ಹೊಸ ಕೃಷಿ ಕಾನೂನುಗಳ ವಿರುದ್ಧ ಇಂದು ರಾಜ್ಯ ರೈತರಿಂದ ಬಾರುಕೋಲು ಚಳುವಳಿ…!
ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ಪ್ರತಿಭಟನೆ ಕಿಚ್ಚು ಇಂದು ಕೂಡ ಮುಂದುವರೆದಿದೆ. ಪ್ರಾಣಿಗಳು ಮಾತು ಕೇಳಲು ಬಾರುಕೋಲು ಬೇಕು ಹಾಗೇ ಸರ್ಕಾರಕ್ಕೂ ಇದರಿಂದಲೇ ಬುದ್ದಿಕಲಿಸುತ್ತೇವೆಂದು ಬೆಂಗಳೂರಿನಲ್ಲಿ ಇಂದೂ ಕೂಡ ರೈತರು ಬಾರುಕೋಲು ಚಳುವಳಿ ನಡೆಸಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ರೈತರ ಪ್ರತಿಭಟನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಇಂದು ಪ್ರಮುಖ ಅಸ್ತ್ರ ಬಾರುಕೋಲು ಝಳಪಿಸುವ ಮೂಲಕ ರಾಜ್ಯ ಸರ್ಕಾವನ್ನು ಎಚ್ಚರಿಸಿ ಹೋರಾಟ ಮಾಡಲು ಅನ್ನದಾತರು ಮುಂದಾಗಿದ್ದಾರೆ.
ರೈತರ ಹೆಗಲ ಮೇಲೆ ಹಸಿರು ಶಾಲು, ಬಲಗೈಯಲ್ಲಿ ಬಾರುಕೋಲು ಕಂಗೊಳಿಸಲಿದೆ. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರ ಬೃಹತ್ ಪ್ರತಿಭಟನೆ ಜರುಗಲಿದೆ. ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ವಿಧಾನಸೌಧವರೆಗೆ ಪಾದಯಾತ್ರೆ ಮೂಲಕ ರೈತರು ಹೋರಾಟ ಮಾಡಲಿದ್ದಾರೆ.
ಕೊರೊನಾ ಸಮಯದಲ್ಲಿ ಮಾಸ್ಕ್ ನಿಂದ ಬಾಯಿ ಮುಚ್ಚಿ ಕೃಷಿ ಕಾನೂನು ತರುವ ಸಂಚು ಮಾಡಿದೆ. ಯಾರೊಂದಿಗೆ ಚರ್ಚಿಸಿ ಈ ಕಾನೂನು ಜಾರಿಗೆ ತರಲು ಹೊರಟಿದ್ದೀರಿ ಎನ್ನುವ ಪ್ರಶ್ನೆ ರೈತ ವರ್ಗದಲ್ಲಿ ಪ್ರತಿಧ್ವನಿಸುತ್ತಿದೆ.ಇಂದು ಸಾವಿರಾರು ರೈತರು ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಹಿನ್ನೆಲೆ ಪೊಲೀಸರು ಭಾರೀ ಬಂದೋಬಸ್ತ್ ಮಾಡಲಾಗಿದೆ. ರೈಲ್ವೆ ನಿಲ್ದಾಣದಲ್ಲೇ 500 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

