ರೈತರೊಂದಿಗೆ ಅಮಿತ್ ಶಾ ಮಾತುಕತೆ ವಿಫಲ; ಇಂದು ನಡೆಯಬೇಕಿದ್ದ ಸಭೆ ರದ್ದು!
ರೈತ ವಿರೋಧಿ ಕೃಷಿ ನೀತಿಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರ ಮುಖಂಡರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವೆ ನಡೆದ ಮಾತುಕತೆ ಮುರಿದುಬಿದ್ದಿದೆ. ಅಮಿತ್ ಶಾ ಪ್ರಸ್ತಾಪಿಸಿ ತಿದ್ದುಪಡಿ ಪ್ರಸ್ತಾಪವನ್ನು ತಿರಸ್ಕರಿಸಿರುವ ರೈತರು, ಸಂಪೂರ್ಣ ರದ್ದುಗೊಳಿಸಬೇಕೆಂಬ ಬೇಡಿಕೆಗೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ 06ನೇ ಸುತ್ತಿನ ಸಭೆ ರದ್ದುಗೊಂಡಿದೆ.
ಸರ್ಕಾರ ಉದ್ದೇಶಿಸಿರುವ ತಿದ್ದುಪಡಿಗಳ ಲಿಖಿತ ಪ್ರಸ್ತಾವನೆಯನ್ನು ಇಂದು ರೈತ ಮುಖಂಡರಿಗೆ ಕಳುಹಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸರ್ಕಾರ ಕಳಿಸುವ ಪ್ರಸ್ತಾಪಗಳ ಕುರಿತ ಚರ್ಚಿಸಲು ರೈತ ಮುಖಂಡರು ಸಭೆ ನಡೆಸಲಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರದೊಂದಿಗಿನ ಇಂದಿನ ಸಭೆ ರದ್ದುಮಾಡಲಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾದ ಕಾರ್ಯದರ್ಶಿ ಹನ್ನನ್ ಮೊಲ್ಲಾ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ್ ಬಂದ್‌ಗೆ ಸೈನಿಕ ಬೆಂಬಲ; ಹುಬ್ಬಳ್ಳಿಯಲ್ಲಿ ಸೈನಿಕನನ್ನು ಬಂಧಿಸಿದ ಪೊಲೀಸರು!
ಕೇಂದ್ರ ಮತ್ತು ರೈತರ ನಡುವಿನ ಕೊನೆಯ ಎರಡು ಸಭೆಗಳಲ್ಲಿ ಕೃಷಿ ಕಾನೂನುಗಳಿಗೆ ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದರು. ಸರ್ಕಾರ ಹೊಸ ಪ್ರಸ್ತಾಪವನ್ನು ಮಾಡಬಹುದೆಂಬ ನಿರೀಕ್ಷೆ ಇತ್ತು. ಆದಾಗ್ಯೂ, ಸರ್ಕಾರವು ತನ್ನ ತಿದ್ದುಪಡಿ ನಿರ್ಧಾರಕ್ಕೆ ಭದ್ರವಾಗಿದ್ದು, ಯಾವುದೇ ಪುನರ್ವಿಮರ್ಶೆ ಮಾಡಿಲ್ಲ.
ಪ್ರತಿಭಟನಾ ನಿರತ ರೈತರು ರಾಷ್ಟ್ರವ್ಯಾಪಿ ನಡೆಸಿದ ಭಾರತ್ ಬಂದ್‌ಗೆ ಬೃಹತ್ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳು, ವ್ಯಾಪಾರ ಮತ್ತು ಸಾರಿಗೆ ಒಕ್ಕೂಟಗಳು, ಕಾರ್ಮಿಕ ಸಂಘಟನೆಗಳು, ವೈದ್ಯರು, ವಿದ್ಯಾರ್ಥಗಳು, ಸಿನಿಮಾ ಸ್ಟಾರ್‌ಗಳು ರೈತ ಪ್ರತಿಭಟನೆಯ ಜೊತೆ ಒಗ್ಗೂಡಿದ್ದರು.
ಹೀಗಾಗಿ ಗೃಹ ಸಚಿವ ಅಮಿತ್ ಶಾ ರೈತ ಮುಖಂಡರನ್ನು ಸಭೆಗೆ ಆಹ್ವಾನಿಸಿದ್ದರು. ಆದರೆ, ಅವರೊಂದಿನ ಸಭೆಯು ವಿಫಲವಾಗಿದ್ದು, ಇಂದಿನ ಸಭೆಯನ್ನೂ ರದ್ದುಗೊಳಿಸಲಾಗಿದೆ.
ಕಳೆದ ಎರಡು ವಾರಗಳಿಂದ ಸಾವಿರಾರು ರೈತರು ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: BJP ಸರ್ಕಾರದ ಭೂಸುಧಾರಣಾ ಮಸೂದೆಗೆ JDS ಬೆಂಬಲ; ಪರಿಷತ್‌ನಲ್ಲಿ ಅಂಗೀಕಾರ!

