ಕೋಚಧಮನ್

ಕೋಚಧಮನ್ ಕ್ಷೇತ್ರದಲ್ಲಿ ಮಾತ್ರವೇ ಎಐಎಂಐಎಂ ಒಂದು ವರ್ಷ ಮೊದಲೇ ಅನಧಿಕೃತವಾಗಿ ಅಭ್ಯರ್ಥಿಯನ್ನು ಘೋಷಿಸಿತ್ತು. ಮೊಹಮ್ಮದ್ ಇಝಾರ್ ಅಸ್ಫಿ 2002ರಲ್ಲಿ ಪಂಚಾಯತ್ ಅಧ್ಯಕ್ಷರಾಗಿ ರಾಜಕೀಯ ಪ್ರವೇಶಿಸಿದ್ದರು. ಅವರು 2005ರ ಫೆಬ್ರವರಿ ಮತ್ತು ಅಕ್ಟೋಬರ್‌ನಲ್ಲಿ ಎರಡು ಬಾರಿ ಆರ್‌ಜೆಡಿ ಅಭ್ಯರ್ಥಿ ಅಖ್ತರುಲ್ ಇಮಾನ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ನಂತರ ಇಮಾನ್ ಅವರ ನಿಕಟವರ್ತಿಯಾಗಿದ್ದ ಮುಜಾಹಿದ್ ಆಲಂ ಜೆಡಿಯು ಸೇರಿ ಅವರ ವಿರುದ್ಧವೇ ಸ್ಪರ್ಧಿಸಿದಾಗ ಆಸ್ಫಿ ಅವರು ಇಮಾನ್ ಅವರನ್ನು ಬೆಂಬಲಿಸಿದ್ದರು. ಇಝಾರ್ ಅಸ್ಫಿ 2019ರ ಲೋಕಸಭಾ ಚುನಾವಣೆಯ ವೇಳೆ ಎಐಎಂಐಎಂ ಸೇರಿದಾಗ ಇಮಾನ್ ಅವರು 2005 ಮತ್ತು 2014ರಲ್ಲಿ ತಾನು ಆರ್‌ಜೆಡಿ ಶಾಸಕನಾಗಿ ಪ್ರತಿನಿಧಿಸುತ್ತಿದ್ದ ಕೋಚಧಮನ್ ಕ್ಷೇತ್ರದ ಟಿಕೆಟ್ ನೀಡುವ ಭರವಸೆ ನೀಡಿದ್ದರು.

ಅಸ್ಫಿ ಅವರ ಗೆಲುವು ಸುಲಭವಾಗಲು ಕಾರಣವೆಂದರೆ, ಅವರ ಪ್ರಮುಖ ಪ್ರತಿಸ್ಪರ್ಧಿ ಜೆಡಿಯು ಹಾಲಿ ಶಾಸಕ ಮುಜಾಹಿದ್ ಆಲಂ ಆಗಿದ್ದು, ಮಹಾಘಟಬಂಧನ್ ಅಭ್ಯರ್ಥಿ ಆಗಿರಲಿಲ್ಲ. ಕೋಚಧಮನ್‌ಗೆ ಈ ತನಕ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸದ ದಾಖಲೆಯಿದೆ. 2014ರ ಉಪಚುನಾವಣೆಯಲ್ಲಿ ಮುಜಾಹಿದ್ ಆಲಂ ಗೆದ್ದಾಗ ಜೆಡಿಯು ಬಿಜೆಪಿಯ ಜೊತೆಗೆ ಇರಲಿಲ್ಲ. ಮತ್ತೆ ಅವರು 2015ರಲ್ಲಿ ಗೆದ್ದಾಗ ಜೆಡಿಯು ಮಹಾಘಟಬಂಧನ್ ಭಾಗವಾಗಿತ್ತು. ಜೆಡಿಯು ಮರಳಿ ಎನ್‌ಡಿಎ ಸೇರಿದಾಗಲೇ ಮುಂದಿನ ಚುನಾವಣೆಯಲ್ಲಿ ಮುಜಾಹಿದ್ ಆಲಂ ಸೋಲು ಕಟ್ಟಿಟ್ಟ ಬುತ್ತಿಯಾಗಿದ್ದು, ಅವರು ಈ ನಡೆಯನ್ನು ವಿರೋಧಿಸಿದ್ದರು.

ಈ ಚುನಾವಣೆಯನ್ನು ಎಐಎಂಐಎಂ ಬಿಜೆಪಿ ವಿರುದ್ಧ ನೇರ ಹೋರಾಟ ಎಂದು ಬಿಂಬಿಸುವಲ್ಲಿ ಯಶಸ್ವಿಯಾಯಿತು. ಅದರ ಬೆಂಬಲಿಗರು ಆಲಂ ಅವರನ್ನು ಬಿಜೆಪಿ ಅಭ್ಯರ್ಥಿ ಎಂದೇ ಸಂಬೋಧಿಸುತ್ತಿದ್ದರು. ಜೆಡಿಯು ಈ ಭಾವನೆಯನ್ನು ದೂರ ಮಾಡಲು ವಿಫಲವಾಯಿತು. ಅಲ್ಲದೇ ಈ ಕ್ಷೇತ್ರದಲ್ಲಿ ಆರ್‌ಜೆಡಿ ನಾಯಕತ್ವ ಕಾಲಾಂತರದಲ್ಲಿ ದುರ್ಬಲವಾಗಿದೆ.

ಅಮೋರ್

 

ಇಮಾನ್ ಅವರು ಗೆದ್ದಿರುವ ಅಮೋರ್ ಕ್ಷೇತ್ರವು ನಿರಂತರವಾಗಿ ನೆರೆ ಮತ್ತು ವಲಸೆಯಿಂದ ಬಾಧಿತವಾಗಿದ್ದು, ಯಾವತ್ತೂ ಆಶಾಕಿರಣವೊಂದನ್ನು ಎದುರು ನೋಡುತ್ತಿರುತ್ತದೆ. ಈ ಕಾರಣದಿಂದಲೇ 2010ರಲ್ಲಿ ಸಬಾ ಜಾಫರ್ ಅವರು ಬಿಹಾರದಲ್ಲಿ ಬಿಜೆಪಿಯ ಮೊತ್ತಮೊದಲ ಮುಸ್ಲಿಂ ಶಾಸಕರಾದರು. ತನ್ನ ಸರಳ ಜೀವನಕ್ಕೆ ಹೆಸರಾಗಿ ಆರು ಬಾರಿ ಶಾಸಕರಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಅಬ್ದುಲ್ ಜಲೀಲ್ ಮಸ್ತಾನಾ ಆಗಲೇ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದರು. ಅವರು ಅಸಾದುದ್ದೀನ್ ಒವೈಸಿಯನ್ನು “ಮವೇಶಿ” ಎಂದರೆ ಹಸು ಎಂದು ಕರೆದು ರಾಹುಲ್ ಗಾಂಧಿಯ ಎದುರೇ ಅವರಿಗೆ ಬೆದರಿಕೆ ಹಾಕಿದಾಗ ತನ್ನದೇ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದುಕೊಂಡಿದ್ದರು. “ನಾನು ಆತನನ್ನು ಒವೈಸಿ ಎಂದು ಕರೆಯುವುದಿಲ್ಲ; ಆತ ಇಲ್ಲಿಗೆ ಮೇಯಲು ಬಂದಿರುವ ಮವೇಶಿ… ನಾವು ಆತನ ಹಲ್ಲು ಮತ್ತು ಸೊಂಟ ಮುರಿದು ಹೈದರಾಬಾದಿಗೆ ಕಳಿಸುತ್ತೇವೆ” ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಬಿಹಾರದಲ್ಲಿ ಗೆದ್ದಿದ್ದು ಮಹಾಘಟಬಂಧನ್; ಬಿಜೆಪಿ ಕಳ್ಳದಾರಿಯಲ್ಲಿ ಗೆಲವು ಸಾಧಿಸಿದೆ: ತೇಜಸ್ವಿ ಯಾದವ್

ಕುಲಹಿಯಾ ಮುಸ್ಲಿಮರು ಜಾಫರ್ ಅವರಿಗೆ ಮತ ಹಾಕಿದರೆ-ಎನ್‌ಡಿಎ ಮತಗಳು ಇಲ್ಲಿ ಸ್ಥಿರವಾಗಿರುವುದರಿಂದ ಅವರು ಸುಲಭವಾಗಿ ಗೆಲ್ಲುತ್ತಾರೆ ಎಂಬ ಭಯ ಎಐಎಂಐಎಂಗೆ ಇತ್ತು. ಆದರೆ, ಅದೃಷ್ಟ ಅದರ ಪರವಾಗಿತ್ತು. ಕುಲಹಿಯಾ ಮುಸ್ಲಿಮರ ಮಹೋನ್ನತ ನಾಯಕ ತಸ್ಲಿಮುದ್ದೀನ್ ಅವರ ಮಗ ಶಾನವಾಝ್ ಕೊನೆಯ ಕ್ಷಣದಲ್ಲಿ ಎಐಎಂಐಎಂ ಸೇರಿದರು. ಸ್ವತಃ ಜೋಕಿಹಾತ್‌ನಲ್ಲಿ ಸ್ಪರ್ಧಿಸಿದ ಶಾನವಾಝ್, ಒವೈಸಿಯ ಜೊತೆಗೆ ಅಮೋರ್ ಮತ್ತು ಬೈಸಿಯಲ್ಲಿಯೂ ಪ್ರಚಾರ ಮಾಡಿದ್ದರು. ಜೋಕಿಹಾತ್ ಮತ್ತು ಬೈಸಿಯಲ್ಲಿ ಸುರ್ಜಾಪುರಿ-ಕುಲಹಿಯಾ ಮುಸ್ಲಿಮರ ಏಕತೆಯಿಂದ ಎಐಎಂಐಎಂಗೆ ಲಾಭವಾಯಿತು.

ಬೈಸಿ

ಬೈಸಿಯಲ್ಲಿ ಎಐಎಂಐಎಂ ಹಿಂದೆ ಪಕ್ಷೇತರರಾಗಿ ಗೆದ್ದು ನಂತರ ಜೆಡಿಯು ಸೇದಿದ್ದ ಸೈಯದ್ ರುಕ್ನುದ್ದೀನ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಆರಿಸಿತ್ತು. ರುಕ್ನುದ್ದೀನ್ ಅವರು ಸುರ್ಜಾಪುರಿ ಮುಸ್ಲಿಮರು ಅಥವಾ ಕುಲಹಿಯಾ ಮುಸ್ಲಿಮರು ಆಗಿರಲಿಲ್ಲ. ಅವರು ಆರು ಬಾರಿ ಆರ್‌ಜೆಡಿ ಶಾಸಕರಾಗಿದ್ದ ಸುರ್ಜಾಪುರಿ ಮುಸ್ಲಿಮರಾದ ಅಬೂಸ್ ಸುಬಾನ್ ಅವರ ಎದುರು ಸ್ಪರ್ಧಿಸುತ್ತಿದ್ದರು. ಆದರೆ, ಅಮೋರ್‌ನಂತೆ ಬೈಸಿಯ ಮಸ್ಲಿಮರೂ ಒಂದು ಬದಲಾವಣೆ ಬಯಸಿದ್ದರು.

ಬಹದ್ದೂರ್‌ ಗಂಜ್

ಈ ಕ್ಷೇತ್ರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಎಐಐಎಂಎಸ್ ಅಭ್ಯರ್ಥಿ ಮುನ್ನುಡೆ ಸಾದಿಸಿದ್ದುದರಿಂದ ಇಲ್ಲಿ ಹಲವಾರು ಟಿಕೆಟ್ ಆಕಾಂಕ್ಷಿಗಳು ಇದ್ದರು. ಅವರು ಬೇರೆಬೇರೆ ಪಕ್ಷಗಳಿಗೆ ಸೇರಿದವರಾಗಿದ್ದರು. ಅವರೆಲ್ಲರೂ ನಾಲ್ಕು ಬಾರಿಯ ಕಾಂಗ್ರೆಸ್ ಶಾಸಕ ತೌಸೀಫ್ ಆಲಂ ಅವರನ್ನು ಸೋಲಿಸಲು ಬಯಸಿದ್ದರು. ವಿಶೇಷವೆಂದರೆ, ಈ ತೌಸೀಫ್ ಆಲಂ, ಕೋಚಧಮನ್ ಕ್ಷೇತ್ರದ ಎಐಎಂಐಎಂ ಅಭ್ಯರ್ಥಿ ಇಝಾರ್ ಅಸ್ಫಿ ಅವರ ಅಳಿಯ.

ಕಾಂಗ್ರೆಸ್ ಪಕ್ಷವು ಉರ್ದು ಕವಿ ಇಮ್ರಾನ್ ಪ್ರತಾಪ್‌ಘರಿ ಅವರನ್ನು ಎದುರು ನಿಲ್ಲಿಸಿಕೊಂಡು ಹಲವಾರು ಸಾರ್ವಜನಿಕ ಸಭೆಗಳನ್ನು ನಡೆಸಿ, ಒವೈಸಿ ವಿರುದ್ಧ ಕಾದಾಡಲು ಯತ್ನಿಸಿತು. ಈ ಒವೈಸಿ ಶಾಹೀನ್‌‌ ಬಾಗ್ ಹೋರಾಟದಲ್ಲಿ ಪಾಲುಗೊಂಡಿರುವ ಒಂದೇ ಒಂದು ಚಿತ್ರ ತೋರಿಸಲಿ ಅಥವಾ ಬಿಜೆಪಿಗೆ ಹತ್ತಿರವಾಗಿರುವ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಜೊತೆ ತನ್ನ ಸಾಮೀಪ್ಯವನ್ನು ಸಮರ್ಥಿಸಲಿ ಎಂದು ಇಮ್ರಾನ್ ಸವಾಲು ಹಾಕಿದರೂ ಅದು ಕೆಲಸ ಮಾಡಲಿಲ್ಲ.

ನಾನು ಕಂಡುಕೊಂಡ ವಿಷಯ ಎಂದರೆ, ಸೀಮಾಂಚಲದ ಮುಸ್ಲಿಂ ಮತದಾರರು ಓವೈಸಿ ಯಾವತ್ತೂ ಸಮುದಾಯದ ಪರವಾಗಿ ನಿಂತಿರುತ್ತಾರೆ ಎಂದು ಭಾವಿಸುತ್ತಾರೆ. ಒವೈಸಿಯ ಮೇಲಿನ ವೈಯಕ್ತಿಕ ದಾಳಿಯು ಬಹದ್ದೂರ್ ಗಂಜ್ ಮತ್ತು ಅಮೋರ್‌ನಲ್ಲಿ ಕಾಂಗ್ರೆಸಿಗೆ ತಿರುಗಬಾಣವಾಯಿತು!

ಬೇರೆಯೇ ಚಿತ್ರ

ಆದರೆ, ಜೋಕಿಹಾತ್‌ನಲ್ಲಿ ಚಿತ್ರ ಬೇರೆಯಾಗಿದ್ದು, ಅಸಾಧ್ಯ ಪರಿಸ್ಥಿತಿಯಲ್ಲಿ ಎಐಎಂಐಎಂಗೆ ಜಯ ಒಲಿದುಬಂತು. ಆರ್‌ಜೆಡಿ ಸಂಸದ ಮತ್ತು ಕೇಂದ್ರ ಮಂತ್ರಿ ತಸ್ಲಿಮುದ್ದೀನ್ 2017ರಲ್ಲಿ ಮೃತಪಟ್ಟರು. ನಂತರದ ಉಪಚುನಾವಣೆಯಲ್ಲಿ ಅವರ ಎರಡನೇ ಮಗ ಸರ್ಫರಾಜ್ ಆಲಂ ಆಗ ಶಾಸಕರಾಗಿದ್ದು, ತಂದೆ ಪ್ರತಿನಿಧಿಸುತ್ತಿದ್ದ ಅರಾರಿಯಾ ಲೋಕಸಭಾ ಸ್ಥಾನವನ್ನು ಗೆದ್ದರು. ಅದೇ ಹೊತ್ತಿಗೆ ತಸ್ಲಿಮುದ್ದೀನ್ ಅವರ ಕೊನೆಯ ಮಗ ಆರ್‌ಜೆಡಿ ಅಭ್ಯರ್ಥಿಯಾಗಿ ಜೋಕಿಹಾತ್ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದರು.

2017ರ ಲೋಕಸಭಾ ಚುನಾವಣೆಯಲ್ಲಿ ಸೋತ ಸರ್ಫರಾಝ್‌ಗೆ ತನ್ನ ತಮ್ಮನಿಂದ ಜೋಕಿಹಾತ್ ವಿಧಾನಸಭಾ ಕ್ಷೇತ್ರ ಬೇಕಿತ್ತು. ತನಗೆ ಟಿಕೆಟ್ ನೀಡುವುದಾಗಿ ತೇಜಸ್ವಿ ಯಾದವ್ ಭರವಸೆ ನೀಡಿದ್ದರೂ, ತಮ್ಮನಿಗೆ ನೀಡಿದರೆಂದು ಅಸಮಾಧಾನಗೊಂಡರು. ಆಗಲೇ ಎಐಎಂಐಎಂ ಹಿಂದಿನ ಜೆಡಿಯು ಅಭ್ಯರ್ಥಿ ಮುರ್ಶಿದ್ ಆಲಂ ಅವರನ್ನು ಘೋಷಿಸಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಪಕ್ಷ ಸೇರಿದ ಶಾನವಾಝ್‌ಗೆ ಟಿಕೆಟ್ ದೊರೆಯಿತು!

ಕಿಷನ್‌ಗಂಜ್ ಹಿನ್ನಡೆ

ಕಿಷನ್‌ಗಂಜ್‌ನಲ್ಲಿ ಪಕ್ಷದ ಹಿನ್ನಡೆಗೆ ಹಿಂದಿನ ಶಾಸಕರ ನಿಷ್ಕ್ರಿಯತೆ ಕಾರಣ. ಎಐಎಂಐಎಂ ಪಕ್ಷದ ಕಮರುಲ್ ಹೊಡಾ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಕಾಂಗ್ರೆಸ್‌ನ ಕೋಟೆ ಮುರಿದು ಕಾಂಗ್ರೆಸಿಗೆ ಇಡಗಂಟು ಇರದಂತೆ ಮಾಡಿದ್ದರು. ಆದರೆ, ನಂತರ ಕಾಂಗ್ರೆಸ್ ಈ ಸ್ಥಾನವನ್ನು ಮರಳಿ ಗಳಿಸಿ, ಎಐಎಂಐಎಂ ಪಕ್ಷವನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ.

ಈ ರೀತಿಯ ನವಾಬಶಾಹಿ ತಂತ್ರಗಾರಿಕೆಗಳು ಅಸಾದುದ್ದೀನ್ ಓವೈಸಿ ಪಕ್ಷದ ಯಶಸ್ಸನ್ನು ಖಾತರಿಪಡಿಸಿವೆ ಎಂಬುದು ಈ ವಿಶ್ಲೇಷಣೆಯಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಕೃಪೆ: ತನ್ಜಿಲ್ ಆಸಿಫ್. (ತನ್ಜಿಲ್ ಆಸಿಫ್ ಬಿಹಾರದ ಸೀಮಾಂಚಲ್ ಮೂಲದ ಸ್ವತಂತ್ರ ಪತ್ರಕರ್ತ. ಅವರು ಈ ಪ್ರದೇಶದಲ್ಲಿ ಮೈನ್ ಮೀಡಿಯಾ ಎಂಬ ಸ್ಥಳೀಯ ಸುದ್ದಿಸಂಸ್ಥೆಯನ್ನು ನಡೆಸುತ್ತಾರೆ)

– ದಿ ವೈರ್

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಪ್ರಧಾನಿ ಮೋದಿ – ಅಮಿತ್‌ ಶಾ ಜೋಡಿಗೆ ಬೆವರಿಳಿಸಿದ ಬಿಹಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights