ಮೋದಿ ಮಂಡಿಗಳನ್ನು ಕೊಲ್ಲುತ್ತಿದ್ದಾರೆ ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್‌: ಬಿಜೆಪಿ ಸರ್ಕಾರದ ವಿರುದ್ಧ ರೈತರ ಆಕ್ರೋಶ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಖಾಸಗಿ ಮಂಡಿಗಳ ಸ್ಥಾಪನೆಗೆ ಅವಕಾಶ ನೀಡುವ ಮೂಲಕ ಎಪಿಎಂಸಿಗಳನ್ನು ನಾಶಮಾಡುತ್ತಿದೆ ಎಂದು ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆನಡೆಸುತ್ತಿರುವ ರೈತರು ಆರೋಪಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಮಂಡಿಗಳನ್ನು (ಎಪಿಎಂಸಿ) ನಾಶವಾಗುವುದರ ಜೊತೆಗೆ ನಾನು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಇಲ್ಲದೇ ನಷ್ಟ ಅನುಭವಿಸುತ್ತಿದ್ದೇವೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಯುವ ರೈತರು ಟ್ವಿಟರ್‌ನಲ್ಲಿ  #Modi_Killing_Mandis (ಮೋದಿ ಎಪಿಎಂಸಿಗಳನ್ನು ಕೊಲ್ಲುತ್ತಿದ್ದಾರೆ) ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಈವರೆಗೂ ಸುಮಾರು 72 ಸಾವಿರ ಟ್ವೀಟ್‌ಗಳು ದಾಖಲಾಗಿವೆ. ಮಂಡಿಗಳು ನಾಶವಾಗುತ್ತಿರುವ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಸಂಯುಕ್ತ ಕಿಸಾನ್‌ ಮೋರ್ಚಾ, ‘ಮೂರು ಕರಾಳ ಕೃಷಿ ಕಾಯ್ದೆಗಳ ಅನುಷ್ಠಾನವು ಕನಿಷ್ಠ ಬೆಂಬಲ ಬೆಲೆಯ ಮೇಲೆ ದುಷ್ಪರಿಣಾಮ ಬೀರುವುದು ಮಾತ್ರವಲ್ಲದೇ ಎಪಿಎಂಸಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹುನ್ನಾರವಾಗಿದೆ. ಮಂಡಿಗಳನ್ನು ಕೊಲ್ಲುವ ಈ ಹೊಸ ಕಾನೂನುಗಳು ಸಣ್ಣ ಮತ್ತು ಬಡ ರೈತರ ಮೇಲೆ ಕೆಟ್ಟ ಪರಿಣಾಮ ಬೀರಲಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

‘ಬೇರೆ ದೇಶಗಳು ಕೋವಿಡ್‌-19 ಎದುರಿಸಲು ಮತ್ತು ಆರ್ಥಿಕತೆ ಪುನಶ್ಚೇತನಗೊಳಿಸುವತ್ತ ಗಮನಹರಿಸಿದ್ದರೆ, ಮೋದಿ ಸರ್ಕಾರ ಕೃಷಿ ಕ್ಷೇತ್ರವನ್ನು ನಾಶ ಮಾಡುತ್ತಾ ಚುನಾವಣೆಯಲ್ಲಿ ಗೆಲ್ಲುವುದರ ಬಗ್ಗೆ ಗಮನಹರಿಸಿದೆ’ ಎಂದು ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿದೆ.

ಜಿಂದ್‌ಮನ್‌ ಎನ್ನುವವರು ಎಪಿಎಂಸಿ ಮಂಡಿಗಳ ಪರವಾಗಿ ಟ್ವೀಟ್‌ ಮಾಡಿದ್ದು, ‘ಮಂಡಿಗಳಿಗೆ ರೈತರು ತರುವ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ದೊರಕುವುದು ಎಂಬ ನಂಬಿಕೆ ಎಂಪಿಎಂಸಿಗಳಲ್ಲಿದೆ. ಆದರೆ ಮೋದಿ ಮಂಡಿಗಳನ್ನು ನಾಶಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಮಂಡಿಗಳೆಂದರೆ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಎಂದರ್ಥ. ಅವುಗಳನ್ನು ರದ್ದುಗೊಳಿಸುವ ಮೂಲಕ ಸರ್ಕಾರವು ರೈತರನ್ನು ಬಂಡವಾಳಶಾಹಿಗಳ ಮರ್ಜಿಗೆ ದೂಕುತ್ತಿದೆ. ಒಂದು ದೇಶ, ಒಂದು ಮಂಡಿ ಎಂಬುದು ಕೇವಲ ಮರೀಚಿಕೆ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಸ ಕೃಷಿ ಕಾನೂನುಗಳು 6 ತಿಂಗಳಲ್ಲಿ 70% ಮಧ್ಯಪ್ರದೇಶದ ಮಂಡಿಗಳನ್ನು ಪಾರ್ಶ್ವವಾಯುವಿಗೆ ತಳ್ಳಿವೆ ಎಂದು ಯಾಸ್ಸಿ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಜಾರಿಮಾಡಿರುವ ರೈತ ವಿರೋಧಿ ಕೃಷಿ ಕಾಯ್ದೆಗಳು ರದ್ದಾಗಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧವಾಗಬೇಕು ಎಂದು ಒತ್ತಾಯಿಸಿ ಕಳೆದ 140 ದಿನಗಳಿಂದ ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶದ ಪಶ್ಚಿಮ ಭಾಗದ ರೈತರು ದೆಹಲಿ ಗಡಿಗಳಲ್ಲಿ ಮೊಕ್ಕಾಮ್‌ ಹೂಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈವರೆಗೂ ರೈತರ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡದ ಒಕ್ಕೂಟ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಮಾಡಿರುವುದಲ್ಲದೇ, ರಸಗೊಬ್ಬರ ದರ ಏರಿಕೆಗೆ ಮೌನವಾಗಿಯೇ ಸಮ್ಮತಿ ಸೂಚಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಈವರೆಗೂ ಸುಮಾರು 13 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಇತ್ತು. ರೈತರು ಮಂಡಿಗಳಲ್ಲಿ ಕನಿಷ್ಠ ಬೆಂಬಲ ಬೆಲೆಗೆ ತಮ್ಮ ಬೆಳೆಗಳನ್ನು ಮಾರುತ್ತಿದ್ದರು. ಪ್ರಸ್ತುತ ರಾಜ್ಯ ಬಿಜೆಪಿ ಸರ್ಕಾರವು ಸಹ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಹಾಗಾಗಿ ಇಲ್ಲಿಯ ಎಪಿಎಂಸಿಗಳು ಸಹ ಸೊರಗುತ್ತಿವೆ ಎಂಬ ಆರೋಪ ಕೇಳಿಬಂದಿವೆ.

Read Also: ಕೃಷಿ ಕಾಯ್ದೆಗೆ ವಿರೋಧಿಸಿ BJP ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಹರಿಯಾಣ ಶಾಸಕರ ನಿವಾಸದ ಮೇಲೆ ಐಟಿ ದಾಳಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights