TRP ಹೆಚ್ಚಿಸಲು ಅರ್ನಾಬ್ ಗೋಸ್ವಾಮಿ ನನಗೆ 12,000 ಡಾಲರ್ ಮತ್ತು 40 ಲಕ್ಷ ರೂ ಕೊಟ್ಟಿದ್ದಾರೆ: ಸತ್ಯ ಬಿಚ್ಚಿಟ್ಟ ದಾಸ್‌ಗುಪ್ತಾ

ಎರಡು ರಜಾ ದಿನಗಳಲ್ಲಿ ರಿಪಬ್ಲಿಕ್‌ ಟಿವಿಯ ರೇಟಿಂಗ್‌ ಉತ್ತಮವಾಗಿರುವಂತೆ ಟಿಆರ್‌ಪಿಯನ್ನು‌ ಬದಲಾಯಿಸಿದ್ದಕ್ಕಾಗಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ತಮಗೆ 12,000 ಅಮೆರಿಕನ್‌ ಡಾಲರ್‌ ಮತ್ತು ಇಡೀ ವರ್ಷಕ್ಕೆ ಒಟ್ಟು 40 ಲಕ್ಷ ರೂಪಾಯಿಗಳನ್ನು  ಕೊಟ್ಟಿರುವುದಾಗಿ ಬಾರ್ಕ್‌ನ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಅವರು ತಮ್ಮ ಕೈಬರಹದ ಹೇಳಿಕೆಯಲ್ಲಿ ಮುಂಬೈ ಪೊಲೀಸರಿಗೆ ನೀಡಿರುವುದಾಗಿ ವರದಿಯಾಗಿದೆ.

ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್)ನ ಫೋರೆನ್ಸಿಕ್ ಆಡಿಟ್ ವರದಿ, ದಾಸ್‌ಗುಪ್ತಾ ಮತ್ತು ಗೋಸ್ವಾಮಿ ನಡುವೆ ವಾಟ್ಸಾಪ್ ಚಾಟ್‌ಗಳು ಹಾಗೂ ಮಾಜಿ ಕೌನ್ಸಿಲ್ ನೌಕರರು ಮತ್ತು ಕೇಬಲ್ ಆಪರೇಟರ್‌ಗಳು ಸೇರಿದಂತೆ 59 ಜನರ ಹೇಳಿಕೆಗಳುಳ್ಳ 3,600 ಪುಟಗಳ ಟಿಆರ್‌ಪಿ ಹಗರಣ ಪ್ರಕರಣದ ಪೂರಕ ಚಾರ್ಜ್‌ಶೀಟ್‌ಅನ್ನು ಜನವರಿ 11 ರಂದು ಮುಂಬೈ ಪೊಲೀಸರು ಸಲ್ಲಿಸಿದ್ದಾರೆ.

ಲೆಕ್ಕಪರಿಶೋಧನಾ (ಆಡಿಟ್‌) ವರದಿಯಲ್ಲಿ ರಿಪಬ್ಲಿಕ್ ಟಿವಿ, ಟೈಮ್ಸ್ ನೌ ಮತ್ತು ಆಜ್ ತಕ್ ಸೇರಿದಂತೆ ಹಲವಾರು ಸುದ್ದಿ ಚಾನೆಲ್‌ಗಳನ್ನು ಹೆಸರಿಸಲಾಗಿದೆ. ಅಲ್ಲದೆ, ಬಾರ್ಕ್‌ನ ಉನ್ನತ ಅಧಿಕಾರಿಗಳು ಚಾನೆಲ್‌ಗಳಿಗೆ ರೇಟಿಂಗ್‌ಗಳನ್ನು “ಮೊದಲೇ ನಿಗದಿ ಪಡಿಸಿದಂತೆ (ಪ್ರೀ ಫಿಕ್ಸಿಂಗ್‌) ನಿರ್ವಹಸಿದ್ದಾರೆ ಎಂಬ ಉದಾಹರಣೆಗಳನ್ನು ಪಟ್ಟಿ ಮಾಡಲಾಗಿದೆ.

