ಪ್ರಪಂಚದ ಪ್ರವಾಸೀ ರಾಷ್ಟ್ರವಾಗುತ್ತಿದೆಯೇ ಪಾಕಿಸ್ಥಾನ
ಭಾರತ ಸ್ವಾತಂತ್ರ್ಯ ಪಡೆದು ದೇಶ ವಿಭಜನೆಯಾದಾಗಿನಿಂದಲೂ ಆರೆಸ್ಸೆಸ್, ಬಿಜೆಪಿಗಳು ಪಾಕಿಸ್ಥಾನದ ಜಪ ಶುರುಮಾಡಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಂತೂ ದಿನಕ್ಕೆ ಒಂದು ಬಾರಿಯಾದರೂ ಪಾಕಿಸ್ಥಾನವನ್ನು ನೆನಪಿಸಿಕೊಳ್ಳದಿದ್ದರೆ, ಪಾಕಿಸ್ಥಾನದ ಹೆಸರಲ್ಲಿ ಯಾರಾದರೊಬ್ಬರಿಗೆ ಕ್ರೌರ್ಯವನ್ನು ತುಂಬದಿದ್ದರೆ ತಿಂದ ಊಟ ಜೀರ್ಣವಾಗುವುದೇ ಇಲ್ಲ ಎಂಬಂತಹ ಸ್ಥಿತಿಗೆ ಬಿಜೆಪಿಗಳು ತಲುಪಿದ್ದಾರೆ.
ಪ್ರಧಾನಿ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರದ ದಿನಗಳಲ್ಲಿ ಪಾಕಿಸ್ತಾನದ ಹೆಸರು ಮತ್ತೆ-ಮತ್ತೆ ಪುನರುಚ್ಚಾರವಾಗುತ್ತಲೇ ಇದೆ. ಬಹುಶಹಃ ಪಾಕಿಸ್ಥಾನದ ಹೆಸರನ್ನು ಉಚ್ಛರಿಸುವುದರಲ್ಲಿ 50% ಆದರೂ ಭಾರತದ ಹೆಸರು ಈ ಬಿಜೆಪಿಗಳ ಬಾಯಲ್ಲಿ ಉಚ್ಚರಿಸುತ್ತಾರೆಯೇ ಎಂಬ ಸಂಶಯ ದೇಶದ ಜನರಲ್ಲಿ ಮನೆ ಮಾಡಿದೆ.
ಫೆಬ್ರವರಿ ತಿಂಗಳಿನಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಬಂದಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಚುನಾವಣಾ ಭಾಷಣವೊಂದರಲ್ಲಿ ಎಂಟು ನಿಮಿಷದಲ್ಲಿ 42 ಬಾರಿ ಪಾಕಿಸ್ತಾನದ ಹೆಸರನ್ನು ಬಳಸಿದ್ದರು. ಇದು ಬಿಜೆಪಿಗೆ ಪಾಕಿಸ್ತಾನ ಎಷ್ಟು ಪ್ರಿಯ ರಾಷ್ಟ್ರ ಎಂಬುದನ್ನು ತೋರಿಸುತ್ತದೆ. ಆದ್ದರಿಂದಲೇ ಮೋದಿಯವರು ಪಾಕಿಸ್ತಾನ ಭೇಟಿ ನೀಡಿ ಬಿರಿಯಾನಿ ತಿಂದು ಬಂದಿದ್ದರು. ಅಲ್ಲದೆ, ಚೀನಾ ನಮ್ಮ ಶತ್ರು ರಾಷ್ಟ್ರ ಚೀನಾ ವಸ್ತುಗಳನ್ನು ಬಾಯ್ಕಾಟ್ ಮಾಡಿ, ಯಾರೂ ಚೀನೀ ವಸ್ತುಗಳನ್ನು ಬಳಸಬೇಡಿ ಎಂದು ಬಳಾಂಗು ಬಿಟ್ಟಿದ್ದ ಆರೆಸ್ಸೆಸ್-ಬಿಜೆಪಿಗರು ಇಂದಿಗೂ ಭಾರತ ಪಾಕಿಸ್ತಾನದ ಜೊತೆಗೆ ಹಲವಾರು ವ್ಯಾವಹಾರಿಕ ಸಂಬಂಧವನ್ನು ಹೊಂದಿರುವುದರ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಆದರೂ ಅಧಿಕಾರಕ್ಕಾಗಿ ಪಾಕಿಸ್ಥಾನದ ವಿರುದ್ಧ ಪುಂಗಿ ಊದುತ್ತಾ ಪಾಕಿಸ್ತಾನಿಗಳು ತಮ್ಮ ಶತ್ರುಗಳು ಎಂದು ಹೇಳಿಕೊಂಡು ದೇಶಕ್ಕಾಗಿ, ದೇಶದ ಜನರ ಅಭಿವೃದ್ಧಿಗಾಗಿ ನಯಾ ಪೈಸೆಯ ಕೆಲಸವನ್ನೂ ಮಾಡದೆ ಪಾಕಿಸ್ತಾನದ ಹೆಸರಿನಲ್ಲಿ ಅಧಿಕಾರ ನಡೆಸುತ್ತಿದ್ದಾರೆ.
ಪ್ರಧಾನಿ ಮೋದಿಯ ವಿರುದ್ಧ, ಸರ್ಕಾರದ ಲೋಪಗಳನ್ನು ವಿರೋಧಿಸಿ ಯಾರಾದರೂ ಟೀಕಿಸಿದರೆ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದು ಬಿಜೆಪಿಯ ಸಂಸದರು, ಲೀಡರ್ಗಳಿಂದ ಕಾಲಾಳುಗಳವರೆಗೂ ಎಲ್ಲರ ಬಾಯಲ್ಲೂ ಸಾರಾಸಗಟಾಗಿ ಬರತ್ತದೆ. ಎಲ್ಲರನ್ನೂ ಪಾಕಿಸ್ತಾನಕ್ಕೆ ಕಳಿಸುವುದಾದರೆ, ಪಾಕಿಸ್ತಾನದಲ್ಲಿ ಅಂತದ್ದೇನಿರಬಹುದು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುತೂಹಲದ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಕುತೂಹಲದ ಕೌತುಕವನ್ನು ತಿಳಿದುಕೊಳ್ಳಲು ಎಲ್ಲರೂ ಪಾಕಿಸ್ತಾನಕ್ಕೆ ಭೇಟಿ ನೀಡುವ ಸಾಧ್ಯತೆಗಳಿದ್ದು, ಪಾಕಿಸ್ತಾನ ಪ್ರಪಂಚದ ಪ್ರವಾಸಿಸ್ತಾನವಾಗುವ ಸಾಧ್ಯತೆಗಳಿದ್ದು, ಇದರ ಕ್ರೆಡಿಟ್ ಬಿಜೆಪಿಗೇ ಸೇರಬೇಕು ಎಂದೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ.

