ಕನ್ನಡ, ತುಳು, ಕೊಡವ ಭಾಷೆಗಳ ಅಧ್ಯಯನ ಕೇಂದ್ರಗಳ ಬಗ್ಗೆ ಡಿಕೆ ಸುರೇಶ್ ಧ್ವನಿ!
ವಿಶ್ವ ವಿದ್ಯಾಲಯಗಳಲ್ಲಿ ಕನ್ನಡ, ತುಳು, ಕೊಡವ ಭಾಷೆಗಳ ಅಧ್ಯಯನ ಕೇಂದ್ರ ಅಗತ್ಯವಿರುವ ಬಗ್ಗೆ ಲೋಕಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಧ್ವನಿ ಎತ್ತಿದ್ದಾರೆ.
ಸೋಮವಾರ ಸಂಸತ್ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಈ ವಿಚಾರ ಪ್ರಸ್ತಾಪಿಸಿದ ಸಂಸದರು, ‘ದೇಶದಲ್ಲಿ ಕನ್ನಡ, ತುಳು, ಕೊಡವದಂತಹ ಪ್ರಾದೇಶಿಕ ಭಾಷೆಗಳು ಅಪಾಯ ಎದುರಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೇಂದ್ರ ಮತ್ತು ರಾಜ್ಯ ವಿವಿಗಳಲ್ಲಿ ಈ ಭಾಷೆಗಳ ಕುರಿತ ಅಧ್ಯಯನ ಕೇಂದ್ರ ಸ್ಥಾಪಿಸುವ ಯೋಜನೆ ಇದೆಯೇ?’ ಎಂದು ಪ್ರಶ್ನಿಸಿದರು.
ಈ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ.ರಮೇಶ್ ಪೊಖ್ರಿಯಾಲ್ ನಿಶಾಂಕ್, ‘ಸದ್ಯ ದೇಶದಲ್ಲಿ ಭಾಷೆಗಳ ಬಲವರ್ಧನೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಈ ವಿಚಾರವಾಗಿ ಒಂಭತ್ತು ಕೇಂದ್ರ ಹಾಗೂ 7 ರಾಜ್ಯ ವಿವಿಗಳಲ್ಲಿ ಈ ಅಧ್ಯಯನ ಕೇಂದ್ರ ಆರಂಭಿಸಲಾಗಿದೆ. ಸದಸ್ಯರು ಚರ್ಚಿಸಿದಂತೆ ಕರ್ನಾಟಕದಲ್ಲಿನ ಭಾಷೆಗಳ ಕುರಿತ ಸಂರಕ್ಷಣೆಗೆ ಕರ್ನಾಟಕ ವಿಶ್ವವಿದ್ಯಾಲಯ ನೇತೃತ್ವದಲ್ಲಿ ಅಧ್ಯಯನ ಕೇಂದ್ರ ಮಾಡಿ ಕೆಲಸ ಮಾಡಲಾಗುತ್ತಿದೆ.
ಉಳಿದಂತೆ ಉತ್ತರ್ ಪುರಿ ಭಾಷೆ ಸಂರಕ್ಷಣೆಗೆ ತೇಜಪುರ್ ವಿವಿ, ರಾಜೀವ್ ಗಾಂಧಿ ವಿವಿ ಇಟಾನಗರ್, ಸಿಕ್ಕಿಂ ವಿವಿಗಳಲ್ಲಿ ಕೇಂದ್ರ ಸ್ಥಾಪಿಸಲಾಗಿದೆ. ಜಂಜತಿ ಭಾಷೆ ರಕ್ಷಣೆಗೆ ಅಮರಕಂಠದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಜಂಜತಿ ವಿವಿ, ಜಾರ್ಖಂಡ್ ಕೇಂದ್ರೀಯ ವಿವಿ ಸೇರಿದಂತೆ ಅನೇಕ ಭಾಷೆಗಳ ಅಧ್ಯಯನಕ್ಕೆ ವಿವಿಗಳಲ್ಲಿ ಕೇಂದ್ರ ಆರಂಭಿಸಲಾಗಿದೆ’ ಎಂದರು.