ವಿಡಿಯೋ: ಮಸ್ಕಿಯಲ್ಲಿ BJP ಎರಡು ಚೀಲ ಹಣ ಸಾಗಾಟ; ಆಯೋಗಕ್ಕೆ ಕಾಂಗ್ರೆಸ್‌ ದೂರು!

ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಜನರಿಗೆ ಹಣ ಹಂಚುತ್ತಿರುವ ಆರೋಪಗಳು ಒಂದಾದ ಮೇಲೊಂದರಂತೆ ಕೇಳಿಬರುತ್ತಿವೆ. ಅಲ್ಲದೆ, ಈ ಬಿಜೆಪಿಗರು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿವೆ. ಈ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗವು ಬಿಜೆಪಿ ವಿರುದ್ಧ ಮಸ್ಕಿಯಲ್ಲಿ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಚುನಾವಣೆ ಅಕ್ರಮ ಸಂಬಂಧ ಮುದಗಲ್ ಪಿಎಸ್‌ಐ ಡಾಕೇಶ್ ಹಾಗೂ ಬಿಜೆಪಿ ವಿರುದ್ಧ ದೂರು ಸಲ್ಲಿಸಲಾಗಿದ್ದು, ಮಟ್ಟೂರು ಗ್ರಾಮದಲ್ಲಿ ಎರಡು ಚೀಲಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಹಣ ಸಾಗಣೆ ನಡೆದಿದ್ದು, ಕ್ರಮ ಕೈಗೊಳ್ಳಬೇಕಿದ್ದ ಮುದಗಲ್ ಪಿಎಸ್‌ಐ ಡಾಕೇಶ್ ಅದರಲ್ಲಿ ಒಂದು ಚೀಲವನ್ನು ಬೇರೆಡೆ ಸಾಗಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಸ್ಕಿಯ ತಾಲೂಕು ಪಂಚಾಯತಿ ಕಚೇರಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ ದೂರು ದಾಖಲಿಸಿ ಮಾತನಾಡಿದ ಡಿ.ಕೆ ಶಿವಕುಮಾರ್, ಮಸ್ಕಿಯಲ್ಲಿ ಉಪಚುನಾವಣೆ ಕಾನೂನುಬದ್ಧವಾಗಿ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್, ಮಾಜಿ ಸಂಸದ ಉಗ್ರಪ್ಪ, ಶಾಸಕ ಬಸನಗೌಡ ದದ್ದಲ್, ಮಾಜಿ ಶಾಸಕ ಭೋಸರಾಜ್, ಯುವ ಮುಖಂಡ ಬಸವನಗೌಡ ಬಾದರ್ಲಿ ನಿಯೋಗದಲ್ಲಿದ್ದರು.

ನಿನ್ನೆಯಷ್ಟೇ ತುರ್ವಿಹಾಳದಲ್ಲಿ ಹಾಸನದ ಮೂವರು ಯುವಕರು ಬಿಜೆಪಿ ಪರ ಹಣ ಹಂಚುವಾಗ ಸ್ಥಳೀಯರು ಅವರನ್ನು ಹಿಡಿದು ಪೊಲೀಸರಿಗೆ ಕೊಟ್ಟಿದ್ದರು. ಈ ಕುರಿತು ತುರ್ವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಯುವಕರಿಂದ 81 ಸಾವಿರ ರೂ. ವಶಪಡಿಸಿಕೊಳ್ಳಲಾಗಿತ್ತು.

ಯುವಕರಿಗೆ ಸ್ಥಳೀಯರು ಒಂದೆರಡು ಏಟು ನೀಡಿ, ಅಂಗಿ ಹರಿದ ವಿಡಿಯೋ ವೈರಲ್ ಆಗಿದೆ. ಈ ಹಿಂದೆಯೂ ಬೆನಕಲ್, ಹಂಚಿನಾಳ ಮುಂತಾದ ಕಡೆ ಬಿಜೆಪಿ ಪರ ಹಣ ಹಂಚುವ ನಾಲ್ಕೈದು ವಿಡಿಯೊಗಳು ವೈರಲ್ ಆಗಿದ್ದವು.

‘ಚುನಾವಣಾ ಆಯೋಗ ಮತ್ತು ಪೊಲೀಸರು ಸರಿಯಾದ ಕ್ರಮ ಜರುಗಿಸುತ್ತಿಲ್ಲ. ಬಿಜೆಪಿ ಹಣ ನೀಡಿ ಚುನಾವಣೆಯ ಎದುರಿಸುತ್ತಿದೆ’ ಎಂದು ರೈತ ಹೋರಾಟಗಾರರು ಮತ್ತು ಕಾಂಗ್ರೆಸ್‌ನ ಸ್ಥಳೀಯ ನಾಯಕರು ಅಪಾದಿಸುತ್ತಲೇ ಬಂದಿದ್ದಾರೆ.

ಇದನ್ನೂ ಓದಿ: ಮೋದಿ ಮಂಡಿಗಳನ್ನು ಕೊಲ್ಲುತ್ತಿದ್ದಾರೆ ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್‌: ಬಿಜೆಪಿ ಸರ್ಕಾರದ ವಿರುದ್ಧ ರೈತರ ಆಕ್ರೋಶ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights