ನಿಷೇಧದ ವೇಳೆ ಸಾಲದ ಮೇಲಿನ ಬಡ್ಡಿ ವಿಧಿಸುವ ಆರ್‌ಬಿಐ ನಿರ್ಧಾರವನ್ನು ಅಲ್ಲಗಳೆದ ಸುಪ್ರೀಂ ಕೋರ್ಟ್‌

ಕೊರೊನಾ ಲಾಕ್‌ಡೌನ್‌ನಿಂದಾಗಿ ಉಂಟಾಗಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಾರ್ಚ್‌ನಿಂದ ಆಗಸ್ಟ್ 31 ರ ನಡುವೆ ಸಾಲ ಮರುಪಾವತಿ ಮಾಡುವ ಅಗತ್ಯವಿಲ್ಲ ಎಂದು ಘೋ‍‍‍ಷಿಸಿದೆ. ಆದರೆ ಈ ಅವಧಿಯಲ್ಲಿ ಆ ಸಾಲದ ಮೇಲೆ ಬಡ್ಡಿ ವಿಧಿಸಲು ಬ್ಯಾಂಕುಗಳಿಗೆ ಅವಕಾಶ ನೀಡಿದೆ. ಈ ಪ್ರಿಕರಣವನ್ನು ಸುಪ್ರೀಂ ಕೋರ್ಟ್‌ನ ಮೂರು ಸದಸ್ಯರ ನ್ಯಾಯಪೀಠ ಗುರುವಾರ ವಿಚಾರಣೆಗೆ ತೆಗೆದುಕೊಂಡು ಚರ್ಚಿಸಿದೆ.

ಆಗ್ರಾ ಮೂಲದ ಗಜೇಂದ್ರ ಶರ್ಮಾ ಅವರ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ವಿಚಾರಣೆ ನಡೆಸುತ್ತಿದ್ದ ವೇಳೆ ಸುಪ್ರೀಂ ಕೋರ್ಟ್ ಈ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

ಕೊರೊನಾ ಸಮಸ್ಯೆಯಿಂದಾಗಿ ಬ್ಯಾಂಕ್‌ಗಳಲ್ಲಿರುವ ಇಎಂಐಗಳನ್ನು ಮಾರ್ಚ್ ಮತ್ತು ಆಗಸ್ಟ್ 31 ರ ನಡುವೆ ಪಾವತಿಸುವ ಅಗತ್ಯವಿಲ್ಲ ಎಂದು ಆರ್‌ಬಿಐ ಘೋಷಿಸಿತ್ತು. ಇದನ್ನು ಉಲ್ಲೇಖಿಸಿ ಖಾಸಗಿ ಬ್ಯಾಂಕ್ ವಿಧಿಸಿದ ಬಡ್ಡಿಯನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಗಜೇಂದ್ರ ಶರ್ಮಾ ಪಿಐಎಲ್‌ ಸಲ್ಲಿಸಿದ್ದಾರೆ.  ಆರ್‌ಬಿಐನ ಮಾರ್ಚ್ 27 ಮತ್ತು ಮೇ 22ರ ಅಧಿಸೂಚನೆಗಳನ್ನು ಉಲ್ಲೇಖಿಸಿ ಐದು ತಿಂಗಳ ಕಾಲ ಸಾಲ ಮರುಪಾವತಿಯನ್ನು ತಡೆಹಿಡಿದಿದ್ದರೂ, ಬ್ಯಾಂಕುಗಳಿಗೆ ಬಡ್ಡಿ ವಿಧಿಸಲು ಅನುಮತಿ ನೀಡಿದ್ದಾರೆ ಎಂದು ಶರ್ಮಾ ಪಿಐಎಲ್‌ನಲ್ಲಿ ಆರೋಪಿಸಿದ್ದಾರೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಕೆ.ಕೌಲ್, ಮತ್ತು ಎಂ.ಆರ್.ಶಾ ಅವರಿರುವ ತ್ರಿಸದಸ್ಯ ಪೀಠವು ಸಾಲ ಮರುಪಾವತಿಯನ್ನು ತಡೆದು, ಬಡ್ಡಿಯನ್ನು ಮುಂದುವರೆಸುವುದು ಇನ್ನೂ ಹೆಚ್ಚಿನ ಅಪಾಯಕಾರಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.

“ಬಲವಂತದ ಬಡ್ಡಿ ಮನ್ನಾಕ್ಕೆ ಒತ್ತಾಯಿಸುವುದು ವಿವೇಕಯುತ ಅಥವಾ ಸೂಕ್ತವೆಂದು ಆರ್‌ಬಿಐ ಪರಿಗಣಿಸುವುದಿಲ್ಲ. ಬ್ಯಾಂಕುಗಳ ಆರ್ಥಿಕ ಕಾರ್ಯಸಾಧ್ಯತೆಯನ್ನು ಕಾಪಾಡುವುದು ಕಡ್ಡಾಯವಾಗಿದೆ. ಬಡ್ಡಿ ಮನ್ನಾ ಮಾಡುವಂತೆ ಒತ್ತಾಯಿಸುವುದು ಠೇವಣಿದಾರರ ಹಿತಾಸಕ್ತಿಗಳನ್ನು ಅಪಾಯಕ್ಕೆ ಸಿಲುಕಿಸುತ್ತದೆ” ಎಂದು ಆರ್‌ಬಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಆದರೆ, “ನೀವು ಎರಡು ಅಂಶಗಳನ್ನು ಎದುರಿಸಬೇಕಾಗಿದೆ- ನಿಷೇಧದ ಅವಧಿಯಲ್ಲಿ ಗಳಿಸುವ ಬಡ್ಡಿ ಮತ್ತು ಸಂಗ್ರಹವಾಗುವ ಬಡ್ಡಿಯ ಮೇಲಿನ ಬಡ್ಡಿ” ಎಂದು ಕೇಂದ್ರ ಹಣಕಾಸು ಸಚಿವಾಲಯದ ಪರವಾಗಿ ವಿಚಾರಣೆ ವೇಳೆ ಹಾಜರಾದ ತುಷಾರ್ ಮೆಹ್ತಾ ಅವರಿಗೆ ನ್ಯಾಯಾಲಯವು ಹೇಳಿದೆ.

ವಿಚಾರಣೆಗೂ ಒಂದು ದಿನ ಮೊದಲೇ ಆರ್‌ಬಿಐ ತನ್ನ ಅಫಿಡವಿಟ್ ಅನ್ನು ಮಾಧ್ಯಮಗಳಲ್ಲಿ ಸೋರಿಕೆ ಮಾಡಿದ್ದಕ್ಕಾಗಿ ನ್ಯಾಯಾಲಯ ಕೋಪಗೊಂಡಿದ್ದು, ವಿಚಾರಣೆಯನ್ನು ಜೂನ್ 12ಕ್ಕೆ ಮೂಂದೂಡಿದ್ದು, ಆ ವೇಳೆಗೆಯೊಳಗೆ ಬಡ್ಡಿ ಮನ್ನಾದ ವಿಚಾರವಾಗಿ ಜಂಟಿಯಾಗಿ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಕೇಂದ್ರ ಮತ್ತು ಆರ್‌ಬಿಐಗೆ ಸೂಚಿಸಿದೆ.

“ಆರ್‌ಬಿಐ ಈ ಪ್ರಕರಣವನ್ನು ಸೆನ್ಸೇಷನಲ್‌ ಪ್ರಕರಣವನ್ನಾಗಿಸಲು ಯತ್ನಿಸಿದ್ದರಿಂದ ಮಾಧ್ಯಮಗಳಿಗೆ ಅಫಿಡವಿಟ್ ಅನ್ನು ಸೋರಿಕೆ ಮಾಡಿದೆ. ಖಾಸಗಿ ಬ್ಯಾಂಕುಗಳನ್ನು ಹಿತಾಸಕ್ತಿಗಾಗಿ ನಾಗರಿಕರ ಆರ್ಥಿಕ ಸಂಕಷ್ಟವನ್ನು ನಿರ್ಲಕ್ಷಿಸಿದೆ” ಎಂದು ಶರ್ಮಾ ಅವರ ಪರವಾಗಿ ವಾದಿಸಿದ ವಕೀಲ ರಾಜೀವ್ ದತ್ತಾ ನ್ಯಾಯಾಲಯದ ಗಮನ ಸೆಳೆದಿದ್ದಾರೆ.

ಠೇವಣಿದಾರರ ಹಿತಾಸಕ್ತಿಯನ್ನು ಭದ್ರಪಡಿಸಿಕೊಳ್ಳಲು ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅವಳಿ ಆದೇಶವನ್ನು ಹಂಚಿಕೊಳ್ಳುವುದಾಗಿ ಆರ್‌ಬಿಐ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ. “ಸಾಲದ ಮೇಲಿನ ಬಡ್ಡಿಯು ಬ್ಯಾಂಕುಗಳಿಗೆ ಒಂದು ಪ್ರಮುಖ ಆದಾಯದ ಮೂಲವಾಗಿದೆ. ಇದು ಆರ್ಥಿಕವಾಗಿ ಬ್ಯಾಂಕುಗಳನ್ನು ಉಳಿಸಿಕೊಳ್ಳಲು ಮತ್ತು ಲಾಭದಾಯಕವಾಗಿ ಉಳಿಯಲು ಅನುವು ಮಾಡಿಕೊಡುತ್ತದೆ” ಎಂದು ಅದು ಹೇಳಿದೆ.

ಆಗ್ರಾದಲ್ಲಿ ಆಪ್ಟಿಕಲ್ ಅಂಗಡಿಯೊಂದನ್ನು ನಡೆಸುತ್ತಿರುವ ಮತ್ತು ಖಾಸಗಿ ಬ್ಯಾಂಕಿನಿಂದ 37 ಲಕ್ಷ ರೂ.ಗಳ ಗೃಹ ಸಾಲವನ್ನು ಪಡೆದ ಅರ್ಜಿದಾರ ಶರ್ಮಾ, ತಮ್ಮ ಮನವಿಯಲ್ಲಿ ಸಾಲಗಾರನಾಗಿ ತನ್ನ ಇಎಂಐಗಳನ್ನು ಪಾವತಿಸುವ ಸ್ಥಿತಿಯಲ್ಲಿಲ್ಲ ಏಕೆಂದರೆ ಲಾಕ್‌ಡೌನ್ ನಿರ್ಬಂಧಗಳ ಕಾರಣ ತನ್ನ ಆದಾಯದ ಮೂಲ ಮುಚ್ಚಿದೆ ಎಂದು ಹೇಳಿದ್ದಾರೆ.

“ನಿಷೇಧದ ಅವಧಿಯಲ್ಲಿ ಬ್ಯಾಂಕುಗಳು ಬಡ್ಡಿ ಹೇರುವುದು ವಿನಾಶಕಾರಿ ಮತ್ತು ತಪ್ಪು” ಎಂದು ಅವರು ತಮ್ಮ ಮನವಿಯಲ್ಲಿ ವಾದಿಸಿದ್ದಾರೆ.

ಮುಂದಿನ ವಿಚಾರಣೆಯನ್ನು ಸುಪ್ರಿಂ ಕೋರ್ಟ್ ಜೂನ್ 12ಕ್ಕೆ ಮುಂದೂಡಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights