ಜನವರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – ಡಿಸಿಎಂ ಗೋವಿಂದ ಕಾರಜೋಳ

ಕಲಬುರ್ಗಿಯಲ್ಲಿ ಆಯೋಜಿಸಲು ಉದ್ದೇಶಿಸಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ವರ್ಷದ ಡಿಸೆಂಬರ್ ಅಥವಾ 2020ರ ಜನವರಿ ತಿಂಗಳಲ್ಲಿ ನಡೆಯೋ ಸಾಧ್ಯತೆಗಳಿವೆ. ಕಲಬುರ್ಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ, ಡಿಸಿಎಂ ಗೋವಿಂದ ಕಾರಜೋಳ ಈ ಸುಳಿವು ನೀಡಿದ್ದಾರೆ.

ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸಬೇಕೆಂಬ ಉದ್ದೇಶವಿದೆ. ಆದರೆ ಡಿಸೆಂಬರ್ ತಿಂಗಳಲ್ಲಿಯೇ ರಾಜ್ಯದಲ್ಲಿ ಉಪ ಚುನಾವಣೆ ನಡೆದರೆ ಸಮ್ಮೇಳನ ಆಯೋಜನೆಗೆ ಸಮಸ್ಯೆಯಾಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕ.ಸಾ.ಪ. ಅಧ್ಯಕ್ಷ ಮನು ಬಳಿಗಾರ ಜೊತೆ ಚರ್ಚೆ ಮಾಡಿದ್ದೇನೆ.

ಮುಂದಿನ ವರ್ಷದ ಜನವರಿ ತಿಂಗಳು ಸಮ್ಮೇಳನಕ್ಕೆ ಪ್ರಶಸ್ತವಾಗಿದೆ. ಆ ವೇಳೆ ಉಪ ಚುನಾವಣೆಗಳೂ ನಡೆದಿರುತ್ತವೆ. ಮಳೆ ಬರೋ ಸಾಧ್ಯತೆ ಕಡಿಮೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯೂ ಇರುವುದಿಲ್ಲ. ಈ ಸಂದರ್ಭದಲ್ಲಿ ಆಯೋಜಿಸಬೇಕೆಂದು ಉದ್ದೇಶಿಸಲಾಗಿದೆ. ಯಾವಾಗ ಮಾಡಿದರೂ ಶಿಸ್ತುಬದ್ಧವಾಗಿ, ಯಶಸ್ವಿಯಾಗಿ ನಡೆಸೋ ಗುರಿ ಹೊಂದಿದ್ದೇವೆ ಎಂದು ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.

ವಿಧಾನ ಸಭೆ ಕಲಾಪದಿಂದ ಮಾಧ್ಯಮಗಳನ್ನು ಹೊರಗಿಟ್ಟ ವಿಚಾರದ ಕುರಿತು ಪ್ರತಿಕ್ರಿಯಿಸಿದ ಕಾರಜೋಳ, ಸರ್ಕಾರದ ನಿರ್ಧಾರವಲ್ಲ. ವಿಧಾನಸಭೆ ಸ್ಪೀಕರ್ ಪರಮಾಧಿಕಾರವನ್ನು ಪ್ರಶ್ನಿಸುವಂತಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ. ಕೆಲವು ರಾಜ್ಯಗಳಲ್ಲಿ ಮತ್ತು ಲೋಕಸಭೆಯಲ್ಲಿ ಜಾರಿ ಇರುವ ನಿಯಮದಂತೆ ಒಂದೇ ಚಾನಲ್ ವ್ಯವಸ್ಥೆ ಮಾಡಿರಬಹುದು.

ವಿಧಾನ ಸಭೆಯಲ್ಲಿ ವಿಧಾನ ಸಭಾಧ್ಯಕ್ಷರಿಗೆ ಪರಮಾಧಿಕಾರ ಇದೆ. ಸಭಾಧ್ಯಕ್ಷರ ನಿಲುವು ಪ್ರಶ್ನೆ ಮಾಡುವ ಅಧಿಕಾರ ನಮಗಿಲ್ಲ. ಮಾಧ್ಯಮಗಳನ್ನು ದೂರ ಇಡುವ ಪ್ರಶ್ನೆಯಿಲ್ಲ. ವಾಲ್ಮೀಕಿ ಜಯಂತಿಯಲ್ಲಿ ಮಾಧ್ಯಮಗಳನ್ನು ಹೊರಗಿಟ್ಟಿಲ್ಲ. ಮಾಧ್ಯಮದವರೇ ನನ್ನ ಸುದ್ದಿಗೋಷ್ಠಿ ಬಹಿಷ್ಕರಿಸಿದ್ದರು ಎಂದು ಕಾರಜೋಳ ಅಭಿಪ್ರಾಯಪಟ್ಟರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.