ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆಯು ಉತ್ತರದಾಯಿತ್ವವನ್ನು ತಂದುಕೊಡುವುದೇ?
ಪಾರದರ್ಶಕತೆ ಮತ್ತು ಎಲೆಕ್ಟೋರಲ್ ಬಾಂಡುಗಳು
ಎಲೆಕ್ಟೊರಲ್ ಬಾಂಡುಗಳ ಸರಿತನದ ಬಗ್ಗೆ ಈಗ ಮತ್ತೊಮ್ಮೆ ಏಕೆ ಹೊಸದಾಗಿ ಹುಯಿಲೆದ್ದಿದೆ? ಈ ಯೋಜನೆಯನ್ನು ಹಾಲಿ ಸರ್ಕಾರವು ಜಾರಿಗೊಳಿಸಿದ್ದೇ ಹಲವಾರು ಕಾಯಿದೆಗಳನ್ನು ಉಲ್ಲಂಘಿಸುವ ಮೂಲಕ ಎಂದು ನಮಗೆ ಗೊತ್ತಿರಲಿಲ್ಲವೇ? ಈ ನಿಟ್ಟಿನಲ್ಲಿ ಹಣಕಾಸು ಮಸೂದೆಗೆ ಸರ್ಕಾರವು ತರಬಯಸಿದ್ದ ತಿದ್ದುಪಡಿಗಳು ಶೆಲ್ ಕಂಪನಿಗಳ ಮೂಲಕ ಕಪ್ಪು ಹಣವನ್ನು ಬಿಳಿ ಮಾಡುವ ದಂಧೆಗೆ ದಾರಿ ಮಾಡಿಕೊಡುತ್ತವೆ ಎಂದು ಚುನಾವಣಾ ಅಯೋಗವು ೨೦೧೭ರ ಮೇ ೨೭ರಂದು ಕಾನೂನು ಸಚಿವಾಲಯಕ್ಕೆ ಬರೆದ ಪತ್ರವನ್ನು ನೆನೆಪು ಮಾಡಿಕೊಳ್ಳಿ; ಅಥವಾ ಚುನಾವಣಾ ಹಣಕಾಸಿನ ಬಗೆಗಿನ ಮಸೂದೆಯನ್ನು ಹಣಕಾಸು ಮಸೂದೆಯ ರೂಪದಲ್ಲಿ ಜಾg ಮಾಡುವುದು ನಮ್ಮ ಸಂವಿಧಾನದಲ್ಲಿ ಸೂಚಿಸಿರುವ ಶಾಸನಾತ್ಮಕ ವಿಧಾನಗಳಿಗೇ ವಿರುದ್ಧವಾದುದೆಂದು ದೆಹಲಿಯ ಎರಡು ನಾಗರಿಕ ಸಂಘಟನೆಗಳು ೨೦೧೭ರಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಿದ್ದನ್ನು ನೆನಪಿಸಿಕೊಳ್ಳಿ. ಈ ಶಾಸನಾತ್ಮಕ ಕ್ರಮಗಳು ಈ ದೇಶದ ಆಡಳಿತದ ಅತ್ಯುನ್ನತ ಸಂಸ್ಥೆಗಳ ಸಾಂವಿಧಾನಿಕ ಪಾವಿತ್ರ್ಯತೆಯನ್ನೇ ಹಾಳು ಮಾಡುವುದಲ್ಲದೆ ರಾಜಕೀಯದ ಹಲವು ಮೂಲಭೂತ ತತ್ವ ನಿಯಮಗಳನ್ನೇ ಅಲುಗಾಡಿಸುತ್ತದೆಂದು ನಮಗೆ ಗೊತ್ತಿರಲಿಲ್ಲವೇ?
ಈ ಬಗೆಯ ಸಂದೇಹಗಳು ಸಾರ್ವತ್ರಿಕವಾಗಿದ್ದರೂ ಎಲೆಕ್ಟೊರಲ್ ಬಾಂಡುಗಳು ಜಾರಿಯಾದವು. ಅದೂ ಕೂಡ “ರಾಜಕೀಯ ದೇಣಿಗೆಯಲ್ಲಿ ಪಾರದರ್ಶಕತೆ”, “ಶುದ್ಧ ಹಣ”, ಮತ್ತು “ದೇಣಿಗೆ ನೀಡುವವರ ಅನಾಮಧೇಯತೆ” ಗಳೆಂಬ ಆಳುವ ಸರ್ಕಾರದ ಸತತ ಪ್ರತಿಪಾದನೆಗಳ ಜೊತೆ ಜಾರಿಯಾಯಿತು. ಆಳುವ ಸರ್ಕಾರದ ಪ್ರತಿಪಾದನೆಗಳಲ್ಲಿನ ತರ್ಕಹೀನತೆಯು ನಿಚ್ಚಳವಾಗಿ ಎದ್ದುಕಾಣುವಂತಿದ್ದರೂ, ಆ ಪದಪುಂಜಗಳಲ್ಲಿದ್ದ ಯಾವ ಶಕ್ತಿಯಿಂದಾಗಿ ಅವೆಲ್ಲವೂ ಮರೆಯಾಗಿ ಹೋಯಿತು? ಪಾರದರ್ಶಕತೆಯೆಂದರೆ ಯಾರು ಬೇಕಾದರೂ ನೋಡಬಹುದಾದದ್ದು ಎಂದಾದರೆ ಅನಾಮಧೇಯತೆ, ಗೋಪ್ಯತೆಗಳು ಅದಕ್ಕೆ ತದ್ವಿರುದ್ಧವಾದವು. ಹಾಗೆಯೇ ಮಾರುಕಟ್ಟೆಯಲ್ಲಿ ಅಪ್ರತ್ಯಕ್ಷವಾಗಿ ನಡೆಯುವ ಭ್ರಷ್ಟಾಚಾರವಾಗಲೀ ಅಥವಾ ಅಧಿಕಾರಿಗಳು ಹಾಗೂ ಖಾಸಗೀ ದಲ್ಲಾಳಿಗಳ ನಡುವಿನ ವಿನಿಮಯದ ಮೂಲಕ ನಡೆಯುವ ಭ್ರಷ್ಟಾಚಾರವಾಗಲೀ ನಡೆಯುವುದು ಅಪಾರದರ್ಶಕತೆ ಮತ್ತು ಗೋಪ್ಯತೆ ಅಥವಾ ಅನಾಮಧೇಯತೆಗಳು ಒದಗಿಸಿಕೊಡುವ ಅನುಕೂಲಕರ ಸಂದರ್ಭದಲ್ಲಷ್ಟೇ. ಆಗ ಕಪ್ಪುಹಣದ ವಿನಿಮಯವನ್ನು ತಡೆಗಟ್ಟಲು ಆಗುವುದಿಲ್ಲ. ಸರ್ಕಾರಗಳ ಪ್ರತಿಪಾದನೆಯಲ್ಲಿರುವ ಸುಳ್ಳನ್ನು ಬಯಲುಗೊಳಿಸಬಲ್ಲ ಪ್ರಬಲ ಸಾಕ್ಷ್ಯಾಧಾರಗಳಿಲ್ಲದಿದ್ದುದರಿಂದಲೇ ಸಾರ್ವಜನಿಕರು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ ಎಂದಾಗಿದ್ದರೆ ಇತ್ತೀಚೆಗೆ ’ಹುಫ್ಪೋಸ್ಟ್’ ಎಂಬ ವೆಬ್ ಪತ್ರಿಕೆಯು ಈ ಬಗ್ಗೆ ಪ್ರಕಟಿಸಿದ ತನಿಖಾ ವರದಿಗಳು ಬೇಕಿದ್ದ ಎಲ್ಲಾ ಸಾಕ್ಷಿಗಳನ್ನು ನೀಡುತ್ತದೆ. ರಾಜಕೀಯ ಪಕ್ಷಗಳು ಹಣವನ್ನು ಒಟ್ಟು ಮಾಡಲು