ಪೂರಕ ಚಾರ್ಜ್‌ಶೀಟ್ಅನ್ನು ದಾಸ್‌ಗುಪ್ತಾ, ಮಾಜಿ ಬಾರ್ಕ್ ಸಿಒಒ ರೊಮಿಲ್ ರಾಮ್‌ಗರ್ಹಿಯಾ ಮತ್ತು ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್ ಸಿಇಒ ವಿಕಾಸ್ ಖನ್‌ಚಂದಾನಿ ವಿರುದ್ಧ ದಾಖಲಿಸಲಾಗಿದೆ. ಇದಕ್ಕೂ ಮೊದಲು 2020 ರ ನವೆಂಬರ್‌ನಲ್ಲಿ 12 ಜನರ ವಿರುದ್ಧ ಮೊದಲ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.

ದಾಸ್‌ಗುಪ್ತಾ ಅವರ ಹೇಳಿಕೆಯನ್ನು 2020 ರ ಡಿಸೆಂಬರ್ 27 ರಂದು ಸಂಜೆ 5.15 ಕ್ಕೆ ಅಪರಾಧ ಗುಪ್ತಚರ ಘಟಕದ ಕಚೇರಿಯಲ್ಲಿ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ದಾಖಲಿಸಲಾಗಿದೆ ಎಂದು ಎರಡನೇ (ಪೂರಕ) ಚಾರ್ಜ್‌ಶೀಟ್ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಕಂಗನಾ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದ ಅರ್ನಾಬ್‌; ಕಾಮೋದ್ರಿಕ್ತ ಹೆಣ್ಣು ಎಂದಿದ್ದ ಗೋಸ್ವಾಮಿ!

ದಾಸ್‌ಗುಪ್ತಾ ಅವರ ಹೇಳಿಕೆಯು ಹೀಗಿದೆ: “ನನಗೆ ಅರ್ನಾಬ್ ಗೋಸ್ವಾಮಿ ಅವರು 2004 ರಿಂದ ಪರಿಚಿತರು. ನಾವು ಟೈಮ್ಸ್ ನೌನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ನಾನು 2013 ರಲ್ಲಿ BARCನ ಸಿಇಒ ಆಗಿ ಸೇರಿಕೊಂಡೆ. ಅರ್ನಾಬ್ ಗೋಸ್ವಾಮಿ ಅವರು 2017 ರಲ್ಲಿ ರಿಪಬ್ಲಿಕ್ ಅನ್ನು ಪ್ರಾರಂಭಿಸಿದರು. ರಿಪಬ್ಲಿಕ್ ಟಿವಿಯನ್ನು ಪ್ರಾರಂಭಿಸುವ ಮೊದಲೇ ಅವರು ನನ್ನೊಂದಿಗೆ ಬ್ರಾಡ್‌ಕಾಸ್ಟಿಂಗ್‌ (ಪ್ರಸಾರ) ಯೋಜನೆಗಳ ಬಗ್ಗೆ ಮಾತನಾಡಿದ್ದರು. ಟಿಆರ್‌ಪಿ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನನಗೆ ತಿಳಿದಿದೆ ಎಂದು ಗೋಸ್ವಾಮಿಗೆ ಚೆನ್ನಾಗಿ ತಿಳಿದಿತ್ತು. ಹಾಗಾಗಿ ಅವರ ಚಾನಲ್‌ಗೆ ಉತ್ತಮ ರೇಟಿಂಗ್ ಪಡೆಯಲು ಸಹಾಯ ಮಾಡಬೇಕು ಎಂಬುದರ ಬಗ್ಗೆ ಪರೋಕ್ಷವಾಗಿ ಸುಳಿವು ನೀಡುತ್ತಿದ್ದರು. ಭವಿಷ್ಯದಲ್ಲಿ ನನಗೆ ಸಹಾಯ ಮಾಡಲು ಅವರು ಪ್ರಸ್ತಾಪಿಸಿದ್ದರು.”

