ಕೊರೊನಾ: ಬೆಂಗಳೂರಿನ 50,000 ಅಂಗಡಿಗಳಿಗೆ ಶಾಶ್ವತ ಬೀಗ!

ಕೊರೊನಾ ರೋಗದ ಕಾರಣದಿಂದಾಗಿ ಬೆಂಗಳೂರಿನ ಸುಮಾರು 50,000 ಕ್ಕೂ ಹೆಚ್ಚು ಅಂಗಡಿಗಳು ಶಾಶ್ವತವಾಗಿ ಮುಚ್ಚಿವೆ. ಅಲ್ಲದೆ, ಈಗ ಆಂರಭಗೊಳ್ಳುತ್ತಿರುವ ಹಬ್ಬದ ಸೀಸನ್‌ನಲ್ಲಿಯೂ ಹೆಚ್ಚಿನ ಪ್ರಮಾಣದ ಮಾರಾಟ ವಹಿವಾಟು ನಡೆಯದೇ ಹೋದಲ್ಲಿ ಮತ್ತೂ ಅನೇಕ ಅಂಗಡಿಗಳು ಮುಚ್ಚುವ ಹಾದಿ ಹಿಡಿಯಲಿವೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ರೆಡಿಮೇಡ್ ಉಡುಪುಗಳು, ಪಾದರಕ್ಷೆಗಳು, ಲೇಖನ ಸಾಮಗ್ರಿಗಳು, ಮೊಬೈಲ್ ಪರಿಕರಗಳು ಮತ್ತು ಸಣ್ಣ ತಿನಿಸುಗಳನ್ನು ಮಾರಾಟ ಮಾಡುವ ಅಂಗಡಿಗಳು ಸೇರಿದಂತೆ 50 ಸಾವಿರ ಅಂಗಡಿಗಳಿಗೆ ಶಾಶ್ವತವಾಗಿ ಬೀಗ ಹಾಕಲಾಗಿದೆ. ಇದರಿಂದಾಗಿ ಲಕ್ಕಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

ಮುಚ್ಚಲ್ಪಟ್ಟ ಅಂಗಡಿಗಳ ಮುಂದೆ ’ಟು-ಲೆಟ್’ ಬೋರ್ಡುಗಳ ನೇತಾಡುತ್ತಿರುವುದು ಬೆಂಗಳೂರಿನಾದ್ಯಂತ ಕಾಣುವ ಸಾಮಾನ್ಯ ದೃಶ್ಯವಾಗಿದೆ.

ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಕೆಸಿಸಿಐ) ಪ್ರಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಿತಿಯಲ್ಲಿ ಸುಮಾರು 4 ಲಕ್ಷ ಅಂಗಡಿಗಳಿದ್ದು, ಅದರಲ್ಲಿ 12% ರಿಂದ 15% ಮುಚ್ಚಲಾಗಿದೆ, ಅಷ್ಟೇ ಅಲ್ಲದೆ ಇನ್ನೂ 8% -10% ಅಂಗಡಿಗಳು ಮುಚ್ಚುವ ಹಾದಿಯಲ್ಲಿದೆ ಎನ್ನಲಾಗಿದೆ.

ಪ್ರಸ್ತುತ ಮುಚ್ಚಿರುವ ಹೆಚ್ಚಿನ ಅಂಗಡಿಗಳಲ್ಲಿ ಇತರ ರಾಜ್ಯಗಳ ಅಥವಾ ಬೆಂಗಳೂರಿನ ಹೊರಗಿನ ಕನ್ನಡಿಗರು ಬಾಡಿಗೆಗೆ ಪಡೆದದ್ದಾಗಿದೆ.

“ಅವರು ತಮ್ಮ ಮನೆಗಳ ಬಾಡಿಗೆ ಮತ್ತು ಅಂಗಡಿಗಳಿಗೆ ಕೂಡಾ ಬಾಡಿಗೆ ಪಾವತಿಸಬೇಕಾಗಿರುವುದರಿಂದ ಇದು ಎರಡೆರೆಡು ಹೊಡೆತ ಕೊಡುತ್ತದೆ. ಕೊರೊನಾ ಕಾಲದಲ್ಲಿ ವ್ಯಾಪಾರವು 25% ದಷ್ಟೂ ಇಲ್ಲದಾಗ, ಅವುಗಳು ಹೇಗೆ ಉಳಿಸಿಕೊಳ್ಳುತ್ತಾರೆ?” ಎಫ್‌ಕೆಸಿಸಿಐ ಅಧ್ಯಕ್ಷ ಕೆ ಜನಾರ್ಧನ್ ಪ್ರಶ್ನಿಸಿದ್ದಾರೆ.

