ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಫಿಕ್ಸ್!
2012ರಲ್ಲಿ ಯುವತಿಯ ಮೇಲೆ ಚಲಿಸುವ ಬಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರು ಅಪರಾಧಿಗಳಿಗಳಲ್ಲಿ ಒಬ್ಬನಾಗಿದ್ದ ಪವನ್ ಮಾರ್ಚ್ 02 ರಂದು ಮರಣದಂಡನೆಯನ್ನು ರದ್ದುಗೊಳಿಸುವಂತೆ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗಿದ್ದ ಕ್ಷಮಾಧಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದು, ದೆಹಲಿ ನ್ಯಾಯಾಲಯ ಹೊಸ ಡೆತ್ ವಾರಂಟ್ ಹೊರಡಿಸಿದೆ. ಅವರನ್ನು ಮಾರ್ಚ್ 20 ರಂದು ಬೆಳಿಗ್ಗೆ 5.30 ಕ್ಕೆ ಗಲ್ಲಿಗೇರಿಸಬೇಕೆಂದು ಆದೇಶಿಸಿದ್ದು, ಇದು ನ್ಯಾಯಾಲಯ ಹೊರಡಿಸಿದ ನಾಲ್ಕನೇ ಡೆತ್ ವಾರಂಟ್ ಆಗಿದೆ.
ಜನವರಿ 22 ಮತ್ತು ಫೆಬ್ರವರಿ 1 ರಂದು ಮರಣದಂಡನೆಯನ್ನು ರದ್ದುಗೊಳಿಸುವಂತೆ ಅಪರಾಧಿಗಳು ಅರ್ಜಿಯನ್ನು ಸಲ್ಲಿಸಿದರು. ಫೆಬ್ರವರಿ 5ರಂದು ಅರ್ಜಿಯನ್ನು ಪರಿಶೀಲಿಸಿದ್ದ ದೆಹಲಿ ಹೈಕೋರ್ಟ್ ರಾಷ್ಟ್ರಪತಿಗೆ ಕ್ಷಮಾದಾನದ ಅರ್ಜಿಗಳು ಸೇರಿದಂತೆ ಎಲ್ಲಾ ಕಾನೂನು ಪರಿಹಾರಗಳನ್ನು ಮುಗಿಸಲು ನಾಲ್ವರಿಗೂ ಒಂದು ವಾರವಿದೆ ಎಂದು ಆದೇಶಿಸಿತ್ತು.
ಒಬ್ಬರ ನಂತರ ಒಬ್ಬರಂತೆ ಗಲ್ಲುಶಿಕ್ಷೆ ತಡೆಯಲು ಅರ್ಜಿಗಳನ್ನು ಸಲ್ಲಿಸುತ್ತಿದ್ದ ಅತ್ಯಾಚಾರ ಪ್ರಕರಣದ ಅಪರಾಧಿಗಳ ಪೈಕಿ ಪವನ್ ಮಾರ್ಚ್ 2 ಸೋಮವಾರದಂದು ಮರಣದಂಡನೆಯನ್ನು ತಡೆಯಲು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಕ್ಷಮಾದಾನ ಮನವಿ ಬಾಕಿ ಇದೆ ಎಂಬ ಕಾರಣಕ್ಕೆ ಮರಣದಂಡನೆಯನ್ನು ನಿಲ್ಲಿಸುವಂತೆ ಕೋರಿ ಪವನ್ ಕೆಳ ನ್ಯಾಯಾಲಯಕ್ಕೆ ಹೊಸ ಅರ್ಜಿಯನ್ನು ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ಪುರಸ್ಕರಿಸಿತ್ತು.
ನಂತರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಕ್ಷಮಾದಾನ ನೀಡುವಂತೆ ಅರ್ಜಿ ಹಾಕಲಾಗಿತ್ತು ಅದನ್ನು ರಾಷ್ಟ್ರಪತಿ ಮಾರ್ಚ್ 04ರಂದು ತಿರಸ್ಕರಿಸಿದ್ದು, ಮರಣ ದಂಡನೆಯಿಂದ ತಪ್ಪಿಸಲು ಅಪರಾಧಿಗಳ ಮುಂದೆ ಇದ್ದ ಎಲ್ಲಾ ದಾರಿಗಳು ಇಲ್ಲಿಗೆ ಮುಚ್ಚಿದಂತಾಗಿದೆ.
ಈ ಹಿನ್ನೆಲೆಯಲ್ಲಿ ಕಾನೂನಿನ ಪ್ರಕಾರ, ರಾಷ್ಟ್ರಪತಿಗಳು ಕ್ಷಮಾದಾನವನ್ನು ತಿರಸ್ಕರಿಸಿದರೆ ಅಪರಾಧಿಯನ್ನು 14 ದಿನಗಳ ನಂತರ ಗಲ್ಲಿಗೇರಿಸಬಹುದು. ಈ ಹಿನ್ನೆಲೆಯಲ್ಲಿ ನಾಲ್ವರು ನಿರ್ಭಯ ಅತ್ಯಾಚಾರಿಗಳನ್ನು ಮಾರ್ಚ್ 20ರಂದು ಗಲ್ಲಿಗೇರಿಸುವಂತೆ ದೆಹಲಿ ಹೈ ಕೋರ್ಟ್ ಆದೇಶಿಸಿದೆ.
ಬಂಧಿಸಲಾಗಿದ್ದ ಆರು ಆರೋಪಿಗಳಲ್ಲಿ ಒಬ್ಬರಾದ ರಾಮ್ ಸಿಂಗ್ ಈ ಹಿಂದೆ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಮತ್ತೊಬ್ಬ ಹದಿಹರೆಯದ ಬಾಲಕನೆಂಬ ಕಾರಣಕ್ಕೆ ಮೂರು ವರ್ಷಗಳ ನಂತರ ಬಿಡುಗಡೆ ಮಾಡಲಾಗಿತ್ತು.
“ನಿರ್ಭಯ ಕೊನೆಯುಸಿರೆಳೆಯುವ ಸಂದರ್ಭದಲ್ಲಿ ಇಂತಹ ಅಪರಾಧಗಳು ಮತ್ತೆ ಪುನರಾವರ್ತನೆಯಾಗದಂತಹ ಶಿಕ್ಷೆ ನೀಡುವಂತೆ ಕೇಳಿಕೊಂಡಿದ್ದರು. ಮಾರ್ಚ್ 20ರ ಬೆಳಗ್ಗೆ ನಮ್ಮ ಜೀವನದ ಬೆಳಗ್ಗೆ ಆಗಲಿದೆ” ಎಂದು ನಿರ್ಭಯಾ ತಾಯಿ ಆಶಾ ದೇವಿ ಹೇಳಿದ್ದಾರೆ.