“ರಿಪಬ್ಲಿಕ್ ಟಿವಿಗೆ ನಂಬರ್ 1 ರೇಟಿಂಗ್ ಸಿಗುವಂತೆ ಮಾಡಿದ ಟಿಆರ್‌ಪಿ ರೇಟಿಂಗ್‌ಗಳ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ನಾನು ನನ್ನ ತಂಡದೊಂದಿಗೆ ಕೆಲಸ ಮಾಡಿದ್ದೇನೆ. ಈ ಕೆಲಸವು 2017 ರಿಂದ 2019 ರವರೆಗೆ ನಡೆದಿತ್ತು. ಈ ನಿಟ್ಟಿನಲ್ಲಿ, 2017 ರಲ್ಲಿ ಅರ್ನಾಬ್ ಗೋಸ್ವಾಮಿ ಅವರು ಲೋವರ್ ಪ್ಯಾರೆಲ್‌ನ ಸೇಂಟ್ ರೆಗಿಸ್ ಹೋಟೆಲ್‌ನಲ್ಲಿ ವೈಯಕ್ತಿಕವಾಗಿ ನನ್ನನ್ನು ಭೇಟಿಯಾದರು. ಫ್ರಾನ್ಸ್ ಮತ್ತು ಸ್ವಿಟ್ಜರ್ಲೆಂಡ್‌ಗೆ ನನ್ನ ಕುಟುಂಬದ ಪ್ರವಾಸಕ್ಕಾಗಿ 6000 ಡಾಲರ್ ಹಣವನ್ನು ನೀಡಿದರು… ನಂತರ, 2019 ರಲ್ಲಿ ಅರ್ನಾಬ್ ಗೋಸ್ವಾಮಿ ಅವರು ನನ್ನನ್ನು ಮತ್ತೆ ಅದೇ ಹೋಟೆಲ್‌ನಲ್ಲಿ ಭೇಟಿಯಾಗಿ ಸ್ವೀಡನ್ ಮತ್ತು ಡೆನ್ಮಾರ್ಕ್ಗೆ ನನ್ ಕುಟುಂಬ ಪ್ರವಾಸಕ್ಕಾಗಿ ನನಗೆ 6000 ಡಾಲರ್‌ಗಳನ್ನು ನೀಡಿದರು. ಅಲ್ಲದೆ 2017 ರಲ್ಲಿ ಗೋಸ್ವಾಮಿ ನನ್ನನ್ನು ವೈಯಕ್ತಿಕವಾಗಿ ಐಟಿಸಿ ಪ್ಯಾರೆಲ್ ಹೋಟೆಲ್‌ನಲ್ಲಿ ಭೇಟಿಯಾಗಿ 20 ಲಕ್ಷ ರೂ. ನಗದು ನೀಡಿದ್ದರು… 2018 ಮತ್ತು 2019 ರಲ್ಲಿಯೂ ಸಹ ಗೋಸ್ವಾಮಿ ನನ್ನನ್ನು ಐಟಿಸಿ ಹೋಟೆಲ್ ಪ್ಯಾರೆಲ್‌ನಲ್ಲಿ ಭೇಟಿಯಾಗಿ ಪ್ರತಿ ಬಾರಿಯೂ 10 ಲಕ್ಷ ರೂಗಳನ್ನು ನೀಡಿದರು” ಎಂದು ದಾಸ್‌ಗುಪ್ತಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ಪುಲ್ವಾಮ ದಾಳಿಯ ಬಗ್ಗೆ ಅರ್ನಾಬ್‌ಗೆ ಮೊದಲೇ ತಿಳಿದಿತ್ತು; ಸೈನಿಕರ ಸಾವನ್ನು ಸಂಭ್ರಮಿಸಿದ್ದ ಗೋಸ್ವಾಮಿ!

“ಈ ಹೇಳಿಕೆಯನ್ನು ನಾವು ಸಂಪೂರ್ಣವಾಗಿ ನಿರಾಕರಿಸುತ್ತೇವೆ. ಏಕೆಂದರೆ ಈ ಹೇಳಿಕೆಯನ್ನು ಪುರಾವೆ ಇಲ್ಲದೆ ದಾಖಲಿಸಲಾಗಿದೆ. ಇದು ನ್ಯಾಯಾಲಯದಲ್ಲಿ ಪರಿಗಣಗೆ ಬರುವಂತದ್ದಲ್ಲ” ಎಂದು ದಾಸ್‌ಗುಪ್ತಾ ಅವರ ವಕೀಲ ಅರ್ಜುನ್ ಸಿಂಗ್ ಹೇಳಿದ್ದಾರೆ.

ಗೋಸ್ವಾಮಿಯ ಕಾನೂನು ತಂಡದ ಸದಸ್ಯರನ್ನು ಸಂಪರ್ಕಿಸಿದಾಗ, ಗೋಸ್ವಾಮಿ ಅವರು ಪದೇ ಪದೇ ಆರೋಪವನ್ನು ನಿರಾಕರಿಸಿದ್ದಾರೆ. ಆದರೂ, ಅವರನ್ನು ಗುರಿಯಾಗಿಸಿಕೊಂಡು ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿದ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಚಾರ್ಜ್‌ಶೀಟ್‌ನಲ್ಲಿ ಜುಲೈ 24, 2020 ರ BARC ಯ ಲೆಕ್ಕಪರಿಶೋಧನಾ ವರದಿಯೂ ಸೇರಿದ್ದು, ಇದರಲ್ಲಿನ ಸಾಕ್ಷ್ಯವು “ಕೆಲವು ಚಾನಲ್‌ಗಳ ಮೇಲೆ ವಿಶೇಷವಾಗಿ ತೋರಿಸಿರುವ ಅಭಿಮಾನ (ಒತ್ತು) ಸೂಚಿಸುತ್ತದೆ” ಮತ್ತು “ಕೆಲವು ಸಂದರ್ಭಗಳಲ್ಲಿ, ಈ ಚಾನೆಲ್‌ಗಳಿಗೆ ರೇಟಿಂಗ್‌ಗಳನ್ನು ಮೊದಲೇ ನಿರ್ಧರಿಸಲಾಗಿದೆ ಎಂದು ನಾವು ಅನುಮಾನಿಸುತ್ತೇವೆ” ಎಂದು ಪೊಲೀಸರು ಹೇಳಿದ್ದಾರೆ.

ಉದಾಹರಣೆಗೆ, ರಿಪಬ್ಲಿಕ್‌ನ ಸಾಪ್ತಾಹಿಕ ಶ್ರೇಯಾಂಕಗಳನ್ನು ಹೆಚ್ಚಿಸಲು ಟೈಮ್ಸ್ ನೌಗಾಗಿ ವೀಕ್ಷಕರನ್ನು ನಿಯಂತ್ರಿಸಲಾಗಿದೆ. ಆಜ್ ತಕ್ ಚಾನೆಲ್‌ನ ರೇಟಿಂಗ್‌ಗಳ ಕುರಿತು ಬಾರ್ಕ್‌ನ ಉನ್ನತ ಅಧಿಕಾರಿಗಳು ಮತ್ತು ಇಂಡಿಯಾ ಟುಡೆ ಗ್ರೂಪ್‌ನ ಹಿರಿಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ನಡುವಿನ ಸಂಭಾಷಣೆಯನ್ನೂ ತೋರಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

BARC ಅಧಿಕಾರಿಗಳ ನಡುವೆ ಅನೇಕ ಇಮೇಲ್‌ಗಳು ಮತ್ತು ಸಂದೇಶಗಳನ್ನು ಪುರಾವೆಗಳಾಗಿ ಲಗತ್ತಿಸಲಾಗಿದೆ.

ಅಕ್ವಿಸರಿ ರಿಸ್ಕ್ ಕನ್ಸಲ್ಟಿಂಗ್ ಸಂಸ್ಥೆಯು ಆಡಿಟ್ ನಡೆಸಿದ್ದು, ಇದರ ಕಾರ್ಯನಿರ್ವಾಹಕ ಸಾರಾಂಶವು “2017, 18 ಮತ್ತು 19 ರಲ್ಲಿ ಇಂಗ್ಲಿಷ್ ನ್ಯೂಸ್ ಮತ್ತು ತೆಲುಗು ಸುದ್ದಿವಾಹಿನಿಗಳ ಟಿಆರ್‌ಪಿ ಬದಲಾವಣೆ ಮಾಡಿರುವುದಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಲಾಗಿದೆ.

ಇದನ್ನೂ ಓದಿ: ಪ್ರಧಾನಿ ಕಚೇರಿಯಿಂದಲೇ ಸಹಾಯ ಕೇಳಿದ ಗೋಸ್ವಾಮಿ? ಬಾರ್ಕ್ ಸಿಇಒ ಜೊತೆಗಿನ ವಾಟ್ಸಾಪ್‌ ಚಾಟ್‌ ಸೋರಿಕೆ!

ಆ ಸಮಯದಲ್ಲಿ, 2018 ಮತ್ತು 2019 ರ ನಡುವೆ  BARCನ  ಆರು ಉನ್ನತ ಅಧಿಕಾರಿಗಳು “ರೇಟಿಂಗ್‌ಗಳ ಬದಲಾವಣೆ ಮತ್ತು ನೀತಿ ಸಂಹಿತೆಯ ಉಲ್ಲಂಘನೆ”ಯಲ್ಲಿ ಭಾಗಿಯಾಗಿದ್ದರು. ಇವರಲ್ಲಿ ದಾಸ್‌ಗುಪ್ತಾ, ರಾಮಗಾರ್ಹಿಯಾ, ಪ್ರಾಡಕ್ಟ್ಸ್‌ ಮುಖ್ಯಸ್ಥ (ದಕ್ಷಿಣ) ವೆಂಕಟ್ ಸುಜಿತ್ ಸಾಮ್ರಾಟ್, ಪಶ್ಚಿಮ ಮುಖ್ಯಸ್ಥ ಸ್ಟ್ರಾಟಜಿ ಪೆಖಮ್ ಬಸು, ಉಪಾಧ್ಯಕ್ಷ ರುಷಬ್ ಮೆಹ್ತಾ ಮತ್ತು ಮುಖ್ಯ ಸಾರ್ವಜನಿಕ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ಮನಶಿ ಕುಮಾರ್ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.

ಅಕ್ಟೋಬರ್ 2019 ರಲ್ಲಿ, ದಾಸ್‌ಗುಪ್ತಾ ಅವರನ್ನು ಸುನಿಲ್ ಲುಲ್ಲಾ ಬದಲಿಗೆ ಸಿಇಒ ಆಗಿ ನೇಮಿಸಲಾಯಿತು.

“ದಾಸ್ಗುಪ್ತಾ, ರಾಮಗಾರ್ಹಿಯಾ, ಮೆಹ್ತಾ, ಸಾಮ್ರಾಟ್, ಕುಮಾರ್ ಮತ್ತು ಎವಿಪಿ ಪೆಖಮ್ ಬಸು ವಿರುದ್ಧ ಮಾಧ್ಯಮಗಳ ಟಿಆರ್‌ಪಿ ರೇಟಿಂಗ್ ಬದಲಾವಣೆಯ ಆರೋಪಗಳಿವೆ ಎಂದು ಫೆಬ್ರವರಿ 2020 ರಲ್ಲಿ ಸುನೀಲ್ ಲುಲ್ಲಾ ಹೇಳಿದ್ದರು.”ಜೂನ್ 2020 ರ ಮೊದಲ ವಾರದಲ್ಲಿ, ಸರ್ವರ್‌ನಿಂದ ಹಾರ್ಡ್ ಡ್ರೈವ್‌ಗೆ ಶಂಕಿತ ವ್ಯಕ್ತಿಗಳ ಇಮೇಲ್‌ಗಳ ಬ್ಯಾಕಪ್ ತೆಗೆದುಕೊಂಡು, ಜೂನ್ ಕೊನೆಯ ವಾರದಲ್ಲಿ ರಾಮ್‌ಗಾರ್ಹಿಯಾ ಲ್ಯಾಪ್‌ಟಾಪ್ ಅನ್ನು ಆಡಿಟಿಂಗ್ ಏಜೆನ್ಸಿಗೆ ನೀಡಲಾಗಲಿದೆ” ಎಂದು ಬಾರ್ಕ್ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಪೂರಕ ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

ಮೆಹ್ತಾ, ಸಾಮ್ರಾಟ್, ಕುಮಾರ್ ಮತ್ತು ಬಸು ವಿರುದ್ಧ ಪೊಲೀಸರು ಆರೋಪ ಹೊರಿಸಿಲ್ಲ. ಟಿಆರ್‌ಪಿ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ ಎರಡು ತಿಂಗಳ ನಂತರ ಡಿಸೆಂಬರ್‌ನಲ್ಲಿ ಆಡಿಟ್ ವರದಿಯನ್ನು ಮುಂಬೈ ಪೊಲೀಸರಿಗೆ ನೀಡಲಾಯಿತು.

ವರದಿಯಲ್ಲಿ ಉಲ್ಲೇಖಿಸಲಾದ ಕೆಲವು ನಿದರ್ಶನಗಳು ಬದಲಾಗಿರುವ ರೇಟಿಂಗ್‌ಗಳನ್ನು ಸೂಚಿಸುತ್ತವೆ. ಇದರ ಪರಿಣಾಮವಾಗಿ 2017 ರಿಂದ ರಿಪಬ್ಲಿಕ್ ಟಿವಿಯು ಇಂಗ್ಲಿಷ್ ಸುದ್ದಿಗಳಲ್ಲಿ ಅಗ್ರ ಸ್ಥಾನದಲ್ಲಿರುವ ಚಾನೆಲ್ ಆಗಿದೆ. ಟೈಮ್ಸ್ ನೌನ ಡೇಟಾ ಮತ್ತು ರೇಟಿಂಗ್‌ಗಳು ಕಡಿಮೆಯಾದ ವಾರಗಳವರೆಗೆ ರಿಪಬ್ಲಿಕ್‌ ಟಿವಿಯ ಉನ್ನತ ಸ್ಥಾನದಲ್ಲಿತ್ತು ಎಂಬುದಕ್ಕೆ ಇವುಗಳ ಇಮೇಲ್‌ಗಳು ಮತ್ತು ಸಂದೇಶಗಳನ್ನು ಸಾಕ್ಷಿಯಾಗಿ ಉಲ್ಲೇಖಿಸಲಾಗಿದೆ.

ಮೂಲ: ದಿ ಇಂಡಿಯನ್ ಎಕ್ಸ್‌ಪ್ರೆಸ್

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ: ಪುಲ್ವಾಮ ದಾಳಿಯ ಬಗ್ಗೆ ಅರ್ನಾಬ್‌ಗೆ ಮೊದಲೇ ತಿಳಿದಿತ್ತು; ಸೈನಿಕರ ಸಾವನ್ನು ಸಂಭ್ರಮಿಸಿದ್ದ ಗೋಸ್ವಾಮಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights