ದೇಶದ ಜಿಡಿಪಿ ದರ ಕುಸಿಯಲು ಅಸಲಿ ಕಾರಣ ಇಲ್ಲಿದೆ : ದೇಶದ ಹಿತಕ್ಕಾಗಿ ತಪ್ಪದೇ ಓದಿ..
ಸತ್ಯಕ್ಕೆ ವಿಶೇಷವಾದ ಒಂದು ಗುಣವಿದೆ. ಅದೇನು ಅಂದ್ರೆ, ಸತ್ಯ ಯಾವತ್ತಾದ್ರೂ ಒಂದು ದಿನ ಬಯಲಾಗೇ ಆಗುತ್ತೆ. ಮೋದಿ ಅಂಡ್ ಟೀಮ್ ಜಗತ್ತಿನ ಕಣ್ಣಿನಿಂದ ಬಚ್ಚಿಟ್ಟಿದ್ದ ಸತ್ಯ ಶುಕ್ರವಾರ ಬಯಲಾಗಿದೆ. ದುರಂತ ಏನಂದ್ರೆ, ಆ ಸತ್ಯ ಬಯಲಾಗುವಷ್ಟರಲ್ಲಿ ದೇಶದ ಅರ್ಥ ವ್ಯವಸ್ಥೆ ದಿವಾಳಿಯ ಅಂಚಿಗೆ ಬಂದು ನಿಂತಿದೆ.
ಹಿಂದ್ವುತ್ವದ ಹೆಸರಿನಲ್ಲಿ, ಬರೀ ಸುಳ್ಳುಗಳನ್ನೇ ಹೇಳುತ್ತಾ, ಸೋಲ್ಡ್ ಔಟ್ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾಗಳ ಮೂಲಕ ಅಜೆಂಡಾ ಸೆಟ್ ಮಾಡಿ ಅಧಿಕಾರಕ್ಕೆ ಬಂದ ಪಕ್ಷ ಬಿಜೆಪಿ. ಅಧಿಕಾರದ ಅಮಲಿನಲ್ಲಿ ವಿದೇಶಗಳನ್ನ ಸುತ್ತಿ, ಭಾರತದ ಬಗ್ಗೆ ಭ್ರಮೆಯನ್ನೇ ಸೃಷ್ಟಿ ಮಾಡಿದ ಮೆಜಿಷಿಯನ್ ಪ್ರಧಾನಿ ಮೋದಿ. ಆದರೆ ಈಗ ಮ್ಯಾಜಿಕ್ ಹಿಂದಿನ ರಿಯಾಲಿಟಿ ಜಗತ್ತಿನ ಮುಂದೆ ಬಟಾ ಬಯಲಾಗಿದೆ. ದೇಶದ ಅರ್ಥ ವ್ಯವಸ್ಥೆ, “ಕುಸಿತ” ಎನ್ನುವ ಸುನಾಮಿಗೆ ಸಿಲುಕಿ ಉಸಿರುಗಟ್ಟಿದೆ.
ಅಸಲಿ ಸತ್ಯ ಏನಂದ್ರೆ, ಜಿಡಿಪಿ ದರ ಶೇಕಡಾ 4.5ರಷ್ಟಿಲ್ಲ. ಅದನ್ನ ತಿದ್ದುಪಡಿ ಮಾಡಿ ಬಿಡುಗಡೆ ಮಾಡಲಾಗಿದೆ ಎನ್ನುವ ಅನುಮಾನವೊಂದು ಆರ್ಥಿಕ ತಜ್ಞರನ್ನ ಕಾಡುತ್ತಿದೆ. ಯಾಕಂದ್ರೆ, ಕೆಲ ತಿಂಗಳುಗಳ ಹಿಂದೆ ಮೋದಿ ಸರ್ಕಾರದ ಪ್ರಮುಖ ಆರ್ಥಿಕ ಸಲಹೆಗಾರರಾಗಿದ್ದ ಆರ್ಥಿಕ ತಜ್ಞರಾಗಿದ್ದ ಅರವಿಂದ್ ಸುಬ್ರಹ್ಮಣ್ಯಂ ಅವರೇ, ದೇಶದ ಜಿಡಿಪಿಯನ್ನ ವೋವರ್ ಎಸ್ಟಿಮೇಟ್ ಮಾಡಲಾಗಿದೆ ಎಂದು ಆರೋಪಿಸಿದ್ದರು. ಅವರ ಆರೋಪ ನಿಜವೇ ಆಗಿದ್ರೆ ದೇಶದ ನಿಜವಾದ ಜಿಡಿಪಿ ಪ್ರಗತಿ ಕೇವಲ 2.5% ಆಗಲಿದೆ. ಅರ್ಥಾತ್, ಭಾರತದ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಜಿಡಿಪಿ ಪ್ರಗತಿ ಇದಾಗಲಿದೆ. ದೇಶಕ್ಕೆ ಇಂಥಾ ದುರ್ಗತಿ ಹಿಂದೆಂದೂ ಬಂದಿರಲಿಲ್ಲ.
ಕಳೆದ ವರ್ಷ 12.1ರಷ್ಟಿದ್ದ ದೇಶದ ಉತ್ಪಾದನಾ ಕ್ಷೇತ್ರದ ಪ್ರಗತಿ ಈಗ ಕೇವಲ 0.6%ಕ್ಕೆ ಕುಸಿದಿದೆ. ಕಳೆದ ವರ್ಷ 5.1ರಷ್ಟಿದ್ದ ಕೃಷಿ ಕ್ಷೇತ್ರದ ಪ್ರಗತಿ ಜಸ್ಟ್ 2 ಪರ್ಸೆಂಟ್ಗೆ ಬಂದು ಬಿದ್ದಿದೆ. ಅಲ್ಲಿಗೆ ಕಳೆದ 3 ವರ್ಷಗಳಿಂದ ದೇಶದ ಆರ್ಥಿಕ ತಜ್ಞರು ಹೇಳುತ್ತಿದ್ದ “ದೇಶದ ಅರ್ಥ ವ್ಯವಸ್ಥೆ ಆತಂಕದಲ್ಲಿದೆ” ಎನ್ನುವ ಮಾತು ನಿಜವಾಗಿದೆ. ದೇಶದ ಅರ್ಥ ವ್ಯವಸ್ಥೆಯ ಬಗ್ಗೆ ಎಚ್ಚರಿಕೆ ಕೊಟ್ಟ ತಜ್ಞರನ್ನೆಲ್ಲಾ ಅರ್ಬನ್ ನಕ್ಸಲ್ ಹಾಗೂ ದೇಶದ್ರೋಹಿಗಳು ಎಂದು ಜರಿದ ಭಕ್ತರು ಈಗ ಬಾಯಿಬಿಡುತ್ತಿಲ್ಲ.
ಇವತ್ತು ದೇಶದಲ್ಲಿ ಕಂಡು ಕೇಳರಿಯದಂತಾ ನಿರುದ್ಯೋಗ ತಾಂಡವವಾಡುತ್ತಿದೆ. ನಿರುದ್ಯೋಗದ ರೇಟ್ನಲ್ಲಿ 45 ವರ್ಷಗಳಲ್ಲೇ ಅತೀ ಹೆಚ್ಚು. ಜಿಡಿಪಿ ವಿಚಾರದಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಅಂಕಿ ಅಂಶಗಳನ್ನೇ ತಿದ್ದುಪಡಿ ಮಾಡಿದೆ. ಇದನ್ನ ವಿರೋಧಿಸಿ ರಾಷ್ಟ್ರೀಯ ಅಂಕಿ ಅಂಶಗಳ ಆಯೋಗದ ಎಷ್ಟೋ ಅಧಿಕಾರಿಗಳು ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಅದೆಲ್ಲವನ್ನೂ ಮುಚ್ಚಿಡಲಾಗಿತ್ತು. ಆಗ ವಾಹನಗಳು ಮಾರಾಟವಾಗದೇ ಆಟೋಮೊಬೈಲ್ ಸಂಸ್ಥೆಗಳು ಸತ್ಯ ಬಿಚ್ಚಿಟ್ಟವು. ಬಿಸ್ಕೇಟ್ ಖರೀದಿಸೋಕೆ, ಅಂಡರ್ ವೇರ್ ಖರೀದಿಸೋಕೆ ಜನರ ಬಳಿ ಹಣವಿಲ್ಲ ಎನ್ನುವ ಸತ್ಯವನ್ನ ಕಾರ್ಪೊರೆಟ್ ಸಂಸ್ಥೆಗಳು ಬಯಲು ಮಾಡಿದವು. ಆಗ ನಿಧಾನವಾಗಿ ಮೋದಿ ಸರ್ಕಾರದ ಅರ್ಥ ವ್ಯವಸ್ಥೆ ಬಯಲಾಗುತ್ತಾ ಹೋಯ್ತು. ಆದರೆ ಮಾಧ್ಯಮಗಳು ಅದರ ಬಗ್ಗೆ ಗಮನ ಹರಿಸಲಿಲ್ಲ ಅಷ್ಟೆ. ಹಾಗಾದರೆ ದೇಶದ ಅರ್ಥ ವ್ಯವಸ್ಥೆ ಇಷ್ಟೊಂದು ಹಳ್ಳ ಹಿಡಿಯೋಕೆ ಕಾರಣವೇನು.. ಇದಕ್ಕೆಲ್ಲಾ ಕಾರಣ ಯಾರು..? ಒಂದೊಂದಾಗಿ ಸಂಪೂರ್ಣ ವಿವರಣೆ ಇಲ್ಲಿದೆ ಓದಿ…
ರೀಸನ್ ನಂ.1: ನೋಟ್ ಬ್ಯಾನ್
ನೋಟ್ ಬ್ಯಾನ್ ಆದ ಮೊದಲ ದಿನದಿಂದಲೇ ದೇಶದಲ್ಲಿ ಆರ್ಥಿಕ ಸಂಕಷ್ಟ ಶುರುವಾಗಿದೆ. ನೋಟ್ ಬ್ಯಾನ್ ಮಾಡಿದಾಗ ದೇಶದ ಬಹುತೇಕ ಭಕ್ತರು ಮೋದಿಯ ನಿರ್ಧಾರವನ್ನ ಸಮರ್ಥಿಸಿಕೊಂಡಿದ್ದರು. ಆದರೆ ವಿದ್ಯಾವಂತ ಹಾಗೂ ಆರ್ಥಿಕತೆಯ ಜ್ಞಾನವಿದ್ದ ಜನ ವಿರೋಧಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಓಪನ್ ಆಗಿ ಮೋದಿ ನಿರ್ಧಾರವನ್ನ ಟೀಕಿಸಿದ್ದರು. ನೋಟ್ ಬ್ಯಾನ್ನಿಂದ ದೇಶದ ಜಿಡಿಪಿ ದರ ಶೇಕಡಾ 2ರಷ್ಟು ಕುಸಿತ ಕಾಣಲಿದೆ ಎನ್ನುವ ಎಚ್ಚರಿಕೆ ಕೊಟ್ಟಿದ್ದರು. ಆವತ್ತು ಯಾರೂ ಆ ಮಾತುಗಳನ್ನ ನಂಬಲಿಲ್ಲ. ಆದ್ರೆ ಇಂದು ಆ ಮಾತುಗಳೇ ನಿಜವಾಗಿವೆ. ಒಂದು ಸಂಶೋಧನೆಯ ಪ್ರಕಾರ, ನೋಟ್ ಬ್ಯಾನ್ ಬಳಿಕ ದೇಶದಲ್ಲಿ ಶೇಕಡಾ 60ರಷ್ಟು ಕಾರ್ಪೊರೆಟ್ ಇನ್ವೆಸ್ಟ್ಮೆಂಟ್ ದೇಶದಿಂದ ವಾಪಸ್ ಹೋಗಿದೆ. ಈಗ ಜನ ಅದನ್ನ ನಂಬುವಂತಾಗಿದೆ.
ರೀಸನ್ ನಂ.2: GST
ದೇಶದ ತೆರಿಗೆ ವ್ಯವಸ್ಥೆಯನ್ನ ಸರಳಗೊಳಿಸಿದ GST ಉತ್ತಮ ನಿರ್ಧಾರವೇ ಆಗಿರಬಹುದು. ಆದರೆ ಆ GST ಹೇಗಿದೆ ಅಂದ್ರೆ, ನಮ್ಮ ದೇಶದ ಜನರಿಗೆ ಅರ್ಥವೇ ಆಗುತ್ತಿಲ್ಲ. ಜನರಿಗಷ್ಟೇ ಅಲ್ಲ, ದೊಡ್ಡ ದೊಡ್ಡ ಉದ್ಯಮಿಗಳಿಗೂ ದೇಶದ ತೆರಿಗೆ ವ್ಯವಸ್ಥೆ ನಿಗೂಢವಾಗಿ ಕಾಣಿಸುತ್ತಿದೆ. ಹೀಗಾಗಿ ಪ್ರತಿಯೊಬ್ಬರ ಜೇಬಿಗೂ ಅರ್ಥವಾಗದ ತೆರಿಗೆ ಬೀಳುತ್ತಿದೆ.
ರೀಸನ್ ನಂ.3: 2019ರ ಕೇಂದ್ರ ಬಜೆಟ್
ದೇಶದ ಸ್ಟಾಕ್ ಮಾರ್ಕೆಟ್ನಿಂದ ಹಿಡಿದು ಇಡೀ ಜಗತ್ತಿನ ಆರ್ಥಿಕ ತಜ್ಞರೆಲ್ಲಾ ಭಾರತದ 2019ರ ಬಜೆಟ್ನ್ನ ಟೀಕಿಸಿದರು. ಯಾಕಂದ್ರೆ, ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಮಂಡಿಸಿದ ಒಂದೇ ವಾರಕ್ಕೆ ದೇಶದಲ್ಲಿ ಹೂಡಿಕೆಯಾಗಿದ್ದ 475 ಕೋಟಿ ವಿದೇಶಿ ಬಂಡವಾಳವನ್ನ ವಾಪಸ್ ಪಡೆಯಲಾಯ್ತು. ನಂತರದ ದಿನಗಳಲ್ಲಿ ದೇಶದಲ್ಲಿ ಹೂಡಿಕೆಯಾಗಿದ್ದ ಶೇ.60ರಷ್ಟು ವಿದೇಶಿ ಬಂಡವಾಳ ವಾಪಸ್ ಹೋಗಿದೆ. ಒಂದು ಬಜೆಟ್ ಏನೆಲ್ಲಾ ಅವಾಂತರ ಮಾಡುತ್ತೆ ಎನ್ನುವುದಕ್ಕೆ ಸಾಕ್ಷಿಯಾಯ್ತು 2019ರ ಕೇಂದ್ರದ ಬಜೆಟ್.
ರೀಸನ್ ನಂ.4: ನಿರುದ್ಯೋಗ
ಕಳೆದ 45 ವರ್ಷಗಳಲ್ಲೇ ಅತ್ಯಂತ ಘನಘೋರ ನಿರುದ್ಯೋಗ ದೇಶವನ್ನ ಕಾಡುತ್ತಿದೆ. ಯುವಕರು ಉದ್ಯೋಗ ಕೇಳಿದರೆ ಪ್ರಧಾನಿಗಳು ಪಕೋಡ ಮಾರಾಟ ಮಾಡಿ ಎಂದು ಗೇಲಿ ಮಾಡುತ್ತಾರೆ. ದೇಶದಲ್ಲಿ ಕೋಟ್ಯಂತರ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಮಾರುತಿ ಕಂಪನಿಯೊಂದರಲ್ಲೇ 10 ಸಾವಿರ, ಇನ್ಫೋಸಿಸ್ನಲ್ಲಿ 22 ಸಾವಿರ, ವಿಪ್ರೋದಲ್ಲಿ 2,900 ಉದ್ಯೋಗಿಗಳು ಮನೆ ಸೇರಿದ್ದಾರೆ. ಬೆಂಗಳೂರಿನ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ 1,348 ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ಲಕ್ಷಾಂತರ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ. ಚೆನ್ನೈನಲ್ಲಿ 58 ಸಾವಿರ ಉದ್ಯೋಗ ಕಡಿತಗೊಂಡಿದೆ. ದೇಶದ ಲಕ್ಷಾಂತರ ಸಂಸ್ಥೆಗಳಲ್ಲಿ ಸಂಬಳ ಹೆಚ್ಚಾಗಿಲ್ಲ, ಎಷ್ಟೋ ಕಡೆ ಎರಡು ತಿಂಗಳಿಗೆ ಒಂದು ಸಂಬಳ ಜಾರಿಗೆ ಬಂದಿದೆ. 2014ರಲ್ಲಿ ಭಾರತದ ಗ್ರಾಮೀಣ ಪ್ರದೇಶದ ಜನರ ಆದಾಯ 14.6ರಷ್ಟು ಪ್ರಗತಿ ಸಾಧಿಸಿತ್ತು. 2019ನೇ ವರ್ಷದಲ್ಲಿ ಗ್ರಾಮೀಣ ಪ್ರದೇಶದ ಜನರ ಆದಾಯದ ಪ್ರಗತಿ ಕೇವಲ 1.1ರಷ್ಟು ಮಾತ್ರ. ದೇಶದ ಅರ್ಥ ವ್ಯವಸ್ಥೆ ಯಾವ ಪರಿ ಹದಗೆಟ್ಟಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ.
ರೀಸನ್ ನಂ.5: ಸರ್ಕಾರಿ ಸಂಸ್ಥೆಗಳ ಮೇಲೆ ಭಕ್ತರ ದಾಳಿ
ದೇಶದ ದೊಡ್ಡ ದೊಡ್ಡ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಅರ್ಹತೆ ಇಲ್ಲದ ಭಕ್ತರು ಬಂದು ಕುಳಿತಿದ್ದಾರೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ONGC. ಆರ್ಎಸ್ಎಸ್ ಕಾರ್ಯಕರ್ತ ಹಾಗೂ ಬಿಜೆಪಿ ವಕ್ತಾರ ಸಂಬಿತ್ ಪಾತ್ರರನ್ನ ಅರ್ಹತೆ ಇಲ್ಲದೇ ಇದ್ರೂ ONGC ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಯಾವತ್ತೂ ನಷ್ಟವನ್ನೇ ಕಾಣದ ONGC ಸಂಬಿತ್ ಪಾತ್ರ ಎಂಟ್ರಿಯಾದ ಒಂದೇ ವರ್ಷಕ್ಕೆ ಅಂದರೆ 2018ರಲ್ಲಿ 4 ಸಾವಿರ ಕೋಟಿ ರೂಪಾಯಿ ನಷ್ಟವನ್ನ ಅನುಭವಿಸಿದೆ. ಅದೊಂದೇ ಅಲ್ಲ, BSNL ಸಂಸ್ಥೆಯಲ್ಲಿ 54 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆಪತ್ತಿನಲ್ಲಿದ್ದಾರೆ. ಹೆಚ್ಎಎಲ್ ಆರ್ಥಿಕ ಸಂಕಷ್ಟದಲ್ಲಿದೆ. ಸಂಸ್ಥೆಯ ಉದ್ಯೋಗಿಗಳಿಗೆ ಸಂಬಳ ಕೊಡಲು 1 ಸಾವಿರ ರೂಪಾಪಾಯಿ ಸಾಲ ಮಾಡುವಂತಾ ಸ್ಥಿತಿ ಹೆಚ್ಎಎಲ್ನದ್ದು.
ರೀಸನ್ ನಂ.6: ಬ್ಯಾಂಕ್ ವಂಚನೆಗಳು
RBI ರಿಪೋರ್ಟ್ ಪ್ರಕಾರ, 2018-19ರ ಸಾಲಿನಲ್ಲಿ ಬ್ಯಾಂಕ್ ವಂಚನೆ ಪ್ರಕರಣಗಳ ಸಂಖ್ಯೆ 74ರಷ್ಟು ಹೆಚ್ಚಳವಾಗಿದೆ. ಕೇವಲ ಒಂದೇ ವರ್ಷದಲ್ಲಿ ನಡೆದ ಬ್ಯಾಂಕ್ ವಂಚನೆಯ ಮೌಲ್ಯ ಬರೋಬ್ಬರಿ 71 ಸಾವಿರ ಕೋಟಿ ರೂ. 2014 ರಿಂದ 2017ರ ನಡುವೆ ಕೇಂದ್ರ ಸರ್ಕಾರ ಸಾರ್ವಜನಿಕ ಬ್ಯಾಂಕ್ಗಳ ಒಟ್ಟು 2 ಲಕ್ಷ 40 ಸಾವಿರ ಕೋಟಿ ಉದ್ಯಮಿಗಳ ಸಾಲವನ್ನ ವಸೂಲಿ ಮಾಡದೇ ಮನ್ನಾ ಮಾಡಿದೆ.
ರೀಸನ್ ನಂ.7: ಖೋಟಾ ನೋಟುಗಳ ಚಲಾವಣೆ
ಮೋದಿ ಸರ್ಕಾರ ನೋಟ್ ಬ್ಯಾನ್ ಮಾಡಿದ ಬಳಿಕ ಖೋಟಾ ನೋಟು ದಂಧೆ ನಿಲ್ಲುತ್ತೆ ಎಂದು ಹೇಳಿತ್ತು. ಆದರೆ 2018-19ರ ನಡುವಿನ ಒಂದೇ ವರ್ಷದಲ್ಲಿ 500 ರೂಪಾಯಿ ಮುಖಬೆಲೆಯ 21,800 ಖೋಟಾ ನೋಟುಗಳು ಪತ್ತೆಯಾಗಿವೆ. 2017-18ರಲ್ಲಿ 500 ರೂಪಾಯಿ ಮುಖಬೆಲೆಯ 9,800 ನೋಟುಗಳು ಪತ್ತೆಯಾಗಿದ್ದವು. ದುರಂತ ಏನಂದ್ರೆ, ಇಷ್ಟೆಲ್ಲಾ ಮಾಡಿರುವ ಮೋದಿ ಸರ್ಕಾರವೇ ದೀವಾಳಿಯಾಗಿದೆ. ಕೇಂದ್ರ ಸರ್ಕಾರದ ಬಳಿ ನೈಯಾ ಪೈಸೆ ಹಣವಿಲ್ಲ. ಹೀಗಾಗಿಯೇ ದೇಶದ ರಿಸರ್ವ್ ಬ್ಯಾಂಕ್ನ ಮೀಸಲು ನಿಧಿಯಿಂದ 1 ಲಕ್ಷ 76 ಸಾವಿರ ಕೋಟಿ ಹಣವನ್ನ ಪಡೆದುಕೊಂಡಿದೆ.
ರೀಸನ್ ನಂ.8: ಸರ್ಕಾರದಲ್ಲಿ ಬುದ್ಧಿವಂತರ ಕೊರತೆ
ಕೇಂದ್ರ ಸರ್ಕಾರದ ಅತ್ಯಂತ ದೊಡ್ಡ ವೈಫಲ್ಯವೇ ಇದು. ಸರ್ಕಾರದ ಜೊತೆಯಲ್ಲಿ ವಿದ್ಯಾವಂತ ಹಾಗೂ ಆರ್ಥಿಕ ಜ್ಞಾನವುಳ್ಳ ತಜ್ಞರ ಕೊರತೆ ಇದೆ. ಆರಂಭದ ದಿನಗಳಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಸರ್ಕಾರದ ಆಲೋಚನೆ, ಅದರ ನೀತಿಗಳು ಹಾಗೂ ಭಕ್ತರ ದಾಳಿಯಿಂದ ಸರ್ಕಾರದಲ್ಲಿದ್ದ ಬುದ್ಧಿವಂತ ಅಧಿಕಾರಿಗಳು ಮೂಲೆಗುಂಪಾದರು. ಹೀಗಾಗಿಯೇ ಕೇಂದ್ರ ಸರ್ಕಾರದ ದಕ್ಷ ಅಧಿಕಾರಿಗಳು ಒಬ್ಬರಾದ ಮೇಲೊಬ್ಬರು ರಾಜೀನಾಮೆ ಕೊಟ್ಟಿದ್ದಾರೆ. 2016 ಜುಲೈನಲ್ಲಿ RBI ಗೌರ್ನರ್ ಆಗಿದ್ದ ರಘುರಾಮ್ ರಾಜನ್ ರಾಜೀನಾಮೆ ನೀಡಿದರು. 2017 ಆಗಸ್ಟ್ನಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ ರಾಜೀನಾಮೆ ನೀಡಿದರು. 2018 ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯಂ ರಾಜೀನಾಮೆ ನೀಡಿದರು. 2018 ಡಿಸೆಂಬರ್ನಲ್ಲಿ RBI ಗೌರ್ನರ್ ಊರ್ಜಿತ್ ಪಟೇಲ್ ಕೂಡ ರಾಜೀನಾಮೆ ಕೊಟ್ಟರು. 2019 ಜೂನ್ ತಿಂಗಳಲ್ಲಿ RBI ಆರ್ಬಿಐ ಉಪ ಗವರ್ನರ್ ವಿರಾಳ್ ಆಚಾರ್ಯ ರಾಜೀನಾಮೆ ನೀಡಿದರು. 2019 ಜನವರಿಯಲ್ಲಿ ರಾಷ್ಟ್ರೀಯ ಅಂಕಿ ಅಂಶಗಳ ಆಯೋಗದ ಸದಸ್ಯರಾದ ಪಿ.ಸಿ. ಮೋಹನನ್ ಹಾಗೂ ಜೆ.ವಿ. ಮೀನಾಕ್ಷಿ ರಾಜೀನಾಮೆ ಮಾಡಿದರು. ಹೀಗೆ ಒಬ್ಬರಾದ ಮೇಲೊಬ್ಬ ಬುದ್ಧಿವಂತ ಹಾಗೂ ಆರ್ಥಿಕ ತಜ್ಞರು ರಾಜೀನಾಮೆ ಕೊಟ್ಟು ಸರ್ಕಾರದಿಂದ ದೂರ ಉಳಿದುಬಿಟ್ಟರು. ಕೊನೆಗೆ ಸರ್ಕಾರದಲ್ಲಿ ಉಳಿದುಕೊಂಡಿದ್ದು ಮಹಾಭಾರತ ಕಾಲದಲ್ಲೇ ಇಂಟರ್ನೆಟ್ ಇತ್ತು ಎನ್ನುವ, ನ್ಯೂಟನ್ ಗುರುತ್ವಾಕರ್ಷಣೆ ಭಾರತದಲ್ಲಿ ಸಂಶೋಧನೆಯಾಗಿದೆ ಎನ್ನುವ ಖಾಲಿ ಬಕೆಟ್ ಹಿಡಿದ ಭಕ್ತರು ಮಾತ್ರ. ಸದ್ಯ ದೇಶದಲ್ಲಿ ಉಳಿದಿರುವ ಆರ್ಥಿಕ ತಜ್ಞರು ಇವರು ಮಾತ್ರ.
ರೀಸನ್ ನಂ.9: ಜಾಗತಿಕ ವ್ಯಾಪಾರ ಯುದ್ಧದ ಭ್ರಮೆ
ಚೀನಾ ಹಾಗೂ ಅಮೆರಿಕಾ ನಡುವಿನ ಜಾಗತಿಕ ವ್ಯಾಪಾರ ಯುದ್ಧವೇ ಭಾರತದ ಆರ್ಥಿಕ ಪರಿಸ್ಥಿಗೆ ಕಾರಣ ಎಂದು ಇಂಡಿಯನ್ ಮೀಡಿಯಾಗಳು ಭ್ರಮೆ ಹುಟ್ಟಿಸುತ್ತಿವೆ. ಆದರೆ ಸತ್ಯ ಬೇರೆನೇ ಇದೆ. ಅಮೆರಿಕಾ-ಚೀನಾ ನಡುವೆ ವ್ಯಾಪಾರ ಯುದ್ಧ ಆರಂಭವಾದ್ರೆ ಮೊದಲು ಅದರ ಎಫೆಕ್ಟ್ ಚೀನಾ ಹಾಗೂ ಅಮೆರಿಕಾ ಮೇಲೆಯೇ ಆಗಬೇಕಿತ್ತು. ಆದರೆ ಇವತ್ತಿಗೆ ಚೀನಾ ದೇಶದ ಆರ್ಥಿಕತೆ 6.2ರಷ್ಟು ಪ್ರಗತಿ ಸಾಧಿಸಿದೆ. ಭಾರತದ ಆರ್ಥಿಕತೆ 4.5ಕ್ಕೆ ಕುಸಿದಿದೆ. ಚೀನಾ ದೇಶದ ಆರ್ಥಿಕತೆ 12.5 ಟ್ರಿಲಿಯನ್ ಡಾಲರ್ನದ್ದು. ಅಷ್ಟೊಂದು ದೊಡ್ಡ ಆರ್ಥಿಕತೆ ಇದ್ದರೂ, ಚೀನಾ 6.2 ಪ್ರಗತಿ ದರವನ್ನ ಮೇಂಟೇನ್ ಮಾಡಿದೆ. ಆದರೆ ಭಾರತದ ಅರ್ಥ ವ್ಯವಸ್ಥೆ ಇನ್ನೂ 3 ಟ್ರಿಲಿಯನ್ ಡಾಲರ್ಗೆ ತಲುಪಿಲ್ಲ. ಆಗಲೇ ಜಿಡಿಪಿ ಪ್ರಗತಿ 4.5ಕ್ಕೆ ಕುಸಿದಿದೆ. ಅದಕ್ಕೆ ಕಾರಣ ಭಾರತದ ಅರ್ಥವ್ಯವಸ್ಥೆಯ ನೀತಿಗಳು ಕಾರಣವೇ ಹೊರತು, ಅಮೆರಿಕಾ-ಚೀನಾ ಅಲ್ಲ ಎನ್ನುವುದು ಸಾಬೀತಾಗುತ್ತೆ.
ಮೋದಿಗೆ ಮಾದರಿಯಾಗುತ್ತೆ ರಾಜಧಾನಿ ದೆಹಲಿ..!
ಪ್ರಧಾನ ಮಂತ್ರಿ ಮೋದಿಯವರು ಒಮ್ಮೆ ದೆಹಲಿ ಸರ್ಕಾರದ ಕಾರ್ಯ ವೈಖರಿಯನ್ನ ಗಮನಿಸುವುದು ಸೂಕ್ತ. ಯಾಕಂದ್ರೆ, ದೇಶದ ಜಿಡಿಪಿ ಕುಸಿಯುತ್ತಿದ್ದರೆ ದೆಹಲಿಯ ಜಿಡಿಪಿಯ ಪ್ರಗತಿ ಏರುಗತಿಯಲ್ಲಿದೆ. ದೆಹಲಿ ರಾಜ್ಯದ ಜಿಡಿಪಿ ಪ್ರಗತಿಯ ದರ 8.6ರಷ್ಟಿದೆ. ಕಳೆದ 3 ವರ್ಷಗಳಲ್ಲಿ 7.5% ಹಾಗೂ 8.5% ಮತ್ತು 8.6% ಹೀಗೆ ಏರುಗತಿಯಲ್ಲೇ ಸಾಗುತ್ತಿದೆ. ತೆರಿಗೆ ವಸೂಲಿಯಲ್ಲಿ ದೆಹಲಿ 17.6ರಷ್ಟು ಪ್ರಗತಿ ಸಾಧಿಸಿದೆ. ಅಚ್ಚರಿಯ ವಿಷಯ ಏನಂದ್ರೆ, ದೆಹಲಿಯಲ್ಲಿ ಕುಡಿಯುವ ನೀರಿಗೆ ತೆರಿಗೆ ಇಲ್ಲ. ಅಲ್ಲಿ ನೀರು ಸಂಪೂರ್ಣ ಉಚಿತ. ಜನರಿಗೆ ಅರ್ಧ ಬೆಲೆಗೆ ವಿದ್ಯುತ್ ಸಿಗುತ್ತೆ. ಪ್ರತಿ ವಾರ್ಡ್ನಲ್ಲೂ ಉಚಿತ ಆರೋಗ್ಯ ಕೇಂದ್ರಗಳು ಸೇವೆ ನೀಡುತ್ತಿವೆ. ವಿಶ್ವ ದರ್ಜೆಯ ಶಿಕ್ಷಣವನ್ನ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಹಾಗೂ ಮೆಟ್ರೋ ಪಾಸ್ ಕೊಡಲಾಗಿದೆ. ಕೆಲವೇ ದಿನಗಳಲ್ಲಿ ದೆಹಲಿ ದೇಶದಲ್ಲೇ ಕಡಿಮೆ ಹಣದಲ್ಲಿ ಉತ್ಕೃಷ್ಟ ಜೀವನ ನಡೆಸುವವರ ನಗರ ಎನಿಸಿಕೊಳ್ಳಲಿದೆ. ದೆಹಲಿಯಲ್ಲಿ ಅಷ್ಟೆಲ್ಲಾ ಉಚಿತವಾಗಿ ನೀಡಿದರೂ ರಾಜ್ಯದ ಎಕಾನಮಿ ಮಾತ್ರ ಪ್ರಗತಿ ಸಾಧಿಸುತ್ತಲೇ ಇದೆ. ಅಲ್ಲೂ ನೊಟ್ ಬ್ಯಾನ್ ಆಗಿದೆ. GST ಹೇರಲಾಗಿದೆ. ಆದರೂ ದೆಹಲಿಯ ಜಿಡಿಪಿಯನ್ನ ಅಲುಗಾಡಿಸೋಕೆ ಆಗಿಲ್ಲ.
ದೆಹಲಿಯ ಅಭಿವೃದ್ಧಿಗೆ ಮೂಲ ಕಾರಣ ಮುಖ್ಯಮಂತ್ರಿ ಅರವಿಂದ್ ಕೇಂಜ್ರಿವಾಲ್. ಅವರು ಐಐಟಿಯಲ್ಲಿ ಓದಿದವರು. ದೇಶದ ಅರ್ಥ ವ್ಯವಸ್ಥೆಯನ್ನ ಅರ್ಥ ಮಾಡಿಕೊಂಡವರು. ಇದನ್ನೆಲ್ಲಾ ಹೊಗಳೋಕೆ ಹೇಳುತ್ತಿರುವುದಲ್ಲ. ಎಲ್ಲದಕ್ಕೂ ದಾಖಲೆಗಳಿವೆ. ಆದರೆ ನಮ್ಮ ದೇಶದ ಕೇಂದ್ರ ಸರ್ಕಾರವನ್ನ ನಡೆಸುತ್ತಿರುವ ಎಷ್ಟೋ ದೊಡ್ಡ ಜನರ ಬಳಿ ವಿದ್ಯಾರ್ಹತೆಯ ಸರ್ಟಿಫಿಕೆಟ್ಗಳೇ ನಕಲಿ ಎನ್ನುವ ಆರೋಪವಿದೆ.
ದೆಹಲಿಯೊಂದೇ ಅಲ್ಲ, ಆಂಧ್ರಪ್ರದೇಶದ ಆರ್ಥಿಕ ಬೆಳವಣಿಗೆ ಕೂಡ ದೇಶದ ಆರ್ಥಿಕ ಬೆಳವಣಿಗೆಗೆ ಸೆಡ್ಡು ಹೊಡೆಯುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರ್ನಾಟಕದ ಆರ್ಥಿಕ ದರ ಕೂಡ ಕೇಂದ್ರಕ್ಕೆ ಸೆಡ್ಡು ಹೊಡೆದಿತ್ತು. ಕೊನೆಗೆ ಸಿದ್ದರಾಮಯ್ಯ ಜೊತೆಯಲ್ಲೇ ರಾಜ್ಯದ ಆರ್ಥಿಕ ಶಿಸ್ತು ಕೂಡ ಸೋತು ಹೋಯ್ತು. ಸದ್ಯ ದೇಶದ ಅರ್ಥ ವ್ಯವಸ್ಥೆಯನ್ನ ಸರಿದಾರಿಗೆ ತರಬೇಕು ಎಂದರೆ ಕೇಂದ್ರ ಸರ್ಕಾರ ತನ್ನ ನೀತಿ-ನಿಲುವುಗಳನ್ನ ಬದಲಿಸಿಕೊಳ್ಳಲೇಬೇಕಿದೆ. ಆದರೆ ಅದು ಸದ್ಯಕ್ಕೆ ಅಸಾಧ್ಯ ಎನ್ನಲಾಗುತ್ತಿದೆ. ಯಾಕಂದ್ರೆ ಕೇಂದ್ರದಲ್ಲಿ ಅಧಿಕಾರ ನಡೆಸುವವರಿಗೆ ದೇಶದ ಅರ್ಥ ವ್ಯವಸ್ಥೆಗಿಂತ ಹಿಂದೂ-ಮುಸ್ಲಿಂ ವಿಷಯವೇ ಮುಖ್ಯ. ಇಂಡಿಯಾ-ಪಾಕಿಸ್ತಾನದ ಪ್ರತಿಷ್ಠೆಯೇ ಮುಖ್ಯ. ದೇಶದ ಅಭಿವೃದ್ಧಿಗಿಂತ ರಾಮಮಂದಿರ ಕಟ್ಟುವುದೇ ಅವರ ಮೊದಲ ಆದ್ಯತೆ. ಹೊಟ್ಟೆಗೆ ಹಿಟ್ಟಿಲ್ಲದೇ ಇದ್ರೂ ಜುಟ್ಟಿಗೆ ಮಲ್ಲಿಗೆ ಹೂವೇ ಮುಖ್ಯ ಎನ್ನುವ ಪಾಲಿಸಿ ಕೇಂದ್ರ ಸರ್ಕಾರದ್ದು. ಸದ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಭಾರತೀಯರ ಒಂದು ಕಳಕಳಿಯ ಮನವಿ ಇದೆ. ಅದೇನಂದ್ರೆ, ಮುಂದೆ ಯಾವುದಾದರು ದೇಶಕ್ಕೆ ಭೇಟಿ ನೀಡಿದಾಗ ದಯವಿಟ್ಟು ತಮ್ಮ ಭಾಷಣದಲ್ಲಿ ಕಥೆ ಹೇಳುವ ಬದಲು ಒಂದಿಷ್ಟು ಇಂಡಿಯನ್ ಎಕಾನಮಿ ಹಾಗೂ ಜಿಡಿಪಿ ಪ್ರಗತಿಯ ಬಗ್ಗೆ ಭಾಷಣ ಮಾಡಿ. ಭಾರತದ ಸದ್ಯದ ಪರಿಸ್ಥಿತಿಯನ್ನ, ನಿಮ್ಮ ಸಾಧನೆಯನ್ನ, ನಿರುದ್ಯೋಗದಿಂದ ಬಳಲುತ್ತಿರುವ ಭಾರತೀಯರ ಅಸಲಿಯತ್ತನ್ನ ಜಗತ್ತಿಗೆ ಪರಿಚಯ ಮಾಡಿಕೊಡಿ.
– ಇಂತಿ ನಿಮ್ಮ ಅಭಿಮಾನಿ
ಗಳಗನಾಥ, ನೊಂದ ಕನ್ನಡಿಗ