ಬಿಹಾರದಲ್ಲಿ ಗೆದ್ದಿದ್ದು ಮಹಾಘಟಬಂಧನ್; ಬಿಜೆಪಿ ಕಳ್ಳದಾರಿಯಲ್ಲಿ ಗೆಲವು ಸಾಧಿಸಿದೆ: ತೇಜಸ್ವಿ ಯಾದವ್

ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟವು “ಚೋರ್ ದರ್ವಾಜಾ” (ಕಳ್ಳದಾರಿ) ಮೂಲಕ ಅಧಿಕಾರದ ಗದ್ದುಗೆ ಹಿಡಿದಿದೆ ಎಂದು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ.

ಬಿಹಾರದಲ್ಲಿ ಮತಗಳ ಎಣಿಕೆ ಅಸಾಧಾರಣ ರೀತಿಯಲ್ಲಿ ನಿಧಾನವಾಗಿ ಸಾಗಿತ್ತು. “ಕೋವಿಡ್ ಮಾರ್ಗಸೂಚಿ ಪ್ರಕಾರ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು (ಇವಿಎಂ) ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿದ್ದರಿಂದ ಫಲಿತಾಂಶ ಬರುವುದು ತಡರಾತ್ರಿಯಾಗಿತ್ತು. ಈ ನಡುವೆ ಅಂಚೆ ಮತಪತ್ರಗಳ ಎಣಿಕೆಗೆ ಸಂಬಂಧಿಸಿದಂತೆ, ವಿದ್ಯುನ್ಮಾನ ಮತಯಂತ್ರಗಳ ಲೋಪದ ಬಗ್ಗೆ ಹಾಗೂ ಗೆದ್ದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸದೆ ವಂಚನೆ ಮಾಡುತ್ತಿದೆ ಎಂದು ಆರ್ ಜೆಡಿ ಚುನಾವಣಾ ಆಯೋಗದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿತ್ತು.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ ಗೆಲುವು ಸಾಧಿಸಿದೆ. ನಿತೀಶ್ ಕುಮಾರ್ ಸೋಲು ಒಪ್ಪಿಕೊಳ್ಳಬೇಕು. ಬಿಜೆಪಿ ಮತ್ತು ಜೆಡಿಯು ಪಕ್ಷಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡು ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಒತ್ತಡ‌ ಹೇರಿ ಅಧಿಕಾರ ಹಿಡಿದಿವೆ ಎಂದು ಆರೋಪಿಸಿದ್ದಾರೆ.

ಈಗಾಗಲೇ ಮಹಾಘಟಬಂಧನದ ನಾಯಕರು ಚುನಾವಣಾ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಆಯೋಗದ ಮುಂದಿನ ನಡೆಗಳನ್ನು ಎದುರು ನೋಡುತ್ತಿದ್ದಾರೆ. ಈ ನಡುವೆ ಪಾಟ್ನಾದಲ್ಲಿ ಗುರುವಾರ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿ ಯಾದವ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಆರ್ ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನವು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಕಠಿಣ ಹೋರಾಟ ನೀಡಿ 110 ಸ್ಥಾನಗಳನ್ನು ಗೆದ್ದುಕೊಂಡಿತು. ತೇಜಸ್ವಿ ಯಾದವ್ ಅವರು ಮುಖ್ಯಮಂತ್ರಿಯಾಗಬೇಕೆಂಬ ಭರವಸೆಯನ್ನು ಎನ್‌ಡಿಎ ಕಸಿದುಕೊಂಡಿದ್ದರೂ, ಅವರ ಪಕ್ಷ ರಾಷ್ಟ್ರೀಯ ಜನತಾದಳವು ಒಟ್ಟು 23.1 ಶೇಕಡಾ ಮತಗಳೊಂದಿಗೆ 75 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

“ಕೇವಲ 40 ಸ್ಥಾನಗಳನ್ನು ಪಡೆದ ನಂತರವೂ ನೀವು (ನಿತೀಶ್ ಕುಮಾರ್) ಮುಖ್ಯಮಂತ್ರಿ ಆಗಬೇಕೆಂಬ ಕನಸು ಕಾಣುತ್ತಿದ್ದೀರಿ. ಜಾನಾದೇಶವನ್ನು ಒಮ್ಮೆ ವಿಶ್ಲೇಷಿಸಿ ನೋಡಿ, ಅದು ನಿಮ್ಮ ವಿರುದ್ಧ ಇದೆ. ಹೀಗಿದ್ದರೂ ನೀವು ಮುಖ್ಯಮಂತ್ರಿ ಹುದ್ದೆಯನ್ನು ಪಡೆದರೆ, ಅದು ಎಷ್ಟು ಕಾಲ ಉಳಿಯುತ್ತದೆ ಎಂಬುದು ದೇವರಿಗೆ ಮಾತ್ರ ಗೊತ್ತು” ಎಂದು ಆರ್ ಜೆಡಿ ನಾಯಕ ಮನೋಜ್ ಝಾ ಪರೋಕ್ಷವಾಗಿ ನಿತೀಶ್ ಕುಮಾರ್ ಗೆ ಮುಖ್ಯಮಂತ್ರಿ ಸ್ಥಾನ‌ ಬಿಡುವಂತೆ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಪ್ರಧಾನಿ ಮೋದಿ – ಅಮಿತ್‌ ಶಾ ಜೋಡಿಗೆ ಬೆವರಿಳಿಸಿದ ಬಿಹಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights