ನೇಪಾಳ ಸಂಬಂಧ ಕಳೆದುಕೊಂಡ ಭಾರತ; ಚೀನಾಕ್ಕೆ ರಸ್ತೆ ನಿರ್ಮಿಸಲು ಮುಂದಾದ ನೇಪಾಳ
ಚೀನಾಕ್ಕೆ ಸಂಪರ್ಕ ಕಲ್ಪಿಸುವ 130 ಕಿ.ಮೀ ಉದ್ದದ ಡಾರ್ಚುಲಾ-ಟಿಂಕರ್ ರಸ್ತೆ ಯೋಜನೆಯ ಕೆಲಸವನ್ನು ಡಾರ್ಚುಲಾ ಜಿಲ್ಲೆಯಲ್ಲಿ ನೇಪಾಳ ಸರ್ಕಾರ ಆರಂಭಿಸಿದೆ.
ನೇಪಾಳದ ಸೈನ್ಯವು ರಸ್ತೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ ಎಂದು ನೇಪಾಳದ ಪತ್ರಿಕೆಯೊಂದು ವರದಿ ಮಾಡಿದೆ. 12 ವರ್ಷಗಳ ನಂತರ ಈ ರಸ್ತೆ ಯೋಜನೆಯನ್ನು ಪುನರಾರಂಭಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಉತ್ತರಖಂಡದ ಚೀನಾ ಗಡಿಯಲ್ಲಿ ಲಿಪುಲೇಶ್ ಪಾಸ್ ಸಂಪರ್ಕಿಸುವಂತೆ ಹೊಸ ರಸ್ತೆಯನ್ನು ಭಾರತ ನಿರ್ಮಿಸಿತ್ತು. ಇದಕ್ಕೆ ನೇಪಾಳ ತೀವ್ರ ವಿರೋಧ ವ್ಯಕ್ತಪಡಿಸಿದ್ದಾಗಿ ನಾಲ್ಕು ದಿನಗಳ ಹಿಂದೆ ವರದಿಯಾಗಿತ್ತು.
ಈಗ ನೇಪಾಳ ಸರ್ಕಾರ ಟಿಂಕರ್ ಪಾಸ್ ಮೂಲಕ ನೇಪಾಳ-ಚೀನಾ ಗಡಿ ವ್ಯಾಪಾರಕ್ಕೆ ಅನುಕೂಲವಾಗುವಂತೆ ರಸ್ತೆ ಕಾಮಗಾರಿ ನಿರ್ಮಾಣಕ್ಕೆ ಮುಂದಾಗಿದೆ. 2008 ರಲ್ಲಿ ಮಂಜೂರಾಗಿದ್ದ ಈ ರಸ್ತೆ ಯೋಜನೆ ಕಠಿಣ ಭೂಪ್ರದೇಶ ಮತ್ತು ಕಠಿಣ ಹವಾಮಾನ ಪರಿಸ್ಥಿತಿಯಿಂದಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು.
ಮೇ 8ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉತ್ತರಾಖಂಡದ ಧಾರ್ಚುಲಕ್ಕೆ ಲಿಪುಲೆಖ್ ಪಾಸ್ ಅನ್ನು ಸಂಪರ್ಕಿಸುವ 80 ಕಿ.ಮೀ ರಸ್ತೆಯನ್ನು ಉದ್ಘಾಟಿಸಿದ ನಂತರ ನೇಪಾಳ ತೀವ್ರವಾಗಿ ಪ್ರತಿಭಟಿಸಿತ್ತು. ಇದಾದ ನಂತರ, ಭಾರತ ಮತ್ತು ನೇಪಾಳ ಸರ್ಕಾರದ ನಡುವೆ ವೈಮಸ್ಯ ಉಂಟಾಗಿದ್ದು, ಈಗ ಭಾರತಕ್ಕೆ ಸೆಡ್ಡು ಹೊಡೆದು ರಸ್ತೆ ನಿರ್ಮಾಣಕ್ಕೆ ನೇಪಾಳ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ನೇಪಾಳ ಸರ್ಕಾರ ತನ್ನ ಸೈನ್ಯವನ್ನು ನಿಯೋಜಿಸಿದೆ. ಈ ರಸ್ತೆ ಮೂಲಕ ವ್ಯಾಪಾರ ಮಾತ್ರವಲ್ಲದೆ ಪ್ರವಾಸೋದ್ಯಮವನ್ನೂ ಉತ್ತೇಜಿಲಿಸಿದೆ. ಎಂದು ಮೂಲಗಳು ಖಚಿತಪಡಿಸಿವೆ.
2015ರಲ್ಲಿ ಕೆಪಿ ಶರ್ಮಾ ಒಲಿ ನೇಪಾಳದ ಪ್ರಧಾನಿಯಾದ ನಂತರ, ಕಾಠ್ಮಂಡು ಬೀಜಿಂಗ್ನೊಂದಿಗಿನ ಸಂಬಂಧ ಬಲಗೊಂಡಿತ್ತು. ನೇಪಾಳದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಚೀನಾ ಭಾರಿ ಹೂಡಿಕೆ ಮಾಡಿದ ನಂತರ ಈ ಸಂಬಂಧ ಮತ್ತಷ್ಟು ಬಲಗೊಂಡಿದೆ. ನೇಪಾಳವು ಚೀನಾದ ಮಹತ್ವಾಕಾಂಕ್ಷೆಯ ಬೆಲ್ಟ್ ಅಂಡ್ ರೋಡ್ ಯೋಜನೆಯಲ್ಲೂ ಸೇರಿಕೊಂಡಿದೆ.

