ಮೈಸೂರು-ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್; ಕಾಯ್ದಿರಿಸದ ರೈಲು ಸಂಚಾರ ಆರಂಭ!
ಮೈಸೂರು ಬೆಂಗಳೂರು ಸೇರಿದಂತೆ ನೈರತ್ಯ ರೈಲ್ವೆಯ ಹಲವು ಭಾಗಗಳಿಗೆ ಸೋಮವಾರದಿಂದ ಕಾಯ್ದಿರಿಸದ ರೈಲುಗಳ ಸಂಚಾರವನ್ನು ಅರಂಭಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.
ಹೀಗಾಗಿ, ಬೆಂಗಳೂರು-ಮೈಸೂರು ನಡುವೆ ಅನ್-ರಿಸರ್ವ್ ಪ್ಯಾಸೆಂಜರ್ ರೈಲು ಸಂಚಾರ ಆರಂಭವಾಗಲಿದೆ. ರೈಲುಗಳು ನಾಯಂಡಹಳ್ಳಿ, ಜ್ಞಾನ ಭಾರತಿ, ಕೆಂಗೇರಿ, ಹೆಜ್ಜಾಲ, ಬಿಡದಿ, ಕೇತೋಹಳ್ಳಿ, ರಾಮನಗರ, ಚನ್ನಪಟ್ಟಣ, ಶೆಟ್ಟಿಹಳ್ಳಿ, ನಿಡಘಟ್ಟ, ಮದ್ದೂರು, ಹನಕೆರೆ, ಮಂಡ್ಯ, ಯಲಿಯೂರು, ಬ್ಯಾಡರಹಳ್ಳಿ, ಚಂದಗಿರಿ ಕೊಪ್ಪಲ್, ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ನಾಗನಹಳ್ಳಿಯಲ್ಲಿ ನಿಲುಗಡೆ ಹೊಂದಿದೆ.
06255 ಸಂಖ್ಯೆಯ 16 ಬೋಗಿಗಳ ರೈಲು ಬೆಂಗಳೂರು-ಮೈಸೂರು ನಡುವೆ ಸಂಚರಿಸಲಿದೆ. ಬೆಂಗಳೂರಿನಿಂದ ಸಂಜೆ 7ಕ್ಕೆ ಹೊರಟು ರಾತ್ರಿ 10ಕ್ಕೆ ಮೈಸೂರು ತಲುಪಲಿದೆ. 06256 ಸಂಖ್ಯೆ ರೈಲು ಬೆಳಗ್ಗೆ 6.10ಕ್ಕೆ ಮೈಸೂರಿನಿಂದ ಹೊರಟು 9.15ಕ್ಕೆ ಬೆಂಗಳೂರಿಗೆ ತಲುಪುತ್ತದೆ.
06257 ಸಂಖ್ಯೆಯ ರೈಲು ಬೆಳಗ್ಗೆ 9.20ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12.45ಕ್ಕೆ ಮೈಸೂರಿಗೆ ಆಗಮಿಸಲಿದೆ. 06258 ಸಂಖ್ಯೆ ರೈಲು ಮೈಸೂರಿನಿಂದ ಮಧ್ಯಾಹ್ನ 1.45ಕ್ಕೆ ಹೊರಟು ಸಂಜೆ 5ಕ್ಕೆ ಬೆಂಗಳೂರು ತಲುಪಲಿದೆ ಎಂದು ಮೈಸೂರು ವಿಭಾಗದ ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮರ್ಯಾದಾ ಹತ್ಯೆ: ಅಂತರ್ಜಾತಿ ವಿವಾಹಕ್ಕೆ ವಿರೋಧ; ತಂಗಿಯ ಪತಿಯನ್ನೇ ಕೊಂದ ಸೋದರರು