ರೂಪಿಸಿಕೊಂಡ ಈ ಹೊಸ ಸಾಧನಗಳ ಬಗ್ಗೆ ಸಾರ್ವಜನಿಕರಲ್ಲಿದ್ದ ಎಲ್ಲಾ ಸಿನಿಕತನಗಳಿಗೂ ಆ ವರದಿಯು ಹಲವು ಪುರಾವೆಗಳನ್ನು ಒದಗಿಸಿದೆ. ಆದರೆ ಒಂದು ಮೂಲಭೂತ ಪ್ರಶ್ನೆಯಂತೂ ಹಾಗೆ ಉಳಿಯುತ್ತದೆ: ನ್ಯಾಯಯುತ ಸ್ಪರ್ಧೆಯ ಪ್ರಜಾತಾಂತ್ರಿಕ ಆದರ್ಶಗಳನ್ನು ವಿಕೃತಗೊಳಿಸಿದ್ದಕ್ಕೆ ಹಾಲಿ ಸರ್ಕಾರವನ್ನು “ದೂಷಿಸುವುದರ” ಆಚೆಗೆ ಈ ಸಾಕ್ಷಿ ಪುರಾವೆಗಳು ಅಗತ್ಯವಾಗಿರುವ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಬಲ್ಲದೇ? ಹಲವಾರು ಕಾರಣಗಳಿಗಾಗಿ ಈ ಕಳವಳವು ಹಾಗೆಯೇ ಉಳಿದುಬಿಡುತ್ತದೆ.
ಮೊದಲನೆಯದಾಗಿ, ಭಾರತದ ಚುನಾವಣಾ ಪ್ರಜಾತಂತ್ರದಲ್ಲಿ ರಾಜಕೀಯ ಆದರ್ಶಗಳು ಅಥವಾ ನೀತಿ ಯೋಜನೆಗಳಿಗಿಂತ ಧನಬಲವೇ ಅಧಿಕಾರವನ್ನು ಕಸಿದುಕೊಳ್ಳುವ ಪ್ರಮುಖ ಉಪಕರಣವಾಗುತ್ತಿದೆ. ಪರಿಣಾಮವಾಗಿ ಭ್ರಷ್ಟ ಹಣವು ರಾಜಕೀಯದಲ್ಲಿ ಅಬ್ಬರಿಸುವಾಗ ಅಂತಹ ಅಸಮಾನ ನೆಲೆಯಲ್ಲೂ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕಾದ ಸವಾಲು ವಿರೋಧಿಗಳಿಗೆ ಎದುರಾಗುತ್ತದೆ. ಅಂತಹ ಸನ್ನಿವೇಶದಲ್ಲಿ ವಿರೋಧಿಗಳ ಯಾವ ಅರ್ಥಪೂರ್ಣ ಅಥವಾ ನವಿರಾದ ಭಾಷೆಗಳು ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ.
ಎರಡನೆಯದಾಗಿ, ಐತಿಹಾಸಿಕವಾಗಿ, ಬಹಿರಂಗಪಡಿಸಲಾಗದ ಮೂಲಗಳಿಂದ ಗಳಿಸಿದ ಆದಾಯವನ್ನು ಈ ಹಿಂದೆಯೂ ಚುನಾವಣಾ ನಿಧಿಗಳಲ್ಲಿ ಹೂಡಲಾಗಿದೆ. “ಸ್ವಪ್ರೇರಿತವಾಗಿ ಆದಾಯವನ್ನು ಬಹಿರಂಗಗೊಳಿಸುವ ಯೋಜನೆ- ವಾಲಂಟರಿ ಡಿಸ್ಕ್ಲೋಸರ್ ಸ್ಕೀಮ್” ಎಂದು ಜನಪ್ರಿಯವಾಗಿದ್ದ ಈ ಯೋಜನೆಯ ಮೂಲಕ ಅಪಾರ ಮೊತ್ತ ಕಪ್ಪು ಹಣವು ಸಾರ್ವಜನಿಕ ನಿಧಿಗೆ ಹರಿದು ಬಂದಿತ್ತು. ಅಂತಹ ಯೋಜನೆಗಳು ಸಹಜವಾಗಿಯೇ ಆದಾಯ, ಸಂಪತ್ತು ಮತ್ತು ಕೊಡುಗೆಗಳ ಮೇಲಿನ ತೆರಿಗೆಗಳಿಂದ ಸಂಬಂಧಪಟ್ಟವರಿಗೆ ರಕ್ಷಣೆ ಒದಗಿಸುವ ಖಾತರಿಯೊಂದಿಗೇ ಜಾರಿಯಾಗಿದ್ದವು. ತೀರಾ ಇತ್ತೀಚೆಗೆ ಯುಪಿಎ ಸರ್ಕಾರವು ತನಗೆ ದೇಣಿಗೆ ನೀಡುತ್ತಿದ್ದ ಕಾರ್ಪೊರೇಟ್ ದಾನಿಗಳನ್ನು ರಕ್ಷಿಸಲು ಎಲೆಕ್ಟೋರಲ್ ಟ್ರಸ್ಟ್ಗಳನ್ನು ರಚಿಸಿಕೊಳ್ಳುವ ಯೋಜನೆಯನ್ನು ಜಾರಿ ಮಾಡಿತ್ತು. ಕಪ್ಪು ಹಣದ ದಾಸ್ತಾನು ಇಟ್ಟುಕೊಂಡವರಿಗೆ ಈ ರೀತಿ ರಕ್ಷಣೆ ನೀಡುವ ನೀತಿಗಳನ್ನು ಈ ಹಿಂದೆಯೂ ಅನುಸರಿಸಿದ್ದಾಗ ಎಲೆಕ್ಟೋರಲ್ ಬಾಂಡ್ ಯೋಜನೆಗಳ ಮೂಲಕ ರಾಜಕೀಯ ದೇಣಿಗೆಯನ್ನು ಭ್ರಷ್ಟಗೊಳಿಸಿದ್ದಕ್ಕಾಗಿ ಹಾಲಿ ಸರ್ಕಾರವನ್ನು ಮಾತ್ರ ದೂಷಿಸುವುದು ಕಷ್ಟವಾಗುತ್ತದೆ.
ಮೂರನೆಯದಾಗಿ ಹಾಲಿ ಸರ್ಕಾರವು ತನ್ನ ೨೦೧೬ ಮತ್ತು ೨೦೧೮ರ ಹಣಕಾಸು ಮಸೂದೆಯ ಮೂಲಕ ವಿದೇಶೀ ಮೂಲದಿಂದ ಹಣ ಪಡೆದುಕೊಂಡಿದ್ದರ ವಿನಾಯತಿಂiಗಡುವನ್ನು ವಿಸ್ತರಣೆ ಮಾಡಿದ್ದರಿಂದ ವಿರೋಧ ಪಕ್ಷಗಳಿಗೂ ಲಾಭವಾಗಿದೆ. ಉದಾಹರಣೆಗೆ ದೆಹಲಿ ಹೈಕೋರ್ಟು ಅಸೋಸಿಯೇಷನ್ ಆಫ್ ಡೆಮಾಕ್ರmಕ್ ರಿಫಾರ್ಮ್ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ವೇದಾಂತ ಎಂಬ ಮೂಲಗಳಿಂದ ಕಾನೂನುಬಾಹಿರವಾಗಿ ವಿದೇಶೀ ದೇಣಿಗೆಯನ್ನು ಪಡೆದಿದ್ದನ್ನು ಪತ್ತೆ ಹಚ್ಚಿತ್ತು. ಆದ್ದರಿಂದ ಬಿಜೆಪಿಯು ಜಾರಿಗೆ ತಂದ ವಿದೇಶಿ ದೇಣಿಗೆ ತಿದ್ದುಪಡಿ ಕಾಯಿದೆಯು ತಮ್ಮನ್ನೂ ರಕ್ಷಿಸುವಂತಿದ್ದಾಗ ವಿರೋಧ ಪಕ್ಷಗಳು ಅದರ ಬಗ್ಗೆ ಏಕೆ ತಾನೆ ಭಿನ್ನಮತವನ್ನು ಸೂಚಿಸಿಯಾವು?
ರಾಜಕೀಯ ಪ್ರತಿರೋಧವಿಲ್ಲದ ಸಂದರ್ಭದಲ್ಲಿ ಯೋಜನೆಯ ದುರುದ್ದೇಶಗಳನ್ನು ಬಯಲು ಮಾಡುವ ಪ್ರಬಲವಾದ ಸಾಕ್ಷ್ಯಾಧಾರಗಳೂ ಸಹ ಸರಿಯಾದ ಪ್ರತಿಸ್ಪಂದನೆಯನ್ನು ಪಡೆಯುವುದಿಲ್ಲ. ಎಲೆಕ್ಟೊರಲ್ ಬಾಂಡುಗಳನ್ನು ಶತಾಯಗತಾಯ ಜಾರಿಗೆ ತಂದಿದ್ದರ ಹಿಂದಿನ ತನ್ನ ಉದ್ದೇಶಗಳು ಬಹಿರಂಗವಾಗಿದ್ದರೂ ಸರ್ಕಾರವು ವಿಚಲಿತಗೊಳ್ಳದಿರುವುದಕ್ಕೆ ಇದೇ ಕಾರಣವಿರಬಹುದು. ಎಲೆಕ್ಟೊರಲ್ ಬಾಂಡ್ ವ್ಯವಸ್ಥೆಯಿಂದಾಗಿ ರಾಜಕೀಯ ನಿಧಿ ಕೊಡುವವರ ಮತ್ತು ಪಡೆಯುವವರ ಮೂಲವನ್ನು ನಿಗೂಢವಾಗಿರಿಸುವ ಮೂಲಕ ಈವರೆಗಿದ್ದ ಪಾರದರ್ಶಕ ಚುನಾವಣಾ ವ್ಯವಸ್ಥೆಯನ್ನು ಹದಗೆಡಿಸಿದ ದೋಷವನ್ನು ಈ ತನಿಖಾ ವರದಿಯು ಮುಂದಿಟ್ಟ ಸಾಕ್ಷಿ ಪುರಾವೆಗಳಿಂದಾಗಿ ಸರ್ಕಾರ ಒಪ್ಪಿಕೊಳ್ಳಬಹುದು. ಆದರೆ ಅದು ಹಾಲಿ ಸರ್ಕಾರವನ್ನು ತನ್ನ ತಪ್ಪಿಗಾಗಿ ಲಜ್ಜೆಪಡುವಂತೇನೂ ಮಾಡುವುದಿಲ್ಲ. ಪಾರದರ್ಶಕತೆಯು ಅಧಿಕಾರಸ್ಥರನ್ನು ಲಜ್ಜೆಗೆ ಗುರಿಮಾಡಲು ಬೇಕಾದ ಶಕ್ತಿಯನ್ನು ಸಂಚಯಿಸಿಕೊಳ್ಳಲು ಸಹಾಯ ಮಾಡಬಹುದು. ಆದರೆ ಅದರಿಂದ ಲಜ್ಜೆಗೇಡಿತನವು ಹಿಂಜರಿಯುತ್ತದೆಂದೇನೂ ತಿಳಿಯಬೇಕಿಲ್ಲ.
ಇದಕ್ಕೆ ಈ ಹಿಂದಿನಿಂದಲೂ ಭಾರತದ ಚುನಾವಣಾ ವ್ಯವಸ್ಥೆಯು ಭ್ರಷ್ಟವಾಗಿರುವುದರಿಂದ ಹಾಲಿ ಸರ್ಕಾರವು ಅಂಥದ್ದೇ ಭ್ರಷ್ಟತನ ಮಾಡಿದ ಮಾತ್ರಕ್ಕೆ ಹಿಂದಿನವರಿಗಿಂತ ಭಿನ್ನವಾಗುವುದಿಲ್ಲ ಎನ್ನುವುದು ಮಾತ್ರ ಕಾರಣವಲ್ಲ. ವಾಸ್ತವದಲ್ಲಿ ಪಾರದರ್ಶಕತೆಗೂ ಮತ್ತು ರಾಜಕೀಯ ಉತ್ತರದಾಯಿತ್ವಕ್ಕೂ ಅಂತಹ ನೇರ ಸಂಬಂಧವೇನೂ ಇದ್ದಂತಿಲ್ಲ. ಏಕೆಂದರೆ ಪಾರದರ್ಶಕತೆಯೆಂಬುದು ಒಂದು ವಿವಿಧ ಮಟ್ಟದ ಗೋಪ್ಯತೆ ಹಾಗೂ ಪಾರದರ್ಶಕತೆಯನ್ನುಳ್ಳ ಶ್ರೇಣೀಕೃತ ಪರಿಕಲ್ಪನೆಯಾಗಿದೆ. ಈ ದೃಷ್ಟಿಕೋನದಿಂದ ನೋಡಿದಲ್ಲಿ ಆಡಳಿತ ರೂಢ ಸರ್ಕಾರವು ಈ ಹಿಂದೆ ಆರೋಪಿಸುತ್ತಿದ್ದಂತೆ ಸಂಪೂರ್ಣವಾಗಿ ಅಪಾರದರ್ಶಕವಾಗಿರುವುದರ ಬದಲಿಗೆ ತಾನೇ ಮುಂದಾಗಿ ಮಾಹಿತಿಯನ್ನು ಹಂಚಿಕೊಳ್ಳುವ ಪದ್ಧತಿಯನ್ನು ಅನುಸರಿಸಿ ಎಲೆಕ್ಟೊರಲ್ ಬಾಂಡುಗಳಿಗೆ ಒಂದು ವಿಚಿತ್ರ ಬಗೆಯ ಅಪಾರದರ್ಶಕತೆ ಅಥವಾ ಜಾಳುಜಾಳಾದ ಪಾರದರ್ಶಕತೆಯನ್ನು ಒದಗಿಸಿದೆ.
ಈ ಬಗೆಯ ಜಾಳುಜಾಳಾದ ಪಾರದರ್ಶಕತೆಯ ಮೂಲಕ ಸಾಂಸ್ಥಿಕ ಮಾರುತ್ತರವನ್ನು ನಿರೀಕ್ಷಿಸಲಾಗುವುದಿಲ್ಲ. ಅಥವಾ ಕೇವಲ ಉತ್ತರಗಳನ್ನು ನೀಡಿದ ಮಾತ್ರಕ್ಕೆ ಅವು ಗಟ್ಟಿಯಾದ ಉತ್ತರದಾಯಿತ್ವವೂ ಆಗುವುದಿಲ್ಲ. ನಾಗರಿಕ ಸಮಾಜದ ಸಂಘಟನೆಗಳು ಮಾಹಿತಿ ಹಕ್ಕು ಪಡೆಯುವ ಮತ್ತು ಸಾರ್ವಜನಿಕ ಸಂಸ್ಥೆಗಳು ಉತ್ತರದಾಯಿಯಾಗುವಷ್ಟು ಪಾರದರ್ಶಕವಾಗಿರಬೇಕೆಂಬ ಪ್ರಜಾತಾಂತ್ರಿಕ ಹಕ್ಕುಗಳಿಗಾಗಿ ಸಕ್ರಿಯವಾದ ಒತ್ತಡಗಳನ್ನು ಹೇರುತ್ತಿರುವುದು ನಿಜವಾದರೂ, ಉತ್ತರದಾಯಿತ್ವವೆಂಬುದು ಒಂದು ವ್ಯವಸ್ಥಾಗತ ಸಮಸ್ಯೆ ಎಂಬುದನ್ನು ಮರೆಯಲಾಗದು. ಅದಕ್ಕಾಗಿ ಪಾರದರ್ಶಕತೆಯೆಂಬ ಗುರಿಯಾಚೆಗೆ ಸಾಗಿ ಸಾರ್ವಜನಿಕ ಉತ್ತರದಾಯಿತ್ವದ ಸಂಸ್ಥೆಗಳಿಗೆ ಶಕ್ತಿ ತುಂಬಲು ಸಾಧ್ಯವಾಗದಂತೆ ಮಾಡಿರುವ ಆಳುವ ಪ್ರಭುತ್ವ ಮತ್ತು ನಾಗರಿಕ ಸಮಾಜಗಳ ಸ್ವರೂಪ ಮತ್ತು ಸಾಮರ್ಥ್ಯಗಳ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕಾಗುತ್ತದೆ.
ಕೃಪೆ: Economic and Political Weekly
ಅನು: ಶಿವಸುಂದರ್