“ನಾನು ಏಪ್ರಿಲ್‌ನಿಂದ ಬಾಡಿಗೆ ಪಾವತಿಸಿಲ್ಲ. ಲಾಕ್‌ಡೌನ್ ಕಾರಣ ನನ್ನ ಅಂಗಡಿಯನ್ನು ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮುಚ್ಚಲಾಯಿತು. ನಂತರ ಅದನ್ನು ಮತ್ತೆ ತೆರೆದರೂ ಗ್ರಾಹಕರು ಇಲ್ಲ” ಎಂದು ಸಂಜಯ್‌ನಗರದ ರೆಡಿಮೇಡ್ ಗಾರ್ಮೆಂಟ್ಸ್ ಅಂಗಡಿಯ ಮಾಲೀಕ ವಿಶ್ವಜಿತ್ ಹೇಳಿದ್ದಾರೆ.

ಅವರು ತಿಂಗಳಿಗೆ 12,000 ರೂಗಳನ್ನು ಬಾಡಿಗೆಯಾಗಿ ಪಾವತಿಸುತ್ತಾರೆ ಮತ್ತು ವಿಶ್ವಜಿತ್ ಪಾವತಿಸಿದ 2.5 ಲಕ್ಷ ರೂ. ಮುಂಗಡ ಹಣದಿಂದ ಬಾಡಿಗೆ ಬಾಕಿ ಕಡಿತಗೊಳಿಸುವುದಾಗಿ ಮಾಲೀಕರು ಹೇಳಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಬೆಂಗಳೂರು: ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ನಿರ್ಬಂಧಿಸಿದ ಖಾಸಗಿ ಶಾಲೆಗಳು..!


ಬಿಜೆಪಿ ಶಾಸಕ ಮತ್ತು ಗರುಡ ಮಾಲ್ ಮಾಲೀಕ ಉದಯ್ ಗರುಡಾಚಾರ್ ಮಾತನಾಡಿ, ಬಾಡಿಗೆದಾರರು ನಾಲ್ಕು ತಿಂಗಳವರೆಗೆ ಯಾವುದೇ ವ್ಯವಹಾರವಿಲ್ಲದ ಕಾರಣ ಬಾಡಿಗೆ ಪಾವತಿಸುವುದು ಕಷ್ಟಕರವಾಗಿದೆ. ಮಾಲ್‌ನಲ್ಲೂ ಕಳೆದ ಎರಡು ತಿಂಗಳಲ್ಲಿ ನಾಲ್ಕು ಅಂಗಡಿಗಳು ಖಾಲಿ ಇವೆ. ಬಾಡಿಗೆದಾರರ ಪರಿಸ್ಥಿತಿಯನ್ನು ತಿಳಿದುಕೊಂಡು, ನಾವು ಬಾಡಿಗೆಗೆ ಒತ್ತಾಯಿಸುತ್ತಿಲ್ಲ. ಗರುಡ ಮಾಲ್‌ನಲ್ಲಿ, ನಾವು ಬಾಡಿಗೆದಾರರಿಂದ ಕೋರ್ ಏರಿಯಾ ನಿರ್ವಹಣೆ ಶುಲ್ಕವನ್ನು ಮಾತ್ರ ಸಂಗ್ರಹಿಸುತ್ತಿದ್ದೇವೆ. ಇದು ನಾವು ಪರಸ್ಪರ ಸಹಕರಿಸುವ ಸಮಯ ಎಂದು ಹೇಳಿದ್ದಾರೆ.

ಕೊರೊನಾ ಪ್ರಾರಂಭವಾಗುವುದಕ್ಕಿಂತ ಕೆಲವೇ ತಿಂಗಳುಗಳ ಮೊದಲು ಪ್ರಾರಂಭವಾದ ವ್ಯವಹಾರಗಳ ಮಾಲೀಕರು ಬಾಡಿಗೆ ಮತ್ತು ಸಾಲದ ಕಂತುಗಳನ್ನು ಪಾವತಿಸಲು ಹೆಣಗಾಡುತ್ತಿದ್ದಾರೆ.

“ನಾನು ಬೇಸರದಲ್ಲೆ ಭವಿಷ್ಯವನ್ನು ನೋಡುತ್ತಿದ್ದೇನೆ. ಏನು ಮಾಡಬೇಕೆಂದು ನನಗೆ ತಿಳಿದಿಲ್ಲ” ಎಂದು ಜನವರಿ ತಿಂಗಳಲ್ಲಿ ಸಂಜಯ್‌ನಗರದ ಬಳಿ ಉಪಾಹಾರ ಗೃಹವನ್ನು ಪ್ರಾರಂಭಿಸಿದ ಅವಿನಾಶ್ ಹೇಳುತ್ತಾರೆ.

ಕೃಪೆ: ಟೈಮ್ಸ್ ಆಫ್‌ ಇಂಡಿಯಾ


ಇದನ್ನೂ ಓದಿ:  ಯುವಜನರಿಗೆ ಉದ್ಯೋಗ ನೀಡಲು ಮೋದಿಗೆ ಸಾಧ್ಯವಿಲ್ಲ: ರಾಹುಲ್‌ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights